ವೈರಾಣು ಜ್ವರ: ಮಕ್ಕಳು, ವೃದ್ಧರಲ್ಲಿ ಹೆಚ್ಚಳ

ಬೆಂಗಳೂರು: ‘ಹವಾಮಾನ ವೈಪರೀತ್ಯದಿಂದ ಕಳೆದ ಎರಡು ವಾರಗಳಲ್ಲಿ ವೈರಾಣು ಜ್ವರ ಪ್ರಕರಣಗಳು ವೃದ್ಧರಲ್ಲಿ ಶೇ 30ರಷ್ಟು ಹಾಗೂ ಮಕ್ಕಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ’ ಎಂದು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
‘ಕೆಲ ದಿನಗಳಿಂದ ಮಳೆ ಕಡಿಮೆಯಾದರೂ ಚಳಿಯ ವಾತಾವರಣ ಇದೆ. ಇದರಿಂದಾಗಿ ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯ ಪೀಡಿತರಾಗುತ್ತಿದ್ದು, ಹೆಚ್ಚಿನವರು ಜ್ವರ, ಉಸಿರಾಟದ ಸಮಸ್ಯೆ, ಗಂಟಲು ನೋವು ಸಮಸ್ಯೆ ಸಂಬಂಧ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ವೃದ್ಧರಲ್ಲಿ ಕೀಲು ನೋವಿನ ಸಮಸ್ಯೆ ಶೇ 20ರಷ್ಟು ಏರಿಕೆಯಾಗಿದೆ. ಇದಲ್ಲದೆ, ಟೈಫಾಯಿಡ್, ಡೆಂಗಿ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳೂ ಪತ್ತೆಯಾಗುತ್ತಿವೆ’ ಎಂದು ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಮಾಲೋಚಕಿ ಡಾ. ನಿಧಿ ಮೋಹನ್ ತಿಳಿಸಿದ್ದಾರೆ.
‘ಚಳಿಗಾಲದ ಅವಧಿಯಲ್ಲಿ ತಾಜಾ ಮತ್ತು ಬೆಚ್ಚಗಿನ ಆಹಾರ ಸೇವಿಸಬೇಕು. ಕೈ, ಕಾಲು ಮತ್ತು ಬಾಯಿಯ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ದೂಳಿನಿಂದಲೂ ಅಲರ್ಜಿಯಂತಹ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೊರಗಡೆ ಓಡಾಡುವಾಗ ಮುಖಗವಸು ಧರಿಸುವುದು ಉತ್ತಮ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.