ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ: ನಾರಾಯಣ ಸ್ವಾಮಿ

Last Updated 16 ಆಗಸ್ಟ್ 2021, 20:59 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ’ ಎಂದು ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ‘ದಲಿತರಲ್ಲಿ ಶೈಕ್ಷಣಿಕ ಕ್ರಾಂತಿ ತರಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ವಸತಿಯುತ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಪ್ರತಿ ರಾಜ್ಯದಲ್ಲಿ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಐಎಎಸ್‌ ಮಾಡಿಸಲು ಸಂಕಲ್ಪ ಮಾಡಿದ್ದೇವೆ’ ಎಂದರು.

84 ಲೋಕಸಭಾ ಕ್ಷೇತ್ರಗಳಲ್ಲಿ ಡಾ.ಅಂಬೇಡ್ಕರ್‌ ನವೋದಯ ವಸತಿ ಕಾಲೇಜುಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ವೃದ್ಧಾಶ್ರಮ ಮತ್ತು ಇತರ ಹೆಸರಿನಲ್ಲಿ ಅನುದಾನ ದುರ್ಬಳಕೆಯನ್ನು ತಪ್ಪಿಸಲು ಸೂಚಿಸಲಾಗಿದೆ. ಇದನ್ನು ಇತರ ಇಲಾಖೆಗಳೂ ಅನುಸರಿಸಲಿವೆ ಎಂದು ನಾರಾಯಣಸ್ವಾಮಿ ತಿಳಿಸಿದರು.

‘ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಪ್ರಧಾನಿ ಮೋದಿಯವರು ಹೆಚ್ಚಿನ ಅವಕಾಶ ಮಾಡಿಕೊಟ್ಟಿದ್ದಾರೆ. ಐದು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷ ದಲಿತರಿಗೆ ಅವಕಾಶವನ್ನೇ ನೀಡಲಿಲ್ಲ. ಆದರೆ ಈಗ ನಾಲ್ಕು ಮಂದಿ ದಲಿತರನ್ನು ರಾಜ್ಯಪಾಲರನ್ನಾಗಿ ಮಾಡಿ, 14 ಕ್ಕೂ ಹೆಚ್ಚು ಜನರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ದಲಿತರು ಮತ್ತು ಹಿಂದುಳಿದವರ ಬಗ್ಗೆ ಬಿಜೆಪಿಗೆ ಇರುವ ಬದ್ಧತೆಯನ್ನು ಸಾಬೀತು ಮಾಡಿದ್ದಾರೆ’ ಎಂದು ಅವರು ಹೇಳಿದರು.

ಪಕ್ಷ ನಿಷ್ಠೆ, ದಕ್ಷ, ಪ್ರಾಮಾಣಿಕ, ಸಾಮಾಜಿಕ ಕಳಕಳಿ ಮತ್ತು ಹಿಂದುತ್ವದ ಪ್ರತಿಪಾದನೆಯ ಜತೆಗೆ ದೇಶದ ಕುರಿತು
ಚಿಂತಿಸುವ ಕಾರ್ಯಕರ್ತರಿಗೆ ಊಹಿಸಲಾಗದ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಬಿಜೆಪಿ ಬ್ರಾಹ್ಮಣರ ಪಕ್ಷ, ಗರ್ಭಗುಡಿಯ ರಾಜಕೀಯ ಮಾಡುವ ಪಕ್ಷ ಎಂಬ ಟೀಕೆಗಳು ಇದ್ದವು. ಎಲ್ಲ ಸಮುದಾಯವರ ಪಕ್ಷ ಎಂಬ ಹೆಗ್ಗಳಿಕೆಗೆ ಈಗ ಬಿಜೆಪಿ ಪಾತ್ರವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT