ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿವೇಷದ ಕುಣಿತವೂ ಕಸರತ್ತಿನ ಸಂಭ್ರಮವೂ

Last Updated 22 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಮೈಗೆ ಹಳದಿ, ಕಪ್ಪು ಬಣ್ಣಗಳ ಪಟ್ಟೆ ಬಳಿದುಕೊಂಡು, ತಲೆಗೆ ಹುಲಿ ವೇಷದ ಮುಖವಾಡ ಹಾಕಿಕೊಂಡ ನಾಲ್ಕಾರು ಮಂದಿಯ ತಂಡ, ಕಾಲು–ಕೈಗಳನ್ನು ಆಡಿಸುತ್ತಾ ತಾಸೆ ಪೆಟ್ಟಿನ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಅಲ್ಲಿಗೆ ಕರಾವಳಿಯಲ್ಲಿ ದಸರಾ ಸಡಗರ ಆರಂಭವಾಯಿತು ಎಂದೇ ಅರ್ಥ !

ಹೌದು ಕರಾವಳಿಯ ದಸರಾ ಮತ್ತು ಹುಲಿವೇಷದ ಕುಣಿತಕ್ಕೆ (ಪಿಲಿವೇಷಕ್ಕೆ) ಅವಿನಾಭಾವ ನಂಟಿದೆ. ತಾಸೆದ ಪೆಟ್ಟ್‌ಗ್‌ ಊರುದ ಪಿಲಿಕುಲು ನಲಿಪುನ ಪೊರ್ಲು (ತಾಸೆಯ ಏಟಿಗೆ ಊರ ಹುಲಿಗಳು ಕುಣಿಯುವ ಅಂದ)ವೇ ಚಂದ ಎನ್ನುತ್ತಾರೆ. ಈ ಭಾಗದಲ್ಲಿ ದಸರಾದ ಸಡಗರಕ್ಕೆ ಕಳೆ ಕೊಡುವುದೇ ಈ ಹುಲಿಕುಣಿತ. ನವರಾತ್ರಿ ಎಂದರೆ ದೇವರ ಆರಾಧನೆಗಿಂತಲೂ, ವೇಷಗಳ ಕರಾಮತ್ತೇ ಹೆಚ್ಚು.

ಹುಲಿನೃತ್ಯ ಕೇವಲ ನೃತ್ಯವಲ್ಲ. ಅದು ಬಲಾಢ್ಯತೆಯ ಪ್ರದರ್ಶನ. ಇಲ್ಲಿ ಕುಣಿತಗಾರರಿಗೆ ದೈಹಿಕ ಶ್ರಮವೇ ಪ್ರಧಾನ. ಹಾಗಾಗಿ ನೃತ್ಯದಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಒಂದು, ಮೂರು, ಐದು ಪೌಲದಲ್ಲಿ ಗಿರಕಿ ಹೊಡೆಯುವುದು. ತೇಲ್‌ ಬಗ್ಗುವುದು, ಚಕ್ರದಂಡದ ಮೂಲಕ ಜನರನ್ನು ಮನರಂಜಿಸುವುದು. ನೆಲದ ಮೇಲೆ ಹಣದ ನೋಟು ಇಟ್ಟು, ಅದನ್ನು ಹಿಂಬದಿಯಿಂದ ಬಾಗಿಸಿ ಬಾಯಲ್ಲಿ ಕಚ್ಚಿಕೊಳ್ಳುವಂತಹ ಕಸರತ್ತುಗಳು ಪ್ರದರ್ಶನವಾಗುತ್ತವೆ. ಒಟ್ಟಾರೆ. ಬಣ್ಣಬಣ್ಣದ ಹುಲಿವೇಷದ ನೃತ್ಯದ ಜತೆಗೆ ಕಸರತ್ತೂ ಇಲ್ಲಿ ಕಣ್ಣಿಗೆ ಹಬ್ಬ.

ಇಲ್ಲಿ ಕುಣಿತದಷ್ಟೇ ಬಣ್ಣಗಾರಿಕೆ, ವಿಶಿಷ್ಟವಾದುದು. ಚಲ್ಲಣ(ಚಡ್ಡಿ)ವೊಂದುಳಿದಂತೆ ಮೈಗೆಲ್ಲಾ ಹಳದಿ, ಕಪ್ಪು, ಬಿಳಿ ಬಣ್ಣ ಬಳಿದು, ಬಾಲ ಕಟ್ಟಿ, ಹುಲಿಯ ಮುಖವಾಡ ಧರಿಸಿಕೊಂಡು ತಂಡವಾಗಿ ಬಂದು ಊರ ಮನೆಗಳ ಮುಂದೆ ಕುಣಿಯುತ್ತಾರೆ. ಪ್ರತಿ ಮನೆಯಲ್ಲೂ ಕುಣಿತ ಮುಗಿಯೋ ಹೊತ್ತಿಗೆ ಇಂತಿಷ್ಟು ಹಣ ನೀಡುವುದು ವಾಡಿಕೆ.

ವೈವಿಧ್ಯಮಯ ಹುಲಿವೇಷ

ಹುಲಿವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿ ಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸಿರು ಬಣ್ಣದ ಹುಲಿಗಳೂ ಇರುತ್ತವೆ. ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು, ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುತ್ತಾರೆ. ಬಣ್ಣ ಹಚ್ಚಲು ಊರಿನ ಯಾವುದಾದರೊಂದು ಅಂಗಡಿ, ಕೊಠಡಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನವರಾತ್ರಿ ಮುಗಿಯುವವರೆಗೆ ಅದುವೇ ಅವರ ಮನೆ.

‘ಹಿಂದೆಲ್ಲ ಬಣ್ಣ ಹಚ್ಚಿದರೆ ದೇಹವೆಲ್ಲಾ ಉರಿ ಬರುತ್ತಿತ್ತು. ಬಣ್ಣ ಹಚ್ಚಿ ಅದು ಒಣಗಿದ ನಂತರ ದೊಡ್ಡ ಕೆಸುವಿನ ಎಲೆ(ಮೂಂಡಿ ಎಲೆ) ಅಥವಾ ಬಾಳೆ ಎಲೆಯಲ್ಲಿ ಮಲಗಬೇಕಿತ್ತು. ಹಿಂದೆ ಒಂದು ತಂಡದಲ್ಲಿ ಹೆಚ್ಚೆಂದರೆ ನಾಲ್ಕು ಹುಲಿಗಳಿರುತ್ತಿತ್ತು. ಒಂದು ತಾಯಿ ಹುಲಿ, ಎರಡು ಮರಿಹುಲಿ ತಪ್ಪಿದರೆ ಮೂರು ಮರಿಹುಲಿ. ನೃತ್ಯವೂ ಅಷ್ಟೇ ಸೊಗಸಾಗಿತ್ತು. ಇಂದು ನೃತ್ಯ ಶೈಲಿಯಲ್ಲೂ ಬದಲಾವಣೆಯಾಗಿದೆ’ ಎಂದು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಾರೆ ಬಂಟ್ವಾಳದ ಹಿರಿಯ ಹುಲಿವೇಷಧಾರಿ ಮಂಜುನಾಥ.

‘ಮೊದಲು ತಾಸೆ ಹಾಗೂ ಡೋಲಿನವರು ಮನೆಯಂಗಳಕ್ಕೆ ಹೋಗಿ ಬಾರಿಸಲು ಪ್ರಾರಂಭಿಸುತ್ತಿದ್ದರು. ನಿಧಾನವಾಗಿ ಮರಿ ಹುಲಿಗಳು ಅಂಗಳಕ್ಕಿಳಿದು ಆಟ ಪ್ರಾರಂಭಿಸುತ್ತವೆ. ತಾಯಿ ಹುಲಿ ಪೊದೆಯೊಳಗಿಂದ ಮೆಲ್ಲಗೆ ಹೆಜ್ಜೆಯಿಡುತ್ತಾ, ಮರಿಗಳ ಬಳಿಬಂದು ಅವುಗಳ ಮೈಯನ್ನು ನೆಕ್ಕಿ, ಎದೆಹಾಲುಣಿಸಿ, ತಾಯಿ ಪ್ರೀತಿಯನ್ನು ಉಣಿಸುವ ಸೊಬಗು. ಅದರ ಖುಷಿಯೇ ಬೇರೆ’ ಎಂದು ಕುಣಿತದ ಸೊಬಗನ್ನು ವಿವರಿಸುತ್ತಾರೆ ಅವರು.

ಹೀಗೆ ವೇಷತೊಟ್ಟವರು ತಾಸೆ ಪೆಟ್ಟು ತಾರಕಕ್ಕೇರುತ್ತಿದ್ದಂತೆ ಕುಣಿಯಲು ಶುರು ಮಾಡಿದರೆ, ಆ ಅಬ್ಬರ ನೋಡುವುದೇ ಒಂದು ಸೊಬಗು. ಬಾಲ್ಯದಲ್ಲಿ ತಾಸೆಪೆಟ್ಟು ಶಬ್ದ ಕೇಳಿದಾಗ ಮನೆಯೊಳಗಿಂತ ಹುಲಿವೇಷ ಕುಣಿತದ ಸೌಂದರ್ಯ ನೋಡಲು ಓಡಿಬಂದು ಬಾಗಿಲಲ್ಲಿ ನಿಲ್ಲುತ್ತಿದ್ದೆವು. ಆದರೆ, ಹುಲಿಕುಣಿತದ ಅಬ್ಬರ ಕಂಡು ಭಯಪಟ್ಟು ಕಂಬದ ಮರೆಯಲ್ಲಿ ನಿಲ್ಲುತ್ತಿದ್ದೆ.

ಹುಲಿವೇಷ ಬಲು ಇಷ್ಟ

ಹುಲಿವೇಷ ಧರಿಸುವುದೆಂದರೆ ಕರಾವಳಿಯ ಹೆಚ್ಚಿನ ಮಕ್ಕಳಿಗೆ, ಯುವಕರಿಗೆ ಎಲ್ಲಿಲ್ಲದ ಉತ್ಸಾಹ. ಆದರೆ ಅದು ಬೇಡುವ ಶ್ರಮ ಸ್ವಲ್ಪವಲ್ಲ. ಬಣ್ಣಕ್ಕೆ ನಿಲ್ಲುವುದು ಎಂದರೆ, ನಿಜವಾಗಿಯೂ ನಿಲ್ಲುವುದೇ ಹೌದು! ಎರಡು ಕಂಬಕ್ಕೆ ಕೈಯನ್ನು ಕಟ್ಟಿ ಆಥವಾ ಆಧಾರವಾಗಿಟ್ಟುಕೊಂಡು ನಿಲ್ಲುವುದು. ಬಣ್ಣ ಮುಗಿದ ಮೇಲೆ ಹುಲಿ ಬಣ್ಣದ ವೆಲ್ವೆಟ್‌ ಚಡ್ಡಿ ಧರಿಸಿ, ಅಖಾಡಕ್ಕಿಳಿಯಲು ತಯಾರು.

ಬಣ್ಣ ಹಚ್ಚಿದ ಕೊಠಡಿಯ ಹೊರಗಡೆ ನಾಲ್ಕು ಜನ ಲಾತಿ(ಕೋಲು) ಅಡ್ಡಕ್ಕೆ ಹಿಡಿದು ನಿಲ್ಲುತ್ತಿದ್ದರು. ಇಬ್ಬರು ಕೆಳಮುಖವಾಗಿ ಹಿಡಿದರೆ ಇನ್ನಿಬ್ಬರು ಎತ್ತರಕ್ಕೆ ಹಿಡಿದು ನಿಲ್ಲುತ್ತಿದ್ದರು. ತಾಯಿ ಹುಲಿ ಮಾಡಿನ ಎಡೆಯಿಂದ ಹಂಚು ಸರಿಸಿ ಲಾತಿಯ ಮೇಲೆ ಹಾರಿ ಒಂದು ಲಾತಿಯಲ್ಲಿ ಕಾಲುಗಳನ್ನು ಇನ್ನೊಂದರಲ್ಲಿ ಕೈಗಳನ್ನು ಹಿಡಿದು, ಮರಿಗಳತ್ತ ನೋಡುವ ವೈಭವ ಅಂದಿನದು.

ನವರಾತ್ರಿಯ ನಂತರವೇ..

ಹುಲಿವೇಷದ ಕುಣಿತ ಒಂದು ದಿನದ ಆಟವಲ್ಲ. ನವರಾತ್ರಿಯ ಒಂಬತ್ತು ದಿನ ಇರುತ್ತದೆ. ಕೊನೆಯಲ್ಲಿ ದೇವಿಯ ವಿಸರ್ಜನೆಯ ನಂತರವೇ ವೇಷಧಾರಿಗೂ ಜಳಕ. ಒಂದು ತಂಡದಲ್ಲಿ ಮೂರು ಹುಲಿಗಳಿದ್ದ ದಿನಗಳು ಕಳೆದು ಹೋಗಿವೆ. ಈಗ ತಂಡದಲ್ಲಿ ನೂರು ಹುಲಿಗಳಿರುವಷ್ಟು ಹುಲಿವೇಷದ ಪ್ರಾಮುಖ್ಯ ಕರಾವಳಿಯಲ್ಲಿ ಬೆಳೆದು ನಿಂತಿದೆ. ಹುಲಿಗಳನ್ನು ಬೇಟೆಯಾಡುವ ಒಬ್ಬ ಬೇಟೆಗಾರ ವೇಷಧಾರಿ ಪ್ರತಿ ತಂಡದಲ್ಲಿಯೂ ಇರುತ್ತಾನೆ. ಬೇಟೆಗಾರ ಹುಲಿಗೆ ಶೂಟ್ ಮಾಡುವಂತೆ ನರ್ತಿಸುತ್ತಿರುತ್ತಾನೆ. ದೇವಿ ರಾಕ್ಷಸರನ್ನು ಸಂಹರಿಸಿ ಬರುವಾಗ, ವಾಹನವಾದ ಹುಲಿ ರಾಕ್ಷಸರ ರುಂಡ ಎಲುಬಿನೊಂದಿಗೆ ಆಟವಾಡುವ ಪ್ರತೀಕವಾಗಿ ಹುಲಿವೇಷಧಾರಿಗಳು ಜಂಡೆಯನ್ನು ಬೀಸುತ್ತಾ ಕುಣಿಯುತ್ತಾರೆ. ಹುಲಿ ನೃತ್ಯವೇ ರಾಕ್ಷಸರ ಸಂಹಾರಕ್ಕೆ ಸಂಭ್ರಮಾಚರಣೆ.

ಕುರಿ ಹಾರಿಸುವ ಕಸರತ್ತು

ಹುಲಿವೇಷಧಾರಿಗಳು ಯಾವ ಹೀರೋಗಳಿಗೂ ಕಡಿಮೆಯೇನಲ್ಲ. ನೃತ್ಯಗಾರನಿಗೆ ಜನರ ಮನಸ್ಸು ಗೆಲ್ಲುವಂತೆ ನರ್ತಿಸುವ, ತನ್ನ ಪರಾಕ್ರಮ ಪ್ರದರ್ಶಿಸುವ ಹಂಬಲ. ತಂಡದ ಬಲಾಢ್ಯದ ಪ್ರದರ್ಶನವೇ ಕುರಿ ಹಾರಿಸುವುದು. ಹುಲಿವೇಷಧಾರಿ ತನ್ನ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ, ಕೊಬ್ಬಿದ ಕುರಿಯನ್ನು ಹಲ್ಲುಗಳಲ್ಲಿ ಕಚ್ಚಿ, ಗಾಳಿಯಲ್ಲಿ ತನ್ನ ಹಿಂಬದಿಗೆ ಹಾರಿಸುತ್ತಿದ್ದ. ಇಂದು ಪ್ರಾಣಿಹಿಂಸೆಯ ಬಗ್ಗೆ ಜನ ಜಾಗೃತಗೊಂಡ ನಂತರದಲ್ಲಿ ಕುರಿಯ ಬದಲು, ಅಕ್ಕಿ ಮೂಟೆ (ಮುಡಿ) ಇರಿಸಲಾಗುತ್ತಿದೆ.

ಹುಲಿವೇಷದ ಸೊಬಗಿಗೆ ಸಂಪ್ರದಾಯದ ಸೊಗಡೂ ಇದೆ. ಆದರೆ ಇಂದು ಸಾಂಪ್ರದಾಯಿಕತೆಯ ನೆಲೆಗಟ್ಟು ಮೀರಿ ತಾಸೆಯಲ್ಲಿ ಹಿಂದಿ ಸಿನಿಮಾ ಹಾಡುಗಳು ಕೇಳಿಬರುತ್ತಿವೆ. ಅದೇ ತಾಳಕ್ಕೆ ಹುಲಿಗಳೂ ಹೆಜ್ಜೆ ಹಾಕುತ್ತಿವೆ. ಗಂಡುಕಲೆಯಾಗಿದ್ದ ಯಕ್ಷಗಾನಕ್ಕೆ ಮಹಿಳಾ ಮಣಿಗಳು ಪ್ರವೇಶಿಸಿದಂತೆ, ಹುಲಿಕುಣಿತವೂ ಪುರುಷರಿಗೆ ಸೀಮಿತವಾಗಿರದೆ ಮಹಿಳೆಯರ ತಂಡವೂ ರೂಪುಗೊಂಡಿದೆ. ವೇದಿಕೆಯಲ್ಲಿ ಪ್ರಶಸ್ತಿ, ಜನಮನ್ನಣೆಗೂ ಪಾತ್ರವಾಗಿದ್ದಿದೆ.

ಹರಕೆಯಾಗಿದ್ದ ಹುಲಿವೇಷ, ಮನರಂಜನೆಯಾಗಿ ಈಗ ಸ್ಪರ್ಧೆಯಾಗಿದೆ. ಹುಲಿವೇಷ ಧರಿಸಲು ವಯಸ್ಸಿನ ಮಿತಿಯಿಲ್ಲ. ಪುಟ್ಟ ಮಕ್ಕಳಿಗೆ ಹುಲಿವೇಷ ಸ್ಪರ್ಧೆಗಳು ಏರ್ಪಡಿಸುವುದರಿಂದ ಅಂಬೆಗಾಲಿಡುವ ಮಕ್ಕಳಿಗೂ ವೇಷ ಹಾಕಿಸಿ ಕುಣಿಸುತ್ತಾರೆ. ಇಲ್ಲಿ ಹೆಣ್ಣು ಕಂದಮ್ಮಗಳೂ ಕಡಿಮೆಯೇನಿಲ್ಲ ಎಂಬಂತೆ ಬಹುಮಾನ ಬಾಚಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ತಂಡದಲ್ಲಿ ಪುಟ್ಟ ಹುಲಿಮರಿಯೇ ಆಕರ್ಷಣೆ !

ಮನ್ನಣೆ ನಿರೀಕ್ಷೆಯಲ್ಲಿ...

ಸಮಾಜಸೇವೆ ದೃಷ್ಟಿಯಿಂದಲೂ ಕೆಲವೊಂದು ತಂಡಗಳು ಬಣ್ಣ ಹಚ್ಚುತ್ತವೆ. ವರ್ಷ ಕಳೆದಂತೆ ಯುವ ಮನಸ್ಸುಗಳಿಗೆ ಹುಲಿನೃತ್ಯ ಆಪ್ತವಾಗುತ್ತಿದೆ. ತಿಂಗಳ ಮೊದಲೇ ಗುಡ್ಡದ ಮೇಲೆ ತಾಸೆಯೊಂದಿಗೆ ನೃತ್ಯಾಭ್ಯಾಸ. ಹುಲಿವೇಷದ ತಂಡ ಬರದೇ ಹೋದರೆ, ಮತ್ತೆ ಸಿಕ್ಕಾಗ ನಿಲ್ಲಿಸಿ ಕೇಳುವಷ್ಟು ಜನರ ಮನಸ್ಸು, ಹುಲಿನೃತ್ಯದ ಜತೆ ಸಖ್ಯ ಬೆಳೆಸಿಕೊಂಡಿದೆ. ಸರ್ಕಾರ ಈ ನೃತ್ಯಕ್ಕೆ ಜನಪದ ಕ್ರೀಡೆಯಾಗಿ ಮಾನ್ಯತೆ ನೀಡಬೇಕು ಎಂಬುದು ಹುಲಿವೇಷ ಕುಣಿತ ಪ್ರಿಯರ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT