ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ನೌಕರರ ಮುಷ್ಕರ ವಾಪಸ್‌

Last Updated 18 ಮಾರ್ಚ್ 2023, 18:44 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್‌ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ವಾಪಸ್‌ ಪಡೆದಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರೊಂದಿಗೆ ಶನಿವಾರ ರಾತ್ರಿ ನಡೆದ ಸಭೆ ಯಶಸ್ವಿಯಾಗಿದೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಮೇರೆಗೆ ಮುಷ್ಕರ ವಾಪಸ್‌ ಪಡೆಯಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ವೇತನ ಹೆಚ್ಚಳ ಹಾಗೂ ಭತ್ಯೆ ಸೇರಿದಂತೆ ಉಳಿದ ಎಲ್ಲ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದೆಂದು ಎಂ.ಡಿ ಅವರು ಭರವಸೆ ನೀಡಿದ್ದಾರೆ. ಮಂಗಳವಾರದ ಮುಷ್ಕರ ಕೈಬಿಡಲಾಗಿದೆ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳ ವಿಷಯವು ನನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಬಗೆಹರಿಸಿದ್ದಾರೆ. ಹಿಂಬಾಕಿ ನೀಡುವ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನ್ಯಾಯ ಸಮ್ಮತವಾಗಿ ವೇತನ ಪರಿಷ್ಕರಿಸಿಲ್ಲ ಎಂದು ಆರೋಪಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.

‘ಯುಗಾದಿ ಹಬ್ಬದಲ್ಲಿ ಪ್ರಯಾಣಿಕರಿಗೆ ತೊಂದರೆ ನೀಡುವ ಉದ್ದೇಶ ಇರಲಿಲ್ಲ. ಸ್ಪಷ್ಟ ಭರವಸೆ ಸಿಗದ ಕಾರಣಕ್ಕೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.

ಆದರೆ, ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಮಾರ್ಚ್‌ 24ರಂದು ಕರೆ ನೀಡಿದ್ದ ಮುಷ್ಕರವನ್ನು ವಾಪಸ್‌ ಪಡೆದಿಲ್ಲ.

‘ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ 7ನೇ ವೇತನ ಜಾರಿ ಭರವಸೆ ಜತೆಗೆ ಮಧ್ಯಂತರ ಪರಿಹಾರವಾಗಿ ಶೇ 17ರಷ್ಟು ವೇತನ ಹೆಚ್ಚಿಸಲಾಗಿದೆ. ನಿಗಮಗಳಲ್ಲಿ ಒಂದಾದ ಕೆಪಿಟಿಸಿಎಲ್‌ ನೌಕರರ ಪ್ರತಿಭಟನೆಗೆ ಮಣಿದು ಒಟ್ಟು ವೇತನಕ್ಕೆ ಶೇ 20 ವೇತನ ಹೆಚ್ಚಳ ಮಾಡಲಾಗಿದೆ. ಸಾರಿಗೆ ನೌಕರರಿಗೆ ಲಿಖಿತ ಭರವಸೆ ನೀಡಿದ್ದರೂ ಮೂಲವೇತನಕ್ಕೆ ಶೇ 15ರಷ್ಟು ವೇತನ ಹೆಚ್ಚಿಸಿ, ಬಾಕಿ ಎಲ್ಲ ಆರ್ಥಿಕ ಸೌಲಭ್ಯ ಕಡಿತಗೊಳಿಸಿ ಆದೇಶಿಸಲಾಗಿದೆ. ನಾವು ಮುಷ್ಕರ ನಡೆಸುತ್ತೇವೆ’ ಎಂದು ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT