ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ: ಸಂಕಷ್ಟದಲ್ಲಿರುವವರ ಒಲವು ಗಳಿಸುವವರು ಯಾರು?

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಸರ್ಕಾರದ ಬಗ್ಗೆ ಅತಿಥಿ ಉಪನ್ಯಾಸಕರಲ್ಲಿ ಅಸಮಾಧಾನ l ಬಿಜೆಪಿ – ಕಾಂಗ್ರೆಸ್‌ ನೇರ ಸೆಣಸಾಟ
Last Updated 21 ಅಕ್ಟೋಬರ್ 2020, 20:38 IST
ಅಕ್ಷರ ಗಾತ್ರ

ಕಲಬುರ್ಗಿ: ಅತಿವೃಷ್ಟಿ ಹಾಗೂ ಪ್ರವಾಹದ ವೇದನೆ, ಅತಿಥಿ ಉಪನ್ಯಾಸಕರು–ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಕೊರೊನಾ ತಂದೊಡ್ಡಿರುವ ಸಂಕಷ್ಟದಿಂದಾಗಿ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಅಷ್ಟಾಗಿ ಕಾವು ಪಡೆದುಕೊಂಡಿಲ್ಲ. ಅಭ್ಯರ್ಥಿಗಳೇನೋ ಸುತ್ತುತ್ತಿದ್ದಾರೆ. ಮತದಾರರು ಉತ್ಸುಕತೆಯಿಂದ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ.

ಇದು ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳನ್ನು ಒಳಗೊಂಡ ದೊಡ್ಡ ಕ್ಷೇತ್ರ. ವಿಧಾನಸಭೆ–ಲೋಕಸಭೆ ಚುನಾವಣೆ ವಿಷಯ ಬಂದಾಗ ಈ ಪ್ರದೇಶ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದರೂ, ವಿಧಾನ ಪರಿಷತ್ ಕ್ಷೇತ್ರ ಬಿಜೆಪಿ ತೆಕ್ಕೆಗೆ ಜಾರಿದ್ದೇ ಹೆಚ್ಚು. ಡಾ.ಎ.ಬಿ. ಮಾಲಕರಡ್ಡಿ ನಂತರ ಕಾಂಗ್ರೆಸ್‌ನಿಂದ ಗೆದ್ದವರು ಶರಣಪ್ಪ ಮಟ್ಟೂರ ಮಾತ್ರ.

ಬಿಜೆಪಿಯ ಶಶೀಲ್‌ ನಮೋಶಿ ಸತತ ಮೂರು ಬಾರಿ ಗೆದ್ದಿದ್ದರು. 2014ರ ಚುನಾವಣೆಯಲ್ಲಿಶರಣಪ್ಪ ಮಟ್ಟೂರ ಗೆದ್ದರು. ಈಗ ಮತ್ತೆ ಇಬ್ಬರೂ ಎದುರಾಳಿ. ಈ ಚುನಾವಣೆಗೆ ಸ್ಪರ್ಧಿಸುವುದುಕ್ಕಾಗಿಯೇ ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿರುವ ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಜೆಡಿಎಸ್‌ ಹುರಿಯಾಳು. ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್,ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಕಾಂತ ಸಿಂಗೆ ಕಣದಲ್ಲಿದ್ದಾರೆ.

ಹಿಂದಿನ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಕಾಂಗ್ರೆಸ್ಸಿಗರು ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿದ್ದರು. ನಮೋಶಿ ಅವರಿಗೆ ಆಡಳಿತ ವಿರೋಧಿ ಅಲೆ ಜೋರಾಗಿತ್ತು. ಈ ಅಂಶಗಳು ಮಟ್ಟೂರ ಅವರನ್ನು ಗೆಲುವಿನ ದಡ ತಲುಪಿಸಿದ್ದವು.

ಈಗ ಐವರೂ ಸಂಸದರು ಬಿಜೆಪಿಯವರು. ವಿಧಾನಸಭೆಯ ಎರಡು ಕ್ಷೇತ್ರ ಖಾಲಿ ಇದ್ದು, ಬಿಜೆಪಿಯ 18 ಮತ್ತು ಕಾಂಗ್ರೆಸ್‌ನ 19 ಶಾಸಕರು ಇದ್ದಾರೆ.

ತಮ್ಮ ಪಕ್ಷದ ಸರ್ಕಾರ ಇರುವುದು ಬಿಜೆಪಿ ಅಭ್ಯರ್ಥಿಯ ‘ಬಲ’ ಹೆಚ್ಚಿಸಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಕ್ಷೇತ್ರ ಸುತ್ತಿ ‘ನಮ್ಮ ಅಭ್ಯರ್ಥಿ ಗೆಲ್ಲಲೇಬೇಕು’ ಎಂದು ತಮ್ಮ ಶಾಸಕರಿಗೆ ತಾಕೀತು ಮಾಡಿದ್ದಾರೆ. ಚುನಾವಣಾ ಉಸ್ತುವಾರಿ, ಸಚಿವ ಕೆ.ಎಸ್‌.ಈಶ್ವರಪ್ಪ ಎಲ್ಲ ಜಿಲ್ಲೆಗಳಲ್ಲೂ ಪ್ರಚಾರ ನಡೆಸಿದ್ದಾರೆ. ‘ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿರುವ ನಮಗೆ, ಮಟ್ಟೂರ ಯಾವ ಲೆಕ್ಕ’ ಎಂದು ಹೇಳುತ್ತಾ ‘ಅಭಿಪ್ರಾಯ ರೂಪಿಸುವ’ ಕೆಲಸವನ್ನೂ ಬಿಜೆಪಿಯವರು ಮಾಡುತ್ತಿದ್ದಾರೆ. ‘25 ಮತದಾರರಿಗೆ ಒಬ್ಬ ಕಾರ್ಯಕರ್ತ’ ಎಂಬ ತನ್ನ ಯೋಜನೆಯಂತೆ ಪ್ರತಿ ಮತದಾರರನ್ನು ತಲುಪುವ ‘ಸಂಘಟಿತ ಪ್ರಯತ್ನ’ ನಡೆಯುತ್ತಿದೆ. ‘ನಮ್ಮದೇ ಸರ್ಕಾರ ಇದೆ. ನಮ್ಮ ಅಭ್ಯರ್ಥಿ ಗೆಲ್ಲಿಸಿದರೆ ನಿಮ್ಮ ಕೆಲಸ ಸಲೀಸಾಗಿ ಆಗಲಿವೆ’ ಎಂಬ ದಾಳವನ್ನೂ ಉರುಳಿಸಲಾಗುತ್ತಿದೆ.

ಚುನಾವಣೆ ಘೋಷಣೆಯಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಇನ್ನೂ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಪಕ್ಷದ ಸ್ಥಳೀಯ ಮುಖಂಡರು, ಶಾಸಕರು ಪ್ರಚಾರದಲ್ಲಿ ತೊಡಗಿದ್ದಾರೆ. ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಆರ್‌.ಆರ್‌. ನಗರ ಉಪ ಚುನಾವಣೆಗೆ ನಿಯೋಜಿಸಲಾಗಿದೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನ ಪ್ರಚಾರದ ಅಬ್ಬರ ಅಷ್ಟಾಗಿ ಕಾಣಿಸುತ್ತಿಲ್ಲ. ಆದರೆ, ಅಭ್ಯರ್ಥಿ ಮಾತ್ರ ಕ್ಷೇತ್ರ ಸುತ್ತುತ್ತಿದ್ದಾರೆ. ಮತದಾರರೊಂದಿಗೆ ನೇರ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬ ಒಳ್ಳೆಯ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿವೆ. ಅವರೂ ಆ ಉಮೇದಿನಲ್ಲಿಯೇ ಇದ್ದಾರೆ.

ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ನಾಲ್ವರು ಶಾಸಕರಿದ್ದಾರೆ. ಆದರೆ,ಸ್ಥಳೀಯ ಮಟ್ಟದ ಪದಾಧಿಕಾರಿಗಳಲ್ಲಿ ತಾಳಮೇಳ ಇಲ್ಲ. ನಾಮಪತ್ರ ಸಲ್ಲಿಸುವ ವೇಳೆ ಕಲಬುರ್ಗಿಗೆ ಬಂದಿದ್ದ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡರು ಮನೆಬಾಗಿಲಿಗೆ ಹೋಗಿ ಮನವಿ ಮಾಡಿದರೂ, ಕಳೆದ ಬಾರಿ ಸ್ಪರ್ಧಿಸಿ 953 ಮತ ಪಡೆದಿದ್ದ ಎಂ.ಬಿ.ಅಂಬಲಗಿ ಪ್ರಚಾರ ನಡೆಸುತ್ತಿಲ್ಲ. ತಮ್ಮಉಪನ್ಯಾಸಕರ ಸಂಘದ ಬಲವನ್ನೇ ನೆಚ್ಚಿಕೊಳ್ಳುವ ಅನಿವಾರ್ಯತೆ ಜೆಡಿಎಸ್‌ ಅಭ್ಯರ್ಥಿಗೆ.

ಪರಿಹಾರ ಪ್ಯಾಕೇಜ್‌ ನೀಡಿಲ್ಲ ಎಂದು ಅನುದಾನ ರಹಿತ ಪ್ರೌಢ ಶಾಲೆ–ಕಾಲೇಜುಗಳ ಬೋಧಕರು, ಅತಿಥಿ ಉಪನ್ಯಾಸಕರು ಸರ್ಕಾರದ ವಿರುದ್ಧ ಸಿಟ್ಟಾಗಿದ್ದಾರೆ. ಈಗ ‘ರಜೆಯ ಗಿಫ್ಟ್’‌‌ ನೀಡುವ ಮೂಲಕ ಅವರ ಸಿಟ್ಟು ಶಮನಗೊಳಿಸುವ ಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಮತದಾರರ ಒಲವು–ನಿಲುವು ಫಲಿತಾಂಶವನ್ನು ನಿರ್ಧರಿಸಲಿದೆ.

ಅಭ್ಯರ್ಥಿಗಳ ಸಂದರ್ಶನ

--------------------------

‘ನನ್ನದು ನೇರ ಮಾರ್ಗ’

ನಾಲ್ಕು ದಶಕಗಳ ನಂತರ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿ ಮತದಾರರು ನನ್ನನ್ನು ಗೆಲ್ಲಿಸಿದ್ದರು. ಪ್ರೀತಿ–ವಿಶ್ವಾಸಕ್ಕೆ ಧಕ್ಕೆಯಾಗದಂತೆ ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಶಿಕ್ಷಕರ ಮುಕ್ಕಾಲು ಭಾಗದಷ್ಟು ಬೇಡಿಕೆಗಳನ್ನು ನನ್ನ ಅವಧಿಯಲ್ಲಿ ಈಡೇರಿಸಿದ್ದೇನೆ.

ಎರಡು ಇನ್‌ಕ್ರಿಮೆಂಟ್‌, ವೇತನ ಹೆಚ್ಚಳ, ವರ್ಗಾವಣೆ ನೀತಿಗೆ ತಿದ್ದುಪಡಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಯ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ಕೊಡಿಸಿದ್ದು, ಬಿಇಒ–ಡಿಡಿಪಿಐ ಕಚೇರಿಗಳಲ್ಲಿಯತೊಂದರೆ ನಿವಾರಿಸಿದ್ದು ನನ್ನ ಸಾಧನೆ. ಪದವಿ ಕಾಲೇಜು ಉಪನ್ಯಾಸಕರಿಗೆ ₹705 ಕೋಟಿ ಯುಜಿಸಿ ವೇತನ ಬಾಕಿಯನ್ನು ಹಂತ ಹಂತವಾಗಿ ಕೊಡಿಸಿದ್ದೇನೆ. ಪ್ರೌಢಶಾಲೆಯ 1315 ಶಿಕ್ಷಕರಿಗೆ ಮುಖ್ಯಾಧ್ಯಾಪಕ ಹುದ್ದೆ ಹಾಗೂ ಪಿಯು ಉಪನ್ಯಾಸಕರಿಗೆ ಪ್ರಾಚಾರ್ಯ ಹುದ್ದೆಗೆ ಬಡ್ತಿ ಕೊಡಿಸಿದ್ದೇನೆ. 371 (ಜೆ) ಅಡಿ ಬಡ್ತಿ ಕೊಡಿಸುವ ಕೆಲಸವನ್ನೂ ಮಾಡಿದ್ದೇನೆ.

ಕಾಲ್ಪನಿಕ ವೇತನ ಬಡ್ತಿ, ವಂತಿಗೆ ಪಿಂಚಣಿ ಯೋಜನೆ ಬದಲು ಸಾಂಪ್ರದಾಯಿಕ ಪಿಂಚಣಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಕೆಲ ಬೇಡಿಕೆಗಳು ಬಾಕಿ ಉಳಿದಿವೆ. ಈ ಬೇಡಿಕೆಗಳ ಈಡೇರಿಕೆಯ ಹೋರಾಟಕ್ಕೆ ಬಲ ತುಂಬಲು ನನ್ನನ್ನು ಮತ್ತೆ ಗೆಲ್ಲಿಸುವಂತೆ ಕೇಳುತ್ತಿದ್ದೇನೆ.

ಈಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರ ಸಂಸದರು–ಶಾಸಕರು ಹೆಚ್ಚಾಗಿದ್ದಾರೆ ಎಂಬುದು ಮುಖ್ಯವಲ್ಲ. ನಮ್ಮ ಪಕ್ಷದವರೂ ಪ್ರಾಮಾಣಿಕವಾಗಿ ನನ್ನ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿಗಳು ಯಾವ ಮಾರ್ಗ ಹಿಡಿಯುತ್ತಾರೋ ಗೊತ್ತಿಲ್ಲ; ನಾನಂತೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ನನಗೆ ಮತ ನೀಡುವಂತೆ ಕೇಳುತ್ತಿದ್ದೇನೆ. ಪ್ರಾಮಾಣಿಕತೆ, ಪಾರದರ್ಶಕತೆಯೇ ನನಗೆ ಶ್ರೀರಕ್ಷೆಯಾಗಲಿದೆ.

-ಶರಣಪ್ಪ ಮಟ್ಟೂರ, ಕಾಂಗ್ರೆಸ್‌ ಅಭ್ಯರ್ಥಿ

***

‘371 (ಜೆ) ಕಾಯ್ದೆ ಬದಲಾವಣೆ’

ಒಂದೂವರೆ ವರ್ಷದಿಂದ ಕ್ಷೇತ್ರ ಸುತ್ತುತ್ತಶಿಕ್ಷಕರು, ಶಿಕ್ಷಣ ಸಂಸ್ಥೆಗಳವರನ್ನು ಖುದ್ದು ಭೇಟಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ನಮ್ಮದೇ ಸರ್ಕಾರ ಇರುವುದರಿಂದ ಅಧಿಕಾರಿಗಳ ಮಟ್ಟದಲ್ಲಿ, ಬೇರೆ ಬೇರೆ ಹಂತದಲ್ಲಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ.

ಬದಲಾವಣೆ ಬೇಕು ಎಂದು ಕಳೆದ ಬಾರಿ ಕೆಲ ಮತದಾರರು ನನ್ನನ್ನು ಕೈಬಿಟ್ಟಿದ್ದರು. ಬದಲಾವಣೆಯ ಪರಿಣಾಮದ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಶಿಕ್ಷಕರಿಗೇ ಹೆಚ್ಚಾಗಿ ಅರಿವಿಗೆ ಬಂದಿದೆ. ಆ ತಪ್ಪು ಈಗ ಮಾಡುವುದು ಬೇಡ ಎಂಬ ಭಾವನೆ ಬಹುಪಾಲು ಶಿಕ್ಷಕರಲ್ಲಿ ಬಂದಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರಗಳು ಇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೌಕರರು, ಶಿಕ್ಷಕರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದವರಾಗಿದ್ದಾರೆ. ಕೋವಿಡ್‌ ಕಾಲದಲ್ಲಿಯೂ ಯುಜಿಸಿ ವೇತನ ಹಿಂಬಾಕಿ ₹ 850 ಕೋಟಿ ನೀಡಿದ್ದಾರೆ.

ಸಂವಿಧಾನಕ್ಕೆ371 (ಜೆ) ತಿದ್ದುಪಡಿ ತಂದ ನಮ್ಮ ಭಾಗದವರಿಗೆ ಶಿಕ್ಷಣ, ಉದ್ಯೋಗ, ಬಡ್ತಿಯಲ್ಲಿ ಸೌಲಭ್ಯ ಕಲ್ಪಿಸಲು ರೂಪಿಸಿದ ಕಾಯ್ದೆಯ ಅನುಷ್ಠಾನ ಸಮಪರ್ಕವಾಗಿ ಆಗುತ್ತಿಲ್ಲ. ಇದರ ಪೂರ್ಣಪ್ರಮಾಣದ ಲಾಭ ನಮ್ಮವರಿಗೆ ತಲುಪುತ್ತಿಲ್ಲ. 371 (ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ. ಗುಲಬರ್ಗಾ ವಿಶ್ವವಿದ್ಯಾಲಯವನ್ನೇ ತೆಗೆದುಕೊಳ್ಳಿ. ಖಾಲಿ ಹುದ್ದೆಗಳ ನೇಮಕಾತಿ ಆಗಿಲ್ಲ. ನೇಮಕಾತಿಗೆ ಅವಕಾಶ ನೀಡಿದರೂ, ನಂತರ ತಡೆ ಒಡ್ಡುತ್ತಾರೆ. ಇದರಂತೆ ಈ ಭಾಗದಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿ, ಹೊಸ ಹುದ್ದೆಗಳ ಸೃಜನೆ ನನ್ನ ಆದ್ಯತೆ.

ಹಿಂದುಳಿದ ಪ್ರದೇಶಗಳಿಗೆ ಕೇಂದ್ರ ಸರ್ಕಾರ ರೂಪಿಸಿರುವ ‘ವಿಶೇಷ ಶೈಕ್ಷಣಿಕ ವಲಯ’ ಯೋಜನೆಯನ್ನು ಇಲ್ಲಿ ಅನುಷ್ಠಾನಗೊಳಿಸಬೇಕಿವೆ. ನಾನು ಗೆದ್ದರೆ ಇವೆಲ್ಲವನ್ನೂ ಮಾಡಲು ಅನುಕೂಲವಾಗುತ್ತದೆ.

-ಶಶೀಲ್‌ ನಮೋಶಿ, ಬಿಜೆಪಿ ಅಭ್ಯರ್ಥಿ

***

‘ಶಿಕ್ಷಕರ ಮತ ಶಿಕ್ಷಕರಿಗೇ ಇರಲಿ’

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷನಾಗಿ 10 ವರ್ಷ ದುಡಿದಿದ್ದೇನೆ. ಈ ಸಂಘಟನೆಯ ಮೂಲಕ 20 ವರ್ಷ ಹೋರಾಟ ನಡೆಸಿದ್ದೇನೆ. ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾದವರು ಶಿಕ್ಷಕರ ಪರವಾಗಿ ಕೆಲಸ ಮಾಡುವುದಿಲ್ಲ. ಶಿಕ್ಷಕರಾಗಿ ಕೆಲಸ ಮಾಡಿದವರೇ ವಿಧಾನ ಪರಿಷತ್‌ಗೆ ಆಯ್ಕೆಯಾದರೆ ತಮ್ಮ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂಬುದು ಶಿಕ್ಷಕ ಸಂಘಟನೆಗಳವರ ನಿಲುವು. ಅವರ ಒತ್ತಾಸೆಯಂತೆಯೇ ನಾನು ಉಪನ್ಯಾಸಕ ಹುದ್ದೆಗೆ ರಾಜೀನಾಮೆ ನೀಡಿ, ಚುನಾವಣೆಗೆ ಸ್ಪರ್ಧಿಸಿದ್ದೇನೆ.

ಶಿಕ್ಷಕರ ಸಮಸ್ಯೆಗಳು ಹಾಗೇ ಉಳಿದಿವೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದವರಿಗೆ ಇನ್ನೂ ಎರಡು ಇನ್‌ಕ್ರಿಮೆಂಟ್‌ ಸಿಗಬೇಕಿವೆ. ಪಿಂಚಣಿ, ಕಾಲ್ಪನಿಕ ವೇತನದ ಬೇಡಿಕೆ ಇನ್ನೂ ಈಡೇರಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರಾದರೂ, ನಂತರ ಸ್ಪಂದಿಸಲಿಲ್ಲ.

ಬೇಡಿಕೆಗಳು ಈಡೇರದ ಕಾರಣ ಶಿಕ್ಷಕ ಮತದಾರರು ಬೇಸರದಲ್ಲಿದ್ದಾರೆ. ‘ರಾಜಕಾರಣಿಗಳು ಬೇಡ; ಶಿಕ್ಷಕನಾಗಿದ್ದವನೇ ನಮ್ಮ ಪ್ರತಿನಿಧಿ ಆಗಲಿ’ ಎಂದು ಸಂಘಟನೆಯವರು ಸ್ವಯಂ ಪ್ರೇರಿತರಾಗಿ ಮತದಾರರ ಬಳಿ ಹೋಗಿ ಅವರ ಮನವೊಲಿಸುತ್ತಿದ್ದಾರೆ. ಪದವಿ ಪೂರ್ವ ಉಪನ್ಯಾಸಕರ ಸಂಘ ಅಷ್ಟೇ ಅಲ್ಲ,ಇತರೆ ಶಿಕ್ಷಕರ ಸಂಘಟನೆಗಳವರೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ.

ರಾಜಕಾರಣಿ ಅಲ್ಲ. ನಾನೊಬ್ಬ ಶಿಕ್ಷಕ. ಶಿಕ್ಷಕರ ಮತ ಶಿಕ್ಷಕರಿಗೇ ಮೀಸಲಿರಲಿ. ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿ ಎಂದು ಮತ ಕೇಳುತ್ತಿದ್ದೇನೆ. ಎರಡು ದಶಕಗಳಿಂದ ನನ್ನನ್ನು ಬಲ್ಲಮತದಾರರು ಮೊದಲ ಪ್ರಾಶಸ್ತ್ಯದ ಮತ ನನಗೇ ನೀಡುತ್ತಾರೆ ಎಂದು ನಂಬಿದ್ದೇನೆ. ನನ್ನ ಬಳಿ ದುಡ್ಡು ಇಲ್ಲ, ಶಿಕ್ಷಕರ ಪ್ರೀತಿಯೇ ನನ್ನ ಗೆಲುವಿಗೆ ಕಾರಣವಾಗಲಿದೆ.

-ತಿಮ್ಮಯ್ಯ ಪುರ್ಲೆ, ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT