ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರದ ಜೊತೆ ಹಸಿರು ಕ್ರಾಂತಿ

ಬೆಳೆವ ಸಿರಿ 5
Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕೃಷಿ ಎಂದರೆ ಅಸಡ್ಡೆ ತೋರುವ ಈ ಕಾಲದಲ್ಲಿ ಓದಿನೊಂದಿಗೆ ಮಣ್ಣಿನ ಪಾಠವನ್ನೂ ಹೇಳಿಕೊಡುತ್ತಿವೆ ಕೆಲ ಶಾಲೆಗಳು. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದು ಅಲ್ಲದೆ ಪ್ರಕೃತಿಯೆಡೆಗೆ ಅವರೆದೆಯಲ್ಲೂ ಪ್ರೀತಿ ಚಿಗುರಿಸುವ ಸಣ್ಣ ಪ್ರಯತ್ನ ಮಾಡುತ್ತಿವೆ. ಅಂಥ ಶಾಲೆಗಳ ಪರಿಚಯ ಈ ಅಂಕಣದಲ್ಲಿ...

ವಿಭಿನ್ನ ವೇಷಭೂಷಣ, ಭಾಷೆಯ  ಮೂಲಕ ತನ್ನದೇ ಆದ ಸಾಂಸ್ಕೃತಿಕ ಸೊಗಡು ಬಿಂಬಿಸುವ ಲಂಬಾಣಿ ಜನಾಂಗಕ್ಕೆ ಗುಳೆ ಎನ್ನುವುದು ಈಗಲೂ ಶಾಪವೇ. ಬಡತನ, ಕುಡಿತ, ಮೌಢ್ಯ ಇವೆಲ್ಲವೂ ಈ ಜನಾಂಗದಲ್ಲಿ ಹೆಚ್ಚೇ ಎನ್ನಬಹುದು.

ಆದರೆ ಕೊಪ್ಪಳ ತಾಲ್ಲೂಕಿನ ಜಿನ್ನಾಪುರ ತಾಂಡಾ ಮತ್ತು ಚಿಕ್ಕ ತಾಂಡಾದ (ಅವಳಿ ತಾಂಡಾಗಳು) ಜನರು ಮಾತ್ರ ಈ ಎಲ್ಲ ನಕಾರಾತ್ಮಕ ಭಾವನೆಗಳಿಗೆ ಭಿನ್ನರಾಗಿ ದ್ದಾರೆ. ಇವರ ಮಕ್ಕಳಿಗೆ ಶಿಕ್ಷಣ ಒಲಿದಿದೆ. ಎಲ್ಲ ಮಕ್ಕಳಂತೆಯೇ ತಮ್ಮ ಮಕ್ಕಳಿಗೂ ಉಜ್ವಲ ಭವಿಷ್ಯ ಸಿಗಲಿ ಎನ್ನುವುದು ಇಲ್ಲಿಯ ಪೋಷಕರ ತುಡಿತವಾದರೆ, ಶಿಕ್ಷಣದ ಜೊತೆಗೆ ಪರಿಸರದ ಒಲವು ಮಕ್ಕಳಲ್ಲಿ ಬಿಂಬಿಸುವುದು ಇಲ್ಲಿರುವ ಶಾಲೆಯ ಶಿಕ್ಷಕರ ಆಸೆ. ಇದರಿಂದಾಗಿ ಇಲ್ಲಿನ ತಾಂಡಾದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ, ಪರಿಸರದ ಪ್ರೇಮವೂ ಒಲಿಯುತ್ತಿದೆ.

ಏಳೆಂಟು ವರ್ಷಗಳ ಹಿಂದೆ ಎಲ್ಲರಂತೆ ಇಲ್ಲಿನ ತಾಂಡಾದ ಜನರು ಕೂಡ ಹೊಟ್ಟೆಪಾಡಿಗಾಗಿ ಸಂಸಾರ ಸಹಿತ ಗುಳೆ ಹೋಗುತ್ತಿದ್ದರು. ಇದರಿಂದಾಗಿ ಮಕ್ಕಳಿಗೆ ಶಿಕ್ಷಣ ಎನ್ನುವುದು ಮರೀಚಿಕೆ ಆಗಿತ್ತು. ಯಾವಾಗ ಇಲ್ಲಿರುವ ಶಾಲೆಗಳಿಗೆ ಮಲ್ಲೇಶ, ಪ್ರವೀಣ, ಮಂಜಪ್ಪ, ಮಹೇಶಗೌಡ ಎಂಬ ಯುವಕರು ಶಿಕ್ಷಕರಾಗಿ ಬಂದರೋ ತಾಂಡಾದ ಚಿತ್ರಣವೇ ಬದಲಾಗತೊಡಗಿತು. ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಪರಿವರ್ತನೆ ಸಾಧ್ಯ ಎನ್ನುವುದಕ್ಕೆ  ಈ ಶಿಕ್ಷಕರು ಉದಾಹರಣೆಯಾಗಿ ನಿಂತರು.

ಈ ಶಿಕ್ಷಕರೆಲ್ಲಾ ಕೂಡಿ ದಿನವೂ ತಾಂಡಾ ಜನರ ಮನೆ-ಮನೆಗೆ ಭೇಟಿ ಮಾಡಿ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದರು. ಶಿಕ್ಷಣದ ಮಹತ್ವ ತಿಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಅಷ್ಟೇ ಅಲ್ಲ, ಸರ್ಕಾರದಿಂದ ಈ ಜನಾಂಗಕ್ಕೆ ಸಿಗುವ ಸೌಲಭ್ಯ, ಅವಕಾಶಗಳ ಕುರಿತು ತಿಳಿಸಿದರು. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಬಂತು.

ಶಾಲೆಗೆ ಮಕ್ಕಳು ಬರುತ್ತಿದ್ದಂತೆಯೇ, ಶಾಲೆಯ ಪರಿಸರದಲ್ಲೂ ಬದಲಾವಣೆ ಮಾಡುವ ಪಣತೊಟ್ಟ ಶಿಕ್ಷಕರು ಶಾಲಾ ಆವರಣದಲ್ಲಿ ಹಲವಾರು ಗಿಡಗಳನ್ನು ವಿದ್ಯಾರ್ಥಿಗಳ ಸಹಕಾರದೊಂದಿಗೆ ನೆಟ್ಟರು. ಇದರಿಂದ ವಿದ್ಯಾರ್ಥಿಗಳಲ್ಲಿ ಅಕ್ಷರದ ಜೊತೆ ಹಸಿರು ಪ್ರೀತಿಯೂ ಬೆಳೆದಿದೆ.  ವಿದ್ಯಾರ್ಥಿಗಳು ಪ್ರತಿದಿನ ಗಿಡಗಳಿಗೆ ನೀರುಣಿಸಿ ಶಾಲೆಯನ್ನು ಒಪ್ಪಓರಣವಾಗಿಸುತ್ತಾರೆ. ಇದರಿಂದಾಗಿ ಚಿಕ್ಕತಾಂಡಾ ಶಾಲೆಯೊಂದರಲ್ಲೇ 140ಕ್ಕೂ ಅಧಿಕ ವೈವಿಧ್ಯಮಯ ಗಿಡಗಳು ಬೆಳೆದುನಿಂತಿವೆ. ಬಟಾಬಯಲಾಗಿ ಕಾಣುತಿದ್ದ ಈ ಶಾಲೆಯೀಗ
ಹಚ್ಚ-ಹಸಿರಿನಿಂದ ಕಂಗೊಳಿಸುತ್ತಾ ಆಕರ್ಷಿಸುತ್ತಿದೆ.

ಶಾಲೆಯಲ್ಲಿ ಕೈ ತೋಟ ಮಾಡಿ ಬಿಸಿಯೂಟಕ್ಕೆ ಬೇಕಾದ ಅಗತ್ಯ ತರಕಾರಿಗಳನ್ನು ವಿದ್ಯಾರ್ಥಿಗಳಿಂದಲೇ ಬೆಳೆಯಲಾಗುತ್ತಿದೆ. ಪ್ರತಿ ಶನಿವಾರ ಲೇಝಿಮ್, ಡೆಂಬಲ್ಸ್, ಸಾಮೂಹಿಕ ಕವಾಯಿತು, ಸರ್ವ ಧರ್ಮ ಪ್ರಾರ್ಥನೆ ಕಡ್ಡಾಯ ಮಾಡಿದ್ದು, ಮಕ್ಕಳಲ್ಲಿ ಶಿಸ್ತು ಮೂಡಿಸಲಾಗುತ್ತಿದೆ.

ಜಿನ್ನಾಪುರ ತಾಂಡಾ ಶಾಲೆಯಲ್ಲಿ 60ಕ್ಕೂ ಅಧಿಕ ಗಿಡಮರಗಳು ಮೈದಳೆದು ನಿಂತಿವೆ. ಈ ಶಾಲೆಯಲ್ಲಿ ಕೂಡ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ಗಳು ನಿರಂತರವಾಗಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಛದ್ಮವೇಷ, ಜಾನಪದ ನೃತ್ಯ, ಕೋಲಾಟ, ಲಂಬಾಣಿ ನೃತ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ತಂದಿದ್ದಾರೆ. 

‘ಗುರುಗಳ ಶ್ರಮದಿಂದ ನಮ್ಮ ಮಕ್ಳು ಬ್ಹಾಳಾ ಶ್ಯಾಣ್ಯಾರಾಗ್ಯಾರ್ರಿ... ಯಾವ್ದೇ ಕಾರಣಕ್ಕೂ ಮಕ್ಳನ್ನ ದುಡ್ಯಾಕ ಕರ್ಕೊಂಡು ಹೋಗ್ಬಾರ್ದಂತ ತಾಂಡಾದಾಗ ತೀರ್ಮಾನ ಮಾಡೀವ್ರಿ. ಹಿಂಗಾಗಿ ಮಕ್ಳು ಯಾವಾಗ್ಲೂ ಶಾಲ್ಯಾಗನ ಇರ್ತಾರಿ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮವ್ವ ಪವಾರ.

ಚಿಕ್ಕತಾಂಡಾದಲ್ಲಿ 25, ಜಿನ್ನಾಪುರ ತಾಂಡಾದಲ್ಲಿ 94 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಸಂಪೂರ್ಣ ಹಾಜರಾತಿ ಇರುವುದು ವಿಶೇಷ. 75 ಕುಟುಂಬಗಳಿರುವ ಈ ತಾಂಡಾದಲ್ಲಿ ಸದ್ದಿಲ್ಲದೆ ಅಕ್ಷರದ ಜೊತೆ ಹಸಿರು ಕ್ರಾಂತಿಯಾಗಿರುವುದು ಅಚ್ಚರಿಯಾದರು ಸತ್ಯ.

ಉದ್ಯಾನದ ನಡುವೆ ಕಲಿಕೆ
ದಟ್ಟವಾಗಿ ಬೆಳೆದು ನಿಂತ ಮರಗಳು, ಆಲಂಕಾರಿಕ ಗಿಡಗಳು, ಮೆತ್ತನೆ ಹುಲ್ಲುಹಾಸು, ಅದರ ಮೇಲೆ ಮುದ್ದು-ಮುದ್ದಾಗಿ ಓಡಾಡುವ ಮೊಲಗಳು, ಮಲ್ಲಿಗೆ ಹೂವಿನ ಕಂಪು... ಇಂತಹ ಸುಂದರ ಪರಿಸರದ ನಡುವೆ ಇದೆ ಕೊಪ್ಪಳ ತಾಲ್ಲೂಕಿನ ಹೊಸಮುದ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.

ಇಲ್ಲಿನ ಮಕ್ಕಳು ನಿಸರ್ಗದೊಂದಿಗೆ, ಪ್ರಾಣಿ-ಪಕ್ಷಿಗಳೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿ ದ್ದಾರೆ. ಗಿಡಗಳಿಗೆ ನೀರುಣಿಸುವುದು, ಮೊಲಗಳಿಗೆ ತರಕಾರಿ, ಹುಲ್ಲು ತಿನ್ನಿಸುವ ಮೂಲಕ ಶಾಲೆ ಆರಂಭಗೊಳ್ಳುತ್ತದೆ. ಪಕ್ಷಿಗಳು ಕಾಳು ತಿನ್ನಲು, ನೀರು ಕುಡಿಯಲು ಗಿಡಗಳಿಗೆ ತೂಗುಬುಟ್ಟಿಗಳನ್ನು ಕಟ್ಟಿದ್ದಾರೆ. ಇದರಿಂದಾಗಿ ಈ ಶಾಲೆಯಲ್ಲಿ ಹಕ್ಕಿಗಳ ಕಲರವ ಇದೆ.

ಮಕ್ಕಳಲ್ಲಿ ನೈತಿಕತೆ, ಅಧ್ಯಯನದಲ್ಲಿ ಏಕಾಗ್ರತೆ ಬೆಳೆಸಲು ಇಲ್ಲಿನ ಶಿಕ್ಷಕರು ಯೋಗ ಶಿಕ್ಷಣವನ್ನು ಕಡ್ಡಾಯ ಮಾಡಿದ್ದಾರೆ. ಪ್ರತಿದಿನ ಸಂಜೆ ಅರ್ಧಗಂಟೆ ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡಲಾಗುತ್ತದೆ. ಮಕ್ಕಳ ಮನೋವಿಕಾಸಕ್ಕಾಗಿ ‘ರಂಗವೇದಿಕೆ’ ನಿರ್ಮಿಸಿದ್ದು, ಇಲ್ಲಿ ವಾರಕ್ಕೊಮ್ಮೆ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ.

ಈ ಶಾಲೆಯ ಮಕ್ಕಳು ಕೃಷಿ ಪಾಠವನ್ನು ಸಹ ಕಲಿತಿದ್ದಾರೆ. ಎರೆಗೊಬ್ಬರ ತಯಾರಿಸುವ ವಿಧಾನ ಅರಿತಿದ್ದಾರೆ. ಗೊಬ್ಬರ ತಯಾರಿಕೆಗಾಗಿ ಎರಡು ತೊಟ್ಟಿಗಳಿವೆ. ಈ ಗೊಬ್ಬರವನ್ನು ಶಾಲಾ ಕೈತೋಟಕ್ಕೆ ಬಳಸಲಾಗುತ್ತದೆ. ಇಲ್ಲಿಯ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪರಿಸರ ಪ್ರೀತಿಗಾಗಿ ಜಿಲ್ಲೆಯ ‘ಅತ್ಯುತ್ತಮ ಪರಿಸರ ಮಿತ್ರ ಶಾಲೆ’ ಪುರಸ್ಕಾರವನ್ನೂ ಈ ಶಾಲೆ ಪಡೆದುಕೊಂಡಿದೆ.

ಈ ‘ಹಸಿರ ಕ್ರಾಂತಿ’ಯ ಹಿಂದೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ವೀರೇಶ ಹುಲ್ಲೂರು, ಈಗ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ ಗೌಂಡಿ, ಬಾಳಪ್ಪ ತಳವಾರ ಮತ್ತು ಮುಖ್ಯಾಧ್ಯಾಪಕ ಪರಸಪ್ಪ ಕಂಬಳಿಯವರ ಶ್ರಮವಿದೆ. ಶಾಲೆಯ ಸಂಪರ್ಕಕ್ಕೆ ೯೯೦೨೪ ೮೭೯೫೬.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT