ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ: ವಿಎಚ್‌ಪಿ ಕಾರ್ಯಕರ್ತ ರಾಜೇಶ ಪೂಜಾರಿ ಶಂಕಾಸ್ಪದ ಸಾವು

Last Updated 12 ಜನವರಿ 2023, 19:45 IST
ಅಕ್ಷರ ಗಾತ್ರ

ಮಂಗಳೂರು/ಬಂಟ್ವಾಳ: ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತ, ಬಂಟ್ವಾಳ ತಾಲ್ಲೂಕು ಸಜಿಪನಡು ಗ್ರಾಮದ ಸಾನದ ಮನೆಯ ರಾಜೇಶ ನಾಗೇಶ ಪೂಜಾರಿ ಅವರ ಶವ ಬಿ.ಸಿ.ರೋಡ್ ಸಮೀಪದ ಪಾಣೆಮಂಗಳೂರು ಹಳೆ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾಗಿದೆ.

ಸಾವಿನಲ್ಲಿ ಸಂಶಯವಿದ್ದು, ತನಿಖೆ ನಡೆಸಬೇಕು ಎಂದು ಕುಟುಂಬದವರು ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಒತ್ತಾಯಿಸಿದ್ದಾರೆ. ಸಾವಿನ ಕುರಿತು ಸಂಬಂಧಿ ದಯಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ರಾಜೇಶ ಬುಧವಾರ ಬೆಳಿಗ್ಗೆ 8.30ರ ವೇಳೆ ಕೆಲಸಕ್ಕೆಂದು ಹೋದವರು ಮರಳಿ ಬಂದಿರಲಿಲ್ಲ. ಗುರುವಾರ ಬೆಳಿಗ್ಗೆ ಸಂಬಂಧಿಯೊಬ್ಬರು ರಾಜೇಶ ಅವರ ದ್ವಿಚಕ್ರ ವಾಹನವನ್ನು ಸೇತುವೆಯ ಬಳಿ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಅಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನದಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.

ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಸಜಿಪನಡು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಪಾಲ್ಗೊಂಡಿದ್ದರು.

ತನಿಖೆಗೆ ಆಗ್ರಹ: ರಾಜೇಶ್ ಅವರ ಸಾವಿನಲ್ಲಿ ಸಂದೇಹ ಇದ್ದು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.

ಘಟನೆಯ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ, ಸದ್ಯ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT