ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಪ್ರಶಸ್ತಿ: ಆದೇಶಗಳೆಲ್ಲವೂ ಸಾಮಾಜಿಕ ನ್ಯಾಯ ಪರ -ಬಸವರಾಜ ಬೊಮ್ಮಾಯಿ

ಸಮಾನ ಅವಕಾಶ ಕಲ್ಪಿಸುವುದೇ ರಾಮರಾಜ್ಯ: ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಭರವಸೆ
Last Updated 9 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ದಿನಗಳಲ್ಲಿ ವಿಧಾನಸೌಧದಿಂದ ಹೊರಡುವ ಪ್ರತಿಯೊಂದು ಆಜ್ಞೆಯೂ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳ ಪರವಾಗಿಯೇ ಇರಲಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ವಾಲ್ಮೀಕಿ ಸಮುದಾಯದ ನೀವೆಲ್ಲರೂ ನನ್ನ ಅಣ್ಣ– ತಮ್ಮಂದಿರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಈ ಮಾತು ಹೇಳುತ್ತಿದ್ದೇನೆ. ದೇವರು ನನಗೆ ಕೊಟ್ಟಿರುವ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿ ಶೋಷಿತರ ಪರವಾಗಿಯೇ ಆದೇಶಗಳನ್ನು ಹೊರಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಈವರೆಗಿನ ಸರ್ಕಾರಗಳು ನಿಮ್ಮನ್ನು ಭ್ರಮೆಯಲ್ಲಿ ಇರಿಸಿದ್ದವು. ಬಾಯಿ ಮಾತಿನಿಂದ ಸಾಮಾಜಿಕ ನ್ಯಾಯ ಸಿಗದು. ಸಾಮಾಜಿಕ ನ್ಯಾಯದ ಪರವಾದ ಕೆಲಸಗಳನ್ನು ಮಾಡಿ ತೋರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕ್ರಾಂತಿ ಮಾಡಬೇಕಿದ್ದು, ಅದಕ್ಕೆ ನಿಮ್ಮ ಆಶೀರ್ವಾದ ಬೇಕಿದೆ’ ಎಂದರು.

‘ನಿಮ್ಮ ಪ್ರೀತಿ–ವಿಶ್ವಾಸಕ್ಕೆ ಸೋತು ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟಿದ್ದೇವೆ. ನ್ಯಾಯಾಲ
ಯಗಳೂ ದಮನಿತರ ಪರವಾಗಿಯೇ ಇರಲಿವೆ ಎಂಬ ವಿಶ್ವಾಸ ಇದೆ. ಸಮಾನ ಅವಕಾಶಗಳನ್ನು ಕಲ್ಪಿಸುವುದೇ ರಾಮರಾಜ್ಯ ಎಂದು ನಂಬಿದ್ದೇನೆ. ಎಂತಹ ಸಂದರ್ಭ ಬಂದರೂ ಸಾಮಾಜಿಕ ನ್ಯಾಯದ ಪರವಾಗಿಯೇ ನಿಲ್ಲುತ್ತೇನೆ’ ಎಂದು ಹೇಳಿದರು.

‘ಬಸವಣ್ಣನ ಅನುಭವ ಮಂಟಪದಲ್ಲಿ ಮಾದಿಗರ ಚನ್ನಯ್ಯ, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಸೇರಿ ಎಲ್ಲ ಸಮುದಾಯದವರೂ ಇದ್ದರು. ಸಮಾಜಕ್ಕೆ ಜ್ಞಾನಭಂಡಾರ ಕೊಟ್ಟರು. ಅದೇ ರೀತಿ ನನ್ನ ಸಚಿವ ಸಂಪುಟದಲ್ಲೂ ಗೋವಿಂದ ಕಾರಜೋಳ, ಶ್ರೀರಾಮುಲು ಸೇರಿ ಎಲ್ಲಾ ಸಮುದಾಯದವರಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಚಿಂತಿಸುತ್ತಿದ್ದಾರೆ’ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ‘ಈ ಬಾರಿಯ ವಾಲ್ಮೀಕಿ ಜಯಂತಿಯನ್ನು ಬಂಗಾರದ ಅಕ್ಷರಗಳಲ್ಲಿ ಬರೆದಿಡಬೇಕು. ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಣಯ ಕೈಗೊಂಡ ಸಂದರ್ಭದಲ್ಲಿ ವಾಲ್ಮೀಕಿ ಜಯಂತಿಯ ಸಂಭ್ರಮವನ್ನು ಬಸವರಾಜ ಬೊಮ್ಮಾಯಿ ಅವರು ಹೆಚ್ಚಿಸಿದ್ದಾರೆ. ಅವರಿಗೆ ಈ ಸಮುದಾಯ ಋಣಿಯಾಗಿರಲಿದೆ’ ಎಂದು ಅವರು ಹೇಳಿದರು.

ಗುಲಾಮರಾಗಿ ಇರುತ್ತೇವೆ: ರಾಜುಗೌಡ ದೀರ್ಘದಂಡ ನಮಸ್ಕಾರ

‘ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರಕ್ಕೆ ಜೀವ ಇರುವ ತನಕ ಗುಲಾಮರಾಗಿ ಇರುತ್ತೇವೆ’ ಎಂದು ಹೇಳಿದ ಸುರಪುರ ಶಾಸಕ ರಾಜುಗೌಡ ವೇದಿಕೆಯಲ್ಲಿದ್ದವರಿಗೆ ದೀರ್ಘದಂಡ ನಮಸ್ಕಾರ ಮಾಡಿದರು.

‘ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಸ್ವಾಮೀಜಿ ಅವರು ಕಾಲ್ನಡಿಗೆ ಜಾಥಾ ನಡೆಸದಿದ್ದರೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಮಿತಿ ರಚನೆ ಆಗುತ್ತಿರಲಿಲ್ಲ. ಬಿ.ಎಸ್.ಯಡಿಯೂರಪ್ಪ ಸಿ.ಎಂ ಆಗದಿದ್ದರೆ ಸಮಿತಿ ಮುಂದುವರಿಯುತ್ತಿರಲಿಲ್ಲ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗದಿದ್ದರೆ ಮೀಸಲಾತಿ ಹೆಚ್ಚಳದ ನಿರ್ಣಯ ಆಗುತ್ತಿರಲಿಲ್ಲ’ ಎಂದರು.

‘ಪ್ರಸನ್ನಾನಂದಸ್ವಾಮೀಜಿ ಅವರು ವಾಲ್ಮೀಕಿಯಾದರೆ, ಬಸವರಾಜ ಬೊಮ್ಮಾಯಿ ಅವರು ಶ್ರೀರಾಮನಂತೆ ನಮ್ಮ ನೆರವಿಗೆ ಬಂದಿದ್ದಾರೆ. ಇವರ ಋಣ ತೀರಿಸಲು ಸಾಧ್ಯವೇ ಇಲ್ಲ’ ಎಂದು ಕೊಂಡಾಡಿದರು.

ಬಳಿಕ ಮಾತನಾಡಿದ ಬೊಮ್ಮಾಯಿ, ‘ರಾಜುಗೌಡರು ಗುಲಾಮರಾಗಿರುತ್ತೇವೆ ಎಂದು ಮಾತನಾಡಿದ್ದು ಸರಿಯಲ್ಲ. ದೇವರ ಹೊರತಾಗಿ ಯಾವುದೇ ಮನುಷ್ಯನಿಗೂ ಮತ್ತೊಬ್ಬ ಮನುಷ್ಯ ಗುಲಾಮನಾಗುವುದು ಸರಿಯಲ್ಲ. ಮುಂದೆಂದೂ ಈ ಪದ ಪ್ರಯೋಗ ಮಾಡಬಾರದು. ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಬೇಕು. ನನ್ನನ್ನು ಶ್ರೀರಾಮಚಂದ್ರನಿಗೆ ಹೋಲಿಸಬೇಡಿ. ಶ್ರೀರಾಮಚಂದ್ರರ ಪಾದದ ದೂಳಿಗೆ ನಾನು ಸಮನಲ್ಲ’ ಎಂದರು.

ಮೂಗಿಗೆ ತುಪ್ಪ ಸವರಿದ್ದರು: ಸ್ವಾಮೀಜಿ

‘ಶೋಷಿತ ಸಮುದಾಯಗಳಿಂದ ಲಾಭ ಪಡೆದಿದ್ದ ಬಹುತೇಕ ಎಲ್ಲರೂ ನಮ್ಮ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದರು’ ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.

ಸಂಭ್ರಮದ ಸಮಾರಂಭ

ಮೀಸಲಾತಿ ಪ್ರಮಾಣ ಹೆಚ್ಚಿಸುವ ಸರ್ಕಾರ ನಿರ್ಣಯ ಕೈಗೊಂಡಿರುವುದರಿಂದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಸಂಭ್ರಮಾಚರಣೆ ಸಮಾರಂಭವಾಗಿ ಮಾರ್ಪಟ್ಟಿತ್ತು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮುಲು ಮತ್ತು ರಾಜುಗೌಡ ಅವರು ಮುಖ್ಯಮಂತ್ರಿ ಅವರನ್ನು ಹಾಡಿ ಹೊಗಳಿದರೆ, ಜನ ಕೇಕೆ ಹಾಕಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT