ಬುಧವಾರ, ಏಪ್ರಿಲ್ 21, 2021
23 °C
ದುರ್ಗಾದೇವಿ ಕೃಷ್ಣಾ ತಟದಲ್ಲಿ ನಿಂತು ಭಕ್ತರ ಕಾಯುವ ನಂಬಿಕೆ: ರಾಜಕಾರಣಿಗಳ ಭೇಟಿ

ಭಕ್ತರ ಆರಾಧನಾ ಕೇಂದ್ರ ಗೋನಾಲ ದುರ್ಗಾದೇವಿ ದೇವಸ್ಥಾನ

ದೇವಿಂದ್ರಪ್ಪ ಬಿ ಕ್ಯಾತನಾಳ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ತಾಲ್ಲೂಕಿನ ಗೋನಾಲ ಗ್ರಾಮದ ಕೃಷ್ಣಾ ನದಿ ತಟದ ಮೇಲಿರುವ ದುರ್ಗಾದೇವಿ ದೇವಸ್ಥಾನಕ್ಕೆ ವಿದೇಶಗಳಿಂದಲೂ ಭಕ್ತರು ಬರುತ್ತಾರೆ. ಇಲ್ಲಿನ ದೇವರನ್ನು ಗಡೆ ದುರ್ಗಾದೇವಿ ಎಂತಲೂ ಕರೆಯಲಾಗುತ್ತದೆ.

ಈ ಕ್ಷೇತ್ರ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿದೆ.

ದೇವಿಯ ಹಿನ್ನೆಲೆ

ದೇವಿಯ ಮೂಲ ಸ್ಥಳ ಗದಗ ಜಿಲ್ಲೆಯ ಗಜೇಂದ್ರಗಡ. ಗೋನಾಲ ಗ್ರಾಮದ ನಾಗಪ್ಪ ತಾತ ಎನ್ನುವವರು ಸುಮಾರು 500 ವರ್ಷಗಳ ಹಿಂದೆ ಸುಗ್ಗಿ ಮಾಡಲು ಗಜೇಂದ್ರಗಡಕ್ಕೆ ತೆರಳಿದ್ದರು. ಆ ವೇಳೆ ಅವರ ಭಕ್ತಿ ಮೆಚ್ಚಿ ದೇವಿ ಗೋನಾಲ ಗ್ರಾಮಕ್ಕೆ ಬಂದು ನೆಲೆಸಿದರು ಎನ್ನುವ ಪ್ರತೀತಿ ಇದೆ.

ನಾಗಪ್ಪ ತಾತನವರ ಮಗ ಮರಿಯಪ್ಪ, ಕನಕಪ್ಪ ತಾತನವರ ಕಾಲದಲ್ಲಿ ದೇಗುಲ ಅಷ್ಟಾಗಿ ಪ್ರಸಿದ್ಧಿ ಪಡೆಯಲಿಲ್ಲ. ಗುರು ಮರಿಲಿಂಗಪ್ಪ ಸ್ವಾಮಿ ಎಂಬುವವರಿಂದ ಈ ದೇಗುಲದ ಮಹಿಮೆ ರಾಜ್ಯದ ಗಡಿ ದಾಟಿತು. ಆಗಿನಿಂದಲೂ ಇಲ್ಲಿ ಜಾತ್ರೆ ನಡೆಯುತ್ತಿದೆ. ಪ್ರಸ್ತುತ ಮಹಾದೇವಪ್ಪ ಪೂಜಾರಿ, ಮರಿಯಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಜಾತ್ರೆ ನಡೆಯುತ್ತದೆ.

ದೇವಿಯ ಜಾತ್ರೆ

ಪ್ರತಿವರ್ಷ ಅವರಾತ್ರಿ ಅಮಾವಾಸ್ಯೆ ನಂತರದ ಮಂಗಳವಾರ ದೇವಿ ಜಾತ್ರೆ ನಡೆಯುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ಗ್ರಾಮದವರು, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳೂ ಸೇರಿದಂತೆ ಲಂಡನ್, ದುಬೈ, ಕಾಂಗೊನಿಂದಲೂ ಭಕ್ತರು ಬರುತ್ತಾರೆ.

ಪತ್ರಗಳ ಮೂಲಕ ಬೇಡಿಕೆ

ದೇವಿ ದರ್ಶನಕ್ಕೆ ಬರುವ ರಾಜ್ಯದ ವಿವಿಧ ರಾಜಕಾರಣಿಗಳು ತಮ್ಮ ಬೇಡಿಕೆಗಳನ್ನು ಪತ್ರದಲ್ಲಿ ಬರೆದು ದೇವಿ ಮುಂದೆ ಇಡುತ್ತಾರೆ. ಡಿ.ಕೆ ಶಿವಕುಮಾರ್ ಹಾಗೂ ಬಿ.ಶ್ರೀರಾಮುಲು ಅವರು ಬೇಡಿಕೆ ಬರೆದು ದೇವಿ ಮುಂದೆ ಇಟ್ಟು ಪೂಜೆ ಸಲ್ಲಿಸಿದ್ದರು.

ಅಭಿವೃದ್ಧಿಯ ನಿರೀಕ್ಷೆಯಲ್ಲಿ

ಗೋನಾಲ ದುರ್ಗಾದೇವಿ ದೇವಸ್ಥಾನದಲ್ಲಿ ಸೌಕರ್ಯ ಕೊರತೆ ಇದೆ. ಬೇರೆ ಕಡೆಯಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಾಣದ ಅಗತ್ಯ ಇದೆ. ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ಭಕ್ತರು ಒತ್ತಾಯಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು