ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಂಕಾಪುರ ತೋಳ ವನ್ಯಜೀವಿ ಧಾಮ’ಕ್ಕೆ ಅಸ್ತು

‘ಗ್ರೇಟರ್‌ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಿತ ಪ್ರದೇಶ’ ಎಂದು ಘೋಷಣೆ ಕೈಬಿಟ್ಟ ವನ್ಯಜೀವಿ ಮಂಡಳಿ
Last Updated 19 ಜನವರಿ 2021, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳ ವಿಭಾಗದ ಗಂಗಾವತಿ ವಲಯದ ಬಂಕಾಪುರ ಬ್ಲಾಕ್–2 ಮೀಸಲು ಅರಣ್ಯದ 822 ಎಕರೆ ಪ್ರದೇಶವನ್ನು ‘ಬಂಕಾಪುರ ತೋಳ ವನ್ಯಜೀವಿ ಧಾಮ’ ಎಂದು ಘೋಷಿಸುವ ಪ್ರಸ್ತಾವನೆಗೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ. ಆ ಮೂಲಕ, ಇದು ರಾಜ್ಯದ ಮೊದಲ ‘ತೋಳ ವನ್ಯಜೀವಿ ಧಾಮ’ ಆಗಲಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಆದರೆ, ಹೆಸರುಘಟ್ಟ ಸುತ್ತಮುತ್ತಲಿನ ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ‘ಗ್ರೇಟರ್‌ ಹೆಸರುಘಟ್ಟ ಹುಲ್ಲಗಾವಲು ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವ ಪ್ರಸ್ತಾವವನ್ನು ಕೈಬಿಡಲಾಗಿದೆ. ಅಲ್ಲದೆ, ರಾಮನಗರ ಬಳಿಯ ಹಂದಿಗುಂದಿ ಮೀಸಲು ಅರಣ್ಯ ಪ್ರದೇಶದ 4,167 ಎಕರೆ ಪ್ರದೇಶವನ್ನು ‘ಕರಡಿ ಧಾಮ’ ಎಂದು ಘೋಷಿಸುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆಯಿತಾದರೂ, ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಮುಂದೂಡಲಾಗಿದೆ.

‘ಗ್ರೇಟರ್‌ ಹೆಸರುಘಟ್ಟ ಹುಲ್ಲಗಾವಲು ಸಂರಕ್ಷಿತ ಪ್ರದೇಶ’ ಎಂದು ಘೋಷಿಸುವ ಪ್ರಸ್ತಾವನೆಗೆ ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಶಾಸಕ ಎಸ್. ಆರ್‌. ವಿಶ್ವನಾಥ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡಳಿಯಲ್ಲಿ ಅವರ ಪುತ್ರ ಅಲೋಕ್‌ ವಿಶ್ವನಾಥ್‌ ಕೂಡಾ ಸದಸ್ಯರಾಗಿದ್ದು, ಅವರೂ ವಿರೋಧಿಸಿದರು. ಹೀಗಾಗಿ, ಈ ಪ್ರಸ್ತಾವನ್ನೇ ಕೈಬಿಡಲು ನಿರ್ಧರಿಸಲಾಗಿದೆ. ಹಂದಿಗುಂದಿ ಮೀಸಲು ಅರಣ್ಯ ಪ್ರದೇಶವನ್ನು ‘ಕರಡಿ ಧಾಮ’ ಎಂದು ಘೋಷಿಸುವ ಪ್ರಸ್ತಾವವನ್ನು ರಾಜಕೀಐ ಒತ್ತಡ ಮತ್ತು ಸ್ಥಳೀಯರ ವಿರೋಧದ ಕಾರಣಕ್ಕೆ ಮುಂದೂಡಲಾಗಿದೆ ಎಂದು ಗೊತ್ತಾಗಿದೆ.

ಆಲಮಟ್ಟಿ ಚಿಕ್ಕ ಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶದಲ್ಲಿ ಹಿನ್ನೀರಿನ ಬಳಿ ವಲಸೆ ಪಕ್ಷಿಗಳು ಬರುತ್ತಿವೆ. ಹೀಗಾಗಿ, ಈ ಪ್ರದೇಶವನ್ನು ಪಕ್ಷಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಪ್ರಸ್ತಾವಕ್ಕೂ ಸಭೆ ಅನುಮೋದನೆ ನೀಡಿದೆ.

ಕೇವಲ 45 ನಿಮಿಷಗಳಲ್ಲಿ ಸಭೆ ಮುಕ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT