ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನೋವು ಮರೆಸಿದ ವಿಜಯನಗರ ವೈಭವ: ಜಿಲ್ಲಾ ಉತ್ಸವಕ್ಕೆ ವಿಧ್ಯುಕ್ತ ತೆರೆ

ಒಂದೂವರೆ ವರ್ಷದ ನಂತರ ಅತಿದೊಡ್ಡ ಸಮಾರಂಭ; ವರ್ಣರಂಜಿತ ವಿಜಯನಗರ ಜಿಲ್ಲಾ ಉತ್ಸವಕ್ಕೆ ವಿಧ್ಯುಕ್ತ ತೆರೆ
Last Updated 3 ಅಕ್ಟೋಬರ್ 2021, 18:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಎರಡು ದಿನ ಇಲ್ಲಿ ನಡೆದ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ವರ್ಣರಂಜಿತ ಕಾರ್ಯಕ್ರಮವು ಜನರ ಕೋವಿಡ್‌ ನೋವು ಮರೆಸಿತು. ಧ್ವನಿ–ಬೆಳಕಿನ ವೈಭವದಲ್ಲಿ ಅದ್ದೂರಿ ಸಮಾರಂಭಕ್ಕೆ ಭಾನುವಾರ ವಿಧ್ಯುಕ್ತ ತೆರೆ ಬಿತ್ತು.

ಅದಕ್ಕೆ ಸಾಕ್ಷಿ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದು. ಕೋವಿಡ್‌ನಿಂದ ಅನೇಕರು ಅವರ ರಕ್ತಸಂಬಂಧಿಗಳು, ಆಪ್ತರನ್ನು ಕಳೆದುಕೊಂಡು ದುಃಖದಲ್ಲಿದ್ದರು. ಲಾಕ್‌ಡೌನ್‌ನಿಂದ ಆರ್ಥಿಕ ವಹಿವಾಟಿಗೆ ಪೆಟ್ಟು ಬಿದ್ದಿತ್ತು. ಕೋವಿಡ್‌ನಿಂದ ಗುಣಮುಖರಾದರೂ ಅದರ ನರಳಾಟದಿಂದ ಇನ್ನೂ ಕೆಲವರಿಗೆ ಹೊರಬರಲು ಸಾಧ್ಯವಾಗಿಲ್ಲ. ಆದರೆ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವು ಆ ನೋವು ಮರೆಸುವಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ಉದ್ಘಾಟನಾ ಸಮಾರಂಭದ ಮುನ್ನಾ ದಿನವಾದ ಶುಕ್ರವಾರದಿಂದ ಭಾನುವಾರ ರಾತ್ರಿ ವರೆಗೆ ಸಹಸ್ರಾರು ಸಂಖ್ಯೆಯ ಜನ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಕೆಲವರು ಹಗಲು ಹೊತ್ತಿನಲ್ಲಿ ಬಂದು ಮಳಿಗೆಗಳನ್ನು, ಭವ್ಯ ವೇದಿಕೆ, ಮಿನಿ ಹಂಪಿಯನ್ನು ಕಣ್ತುಂಬಿಕೊಂಡರೆ, ಅದಕ್ಕೂ ಅನೇಕ ಪಟ್ಟು ಹೆಚ್ಚಿನ ಸಂಖ್ಯೆಯ ಜನ ಸಂಜೆಯಿಂದ ತಡರಾತ್ರಿ ವರೆಗೆ ಸಂಗೀತ, ನೃತ್ಯ ಹಾಗೂ ಧ್ವನಿ ಬೆಳಕಿನ ಕಾರ್ಯಕ್ರಮವನ್ನು ವೀಕ್ಷಿಸಿದರು. ಅಷ್ಟೇ ಅಲ್ಲ, ಸಂಗೀತಕ್ಕೆ ಹೆಜ್ಜೆ ಹಾಕಿದರು. ಎಲ್ಲ ಮರೆತು ಜನರೊಂದಿಗೆ ಕೇಕೆ ಹಾಕಿದರು, ಶಿಳ್ಳೆ, ಚಪ್ಪಾಳೆ ಹೊಡೆದರು. ಹೀಗೆ ಎಲ್ಲ ವಯೋಮಾನದವರು ಒಂದುವರೆ ವರ್ಷದ ನಂತರ ಒಂದೆಡೆ ಕುಟುಂಬ ಸಮೇತ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಕೋವಿಡ್‌ ನಿಯಮ ಉಲ್ಲಂಘನೆ ತಡೆಯುವುದಕ್ಕಾಗಿ ಎರಡು ಸಾವಿರ ಜನರಿಗಷ್ಟೇ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಎರಡು ದಿನಗಳ ಅವಧಿಯಲ್ಲಿ ಸಹಸ್ರಾರು ಜನ ಕಾರ್ಯಕ್ರಮ ಸ್ಥಳಕ್ಕೆ ಬಂದು ಹೋಗಿದ್ದಾರೆ. ಅನೇಕರು ರಸ್ತೆ ಬದಿ, ಬಹುಮಹಡಿ ಕಟ್ಟಡ, ಕ್ರೀಡಾಂಗಣದ ಗ್ಯಾಲರಿಗಳಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದಾರೆ. ನಗರ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಎಲ್‌ಇಡಿ ಪರದೆಗಳ ಮೂಲಕ ನೂರಾರು ಜನ ನೋಡಿದ್ದಾರೆ.

ಇಷ್ಟೇ ಅಲ್ಲ, ಕ್ರೀಡಾಂಗಣದ ಸುತ್ತಲೂ ಹಣ್ಣು, ಎಳನೀರು, ಐಸ್‌ಕ್ರೀಂ, ಆಟಿಕೆ ವ್ಯಾಪಾರ ಜೋರಾಗಿತ್ತು. ಮಳಿಗೆ, ಹೋಟೆಲ್‌ಗಳಲ್ಲಿ ದಿನವಿಡೀ ಅಪಾರ ಸಂಖ್ಯೆಯ ಜನ ಬಂದು ಅವರಿಗಿಷ್ಟವಾದ ತಿನಿಸು ಸವಿದರು. ಹೀಗೆ ಹಬ್ಬ, ಜಾತ್ರೆಯ ಸಂಭ್ರಮ ಸೃಷ್ಟಿಸಿದ್ದ ವಿಜಯನಗರ ಉದ್ಘಾಟನಾ ಸಮಾರಂಭವು ಹಿಂದಿನ ಹಳೆಯ ಕಹಿ ಘಟನೆಗಳನ್ನೆಲ್ಲ ಮರೆಸಿ, ಜನರನ್ನು ಒಂದೆಡೆ ಸೇರಿಸಿತು.

‘ಒಂದುವರೆ ವರ್ಷದಿಂದ ಯಾವುದೇ ಸಭೆ, ಸಮಾರಂಭ ಹಾಗೂ ಇಷ್ಟೊಂದು ಸಂಖ್ಯೆಯ ಜನ ಸೇರಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇದರಲ್ಲಿ ಭಾಗವಹಿಸಿದ ನಂತರ ಬಹಳಷ್ಟು ಖುಷಿಯಾಗಿದೆ. ಕೋವಿಡ್‌ನಿಂದ ನಮ್ಮವರನ್ನು ಕಳೆದುಕೊಂಡ ನೋವು ಕೂಡ ಮರೆಸಿದೆ’ ಎಂದು ಅನಂತಶಯನಗುಡಿಯ ಬಸವರಾಜ ತಿಳಿಸಿದರು.

ಇಂತಹುದೇ ಅಭಿಪ್ರಾಯ ಬಳ್ಳಾರಿ ರಸ್ತೆಯ ಪೂರ್ಣಿಮಾ ಅವರದಾಗಿತ್ತು. ‘ಕೋವಿಡ್‌ನಿಂದ ನಮ್ಮ ಕುಟುಂಬದಲ್ಲಿ ಇಬ್ಬರು ಮೃತಪಟ್ಟಿದ್ದರು. ಆ ನೋವಿನಿಂದ ಹೊರಬರುವುದಕ್ಕಾಗಿ ಹೊರಗೆ ಸುತ್ತಾಡುತ್ತಿದ್ದೇವೆ. ಆದರೂ ಅದರಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೆ, ಈ ಎರಡು ದಿನಗಳ ಕಾರ್ಯಕ್ರಮ ಎಲ್ಲವನ್ನೂ ಮರೆಸಿದೆ. ಆಯೋಜಕರಿಗೆ ಧನ್ಯವಾದ’ ಎಂದು ಕೃತಜ್ಞತೆ ಸಲ್ಲಿಸುವುದು ಮರೆಯಲಿಲ್ಲ.

ಅಭಿವೃದ್ಧಿಗೆ ಮುನ್ನಡೆ

ಎರಡು ದಿನಗಳ ವಿಜಯನಗರ ಉತ್ಸವವು ನೂತನ ಜಿಲ್ಲೆಯ ಅಭಿವೃದ್ಧಿಗೆ ಮುನ್ನಡೆ ಹಾಡಿದೆ. ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹450 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ಈಗಾಗಲೇ ಕೆಲವು ಕಾಮಗಾರಿಗಳು ಆರಂಭಗೊಂಡಿವೆ. ಉಳಿದ ಕಾಮಗಾರಿಗಳು ಆರಂಭವಾಗಿ, ಅವುಗಳ ಅನುಷ್ಠಾನಗೊಳಿಸುವ ಹೊಣೆ ಜಿಲ್ಲಾಡಳಿತದ ಮೇಲಿದೆ.

ಹಂಪಿಗೆ ಅಪಾರ ಸಂಖ್ಯೆಯ ಜನ

ವಿಜಯನಗರ ವೈಭವ ಕಣ್ತುಂಬಿಕೊಳ್ಳಲು ನೂತನ ಜಿಲ್ಲೆಯ ವಿವಿಧ ಭಾಗಗಳ ಅಪಾರ ಸಂಖ್ಯೆಯ ಜನ ನಗರಕ್ಕೆ ಭೇಟಿ ನೀಡಿದರು. ಬಳಿಕ ಅವರು ವಿಶ್ವಪ್ರಸಿದ್ಧ ಹಂಪಿ, ತುಂಗಭದ್ರಾ ಜಲಾಶಯಕ್ಕೆ ಭೇಟಿ ಕೊಟ್ಟರು. ಕೋವಿಡ್‌ನಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದ ತುಂಗಭದ್ರಾ ಜಲಾಶಯ, ಹಂಪಿಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರೊಂದಿಗೆ ವಿಶೇಷ ಕಳೆ ಬಂದಿದೆ. ಪ್ರವಾಸೋದ್ಯಮ ಚೇತರಿಕೆಯ ಲಕ್ಷಣಗಳು ಗೋಚರಿಸಿವೆ.

ಕೊನೆಗೊಂಡ ಉತ್ಸವ

ಎರಡು ದಿನಗಳ ವರ್ಣರಂಜಿತ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭಕ್ಕೆ ಭಾನುವಾರ ತೆರೆ ಬಿತ್ತು.
ಸಂಜೆ ನಡೆದ ಸಮಾರೋಪದಲ್ಲಿ ಶಾಂತಿಧಾಮ ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಮಹಾರಾಜ್‌, ಮಾತಂಗ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಕೃಷಿ ಸಚಿವ ಬಿ.ಸಿ. ಪಾಟೀಲ, ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ, ನಟ ಅಜಯ್‌ ರಾವ್‌, ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ಕೆ. ಪಾಲ್ಗೊಂಡಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಆನಂದ್ ಸಿಂಗ್‌ಗೆ ಜನ್ಮದಿನದ ಕೊಡುಗೆ

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಜನ್ಮದಿನದಂದೇ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಸಮಾರೋಪ ನಡೆದಿದ್ದು ವಿಶೇಷವಾಗಿತ್ತು. ಕೆಲವು ಗಣ್ಯರು ವೇದಿಕೆಯ ಮೇಲೆ ಮಾತನಾಡುತ್ತ ಸಚಿವರಿಗೆ ಶುಭ ಕೋರಿದರು.
ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ‘ಆನಂದ್‌ ಸಿಂಗ್‌ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಆನಂದ್‌ ಸಿಂಗ್‌ ಒಬ್ಬರೇ ಇಲ್ಲ. ಅವರೊಂದಿಗೆ 11 ಜನ ಮಂತ್ರಿಗಳು ಇದ್ದೇವೆ. ಆನಂದ್‌ ಸಿಂಗ್‌ ಅವರಿಗೆ ಅನೇಕ ಜನ ವೈರಿಗಳು ಇರಬಹುದು. ಅವರೇನೋ ಭಾವಿಸಿರಬಹುದು. ಆದರೆ, ಸಿಂಗ್‌ ಅವರಿಗೆ ವಿಜಯನಗರ ಅಭಿವೃದ್ಧಿಯ ಉದ್ದೇಶ ಒಂದೇ ಇದೆ. ಹೊಸ ಜಿಲ್ಲೆ ನಂತರ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಎಲ್ಲೂ ನಡೆದಿಲ್ಲ’ ಎಂದು ಹೇಳಿದರು.
ನಟ ಅಜಯ್‌ ರಾವ್‌, ‘ಹ್ಯಾಪಿ ಬರ್ತ್‌ ಡೇ ಟು ಆನಂದ್‌ ಸಿಂಗ್‌’ ಎಂದರು.

‘ಪಾಂಡವರಂತೆ ಐದು ಸಚಿವರು’

‘ವಿಜಯನಗರ ಜಿಲ್ಲೆ ರಚನೆಗೆ ಆನಂದ್‌ ಸಿಂಗ್‌ ಅಷ್ಟೇ ಅಲ್ಲ, ಪಾಂಡವರಂತೆ ಐದು ಜನ ಸಚಿವರು ಕೆಲಸ ಮಾಡಿದ್ದೇವೆ. ಆನಂದ್ ಸಿಂಗ್‌ ಜಿಲ್ಲೆಗಾಗಿ ಯಾವುದೇ ಮುಹೂರ್ತ, ರಾಹು, ಗುಳಿಕಾಲ ನೋಡದೇ ಎಲ್ಲರಿಗಿಂತ ಮೊದಲು ರಾಜೀನಾಮೆ ನೀಡಿದ್ದರು. ಅವರ ಜತೆಯಾಗಿ ನಾವು ರಾಜೀನಾಮೆ ಕೊಟ್ಟೆವು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ‘ಜಿಲ್ಲೆ ಆಗುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಆನಂದ್‌ ಸಿಂಗ್‌ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅವರ ನೇತೃತ್ವದಲ್ಲಿ ವಿಜಯನಗರದ ಗತ ವೈಭವ ಮರುಕಳಿಸಲಿದೆ’ ಎಂದರು.

ಕಳೆಗುಂದಿದ ವಿಜಯನಗರದ ಹಂಪಿ

ಹಂಪಿ ವೈಭವ ನೆನಪಿಸುವಂತೆ ನಗರದಲ್ಲಿ ಎರಡು ದಿನ ಅದ್ದೂರಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಆದರೆ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಸೇರಿದಂತೆ ಯಾವುದೇ ಸ್ಮಾರಕಗಳಿಗೆ ಕನಿಷ್ಠ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಿರಲಿಲ್ಲ. ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಸಂಘಟಿಸಿರುವುದು ಖುಷಿಯ ವಿಚಾರ. ಆದರೆ, ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಶಿಲ್ಪಕಲೆಯ ತವರೂರು ಹಂಪಿ ನಿರ್ಲಕ್ಷ್ಯಿಸಿರುವುದು ಸರಿಯಲ್ಲ. ಕನಿಷ್ಠ ವಿದ್ಯುತ್‌ ದೀಪಗಳಾದರೂ ಹಾಕಬೇಕಿತ್ತು’ ಎಂದು ಹಂಪಿ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT