ಬುಧವಾರ, ಅಕ್ಟೋಬರ್ 20, 2021
28 °C
ಕೃಷ್ಣಾ ಮೇಲ್ದಂಡೆ: ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ

ಕೃಷ್ಣಾ ಮೇಲ್ದಂಡೆ: ಭೂಸ್ವಾಧೀನ, ಪರಿಹಾರ, ಪುನರ್ವಸತಿ ₹2,500 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆ ಆಗಲಿರುವ 20 ಗ್ರಾಮಗಳಲ್ಲಿನ ಕಟ್ಟಡ ಹಾಗೂ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸಕ್ತ ಸಾಲಿನಲ್ಲಿ ₹ 2,500 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಮಂಗಳವಾರ ಉನ್ನತಮಟ್ಟದ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ಪ್ರಕಟಿಸಿದರು.

‘ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕಾರ್ಯ ಸ್ಥಗಿತಗೊಂಡಿದೆ. ಈ ಕೆಲಸವನ್ನು ಪುನರಾರಂಭಿಸುವಂತೆಜಲ ಸಂಪನ್ಮೂಲ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ. ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿಗೆ ₹ 2,500 ಕೋಟಿ ಅನುದಾನ ಬಿಡುಗಡೆಗೆ ಆದೇಶಿಸಿದ್ದೇನೆ’ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವುದಕ್ಕೆ ಪೂರಕವಾಗಿ ಕಾನೂನು ಸಲಹೆಗಾರರನ್ನು ನೇಮಿಸಬೇಕು. ಹೈಕೋರ್ಟ್‌ನ ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ವಿಶೇಷ ವಕೀಲರನ್ನು ನೇಮಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಭೂಮಾಪನ ಕೆಲಸಕ್ಕೆ ಡ್ರೋನ್‌ಗಳನ್ನು ಬಳಸಿಕೊಳ್ಳಬೇಕು ಎಂಬ ನಿರ್ದೇಶನಗಳನ್ನೂ ಮುಖ್ಯಮಂತ್ರಿ ನೀಡಿದ್ದಾರೆ.

ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌
ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

ಕೆಬಿಜೆಎನ್‌ಎಲ್‌ ಕಚೇರಿ ಆಲಮಟ್ಟಿಗೆ

ಬೆಂಗಳೂರಿನಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಆಲಮಟ್ಟಿಗೆ ಸ್ಥಳಾಂತರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ನಿಗಮದಲ್ಲಿ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆಯ ಭೂಮಾಪನ ಕೆಲಸಕ್ಕೆ ಅಗತ್ಯವಿರುವ ಹೆಚ್ಚುವರಿ ಭೂಮಾಪಕರ ನೇಮಕಕ್ಕೆ ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಯೋಜನೆಯ ಒಂದು ಮತ್ತು ಎರಡನೆ ಹಂತದ ಕಾಲುವೆಗಳ ಅಂತಿಮ ಭಾಗಕ್ಕೆ ನೀರು ತಲುಪುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು