ಮಂಗಳವಾರ, ಡಿಸೆಂಬರ್ 7, 2021
20 °C

ಸ್ಪಷ್ಟ ಭರವಸೆ ಕೊಡದಿದ್ದರೆ ಸತ್ಯಾಗ್ರಹ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ–2ಎ ಪಟ್ಟಿಗೆ ಸೇರಿಸುವ ಕುರಿತು ಅಕ್ಟೋಬರ್‌ 1 ರಂದು ಸ್ಪಷ್ಟ ಭರವಸೆ ನೀಡದಿದ್ದರೆ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವರ್ಗ–2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಾವು ಆರಂಭಿಸಿರುವ ಅಭಿಯಾನ ಅ.1 ರಂದು ಬೆಂಗಳೂರು ತಲುಪಲಿದೆ. ಆ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ ಸ್ಪಷ್ಟವಾದ ಭರವಸೆ ನೀಡಬೇಕು. ಅವರಿಂದ ಉತ್ತರ ಬಾರದಿದ್ದರೆ ಧರಣಿ ಆರಂಭಿಸುತ್ತೇವೆ’ ಎಂದರು.

ಅ.1 ರಂದು ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಸ್ಮರಣೆಯ ಕಾರ್ಯಕ್ರಮ ನಡೆಯಲಿದೆ. ಆ ಸಮಾರಂಭಕ್ಕೆ ಮುಖ್ಯಮಂತ್ರಿ ಅಥವಾ ಸರ್ಕಾರದ ‍ಪ್ರತಿನಿಧಿ ಬಂದು ಭರವಸೆ ನೀಡುತ್ತಾರೆ ಎಂಬ ನಿರೀಕ್ಷೆ ಇದೆ. ಶುಕ್ರವಾರ ಮಧ್ಯಾಹ್ನದವರೆಗೂ ಕಾದು ನೋಡಲಾಗುವುದು. ಯಾವುದೇ ಪ್ರತಿಕ್ರಿಯೆ ದೊರೆಯದಿದ್ದರೆ ಕಾರ್ಯಕ್ರಮದ ಸ್ಥಳದಿಂದ ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

‘ಸೆಪ್ಟೆಂಬರ್‌ 15 ರೊಳಗೆ ನಮ್ಮ ಸಮುದಾಯಕ್ಕೆ ಪ್ರವರ್ಗ–2 ಎ ಅಡಿಯಲ್ಲಿ ಮೀಸಲಾತಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಗಡುವಿನೊಳಗೆ ತೀರ್ಮಾನ ಆಗಿಲ್ಲ. ಆದರೆ, ಹಿಂದುಳಿದ ವರ್ಗಗಳ ಆಯೋಗ ಈ ಸಂಬಂಧ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ ನಮ್ಮ ಭರವಸೆ ಹುಸಿಯಾಗಿಲ್ಲ. ಬಸವರಾಜ ಬೊಮ್ಮಾಯಿ ಅವರು ನಮ್ಮ ಹೋರಾಟ ಬೆಂಬಲಿಸಿ ಮಾತನಾಡಿದ್ದಾರೆ. ಅವರಿಂದ ಸಕಾರಾತ್ಮಕ ಭರವಸೆ ಸಿಗುತ್ತದೆ ಎಂಬ ನಿರೀಕ್ಷೆ ಇದೆ’ ಎಂದರು.

ಮುಖ್ಯಮಂತ್ರಿಯವರು ಎಲ್ಲ ಜಿಲ್ಲಾಧಿಕಾರಿಗಳಿಂದ ವರದಿ ಪಡೆದಿದ್ದಾರೆ. ಮೀಸಲಾತಿ ನೀಡುವ ವಿಷಯದಲ್ಲಿ ಶೇಕಡ 70 ರಷ್ಟು ಕೆಲಸ ಆಗಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆದು ಅಂತಿಮ ನಿರ್ಧಾರ ಕೈಗೊಳ್ಳುವುದು ಮಾತ್ರ ಬಾಕಿ ಇದೆ. ಅದನ್ನು ಸ್ಪಷ್ಟವಾಗಿ ಹೇಳಬೇಕು ಎಂಬುದು ತಮ್ಮ ಆಗ್ರಹ ಎಂದು ತಿಳಿಸಿದರು.

ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ‘ಆರು ತಿಂಗಳ ಗಡುವು ನೀಡಿದ್ದರೂ ಸರಿಯಾಗಿ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ನಾವು ಮತ್ತೆ ಹೋರಾಟ ಆರಂಭಿಸಿದ್ದೇವೆ’ ಎಂದರು.

‘ಸಚಿವ ಮುರುಗೇಶ ನಿರಾಣಿ ನಮ್ಮ ಹೋರಾಟವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೋರಾಟ ನಿಲ್ಲಿಸುವ ಭರವಸೆ ನೀಡಿ ಸಚಿವ ಪದವಿ ಗಿಟ್ಟಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಸಚಿವನಾಗಿ ಬೀದಿಯಲ್ಲಿ ಹೋರಾಡಲಾಗಲ್ಲ:ನಿರಾಣಿ

ಬೆಳಗಾವಿ: ‘ನಾನು ಸಚಿವ ಸ್ಥಾನದಲ್ಲಿದ್ದುಕೊಂಡು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಬೀದಿಯಲ್ಲಿ ನಿಂತು ಹೋರಾಡಲು ಸಾಧ್ಯವಾಗುವುದಿಲ್ಲ’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು. ಅವರನ್ನು ಸಮಾಜದ ಪೀಠಕ್ಕೆ ನಾವೇ ಆಯ್ಕೆ ಮಾಡಿದ್ದು. ನಮ್ಮ ಹೋರಾಟಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಯಾರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಪ ಮಾಡಿದ್ದಾರೋ ನನಗೆ ಗೊತ್ತಿಲ್ಲ’ ಎಂದರು.

‘ಸಮಾಜವನ್ನು ಪ್ರವರ್ಗ 3ಬಿ ಪಟ್ಟಿಗೆ ತಂದವನು ನಾನೇ. ಪ್ರವರ್ಗ 2ಎ ಮೀಸಲಾತಿ ಸಿಗಬೇಕು ಎಂದು ಹೋರಾಟ ಮಾಡಿದವರಲ್ಲಿ ಮೊದಲಿಗ ನಾನು. ಇತರರಂತೆ ಪಾದಯಾತ್ರೆ ಮಾಡಲು ಅಥವಾ ಹೋರಾಟಕ್ಕೆ ಹೋಗಲು ಆಗುವುದಿಲ್ಲ. ಸಮಾಜದವರು ನಡೆಸುವ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸುವುದು, ಮೊಟ್ಟೆ ಎಸೆಯುವಂತೆ ಮಾಡುವುದು ನಮ್ಮ ಜಾಯಮಾನವಲ್ಲ. ಕುಂಬಳ ಕಾಯಿ ಕಳ್ಳ ಎಂದರೆ ನಾನೇಕೆ ಹೆಗಲು ಮುಟ್ಟಿ ನೋಡಿಕೊಳ್ಳಲಿ?’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು