ಸೋಮವಾರ, ಅಕ್ಟೋಬರ್ 18, 2021
26 °C

ನ್ಯಾಯಾಂಗದಲ್ಲಿ ಕನ್ನಡದ ಬಳಕೆ ಹೆಚ್ಚುತ್ತಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಲ್ಲ ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸುವ ರಾಜ್ಯ ಸರ್ಕಾರದ ಪ್ರಯತ್ನದಿಂದಾಗಿ ನ್ಯಾಯಾಂಗದಲ್ಲಿ ಕನ್ನಡದ ಬಳಕೆ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಲಯದ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾನೂನು ಪದಕೋಶ ಮತ್ತು ಕೇಂದ್ರದ 15 ಕಾಯ್ದೆಗಳ ಕನ್ನಡ ಅನುವಾದದ ಪುಸ್ತಕಗಳನ್ನು ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, 2003ರಿಂದಲೂ ರಾಜ್ಯ ಸರ್ಕಾರವು ಹಲವು ಕಾನೂನುಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಇದರಿಂದ ಕಾನೂನುಗಳ ಕುರಿತು ಸಾಮಾನ್ಯ ಜನರು ಅರಿಯಲು ಸಾಧ್ಯವಾಗಿದೆ. ಕಾನೂನುಗಳನ್ನು ಜನರು ಅರ್ಥ ಮಾಡಿಕೊಳ್ಳುವುದೂ ಸುಲಭವಾಯಿತು. ಈ ಬೆಳವಣಿಗೆಯನ್ನು ಗುರುತಿಸಿದ ನ್ಯಾಯಾಲಯಗಳು ನ್ಯಾಯಾಂಗದಲ್ಲೂ ಕನ್ನಡದ ಬಳಕೆಯನ್ನು ಹೆಚ್ಚಿಸಿವೆ ಎಂದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ‘ಎಲ್ಲ ಹೊಸ ಕಾನೂನುಗಳನ್ನು ಕನ್ನಡದಲ್ಲಿ ಪ್ರಕಟಿಸಲಾಗುವುದು. ಕೇಂದ್ರ ಮತ್ತು ರಾಜ್ಯದ ಎಲ್ಲ ಹೊಸ ಕಾಯ್ದೆಗಳನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲು ಇಲಾಖೆ ಉದ್ದೇಶಿಸಿದೆ’ ಎಂದರು.

ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಕೆ.ಎಸ್‌. ಈಶ್ವರಪ್ಪ, ಗೋವಿಂದ ಎಂ. ಕಾರಜೋಳ, ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ಕೆ.ಸಿ. ನಾರಾಯಣ ಗೌಡ, ಎಸ್‌. ಅಂಗಾರ, ಕಾನೂನು ಇಲಾಖೆ ಕಾರ್ಯದರ್ಶಿ ಬಿ. ಶ್ರೀಧರ್‌, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಚ್‌. ವೆಂಕಟೇಶ್‌ ಉಪಸ್ಥಿತರಿದ್ದರು.

₹ 480 ದರ: ಭಾಷಾಂತರ ನಿರ್ದೇಶನಾಲಯವು ಪ್ರಕಟಿಸಿರುವ ಕನ್ನಡ ಕಾನೂನು ಪದಕೋಶ ಮತ್ತು ಕೇಂದ್ರದ 15 ಕಾಯ್ದೆಗಳ ಕನ್ನಡ ಅನುದಾದದ ಪ್ರತಿಗಳ ಒಟ್ಟು ದರ ₹ 480. ಸರ್ಕಾರಿ ಮುದ್ರಣಾಲಯದಲ್ಲಿ ಈ ಕೃತಿಗಳನ್ನು ಪಡೆಯಬಹುದು ಎಂದು ಭಾಷಾಂತರ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.

 

ನಾಣ್ಯ ವಿತರಿಸಿ ಗೌರವ ಸಮರ್ಪಣೆ

ಇಸ್ಕಾನ್‌ ಸಂಸ್ಥಾಪಕ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ 125ನೇ ಜನ್ಮದಿನಾಚರಣೆಯ ಪ್ರಯುಕ್ತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ₹ 125 ಮೌಲ್ಯದ ನಾಣ್ಯವನ್ನು ಇಸ್ಕಾನ್‌ ಪ್ರತಿನಿಧಿಗಳು, ಮುಖ್ಯಮಂತ್ರಿ ಮತ್ತು ಸಚಿವರಿಗೆ ವಿತರಿಸಿ ಗೌರವ ಸಲ್ಲಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಕಾನ್‌ನ ಭಾನು ಸ್ವಾಮೀಜಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರಿಗೆ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಚಿತ್ರವುಳ್ಳ ₹ 125ರ ನಾಣ್ಯವನ್ನು ನೀಡಿ, ಗೌರವಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು