ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ತಜ್ಞರ ಅಭಿಪ್ರಾಯಗಳು

Last Updated 23 ಅಕ್ಟೋಬರ್ 2021, 21:02 IST
ಅಕ್ಷರ ಗಾತ್ರ

ಸಿಬ್ಬಂದಿ ಕೊರತೆ ಬೆನ್ನೆಲುಬು ಮುರಿದಂತೆ

ವಿಶ್ವವಿದ್ಯಾಲಯ ಎಂದರೆ ಬೋಧನೆಯಷ್ಟೇ ಅಲ್ಲ. ಸಂಶೋಧನೆ, ಪ್ರಕಟಣೆ, ಸಂಶೋಧನಾ ಯೋಜನೆಗಳು, ಆಡಳಿತಾತ್ಮಕ ಸಲಹೆ–ಸೂಚನೆಗಳು, ಅಧ್ಯಯನ ಸೇರಿದಂತೆ ಸಮಗ್ರವಾದ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ‘ಸಿಬ್ಬಂದಿ’ಯೇ ವಿಶ್ವವಿದ್ಯಾಲಯದ ಬೆನ್ನೆಲುಬು. ‘ಅತಿಥಿ’, ‘ಹೊರಗುತ್ತಿಗೆ’ ನೇಮಕಗಳಿಂದ ಸರಿದೂಗಿಸಲು ಸಾಧ್ಯವಿಲ್ಲ.

ಇದು ಸರಳ ವಿಚಾರವೂ ಅಲ್ಲ. ಸಂಶೋಧನೆಗೆ ಮಾರ್ಗದರ್ಶನ, ಯೋಜನೆ ಮುನ್ನಡೆಸಲು ಕಾಯಂ ತಜ್ಞರೇ ಬೇಕು. ಒಟ್ಟಾರೆ ಮೌಲ್ಯ, ರ್‍ಯಾಂಕಿಂಗ್ ಕುಸಿಯುವ ಅಪಾಯವಿದೆ. ಸಿಬ್ಬಂದಿ ಕೊರತೆಯಿಂದ ಕೇವಲ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಾತ್ರವಲ್ಲ, ಒಟ್ಟಾರೆ ಉನ್ನತ ಶಿಕ್ಷಣ ಹಾಗೂ ಅದರ ಮೌಲ್ಯವೇ ಕುಂಠಿತಗೊಳ್ಳುತ್ತದೆ.

-ಪ್ರೊ.ಬಿ.ಎ. ವಿವೇಕ ರೈ, ವಿಶ್ರಾಂತ ಕುಲಪತಿ

ನ್ಯಾಕ್‌ ರ‍್ಯಾಂಕಿಂಗ್‌ ಮೇಲೂ ಪೆಟ್ಟು

ಬೋಧಕರ ಕೊರತೆಯಿಂದ ನ್ಯಾಕ್‌ ರ‍್ಯಾಂಕಿಂಗ್‌ ಮೇಲೂ ಪೆಟ್ಟು ಬಿತ್ತು. ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡದಿದ್ದರೆ ವಿಶ್ವವಿದ್ಯಾಲಯದ ಬೆಳವಣಿಗೆಗೆ ತೊಂದರೆ ಖಚಿತ. ಅಧ್ಯಾಪಕರ ಕೊರತೆಯಿಂದ ಅತಿಥಿ ಶಿಕ್ಷಕರನ್ನೇ ನೇಮಕ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿಂದ ಶೈಕ್ಷಣಿಕವಾಗಿ ಗುಣಮಟ್ಟ ಕುಸಿಯುತ್ತಿದೆ. ಸಂಶೋಧನೆಗೆ ಹಿನ್ನಡೆ ಉಂಟಾಗಿದೆ.

ಒಬ್ಬ ಪೂರ್ಣಾವಧಿ ಅಧ್ಯಾಪಕರಿದ್ದರೆ ಕನಿಷ್ಠ ನಾಲ್ಕು ಮಂದಿಗೆ ಸಂಶೋಧನೆಗೆ ಮಾರ್ಗದರ್ಶನ ನೀಡಬಹುದು. ಕನಿಷ್ಠ 150 ಅಧ್ಯಾಪಕರ ಭರ್ತಿಗೆ ಅವಕಾಶ ನೀಡಿದರೆ 600 ಸಂಶೋಧನಾರ್ಥಿಗಳಿರುತ್ತಿದ್ದರು. ಇನ್ನು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿರುವುದರಿಂದ 10 ಅಧ್ಯಾಪಕರು ಇರುವ ಜಾಗದಲ್ಲಿ 14 ಅಧ್ಯಾಪಕರ ಅಗತ್ಯವಿದೆ. ಈ ನೀತಿಯು ಹೆಚ್ಚು ಕೆಲಸ ಬಯಸುತ್ತದೆ.

-ಪ್ರೊ.ಜಿ.ಹೇಮಂತಕುಮಾರ್‌, ಕುಲಪತಿ, ಮೈಸೂರು ವಿಶ್ವವಿದ್ಯಾಲಯ

ಪದವಿ ತರಗತಿಗಳಿಗೂ ತೊಂದರೆ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಈ ವರ್ಷದಿಂದ ಪದವಿ ತರಗತಿಗಳು ಕೂಡ ಪ್ರಾರಂಭಗೊಳ್ಳಲಿದ್ದು, ಕಾಯಂ ಬೋಧಕರಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗುವ ಸಾಧ್ಯತೆಗಳಿವೆ.

ಆದಷ್ಟು ಬೇಗ ಖಾಲಿ ಹುದ್ದೆಗಳು ಭರ್ತಿಯಾದರೆ ಬೋಧನೆ, ಸಂಶೋಧನೆ, ಕ್ಷೇತ್ರ ಅಧ್ಯಯನ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಕಾಯಂ ಪ್ರಾಧ್ಯಾಪಕರು ಇಲ್ಲದೇ ಇರುವುದರಿಂದ ಸಂಶೋಧನಾ ಚಟುವಟಿಕೆಗಳಿಗೆ ತೊಡಕಾಗಿದೆ.

-ಪ್ರೊ. ಬಸವರಾಜ ಎಲ್‌.ಲಕ್ಕಣ್ಣವರ, ಕುಲಸಚಿವ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ

ಗುಣಮಟ್ಟದಿಂದಲೇ ಮಾನ್ಯತೆ ನಿರ್ಧಾರ

ವಿಶ್ವವಿದ್ಯಾಲಯಗಳೂ ಸೇರಿದಂತೆ ಯಾವುದೇ ಶಿಕ್ಷಣ ಸಂಸ್ಥೆಯ ಮಾನ್ಯತೆ ನಿರ್ಧಾರವಾಗುವುದು ಗುಣಮಟ್ಟದ ಶಿಕ್ಷಣದಿಂದ. ಹುದ್ದೆಗಳು ಖಾಲಿಯಾದಂತೆ ತಕ್ಷಣ ಭರ್ತಿ ಮಾಡದಿದ್ದರೆ ಇರುವವರ ಮೇಲೆ ಹೊರೆ ಹೆಚ್ಚಾಗುತ್ತದೆ. ಆಗ ಸಹಜವಾಗಿ ಗುಣಮಟ್ಟ ಕುಸಿಯುತ್ತದೆ. ಕಾಲ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದರೆ ಅನುಕೂಲವಾಗುತ್ತದೆ.

-ಡಾ.ಜಿ.ಪ್ರಶಾಂತ ನಾಯಕ, ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT