ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ಮೌಲ್ಯ ಕುಸಿಯದಂತೆ ತಡೆಯಬೇಕಿದೆ: ಸಿಎಂ ಬೊಮ್ಮಾಯಿ

Last Updated 5 ಜನವರಿ 2022, 19:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ ಅಗತ್ಯವಿದೆಯೆ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಪರಿಷತ್‌ನ ಮೌಲ್ಯ ಕುಸಿಯದಂತೆ ತಡೆಯುವ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ನಿವೃತ್ತರಾದ ವಿಧಾನ ಪರಿಷತ್‌ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್‌ನ ಇತಿಹಾಸ, ಪರಂಪರೆ ಮತ್ತು ಮಹತ್ವವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿನ ಪರಿಸ್ಥಿತಿ ಮತ್ತು ಸಂದರ್ಭಗಳನ್ನು ಆಧರಿಸಿ ಪರಿಷತ್‌ನ ಅಗತ್ಯದ ಕುರಿತು ಪ್ರಶ್ನೆ ಎದ್ದಿದೆ’ ಎಂದರು.

ʼನಾನು ಕೂಡ ವಿಧಾನ ಪರಿಷತ್‌ ಸದಸ್ಯನಾಗಿಯೇ ರಾಜಕೀಯ ಜೀವನ ಆರಂಭಿಸಿದವನು. ಪರಿಷತ್‌ನ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಗಂಭೀರವಾದ ಚಿಂತನೆ ಅಗತ್ಯ. ಎಲ್ಲರೂ ಈ ಕುರಿತು ಆತ್ಮಾವಲೋಕನ ಮಾಡಿಕೊಂಡು ಕೆಲಸ ಮಾಡಬೇಕಿದೆ. ವಿಧಾನ ಪರಿಷತ್‌ನ ಮೌಲ್ಯ ಹೆಚ್ಚಿಸುವುದಕ್ಕೆ ಪೂರಕವಾಗಿ ಯೋಚಿಸಬೇಕಿದೆʼ ಎಂದು ಹೇಳಿದರು.

ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ: ರಾಜಕಾರಣದಲ್ಲಿ ಇರುವವರಿಗೆ ಯಾವತ್ತೂ ನಿವೃತ್ತಿಯ ಪ್ರಶ್ನೆ ಎದುರಾಗುವುದಿಲ್ಲ. ರಾಜಕಾರಣ ಅರ್ಹತೆ ಮತ್ತು ನಿವೃತ್ತಿ ಇಲ್ಲದ ಕ್ಷೇತ್ರ. ಪ್ರಸ್ತುತತೆ ಕಳೆದುಕೊಂಡರೆ ರಾಜಕಾರಣದಲ್ಲಿ ಉಳಿಯುವುದು ಅಸಾಧ್ಯ. ಕ್ರಿಯಾಶೀಲವಾಗಿ ಇರುವವರು ಮಾತ್ರ ಪ್ರಸ್ತುತತೆ ಉಳಿಸಿಕೊಳ್ಳಲು ಸಾಧ್ಯ ಎಂದರು.

ಚಿಕಿತ್ಸೆ ಅಗತ್ಯ: ವಿಧಾನ ಪರಿಷತ್‌ನ ಸಭಾ ನಾಯಕರೂ ಆಗಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ವ್ಯವಸ್ಥೆಯನ್ನು ವಿಮರ್ಶೆ ಮಾಡುವ ವಿಷಯದಲ್ಲಿ ವಿಧಾನ ಪರಿಷತ್‌ ಎತ್ತರದ ಸ್ಥಾನದಲ್ಲಿದೆ. ಅದು ಶಕ್ತಿ ಕಳೆದುಕೊಂಡಿಲ್ಲ. ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದ ಹಣದ ವೆಚ್ಚದ ವಿಚಾರದಲ್ಲಿ ಚಿಕಿತ್ಸೆಯ ಅಗತ್ಯವಿದೆʼ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ ಡಾ.ಬಿ.ಎಲ್‌. ಶಂಕರ್‌ ಮಾತನಾಡಿ, ‘ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನ ಪರಿಷತ್‌ ಸದಸ್ಯರೇ ಮುಖ್ಯಮಂತ್ರಿಗಳಾಗಿದ್ದಾರೆ. ರಾಜ್ಯದಲ್ಲಿ ವಿಧಾನ ಪರಿಷತ್‌ ಬೇಡ ಎಂದು ವಾದಿಸುವವರು ಇದನ್ನು ಅರಿಯಬೇಕು. ವಿಧಾನ ಪರಿಷತ್‌ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ವಿಧಾನಸಭೆಯ ವಿವೇಚನೆಗೆ ಬಿಡುವುದು ಸರಿಯಲ್ಲ’ ಎಂದು ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಉಪಸ್ಥಿತರಿದ್ದರು.

18 ಸದಸ್ಯರ ನಿವೃತ್ತಿ

ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ವಿಧಾನ ಪರಿಷತ್‌ನ 25 ಸದಸ್ಯರ ಅವಧಿ ಬುಧವಾರಕ್ಕೆ ಕೊನೆಗೊಂಡಿತು. ಅವರಲ್ಲಿ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಆರು ಸದಸ್ಯರು ಪುನರಾಯ್ಕೆಯಾಗಿದ್ದಾರೆ.

ಪರಿಷತ್‌ ಸದಸ್ಯರಾಗಿದ್ದ ಶ್ರೀನಿವಾಸ ಮಾನೆ ಹಾನಗಲ್‌ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಸೇರಿದಂತೆ 18 ಮಂದಿ ಬುಧವಾರ ನಿವೃತ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT