ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ರೈತರ ಪ್ರತಿಭಟನೆ ಬೆಂಬಲಿಸಿ ರಾಜ್ಯದಲ್ಲಿ ಟ್ರ್ಯಾಕ್ಟರ್ ಪರೇಡ್’

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ
Last Updated 10 ಜನವರಿ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಈ ವರ್ಷ ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ ಹೇಳಿದರು.

‘ರೈತ ವಿರೋಧಿ ಕಾಯ್ದೆಗಳು– ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ?’ ವಿಷಯದ ಕುರಿತು ಗಾಂಧಿ ಭವನದಲ್ಲಿ ‘ಜಾಗೃತ ಕರ್ನಾಟಕ' ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಗಣರಾಜ್ಯೋತ್ಸವದ ಪರೇಡ್‌ಗೆ ಪರ್ಯಾಯವಾಗಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲಿದ್ದಾರೆ. ರೈತ ಶಕ್ತಿಯ ಪ್ರದರ್ಶನ ಬೆಂಗಳೂರಿನಲ್ಲಿಯೂ ನಡೆಯಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಈ ತಿಂಗಳ 16 ರಂದು ಬೆಂಗಳೂರಿನಲ್ಲಿ ಹೊಸ ಕೃಷಿ ಕಾಯ್ದೆಗಳ ಕುರಿತ ಮುಕ್ತ ಸಂವಾದ ನಡೆಯಲಿದೆ’ ಎಂದರು.

‘ಮೂರು ವಿವಾದಿತ ಕೃಷಿ ಕಾಯ್ದೆಗಳು ಕೇವಲ ರೈತರ ಹಿತಾಸಕ್ತಿಗೆ ಮಾತ್ರ ವಿರುದ್ಧವಾಗಿರುವುದಲ್ಲದೆ ದೇಶದ ಗಣತಂತ್ರಕ್ಕೂ ಸವಾಲೊಡ್ಡುವ ರೀತಿಯಲ್ಲಿವೆ. ಗಣರಾಜ್ಯದ ಸಂರಕ್ಷಣೆಯ ಕೆಲಸಕ್ಕೆ ಈಗ ರೈತರು ಹೆಗಲೊಡ್ದುತ್ತಿದ್ದು, ಈ ಕಾರ್ಯದಲ್ಲಿ ದೇಶದ ಬಗ್ಗೆ ಕಾಳಜಿ ಇರುವವರೆಲ್ಲರೂ ಕೈಜೋಡಿಸಬೇಕು’ ಎಂದೂ ಮನವಿ ಮಾಡಿದರು.

ತೆಲಂಗಾಣದ ರೈತ ನಾಯಕ ಕಿರಣ್ ಕುಮಾರ್ ವಿಸ್ಸ ಮಾತನಾಡಿ, ‘ಹೊಸ ಕಾಯ್ದೆಗಳಿಂದಾಗಿ ತೆಲಂಗಾಣದ ಪ್ರದೇಶವಾರು ಬೇರೆ ಬೇರೆ ಬೆಳೆಗಳ ಮಾರುಕಟ್ಟೆ ವ್ಯವಸ್ಥೆ ಬುಡಮೇಲಾಗುತ್ತಿದೆ. ತೆಲಂಗಾಣದಲ್ಲಿ ರೈತ ಹೋರಾಟ ತೀವ್ರವಾಗುತ್ತಿದ್ದು, ಇಡೀ ದಕ್ಷಿಣ ಭಾರತದ ಎಲ್ಲ ರಾಜ್ಯಗಳೂ ರೈತ ಚಳವಳಿಗೆ ದೊಡ್ಡ ಮಟ್ಟದಲ್ಲಿ ಕೈಜೋಡಿಸಬೇಕಿದೆ’ ಎಂದರು.

‘ತಮಿಳುನಾಡಿನ ರೈತ ನಾಯಕ ಸೆಲ್ವಮುತ್ತು, ‘ಹೊಸ ಕಾಯ್ದೆಗಳು ರೈತರ ಬದುಕನ್ನು ಬಹುರಾಷ್ಟ್ರೀಯ ಕಂಪನಿಗಳ ದಾಸ್ಯಕ್ಕೆ ನೂಕುವ ಹಾದಿಯಲ್ಲಿವೆ’ ಎಂದರು. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್ ಉಸ್ತಾದ್, ‘ಬರ ಮತ್ತು ನೆರೆ ಹಾವಳಿಯಿಂದ ಬಸವಳಿದಿರುವ ಉತ್ತರ ಕರ್ನಾಟಕದ ರೈತಾಪಿ ವರ್ಗಕ್ಕೆ ಇನ್ನೂ ಸಮರ್ಪಕವಾಗಿ ನೆರವು ಲಭಿಸಿಲ್ಲ’ ಎಂದರು.

'ಜಾಗೃತ ಕರ್ನಾಟಕ’ ಸಂಘಟನೆಯ ಡಾ.ಎಚ್. ವಿ. ವಾಸು ಮಾತನಾಡಿ, ‘ಗ್ರಾಮೀಣ ಕರ್ನಾಟಕ ದೊಡ್ಡ ಮಟ್ಟದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿವೆ. ಇದರ ವಿರುದ್ಧ ರೈತ ಚಳವಳಿಯನ್ನು ಗಟ್ಟಿಗೊಳಿಸುವ ಅಗತ್ಯವಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಆರ್ಥಿಕ ನೆರವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ 'ಜಾಗೃತ ಕರ್ನಾಟಕ' ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT