ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ಕಲ್ಲಿನಿಂದ ನಿರ್ಮಾಣವಾಗಿರುವ ಶಿವ ದೇಗುಲ

ಮೇನಲ್ಲಿ ಪ್ರತಿಷ್ಠಾಪನೆಗೆ ಸಿದ್ದವಾಗಿರುವ ತಾರಿಬೇರು ಶ್ರೀ ಸೋಮನಾಥೇಶ್ವರ
Last Updated 13 ಮಾರ್ಚ್ 2021, 14:47 IST
ಅಕ್ಷರ ಗಾತ್ರ

ಕುಂದಾಪುರ: ಬೈಂದೂರು ತಾಲ್ಲೂಕಿನ ಆಲೂರು ಗ್ರಾಮದ ತಾರಿಬೇರಿನಲ್ಲಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮೇ ತಿಂಗಳಲ್ಲಿ ಅಷ್ಟಬಂಧ ಹಾಗೂ ಬ್ರಹ್ಮ ಕಲಶೋತ್ಸವ ನಡೆಯಲಿದೆ. ಉತ್ಸವಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದು, ಸುಂದರ ದೇವಸ್ಥಾನ ನಿರ್ಮಾಣವಾಗುತ್ತಿದೆ.

ಕರಾವಳಿಯ ಕೆಂಪುಕಲ್ಲಿನ ಕೆತ್ತನೆಯಲ್ಲಿ ಆಕರ್ಷಕವಾಗಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನದ ಗರ್ಭಗುಡಿ, ಸುತ್ತು ಪೌಳಿ, ತೀರ್ಥಮಂಟಪ ಕೆಲಸಗಳು ಬಹುತೇಕ ಪೂರ್ಣವಾಗಿದೆ. ಸುಂದರ ಕೆತ್ತನೆ ಹೊಂದಿರುವ ದ್ವಾರ ಬಾಗಿಲು ಭಕ್ತರನ್ನು ಆಕರ್ಷಿಸುತ್ತಿದೆ.

ಸುಂದರ ಪ್ರಕೃತಿ ಮಡಿಲಲ್ಲಿ ಸೌಪರ್ಣಿಕ ನದಿಯ ತೀರದಲ್ಲಿರುವ ಶಕ್ತಿ ಮುನಿ ತಪಸ್ಸು ಮಾಡಿರುವ ಕಾರಣಿಕ ಕ್ಷೇತ್ರ ಎಂದೇ ಪ್ರಸಿದ್ಧವಾಗಿರುವ ಸೋಮನಾಥೇಶ್ವರ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸ ಇದೆ. ಈ ದೇವಸಸ್ಥಾನ ಪೂಜಾ ಕಾರ್ಯಗಳಿಗೆ ಸೀಮಿತವಾಗದೆ, ಅಗ್ರಹಾರ ಪ್ರದೇಶವಾಗಿರುವ ತಾರಿಬೇರಿಗೆ ಬರುವ ಯಾತ್ರಿಕರಿಗೆ ಊಟ, ವಸತಿ ಸೌಕರ್ಯ ವ್ಯವಸ್ಥೆ ಮಾಡುತ್ತಿದೆ. ಪರಿಸರದ ಜನರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಹತ್ತೂರಿನ ಜ್ಞಾನಾಸಕ್ತರಿಗೆ ಜ್ಞಾನ ದೀವಿಗೆ ನೀಡುವ ಐಗಳ ಮಠವಾಗಿಯೂ ದೇಗುಲ ಗುರುತಿಸಿಕೊಂಡಿದೆ.

ವಿಜಯನಗರ ಕಾಲದ ಇತಿಹಾಸವಿರುವ ಸೋಮನಾಥೇಶ್ವರ ದೇವಸ್ಥಾನ ನಿರ್ಮಾಣವಾಗಿ 9 ಶತಮಾನಗಳು ಕಳೆದಿದ್ದರೂ, ಚಪ್ಪಟೆಯಾಗಿರುವ ಇಲ್ಲಿನ ಶಿವ ಲಿಂಗದ ಹೊಳಪು ಮಾಸಿಲ್ಲ. ಆಕರ್ಷಕವಾಗಿ ಕೆತ್ತಿರುವ ನಂದಿ ಕೆತ್ತನೆಗಳಿಗೆ ಕುಂದು ಬಂದಿಲ್ಲ. ಇಲ್ಲಿನ ಲಿಂಗ ಹಾಗೂ ನಂದಿಯನ್ನು ಕಾಶಿಯಿಂದ ತಂದು ಪ್ರತಿಷ್ಠಾಪಿಸಲಾಗಿತ್ತು ಎನ್ನುವ ಐತಿಹ್ಯ ಇದೆ.

ಹಲವು ವರ್ಷಗಳ ಕಾಲ ವೈಭವದಿಂದ ಪೂಜಾರಾಧನೆ ನಡೆಯುತ್ತಿದ್ದ ದೇವಸ್ಥಾನದಲ್ಲಿ ಸಮನ್ವಯದಿಂದ ಕೊರತೆಯಿಂದಾಗಿ ಕಾಲಕ್ರಮೇಣ ಜೀರ್ಣಾವಸ್ಥೆ ತಲುಪಿತ್ತು. ಬಳಿಕ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಸಂಕಲ್ಪ ಮಾಡಿದ ಗ್ರಾಮಸ್ಥರು ಹಾಗೂ ದೇಗುಲದ ಭಕ್ತರು ಆರೋಢ ಪ್ರಶ್ನೆಗಳನ್ನು ಇರಿಸಿ, ದೇವಸ್ಥಾನ ನಿರ್ಮಾಣದ ಸಂಕಲ್ಪ ಮಾಡಿದ್ದಾರೆ.

ಪ್ರಾರಂಭದಲ್ಲಿ ಶಿಲಾಮಯ ದೇವಸ್ಥಾನ ನಿರ್ಮಾಣದ ನೀಲ ನಕಾಶೆಯನ್ನು ಸಿದ್ಧಪಡಿಸಿ ಮುಂದಡಿ ಇಟ್ಟರೂ, ಅದು ಕಾರ್ಯಗತವಾಗಿರಲಿಲ್ಲ. ಬಳಿಕ ಹಿಂದಿನಂತೆ ಕೆಂಪು ಕಲ್ಲಿನಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯದ ಬಗ್ಗೆ ತೀರ್ಮಾನ ಕೈಗೊಂಡ ಬಳಿಕ ದೇವಸ್ಥಾನದ ಕಾರ್ಯಕ್ಕೆ ವೇಗ ದೊರಕಿದೆ.

ಅಂದಾಜು ₹ 2 ಕೋಟಿ ವೆಚ್ಚದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಹಿರಿಯ ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೊಲ್ಲೂರಿನ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ರಮೇಶ್‌ ಗಾಣಿಗ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಉಪ್ಪುಂದ ರಾಜಾರಾಮ ಭಟ್‌ ಅಧ್ಯಕ್ಷರಾಗಿದ್ದಾರೆ. ತಾರಿಬೇರು ಆನಂದ ಗಾಣಿಗ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇವರ ಮುಂದಾಳತ್ವದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಸ್ಥಳೀಯರಾದ ಬಾಬು ಗೌಡ, ದಿನೇಶ್‌ ಪೂಜಾರಿ, ಸತೀಶ್, ಪೂಜಾರಿ ಸೇರಿದಂತೆ ಊರಿನ ಸಮಸ್ಥರು ಕೈ ಜೋಡಿಸಿದ್ದಾರೆ.

ಕ್ಷೇತ್ರದ ಆರಾಧ್ಯ ದೇವರಾಗಿರುವ ಸೋಮನಾಥೇಶ್ವರ (ರಾಮೇಶ್ವರ) ದೇವರ ಜತೆಯಲ್ಲಿ, ಸುತ್ತು ಪೌಳಿ, ಗಣಪತಿ ಗುಡಿ, ಅಮ್ಮನವರ ಗುಡಿ, ನಾಗದೇವರ ಗುಡಿ, ಬಾವಿ ಪುನರ್‌ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನದ ಪುನರ್‌ ನಿರ್ಮಾಣದಲ್ಲಿ ಕೈಜೋಡಿಸುವಂತೆ ಜೀರ್ಣೋದ್ಧಾರ ಸಮಿತಿ ಮನವಿಮಾಡಿದೆ.

ದೇಣಿಗೆ ನೀಡುವವರು ಕರ್ನಾಟಕ ಬ್ಯಾಂಕ್‌ ಸೇನಾಪುರ ಶಾಖೆ ಎಸ್‌.ಬಿ ಖಾತೆ 6922500100074101 ( IFSC: KARB0000692) ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 9902205883 (ಯು.ರಾಜಾರಾಮ ಭಟ್ ಉಪ್ಪುಂದ) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT