ಬೆಂಗಳೂರು: ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಸಾಗಾಣಿಕೆ ವೆಚ್ಚದ ಇನ್ನೂ ಹತ್ತು ಜಿಲ್ಲೆಗಳ ಬೆಳೆಗಾರರಿಗೆ ನೀಡಲು ರೇಷ್ಮೆ ಇಲಾಖೆ ನಿರ್ಧರಿಸಿದೆ.
ಬುಧವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ರೇಷ್ಮೆ ಸಚಿವ ಕೆ.ಸಿ.ನಾರಾಯಣ ಗೌಡ, ‘ಈಗಾಗಲೇ 13 ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೆ ಪ್ರತಿ ಕೆ.ಜಿ.ಗೆ ₹ 10 ಸಾಗಾಣಿಕೆ ವೆಚ್ಚ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರೇಷ್ಮೆ ಬೆಳೆಗಾರರಿಗೂ ಈ ಸೌಲಭ್ಯ ನೀಡಲಾಗುವುದು. ಇದರಿಂದ ಇಲಾಖೆಗೆ ₹ 50 ಕೋಟಿ ಹೊರೆ ಬೀಳಲಿದೆ’ ಎಂದರು.
ಸಿಸಿಟಿವಿ ಕ್ಯಾಮೆರಾ ಅಳವಡಿಕೆ:
ರಾಜ್ಯದ 41 ರೇಷ್ಮೆ ಮಾರುಕಟ್ಟೆಗಳ ಪೈಕಿ 28 ಮಾರುಕಟ್ಟೆಗಳಿಗೆ ಇನ್ನೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಈ ಎಲ್ಲ ಮಾರುಕಟ್ಟೆಗಳಿಗೂ ₹ 1.25 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
‘ಓಕಳಿಪುರದಲ್ಲಿ ರೇಷ್ಮೆ ಭವನ ನಿರ್ಮಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿ ಮೂರು ವರ್ಷಗಳಾಗಿದೆ. ಇನ್ನೂ ಕಟ್ಟಡ ನಿರ್ಮಾಣಕ್ಕೆ ಯೋಜನೆ ಮತ್ತು ನಕ್ಷೆ ಸಿದ್ಧಪಡಿಸಿಲ್ಲ. ಯೋಜನೆ ಸಲ್ಲಿಸಲು ಮೂರು ದಿನಗಳ ಗಡುವು ನೀಡಲಾಗಿದೆ’ ಎಂದರು.
ಗುರುತಿನ ಚೀಟಿ: 1.38 ಲಕ್ಷ ರೇಷ್ಮೆ ಬೆಳೆಗಾರರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮಕ್ಕೆ ಶುಕ್ರವಾರ ಬಳ್ಳಾರಿಯಲ್ಲಿ ಚಾಲನೆ ನೀಡಲಾಗುವುದು. ಗುರುತಿನ ಚೀಟಿ ಹೊಂದಿರುವ ರೇಷ್ಮೆ ಬೆಳೆಗಾರರು ಮಾರುಕಟ್ಟೆಗೆ ಬಂದು ವಹಿವಾಟು ನಡೆಸಲು ಯಾರೂ ತೊಂದರೆ ಮಾಡುವಂತಿಲ್ಲ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.