ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ನೀಗಿಸಿದ ‘ಹಸಿರು ಇಂಧನ’

ಸ್ವಾವಲಂಬನೆಯತ್ತ ಹೆಜ್ಜೆ ಹಾಕುವ ಪ್ರಯತ್ನ
Last Updated 17 ಏಪ್ರಿಲ್ 2022, 0:52 IST
ಅಕ್ಷರ ಗಾತ್ರ

ಬೆಂಗಳೂರು: ಹಲವು ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಾಗಿರುವ ಸಂದರ್ಭದಲ್ಲಿ ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆಗಳನ್ನು ಹಾಕಿದೆ.

ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಸೇರಿಹಲವು ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಸದ್ಯ ಆಯಾ ದಿನದ ವಿದ್ಯುತ್‌ ಉತ್ಪಾದನೆಯಾಗುವಷ್ಟು ಮಾತ್ರ ಕಲ್ಲಿದ್ದಲು ಪೂರೈಕೆಯಾಗುತ್ತಿದೆ.

ಗಣಿಗಳಿಂದ ಪೂರೈಕೆಯಲ್ಲಿ ವ್ಯತ್ಯಯ ಸೇರಿ ವಿವಿಧ ಕಾರಣಗಳಿಂದಾಗಿ ಕಲ್ಲಿದ್ದಲು ಕೊರತೆಯಾಗಿದೆ. ಕೇಂದ್ರ ಸರ್ಕಾರವು ಸಕಾಲಕ್ಕೆ ಕಲ್ಲಿದ್ದಲು ಪೂರೈಸುವ ಕ್ರಮಗಳನ್ನು ಸಹ ಕೈಗೊಳ್ಳುತ್ತಿಲ್ಲ ಎಂದು ದೂರಲಾಗಿದೆ. ಹೀಗಾಗಿ, ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ತಮಿಳುನಾಡು ಮತ್ತು ತೆಲಂಗಾಣದಲ್ಲಿ ಕೃಷಿ ವಲಯಕ್ಕೆ ವಿದ್ಯುತ್‌ ಪೂರೈಕೆಯ ಅವಧಿಯನ್ನು ಸಹ ಕಡಿಮೆ ಮಾಡಲಾಗಿದೆ ಎಂದು ಇಂಧನ ಇಲಾಖೆಯ ಮೂಲಗಳು ಹೇಳುತ್ತವೆ.

ಆಮದು ಮಾಡಿಕೊಳ್ಳುವ ಕಲ್ಲಿದ್ದಲು ದರ ಹೆಚ್ಚಾಗಿದೆ. ಪ್ರತಿ ಟನ್‌ಗೆ ₹20 ಸಾವಿರ ತಲುಪಿದೆ. ಆದರೆ, ದೇಶೀಯವಾಗಿ ಉತ್ಪಾದನೆಯಾಗುವ ಕಲ್ಲಿದ್ದಲು ದರ ಪ್ರತಿ ಟನ್‌ಗೆ ಕೇವಲ ₹4 ಸಾವಿರ. ಕಲ್ಲಿದ್ದಲು ಆಮದು ದುಬಾರಿಯಾಗಿದೆ. ಇದರಿಂದ, ಶಾಖೋತ್ಪನ್ನ ಘಟಕಗಳಲ್ಲಿನ ವಿದ್ಯುತ್‌ ಉತ್ಪಾದನೆಯ ವೆಚ್ಚವೇ ಕನಿಷ್ಠ ಪ್ರತಿ ಯೂನಿಟ್‌ಗೆ ₹11 ಆಗಲಿದೆ ಎಂದು ಅಧಿಕಾರಿಗಳು ಅಭಿಪ‍್ರಾಯಪಡುತ್ತಾರೆ.

ಹೀಗಾಗಿ, ಆಮದು ಮಾಡಿಕೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿವೆ ಎಂದು ಅಭಿಪ‍್ರಾಯಪಡುತ್ತಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕಲ್ಲಿದ್ದಲು ಮೇಲೆ ಅವಲಂಬನೆಯಾಗಿರುವುದು ಕಡಿಮೆ. ಒಟ್ಟು 30,506 ಮೆಗಾವಾಟ್‌ ಸ್ಥಾಪಿತ ವಿದ್ಯುತ್‌ ಸಾಮರ್ಥ್ಯದಲ್ಲಿ, ಕಲ್ಲಿದ್ದಲು ಮೂಲಕ 10,343 ಮೆಗಾವಾಟ್‌ (ಶೇ34) ಮಾತ್ರ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಉತ್ಪಾದನೆಯ ಸಾಮರ್ಥ್ಯದಲ್ಲಿ ಕೆಲವು ಬಾರಿ ವ್ಯತ್ಯಾಸಗಳಾಗುತ್ತವೆ.

ಸೌರ ಮತ್ತು ಪವನ ವಿದ್ಯುತ್‌ ಸೇರಿದಂತೆ ವಿವಿಧ ಮೂಲಗಳ ಮೂಲಕ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಿರುವುದರಿಂದ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಮೇಲಿನ ಅವಲಂಬನೆಯನ್ನು ತಪ್ಪಿಸಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್‌ ಅಭಿಪ್ರಾಯಪಟ್ಟರು.

15,833 ಮೆಗಾವಾಟ್‌ (ಶೇ 51) ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನಗಳ ಮೂಲಕ ಲಭ್ಯವಾಗುತ್ತಿದೆ. ಇದರಲ್ಲಿ 7501 ಮೆಗಾ ವಾಟ್‌ ಸೌರ ವಿದ್ಯುತ್‌ ಮತ್ತು 5,095 ಮೆಗಾವಾಟ್‌ ಪವನ ವಿದ್ಯುತ್‌ ಹಾಗೂ 2,774 ಮೆಗಾ ವಾಟ್‌ ಇತರ ಮೂಲಗಳಿಂದ ಪಡೆಯಲಾಗುತ್ತಿದೆ.

ರಾಜ್ಯದಲ್ಲಿ ವಿವಿಧ ರೀತಿಯ ಜಲ ವಿದ್ಯುತ್‌ ಘಟಕಗಳ ಮೂಲಕ 4,500 ಮೆಗಾವಾಟ್‌ ಉತ್ಪಾದಿಸಲಾಗುತ್ತಿದೆ. ಇಲ್ಲಿ ಬೇಡಿಕೆಗೆ ತಕ್ಕಂತೆ ಉತ್ಪಾದನೆಯಲ್ಲೂ ಏರಿಳಿಕೆ ಮಾಡುವ ಅವಕಾಶವಿದೆ. ಕರ್ನಾಟಕ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದೆ. ಹೀಗಾಗಿಯೇ ಕಲ್ಲಿದ್ದಲು ಮೇಲಿನ ಅವಲಂಬನೆಯನ್ನು ತಪ್ಪಿಸುವ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿದ್ಯುತ್‌ ಕ್ಷೇತ್ರದಲ್ಲಿ ಸಾಧನೆ: ಕರ್ನಾಟಕ ವಿದ್ಯುತ್‌ ನಿಗಮವು 2021–22ನೇ ಹಣಕಾಸು ವರ್ಷದಲ್ಲಿ ಗರಿಷ್ಠ 32,503 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಿದೆ. ಈ ಹಿಂದೆ, 2014–15ನೇ ಹಣಕಾಸು ವರ್ಷದಲ್ಲಿ 29,784.72 ಮಿಲಿಯನ್‌ ಯೂನಿಟ್‌ ಉತ್ಪಾದನೆ ಮಾಡಿದ್ದು ದಾಖಲೆಯಾಗಿತ್ತು.

ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗಿದೆ. 6,578 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಮಾರಾಟ ಮಾಡಿ ₹ 2,836 ಕೋಟಿ ಆದಾಯ ಗಳಿಸಿದೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ವಿದ್ಯುತ್‌ ಮಾರಾಟ ಮಾಡಿದ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ.

‘ಹೆಚ್ಚುವರಿ ವಿದ್ಯುತ್‌ ಇದ್ದರೂ ಲೋಡ್‌ಶೆಡ್ಡಿಂಗ್‌?’

ಕಗ್ಗತ್ತಲು ರಾಜ್ಯ ಎನ್ನುವ ಟೀಕೆಗಳಿಂದ ಕರ್ನಾಟಕ ಮುಕ್ತವಾಗುತ್ತಿದ್ದರೂ ಅನಿಯಮಿತ ವಿದ್ಯುತ್‌ ವ್ಯತ್ಯಯ ಮಾತ್ರ ತಪ್ಪುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆಯಲ್ಲಿಯೇ ವಿದ್ಯುತ್‌ ಪೂರೈಸಲಾಗುತ್ತಿದೆ ಎನ್ನುವುದು ರೈತ ಸಂಘಟನೆಗಳ ದೂರು.

‘ರಾಜ್ಯದಲ್ಲಿ ಅಧಿಕೃತವಾಗಿ ಲೋಡ್‌ಶೆಡ್ಡಿಂಗ್‌ ಜಾರಿಗೊಳಿಸಿಲ್ಲ. ವಿದ್ಯುತ್‌ ಕೊರತೆಯ ಕಾರಣಕ್ಕೆ ವ್ಯತ್ಯಯವಾಗುತ್ತಿಲ್ಲ. ಕಾಮಗಾರಿಗಳು, ಗ್ರಿಡ್‌ ನಿರ್ವಹಣೆ, ಸ್ಥಳೀಯ ಸಮಸ್ಯೆಗಳು ಸೇರಿದಂತೆ ವಿವಿಧ ಕಾರಣಗಳಿಂದ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಜತೆಗೆ, ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆಯನ್ನು ತಾಂತ್ರಿಕವಾಗಿ ಸಮತೋಲನ ಮಾಡುವುದು ಸಹ ಮುಖ್ಯವಾಗುತ್ತದೆ’ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT