ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿಯೂ ನಾಳೆ ಟ್ರ್ಯಾಕ್ಟರ್‌ ಪರೇಡ್‌: ಕೋಡಿಹಳ್ಳಿ ಚಂದ್ರಶೇಖರ್‌

ಹೆದ್ದಾರಿಯಲ್ಲಿ ತಡೆದರೆ ಆ ಹೆದ್ದಾರಿಗಳು ಬಂದ್ ಆಗಲಿವೆ– ಕೋಡಿಹಳ್ಳಿ ಎಚ್ಚರಿಕೆ
Last Updated 24 ಜನವರಿ 2021, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವ ದಿನ (ಜ. 26) ಬೆಂಗಳೂರಿನಲ್ಲಿಯೂ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ 25 ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಗಣರಾಜ್ಯೋತ್ಸವದಂದು ಮುಖ್ಯಮಂತ್ರಿ ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರು ಮತ್ತು ನೆಲಮಂಗಲದ ನಡುವೆ ಇರುವ ನೈಸ್ ಜಂಕ್ಷನ್‌ನಿಂದ ನಮ್ಮ ಪರೇಡ್ ಆರಂಭವಾಗಲಿದೆ. ಒಂದು ವೇಳೆ ಹೆದ್ದಾರಿಯಲ್ಲಿ ತಡೆಯುವ ಪ್ರಯತ್ನ ನಡೆಸಿದರೆ ಆ ಹೆದ್ದಾರಿಗಳು ಬಂದ್ ಆಗಲಿವೆ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

‘ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭದಲ್ಲಿ ನಾವು ಯಾವುದೇ ಕಚೇರಿಗಳನ್ನು ಅತಿಕ್ರಮಣ ಮಾಡುವುದಿಲ್ಲ. ಮುತ್ತಿಗೆ ಹಾಕುವುದೂ ನಮ್ಮ ಕಾರ್ಯಕ್ರಮವಲ್ಲ. ಕಲ್ಲು ಎಸೆಯುವ, ಬೆಂಕಿ ಹಚ್ಚುವ ಕಾರ್ಯಕ್ರಮವೂ ಅಲ್ಲ. ನಾವು ಅಹಿಂಸಾತ್ಮಕ ಪ್ರತಿಭಟನೆ ನಡೆಸಲಿದ್ದೇವೆ. ರ‍್ಯಾಲಿಯಲ್ಲಿ ಟ್ರ್ಯಾಕ್ಟರ್‌ಗಳು, ಟ್ರಕ್‌ಗಳು, ಕಾರುಗಳು, ಬಸ್ಸುಗಳು ಸೇರಿ ಎಂಟರಿಂದ ಹತ್ತು ಸಾವಿರ ವಾಹನಗಳು ಪರೇಡ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.

‘ನೈಸ್ ಜಂಕ್ಷನ್‌ನಿಂದ ಹೊರಡುವ ಪರೇಡ್ ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ಮಲ್ಲೇಶ್ವರದ ಮಾರಮ್ಮ ವೃತ್ತದಿಂದ ಮಲ್ಲೇಶ್ವರ, ಶೇಷಾದ್ರಿಪುರ ಪೊಲೀಸ್ ಸ್ಟೇಷನ್, ಆನಂದರಾವ್ ವೃತ್ತದ ಮೂಲಕ ಬಂದು ಫ್ರೀಡಂ ಪಾರ್ಕ್‌ನಲ್ಲಿ ಮುಕ್ತಾಯಗೊಳ್ಳಲಿದೆ. ರೈತರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ರ‍್ಯಾಲಿಯಲ್ಲಿ ಭಾಗವಹಿಸಲಿವೆ. ದೆಹಲಿಯಲ್ಲಿ ರೈತರ ಪರೇಡ್‌ಗೆ ಈಗಾಗಲೇ ಅನುಮತಿ ಸಿಕ್ಕಿದೆ. ಹೀಗಾಗಿ, ಇಲ್ಲಿಯೂ ಸರ್ಕಾರ ಅಡ್ಡಿಪಡಿಸುವುದಿಲ್ಲ ಎನ್ನುವ ನಂಬಿಕೆ ಇದೆ’ ಎಂದರು.

ಬೆಂಗಳೂರಿಗೆ ಸೀಮಿತ: ‘ರೈತರ ಪರೇಡ್ ಬೆಂಗಳೂರಿಗೆ ಸೀಮಿತವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಿಸಿಕೊಂಡ ನಂತರ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸುವ ಕುರಿತು ನಿರ್ಧರಿಸಲಾಗುವುದು’ ಎಂದು ಅವರು ತಿಳಿಸಿದರು.

‘ಸಂಯುಕ್ತ ಹೋರಾಟ – ಕರ್ನಾಟಕ ವೇದಿಕೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಮುಂಬೈ–ಕರ್ನಾಟಕ, ಹೈದರಾಬಾದ್‌– ಕರ್ನಾಟಕ, ಮಡಿಕೇರಿ- ಮೈಸೂರು ಭಾಗಗಳಿಂದ ರೈತರು, ಕಾರ್ಮಿಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದು ರೈತ ಸಂಘದ ಹಿರಿಯ ನಾಯಕರಾದ ಬಡಗಲಪುರ ನಾಗೇಂದ್ರ ಹೇಳಿದರು.

ಮಡಿಕೇರಿಯ ಕುಟ್ಟಾದಿಂದ ಜ. 25ರಂದು ಟ್ರ್ಯಾಕ್ಟರ್‌ ರ‍್ಯಾಲಿ ಹೊರಟು ಪೊನ್ನಂಪೇಟೆ, ಬಿ ಮಂಗಲ, ಗೋಣಿಕೊಪ್ಪ, ತಿಥಿಮಥಿ, ಹುಣಸೂರು ಮೂಲಕ ಮೈಸೂರಿಗೆ ಬರಲಿದೆ. ಅಲ್ಲಿಂದ ಪಾಂಡವಪುರ, ಮಂಡ್ಯ ಮಾರ್ಗವಾಗಿ ಬಿಡದಿ ತಲುಪಲಿದೆ. ಬೆಳಗಾವಿ, ಹುಬ್ಬಳಿ ಕಡೆಯಿಂದ ಬರುವ ವಾಹನಗಳು ಚಿತ್ರದುರ್ಗದಲ್ಲಿ ತಂಗಲಿವೆ. ರಾಯಚೂರು, ಬಳ್ಳಾರಿ ಕಡೆಯಿಂದ ಬರುವ ವಾಹನಗಳು ತುಮಕೂರಿನ ಮಠದಲ್ಲಿ ತಂಗಲಿವೆ. ಚಿಕ್ಕಬಳ್ಳಾಪುರ, ಕೋಲಾರ ಕಡೆಯಿಂದಲೂ ವಾಹನಗಳು ಬರಲಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT