ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಇಬ್ಬರ ಸಾವು

Last Updated 15 ಜುಲೈ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಭಾಗಗಳು ಸೇರಿದಂತೆ ರಾಜ್ಯದ ವಿವಿಧೆಡೆ ಶುಕ್ರವಾರವೂ ಮಳೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದು, ರಾಯಚೂರು ಜಿಲ್ಲೆಯಲ್ಲಿ ಅರ್ಚಕರೊಬ್ಬರು ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ರಸ್ತೆ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚುಂಚವಾಡದಲ್ಲಿ ಗುರುವಾರ ತಡರಾತ್ರಿ ಮಳೆಯಿಂದ ಕೊಟ್ಟಿಗೆಯ ಮಣ್ಣಿನ ಗೋಡೆ ಕುಸಿದು ಬಾಲಕ ಅನಂತರಾಜ ಧರಣೇಂದ್ರ ಪಾಶೆಟ್ಟಿ (16) ಮೃತಪಟ್ಟಿದ್ದಾನೆ. ರಾತ್ರಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಬಾಲಕ ಎದ್ದು ದನಗಳಿಗೆ ಮೇವು ಹಾಕಲು ಕೊಟ್ಟಿಗೆಗೆ ಹೋಗಿದ್ದ. ಆಗ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಪಾಲಕರಿಗೆ ₹ 5 ಲಕ್ಷ ಪರಿಹಾರ ನೀಡಲಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದ ಬಳಿ ಶುಕ್ರವಾರ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಕರಿವೀರೇಶ್ವರ ದೇವಸ್ಥಾನದ ಅರ್ಚಕ ಲಿಂಗಪ್ಪ (52) ನೀರು ಪಾಲಾಗಿದ್ದಾರೆ. ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ ಗ್ರಾಮದಲ್ಲಿ ಮಳೆಯಿಂದಾಗಿ‌ 120 ಹೆಕ್ಟೇರ್‌ಗೂ ಅಧಿಕ ಕಬ್ಬು ಬೆಳೆ ನೀರಿನಿಂದ ಆವೃತವಾಗಿದೆ.

ಶಿರಾಡಿ ವಾಹನ ಸಂಚಾರ ನಿರ್ಬಂಧ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್‌ ಬಳಿ ಹೆದ್ದಾರಿ ಬದಿ ಭೂಕುಸಿತ ಮುಂದುವರಿದಿದ್ದು, ಶುಕ್ರವಾರ ಸಂಜೆಯಿಂದ ಮುಂದಿನ ಆದೇಶದವರೆಗೆ ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಆದೇಶ ಹೊರಡಿಸಿದ್ದಾರೆ.

ಸಂಪರ್ಕ ಕಡಿತ: ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪೋಕ್ಲು–ಭಾಗಮಂಡಲ ರಸ್ತೆ ಹೊಳೆಯಂತಾಗಿದ್ದು, ಸಂಪರ್ಕ ಕಡಿತಗೊಂಡಿದೆ‌. ನಾಪೋಕ್ಲು–ಮೂರ್ನಾಡು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾಗಮಂಡಲ–ಮಡಿಕೇರಿ ರಸ್ತೆಯಲ್ಲೂ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ ಮಾತ್ರ ನಾಪೋಕ್ಲು ಹೋಬಳಿಗೆ ಸಂಪರ್ಕ ಇದೆ. ಕೊಯನಾಡಿನ ಸಮೀಪ ಮಡಿಕೇರಿ–ಮಂಗಳೂರು ರಸ್ತೆಯಲ್ಲಿ ಬಿರುಕುಗಳು ಕಂಡುಬಂದಿವೆ.

ಕರಡಿಗೋಡು ಗ್ರಾಮದ ಚಿಕ್ಕನಗಳ್ಳಿ ರಸ್ತೆ, ಗುಹ್ಯ ಗ್ರಾಮದ ಕಕ್ಕಟ್ಟುಕಾಡು ರಸ್ತೆ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಂಡಿ, ಬರಡಿ, ಬೆಟ್ಟದಕಾಡು ವ್ಯಾಪ್ತಿಯಲ್ಲೂ ನದಿ ನೀರು ಏರಿಕೆಯಾಗಿದ್ದು, ಪ್ರವಾಹದ ಭೀತಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT