ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಕೋಶಕ್ಕೆ ಕತ್ತರಿ ಪ್ರಕರಣ: ಸಂತ್ರಸ್ತ ಮಹಿಳೆಯರಿಂದ ಅಹೋರಾತ್ರಿ ಧರಣಿ

Last Updated 17 ಅಕ್ಟೋಬರ್ 2022, 15:52 IST
ಅಕ್ಷರ ಗಾತ್ರ

ಹಾವೇರಿ: ಅನಧಿಕೃತವಾಗಿ ಗರ್ಭಕೋಶದ ಚಿಕಿತ್ಸೆಗೊಳಗಾಗಿದ್ದ ಮಹಿಳೆಯರು ‘ವಿಶೇಷ ಆರ್ಥಿಕ ಪ್ಯಾಕೇಜ್’ ಘೋಷಿಸುವಂತೆ ಆಗ್ರಹಿಸಿ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು.

ರಾಣೆಬೆನ್ನೂರಿನ ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದ ಡಾ.ಪಿ. ಶಾಂತ ಅವರು 1522 ಬಡ ಮಹಿಳೆಯರ ಗರ್ಭಕೋಶವನ್ನು ಅನಧಿಕೃತವಾಗಿ ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಗರ್ಭಕೋಶ ತೆಗೆದಿರುವ ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೂರಾರು ಮಹಿಳೆಯರು ಆಗ್ರಹಿಸಿದರು.

ಕಳೆದ ಏಪ್ರಿಲ್ ತಿಂಗಳಲ್ಲಿ ರಾಣೆಬೆನ್ನೂರಿನಿಂದ ಶಿಗ್ಗಾವಿಯ ಸಿಎಂ ಮನೆವರೆಗೆ ಪಾದಯಾತ್ರೆ ಆಯೋಜಿಸಲಾಗಿತ್ತು. ಹಾವೇರಿ ಸಮೀಪದ ನೆಲೋಗಲ್ಲವರೆಗೆ ಪಾದಯಾತ್ರೆ ಬರುತ್ತಿದ್ದಂತೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಿ ಪರಿಹಾರ ಕೊಡಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಆದರೆ, ನೆಲೋಗಲ್ಲ ಬಳಿಯಿಂದ ಪಾದಯಾತ್ರೆ ಆರಂಭಿಸಲು ಪೊಲೀಸರು ಅವಕಾಶ ನೀಡದ ಕಾರಣ ಜಿಲ್ಲಾಡಳಿತ ಭವನದ ಎದುರು ಧರಣಿ ಆರಂಭಿಸಿದರು.

ಪರಿಹಾರಕ್ಕೆ ಪಟ್ಟು

ಪ್ರತಿಭಟನೆ ನೇತೃತ್ವ ವಹಿಸಿರುವ ಶಿವಪುತ್ರಪ್ಪ ಮಲ್ಲಾಡದ ಮಾತನಾಡಿ, ರಾಣೆಬೆನ್ನೂರಿನ ತಾಲ್ಲೂಕು ಆಸ್ಪತ್ರೆ ವೈದ್ಯರಾಗಿದ್ದ ಡಾ.ಪಿ.ಶಾಂತ ಅವರ ಹಣದಾಸೆಗೆ ಸಾವಿರಾರು ಮಹಿಳೆಯರು ಬೀದಿಗೆ ಬಂದಿದ್ದಾರೆ. 1552 ಮಹಿಳೆಯರಿಗೆ ಅನಧಿಕೃತವಾಗಿ ಗರ್ಭಕೋಶದ ಚಿಕಿತ್ಸೆ ಮಾಡಿದ್ದರು. ಈ ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪರಿಹಾರ ಸಿಕ್ಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯ ಅನಧಿಕೃತ ಆಡಳಿತ ವೈದ್ಯಾಧಿಕಾರಿ ಡಾ.ಪರಮೇಶ್ವರಪ್ಪ ಆರ್.ಸಿ. ಅವರನ್ನು ತಕ್ಷಣದಿಂದ ಅಮಾನತು ಮಾಡಬೇಕು. 1522 ಮಹಿಳೆಯರಲ್ಲಿ ಮನೆ ಇಲ್ಲದವರಿಗೆ ವಿಶೇಷ ಅನುದಾನದಡಿಯಲ್ಲಿ ತಕ್ಷಣವೇ ಮನೆಗಳನ್ನು ಮಂಜೂರು ಮಾಡಬೇಕು. ಈ ಪ್ರಕರಣವನ್ನು ಸಿಬಿಐ ಅಥವಾ ಎಸ್‍ಐಟಿ ತನಿಖಾ ಸಂಸ್ಥೆಗೆ ವರ್ಗಾಹಿಸುವಂತಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಲಕ್ಷ್ಮವ್ವ ಲಮಾಣಿ, ಲಲಿತವ್ವ ಲಮಾಣಿ, ಗಂಗವ್ವ ಲಮಾಣಿ, ಕೆ.ಆರ್. ಉಮೇಶ, ಜಗದೀಶ ಕೆರೋಡಿ, ಈರವ್ವ ಲಮಾಣಿ, ಹೊನ್ನವ್ವ ಲಮಾಣಿ, ಗೋವಿಂದ ಲಮಾಣಿ ಇದ್ದರು.

ಸಂಧಾನ ಸಭೆ ವಿಫಲ

ಸೋಮವಾರದಿಂದ ಪಾದಯಾತ್ರೆ ಆಯೋಜಿಸುತ್ತಿರುವ ಮಾಹಿತಿ ಆಧರಿಸಿ ಹಾವೇರಿ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯೊಂದಿಗೆ ಮಹಿಳೆಯರ ಸಭೆ ನಡೆಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀನಿವಾಸ ಆಲದರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಸಭೆಯಲ್ಲಿ ಪಾಲ್ಗೊಂಡಿದ್ದರು. ಆಗ ಮಹಿಳೆಯರು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆಯ ದಿನಾಂಕ ನಿಗದಿಪಡಿಸುವಂತೆ ಪಟ್ಟು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT