ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಸಮಿತಿ: ಬೊಮ್ಮಾಯಿ

Last Updated 26 ಮಾರ್ಚ್ 2022, 7:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಸಲದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ‘ಬಜೆಟ್‌ ಘೋಷಣೆಗಳನ್ನು ವೇಗವಾಗಿ ಅನುಷ್ಠಾನ ಮಾಡಬೇಕು ಎಂದು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದೇನೆ. ಎಲ್ಲಾ ಇಲಾಖೆಗಳು ಹಣಕಾಸು ಇಲಾಖೆಯ ಜೊತೆ ಸಂಪರ್ಕದಲ್ಲಿರಬೇಕು. ಇಲಾಖೆಗಳ ನಡುವೆ ಸಂವಹನಕ್ಕೆ ಅನುಕೂಲವಾಗುವಂತೆ ಸಮಿತಿ ಕೆಲಸ ಮಾಡಲಿದೆ. ಮೊದಲ ಬಾರಿಗೆ ಸಮಿತಿ ರಚಿಸಲಾಗುತ್ತಿದೆ’ ಎಂದು ತಿಳಿಸಿದರು.

‘ನಮ್ಮ ಸರ್ಕಾರ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡುತ್ತಿದೆ. ನವೆಂಬರ್‌ನಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ ಸಂಘಟಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಮೂರು ತ್ರೈಮಾಸಿಕಗಳ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಭಾರತದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ವಿದೇಶಿ ಹೂಡಿಕೆದಾರರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ ಇದು’ ಎಂದರು.

‘ಏ. 1ರಂದು ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಯಶಸ್ಸಿನಿ ಯೋಜನೆಯನ್ನು ಅವರು ಉದ್ಘಾಟಿಸಲಿದ್ದಾರೆ. ಸಹಕಾರಿ ರಂಗದಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತರಲು ಕ್ಷೀರಾಭಿವೃದ್ಧಿ ಬ್ಯಾಂಕ್‌ ಆರಂಭಿಸಲಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ಸಹಾಯ ಸಿಗುತ್ತದೆ. 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಅಮಿತ್‌ ಶಾ ಅವರು ಸರ್ಕಾರದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿರುವುದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುವುದಿಲ್ಲ. ವರಿಷ್ಠರು ಕರೆದಾಗ ದೆಹಲಿಗೆ ಹೋಗಿ ಈ ಕುರಿತು ಚರ್ಚೆ ಮಾಡುವೆ’ ಎಂದು ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಶನಿವಾರ ಹಾವೇರಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಹುಬ್ಬಳ್ಳಿಗೆ ಮರಳಿ ಇಲ್ಲಿನ ನವೀನ್‌ ಹೋಟೆಲ್‌ನಲ್ಲಿ ಆಯೋಜನೆಯಾಗಿರುವ ಟೈಕಾನ್‌ ಸಮಾವೇಶದಲ್ಲಿ ಭಾಗವಹಿಸುವರು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT