ಶನಿವಾರ, ಸೆಪ್ಟೆಂಬರ್ 25, 2021
26 °C
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದರೂ 71 ಸಾಂತ್ವನ ಕೇಂದ್ರಗಳು ಸ್ಥಗಿತ

ದೌರ್ಜನ್ಯ ಪ್ರಕರಣಗಳು ಹೆಚ್ಚಳ: ಮಹಿಳೆಯರಿಗೆ ’ಸಾಂತ್ವನ‘ ಹೇಳುವವರಿಲ್ಲ !

ಗುರು ‍‍ಪಿ.ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು ಮತ್ತು ಪರ್ಯಾಯ ಕಾರ್ಯಕ್ರಮಗಳಿವೆ ಎಂಬ ಕಾರಣ ಮುಂದೊಡ್ಡಿ 71 ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಮುಚ್ಚಿದೆ. ಹೆಚ್ಚು ಜನಸಂಖ್ಯೆ ಇರುವ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚು ವರದಿಯಾಗುವ ರಾಜಧಾನಿ ಬೆಂಗಳೂರಿನಲ್ಲಿ ಈಗ ಒಂದೂ ಸಾಂತ್ವನ ಕೇಂದ್ರವಿಲ್ಲ !

ನೊಂದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಶಿಕ್ಷಣ, ಉದ್ಯೋಗ ಮತ್ತು ಉಚಿತ ಕಾನೂನು ಸಾಂತ್ವನ ಯೋಜನೆಯಡಿ ನೆರವು ದೊರೆಯುತ್ತಿತ್ತು. ಆದರೆ, ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿಯೇ ಮಹಿಳೆಯರು ಈ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ದೂರು ರಾಜ್ಯ ಮಹಿಳಾ ಸಾಂತ್ವನ ಕೇಂದ್ರಗಳ ಒಕ್ಕೂಟದ್ದು.

'ಮಹಿಳೆಯರ ಮೇಲಾಗುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ನಿಯಂತ್ರಿಸಲು ರಾಜ್ಯದಲ್ಲಿ 2000–01ನೇ ಸಾಲಿನಲ್ಲಿ ರಾಜ್ಯದಾದ್ಯಂತ ಸಾಂತ್ವನ ಕೇಂದ್ರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಾರಂಭಿಸಿತ್ತು. 2021ರ ಏಪ್ರಿಲ್‌ 1ರಿಂದ 71 ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಲ್ಲಿ ಒಂದೇ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಒಕ್ಕೂಟದ ಕಾರ್ಯದರ್ಶಿ ಎಂ. ಭೀಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರಗಳನ್ನು ಮುಂದುವರಿಸುವಂತೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಈ ಕುರಿತು ಶಿಫಾರಸು ಕಳಿಸುವಂತೆ ಇಲಾಖೆಗೆ ಅವರು ಸೂಚನೆ ನೀಡಿದ್ದರು. ಇಲಾಖೆಯ ವರದಿ ಆಧಾರದ ಮೇಲೆ ಈ ಕೇಂದ್ರಗಳನ್ನು ಮುಂದುವರಿಸುವಂತೆ ಸೂಚನೆ ನೀಡಿದ್ದರೂ, ಆರ್ಥಿಕ ಇಲಾಖೆಯು ಈವರೆಗೆ ಅನುಮೋದನೆ ನೀಡಿಲ್ಲ’ ಎಂದರು.

‘ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕೇಂದ್ರಕ್ಕೆ ಸರ್ಕಾರವು ತಿಂಗಳಿಗೆ ₹50 ಸಾವಿರ ಮಾತ್ರ ನೀಡುತ್ತದೆ. ಕೇಂದ್ರದ ಬಾಡಿಗೆ, ಸಿಬ್ಬಂದಿ ವೇತನ ಎಲ್ಲ ಇದೇ ಮೊತ್ತದಲ್ಲಿ ಸರಿದೂಗಿಸಬೇಕು. ಒಬ್ಬರು ಆಪ್ತ ಸಮಾಲೋಚಕರಿಗೆ ₹15 ಸಾವಿರ, ಮೂವರು ಸಾಮಾಜಿಕ ಕಾರ್ಯಕರ್ತರಿಗೆ ತಲಾ ₹10 ಸಾವಿರ ವೇತನ ಇರುತ್ತದೆ. 71 ಕೇಂದ್ರಗಳಿಗೆ ತಿಂಗಳಿಗೆ ₹50 ಸಾವಿರ ನೀಡುವುದು ಸರ್ಕಾರಕ್ಕೆ ದೊಡ್ಡ ಹೊರೆಯೇನಲ್ಲ’ ಎಂದು ಅವರು ಹೇಳಿದರು.

ತಕ್ಷಣಕ್ಕೆ ಪರಿಹಾರ ಸಿಗಲ್ಲ: ‘ಕೇಂದ್ರ ಸರ್ಕಾರದ ಸಖಿ, ಸ್ವಾಧಾರ, ಉಜ್ವಲ ಯೋಜನೆಗಳು ಕೂಡ ಸಾಂತ್ವನ ಯೋಜನೆಗಳನ್ನೇ ಹೋಲುತ್ತಿದ್ದು, ಕಾರ್ಯಕ್ರಮಗಳ ಪುನರಾವರ್ತನೆ ಆಗುತ್ತಿದೆ ಎಂಬ ಕಾರಣವನ್ನು ರಾಜ್ಯ ಸರ್ಕಾರ ಹೇಳುತ್ತಿದೆ. ರಾಜ್ಯದಲ್ಲಿ ಆರೇಳು ವರ್ಷಗಳಿಂದ ‘ಗೆಳತಿ’ ಹೆಸರಿನಲ್ಲಿ ಸಖಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆಗಲೂ ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು’ ಎಂದು ಒಕ್ಕೂಟ ಹೇಳಿದೆ.

‘ನೊಂದ ಮಹಿಳೆಯರ ಸಮಸ್ಯೆಗೆ ಸಖಿ ಕೇಂದ್ರಗಳಿಗಿಂತ ಸಾಂತ್ವನ ಕೇಂದ್ರಗಳೇ  ತಕ್ಷಣವೇ ಸ್ಪಂದಿಸುತ್ತವೆ. ಇನ್ನು, ಕೇಂದ್ರ ಸರ್ಕಾರದ ಯೋಜನೆಯ ಕೌಟುಂಬಿಕ ಸಲಹಾ ಕೇಂದ್ರಗಳು ಇವೆ. ಆದರೆ, ಸಾಂತ್ವನ ಯೋಜನೆಗಳಲ್ಲಿನ ಯಾವ ಸೌಲಭ್ಯವೂ ಇಲ್ಲಿರುವುದಿಲ್ಲ. ಸಾಂತ್ವನ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿದರೆ, ಕೇಂದ್ರದ ಕೌಟುಂಬಿಕ ಸಲಹಾ ಕೇಂದ್ರಗಳು ಹಗಲಿನ ವೇಳೆ ಮಾತ್ರ ಕಾರ್ಯನಿರ್ವಹಿಸುತ್ತವೆ’ ಎಂದು ಒಕ್ಕೂಟದ ಅಧ್ಯಕ್ಷರಾದ ಡಾ. ವಿಜಯ ಹೇಳಿದರು.

‘ಬೆಂಗಳೂರಿನಲ್ಲಿ 1.40 ಕೋಟಿಗೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಕನಿಷ್ಠ 25ರಿಂದ 35 ಆಪ್ತ ಸಮಾಲೋಚಕರ ಅವಶ್ಯಕತೆ ಇಲ್ಲಿದೆ. ವರದಕ್ಷಿಣೆ ಕಿರುಕುಳ, ಮಹಿಳೆಯ ಕಳ್ಳಸಾಕಾಣಿಕೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು