ಶುಕ್ರವಾರ, ಜನವರಿ 27, 2023
25 °C

‘ಮುಸ್ಲಿಮರನ್ನು ಸಿ.ಎಂ ಮಾಡ್ತೀರಾ’: ಕುಮಾರಸ್ವಾಮಿಗೆ ಜಮೀರ್ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌ ಮುಂದಿನ ಚುನಾವಣೆಯಲ್ಲಿ 113 ಸ್ಥಾನಗಳನ್ನು ಗೆದ್ದು ಖಂಡಿತಾ ಅಧಿಕಾರಕ್ಕೆ ಬರುವುದಿಲ್ಲ. 25 ರಿಂದ 30 ಸ್ಥಾನಗಳನ್ನು ಗೆದ್ದರೆ ಹೆಚ್ಚು. ಒಂದು ವೇಳೆ ಸಮ್ಮಿಶ್ರ ಸರ್ಕಾರ ರಚನೆಯಾದರೆ ಎಚ್‌.ಡಿ.ಕುಮಾರಸ್ವಾಮಿ ಅವರು ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡಲು ಸಿದ್ಧರಿದ್ದಾರೆಯೇ ಎಂದು ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್‌ ಖಾನ್‌ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವತಂತ್ರವಾಗಿ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಿಲ್ಲದ ಕಾರಣ ಕುಮಾರಸ್ವಾಮಿ ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಒಂದು ವೇಳೆ ಮುಂದಿನ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯ ಸಂದರ್ಭ ಬಂದರೆ ಮುಸ್ಲಿಮರನ್ನೇ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಲಿ ನೋಡೋಣ ಎಂದರು.

‘2018 ರಲ್ಲಿ ನನ್ನನ್ನು ಸೋಲಿಸಲು ಎಲ್ಲಾ ಶಕ್ತಿಗಳು ಒಂದಾಗಿದ್ದವು. ಆಗ ಏನಾಯಿತು? ಮಾಜಿ ಪ್ರಧಾನಿದೇವೇಗೌಡರೇ ನನ್ನನ್ನು ಸೋಲಿಸುವುದಾಗಿ ಹೇಳಿದ್ದರು. ಆದರೆ ಅವರ ಸವಾಲು ಏನಾಯಿತು? ನನ್ನನ್ನು ಸೋಲಿಸಲು ದೇವೇಗೌಡರೇ ಮುಸ್ಲಿಂ ಆಗಲು ಹೊರಟಿದ್ದರು. ಕರ್ನಾಟಕದ ಮುಸ್ಲಿಮರು ಆಗಲ್ಲ ಎಂದರೆ ಜಮ್ಮು ಕಾಶ್ಮೀರದಿಂದ ಫಾರೂಕ್ ಅಬ್ದುಲ್ಲಾ ಅವರನ್ನು ತಂದು ನಿಲ್ಲಿಸಿ ಎಂದಿದ್ದೆ. ಆದೂ ಆಗಲ್ಲ ಎಂದರೆ ಕುಮಾರಸ್ವಾಮಿ, ರೇವಣ್ಣನ ತಂದು ನಿಲ್ಲಿಸಿ ಎಂದೆ. ಒಂದು ವೇಳೆ ನಾನು ಸೋತರೆ ನನ್ನ ತಲೆ ಕತ್ತರಿಸಿ ತಂದು ಕೊಡ್ತೀನಿ ಎಂದು ಹೇಳಿದೆ. ಆದರೆ, ನನ್ನನ್ನು ಸೋಲಿಸಲು ಆಗಲಿಲ್ಲ. ನನ್ನ ಲೀಡ್‌ ಜಾಸ್ತಿ ಆಯಿತು’ ಎಂದರು.

 

ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ

‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ, ಈ ಮಾತಿಗೆ ಈಗಲೂ ನಾನು ಬದ್ಧ’ ಎಂದು ಶಾಸಕ ಜಮೀರ್ ಅಹಮದ್‌ ಖಾನ್‌ ಮತ್ತೆ ಹೇಳಿದ್ದಾರೆ.

‘ಈ ವಿಷಯದಲ್ಲಿ ಅಂತಿಮ ತೀರ್ಮಾನ ಹೈಕಮಾಂಡ್‌ನದೇ. ಸಿದ್ದರಾಮಯ್ಯ ಅವರು ಚಾಮರಾಜಪೇಟೆಯಿಂದ ಸ್ಪರ್ಧಿಸಬೇಕು. ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧನಿದ್ದೇನೆ. ಅವರು ಈ ಕ್ಷೇತ್ರದ ಅಳಿಯ. ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ’ ಎಂದು ಜಮೀರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು