ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿ ಬಾಯಾರಿದೆ ಭೂಮಿ ಇಲ್ಲಿ ಉಕ್ಕಿದೆ ಹಸಿರು

ಅಕ್ಷರ ಗಾತ್ರ

ರಣಬಿಸಿಲಿಗೆ ಕೊಪ್ಪಳ ತತ್ತರಿಸಿ ಹೋಗಿದೆ. ಜೀವನದಿ ತುಂಗಭದ್ರೆ ಒಡಲು ಬರಿದಾಗಿದೆ. ಇಂಥದರ ಮಧ್ಯೆಯು ಮೂಲ ಸೌಕರ್ಯ ಗಳಿಂದ ವಂಚಿತ ಇಲ್ಲಿಯ ಸರಕಾರಿ ಶಾಲೆಗಳೂ ಹಸಿರಿನಿಂದ ಕಂಗೊಳಿಸುತ್ತಿವೆ. ಇದಕ್ಕೆ ಕಾರಣ ಶಿಕ್ಷಕರ ‘ಹಸಿರು ಸಂಕಲ್ಪ’. ಈ ಶಾಲೆಗಳನ್ನೊಮ್ಮೆ ಸುತ್ತು ಹಾಕೋಣ ಬನ್ನಿ...

ಇದು ಸಿಡಗನಹಳ್ಳಿ. ಕೇವಲ 40 ಕುಟುಂಬಗಳಿರುವ ಕುಗ್ರಾಮ. ಬಸ್ ಸಂಪರ್ಕವಿಲ್ಲ. 1994ರಲ್ಲಿ ಬರೀ ಕಲ್ಲು ಬಂಡೆಗಳಿದ್ದ ಜಾಗದಲ್ಲಿ ಟೆಂಟ್‌ ಒಂದರಲ್ಲಿ ಶಾಲೆ ಪ್ರಾರಂಭವಾಯಿತು. ಆಗ ಶಿಕ್ಷಕರಾಗಿ ಬಂದವರು ಚೆನ್ನಬಸಪ್ಪ ಮತ್ತು ಬಸವರಾಜ ನಾಗರಡ್ಡಿ. ಪ್ರತಿದಿನ ಕಲ್ಲುಗಳನ್ನು ಕೀಳುತ್ತಾ ಮಣ್ಣು ತುಂಬಿಸತೊಡಗಿದರು. ಶಿಕ್ಷಕರ ಈ ಕಾಳಜಿಯನ್ನು ಗಮನಿಸಿದ ಊರಿನ ಜನ ಸ್ವಯಂ ಪ್ರೇರಿತರಾಗಿ ಬಂದು ಶಾಲೆಯಲ್ಲಿದ್ದ ಕಲ್ಲುಗಳನ್ನು ಕಿತ್ತು ಮಣ್ಣು ಹಾಕಿ ಸಮತಟ್ಟು ಮಾಡಿಕೊಟ್ಟರು.

ಈ ಶಾಲೆಯನ್ನು ಸಂಪೂರ್ಣ ಹಸಿರಾಗಿಸಬೇಕೆಂಬ ಸಂಕಲ್ಪ ಮಾಡಿದ ಶಿಕ್ಷಕರು ಸಿಲ್ವರ್, ಬೇವು, ಅರಳಿ, ಅಶೋಕ, ಚಿಕ್ಕು, ತೆಂಗು... ಮುಂತಾದ ಸಸಿಗಳನ್ನು ನೆಟ್ಟರು. ಅವೀಗ ಮರಗಳಾಗಿ ಬೆಳೆದು ಶಾಲೆಯ ಮಕ್ಕಳಿಗೆ ನೆರಳಾಗಿವೆ. ಮಕ್ಕಳ ಆಟ, ಪಾಠ, ಊಟವೆಲ್ಲವೂ ಗಿಡಗಳ ನೆರಳಲ್ಲಿಯೇ ನಡೆಯುತ್ತಿದೆ. ತಂಪಾದ ವಾತಾವರಣದಲ್ಲಿ ಇಂಪಾದ ಕಲಿಕೆ ಈ ಶಾಲಾ ಮಕ್ಕಳದು. 

ಮಕ್ಕಳೇ ಗಿಡಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಸಿ ಊಟಕ್ಕಾಗಿ ತರಕಾರಿಗಳ್ನೂ ಇಲ್ಲೇ ಬೆಳೆಯಲಾಗುತ್ತೆ.  ‘ಕಳೆದ 22 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿನ ಮಕ್ಕಳು, ಈ ಪರಿಸರ, ಊರಿನ ಜನರ ಪ್ರೀತಿ-ವಿಶ್ವಾಸ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ. ನಂಗೆ ಎಷ್ಟೇ ಕಷ್ಟವಾದರೂ ಇದೇ ಶಾಲೆಯಲ್ಲೇ ಸೇವೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಚನ್ನಬಸಪ್ಪ. 

ಕೇಸಲಾಪುರದ ಶಾಲೆ: ತುಂಗಭದ್ರೆಯ ಹಿನ್ನೀರಿನಿಂದ ಸ್ಥಳಾಂತರಗೊಂಡ ಗ್ರಾಮ ಕೇಸಲಾಪುರ. ಕೊಪ್ಪಳ ತಾಲ್ಲೂಕಿನ ಗಡಿಗ್ರಾಮ ಆಗಿರುವ ಈ ಶಾಲೆಯಲ್ಲಿಯೂ ಹಸಿರುಕ್ಕಿದೆ. 2010ರಲ್ಲಿ ಶೇಖರಪ್ಪ, ಕುಮಾರ ಮತ್ತು ಅಶೋಕ್ ಅವರು ಶಿಕ್ಷಕರಾಗಿ ಬಂದಾಗ ವಿಶಾಲವಾದ  ಮೈದಾನವಿದ್ದರೂ ಗಿಡಮರಗಳಿರಲಿಲ್ಲ; ಆಗ ಉದ್ಯಾನವನ ನಿರ್ಮಿಸುವ ಸಂಕಲ್ಪ ಮಾಡಿದರು.

ಇವರ ಶ್ರಮದ ಫಲವಾಗಿ ಇಂದು ಈ ಶಾಲೆ ಕೊಪ್ಪಳ ಜಿಲ್ಲೆಯ ‘ಏಕೈಕ ಉದ್ಯಾನ ಶಾಲೆ’ ಎಂಬ ಕೀರ್ತಿಗೆ ಪಾತ್ರವಾಗಿದೆ. ತೆಂಗು, ತೇಗ, ಚಿಕ್ಕು, ಬಾಳೆ, ಬೇವು... ಮುಂತಾದ 110 ಗಿಡ ಮರಗಳಿವೆ. ಸತತ ಎರಡು ಬಾರಿ ಜಿಲ್ಲೆಯ ‘ಪರಿಸರಮಿತ್ರ’ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮಕ್ಕಳು ನಿಸರ್ಗದೊಂದಿಗೆ ಆಡುತ್ತಾ-ನಲಿಯುತ್ತಾ ಕಲಿಯುತ್ತಿದ್ದಾರೆ.

‘ಐದು ವರ್ಷಗಳ ಹಿಂದೆ ಈ ಶಾಲೇಲಿ ಏನೂ ಇದ್ದಿಲ್ಲ. ಈಗಿರುವ ಶಿಕ್ಷಕರ ಪರಿಶ್ರಮದಿಂದ ನಮ್ಮೂರ ಶಾಲೆ ಬ್ಹಾಳ ಸುಂದರವಾಗಿದೆ ಇವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ’ ಎನ್ನುತ್ತಾರೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದೇವಪ್ಪ ಕಾರುಬೂದಿ. ಈಗ ಬಿರುಬಿಸಿಲಿಂದ ನೀರಿನ ಕೊರತೆ ಉಂಟಾಗಿರುವ ಕಾರಣ, ಶಾಲೆಗಾಗಿ ಪ್ರತ್ಯೇಕ ಕೊಳವೆ ಬಾವಿ ಕೊರೆಸಿ ಹನಿ ನೀರಾವರಿ ಮೂಲಕ ಉದ್ಯಾನವನ್ನು ಮತ್ತಷ್ಟು ಅಂದ-ಚಂದಗೊಳಿಸಬೇಕೆಂಬ ಕನಸು ಇಲ್ಲಿನ ಶಿಕ್ಷಕರದ್ದಾಗಿದೆ. ಇದಕ್ಕೆ ಒಂದಿಷ್ಟು ಸಹಾಯ ಬೇಕಿದೆ.

ತಂಪು - ತಂಪು ಶಾಲೆ: ಸೂಕ್ತ ರಸ್ತೆ,  ಬಸ್‌ ವ್ಯವಸ್ಥೆಯಿಲ್ಲದ ಊರು ಸಂಗಾಪುರ. ಆದರೆ 1994ರಲ್ಲಿ ಪ್ರಾರಂಭವಾದ ಈ ಶಾಲೆ ಸೋಮೇಶ ಪತ್ತಾರ, ಮಲ್ಲಪ್ಪ ಹವಳೆ ಶಿಕ್ಷಕರಿಂದ ಹಸಿರು ಕಾಣುತ್ತಿದೆ. ಅರಳಿ, ಬೇವು, ಅಶೋಕ, ಚೆರ್ರಿ, ಅತ್ತಿಮರ, ಮಾವು, ಲಿಂಬೆ, ಮುಂತಾದ ಗಿಡಗಳಿಂದು ಹೆಮ್ಮರವಾಗಿ ಬೆಳೆದು ಶಾಲೆಯನ್ನು ತಂಪಾಗಿಸಿವೆ. ಅಲ್ಲದೆ ಇರುವ ಸ್ವಲ್ಪ ಜಾಗದಲ್ಲಿಯೇ ಚಿಕ್ಕ ‘ಉದ್ಯಾನವನ’ ನಿರ್ಮಿಸಿ ಮಕ್ಕಳಲ್ಲಿ ಪ್ರಕೃತಿ ಪ್ರೇಮ ಬೆಳೆಸಿದ್ದಾರೆ.

ಅದೇ ರೀತಿ, ಕುಗ್ರಾಮ ಚಿಕ್ಕಸೂಳೆಕೆರೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಶಿಕ್ಷಕ ರಾಮಣ್ಣ ರಕರಡ್ಡಿಯವರು ತಮ್ಮ ಅವಿರತ ಶ್ರಮದಿಂದ ಈ ಶಾಲೆಯನ್ನು ಹಸಿರುಗೊಳಿಸಿದ್ದಾರೆ. ತೆಂಗು, ಅರಳಿ, ನೇರಳೆ, ತೇಗ, ಸಿಲ್ವರ್ ಮುಂತಾದ ಸುಮಾರು 140 ಗಿಡಗಳನ್ನು ಬೆಳೆಸಿದ್ದಾರೆ. ಇಲ್ಲಿನ ಮಕ್ಕಳು ಬಿಡುವಿನ ವೇಳೆಯಲ್ಲಿ ಗಿಡಗಳಿಗೆ ನೀರುಣಿಸಿ, ಗೊಬ್ಬರ ಹಾಕುತ್ತಾರೆ. ಸಾಂಸ್ಕೃತಿಕ ಆಟೋಟ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಸಿದ್ದಾರೆ.

ತುಂಗಭದ್ರಾ ಹೊಳೆಯ ಪಕ್ಕದಲ್ಲಿಯೇ ಈ ಊರು ಇರುವುದರಿಂದ ‘ಹೊಳೆ ಮುದ್ಲಾಪುರ’. 1996ರಲ್ಲಿ ಬಟಾಬಯಲಿನಲ್ಲಿ ಪ್ರಾರಂಭವಾದ ಈ ಶಾಲೆಯೀಗ ಸಂಪೂರ್ಣ ಹಸಿರು ಮಯವಾಗಿದೆ. ರಾಮ್‌ರಾವ್ ದೇಸಾಯಿ ಬಸವರಾಜ ಹವಳೆ, ಶರಣಪ್ಪ ಹೂಗಾರ ಪ್ರಾರಂಭದಲ್ಲಿ ಈ ಶಾಲೆಯನ್ನು ಅಂದ-ಚಂದ ವಾಗಿಸಿದವರು. ನಂತರ ಬೆಳ್ಳಪ್ಪ, ಕುಸುಮಾ, ಶಿವಪ್ಪ ಜಾಧವ ಇವರು ಮತ್ತಷ್ಟು ಸಸಿಗಳನ್ನು ತಂದು ನೆಟ್ಟು ಪೋಷಿಸಿದ್ದಾರೆ. ಕಿರುತೋಟವೂ ಇದ್ದು ಬಿಸಿಯೂಟಕ್ಕೆ ಅಗತ್ಯ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಪಾಠದ ಜೊತೆ ಕೃಷಿ ಮಾಹಿತಿಯನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ನೀರ ಅಭಾವವೇ ಇಲ್ಲಿಲ್ಲ
1996ರಲ್ಲಿ ಆರಂಭವಾದ ಹಳೆ ನಿಂಗಾಪುರ ಕೂಡ ಇದಕ್ಕೆ ಭಿನ್ನವಲ್ಲ. ಸಂಪೂರ್ಣ ಹಸಿರುಮಯ. ವೆಂಕಟೇಶ ವೇದಪಾಠಕ ಮತ್ತು ಸುಧಾ ಎಸ್.ಬಿ ಶಿಕ್ಷಕರು ಸುಮಾರು 120 ಸಸಿಗಳನ್ನು ನೆಟ್ಟಿದ್ದರ ಪರಿಣಾಮ ಇಂದು ಅಲ್ಲಿ ಬಾದಾಮಿ, ಸುಬಬಲಿ, ಬೇವು ಅರಳಿ, ಸಿಲ್ವರ್, ಗುಲ್ ಮೊಹರ್, ಮುಂತಾದ ಗಿಡಗಳು ಸಮೃದ್ಧವಾಗಿ ಬೆಳೆದು ನಿಂತು ಶಾಲೆಯನ್ನು  ಸುಂದರಗೊಳಿಸಿವೆ. ಅಲ್ಲದೆ ಶಾಲೆಯ ಮುಂದೆ ಸುಂದರವಾದ ಕಿರು ಉದ್ಯಾನವನ ನಿರ್ಮಿಸಿದ್ದಾರೆ. ಉದ್ಯಾನಕ್ಕೆ ಹನಿನೀರಾವರಿ ಮೂಲಕ ನೀರು ನೀಡಲಾಗುತ್ತದೆ.

ಮಳೆ ನೀರು ಸಂಗ್ರಹಕ್ಕೆ ಟ್ಯಾಂಕ್‌ ನಿರ್ಮಿಸಲಾಗಿದೆ. ನೀರಿನ ಕೊರತೆಯಂತೂ ಈ ಶಾಲೆಗೆ ಕಾಡಿಲ್ಲ. ಅಲ್ಲಿರುವ ಇನ್ನೊಂದು ಶಾಲೆ ಮುಂಡರಗಿ. ವನಸಿರಿಯ ಸೊಬಗಿನಿಂದ ಕಣ್ಣು ತಣಿಸುವ ಶಾಲೆಯಿದಾಗಿದ್ದು, ಒಂದು ಕ್ಷಣ ನೋಡುಗರಿಗೆ ಇದು ಶಾಲೆಯೋ ದಟ್ಟಡವಿಯೋ ಎಂದೆನಿಸುತ್ತದೆ. 200ಕ್ಕಿಂತ ಹೆಚ್ಚು ವಿವಿಧ ಜಾತಿಯ ಮರಗಳು ಬೆಳೆದು ದಟ್ಟ ಕಾನನವನ್ನೇ ಸೃಷ್ಟಿಸಿವೆ.! ಇದರ ಹಿಂದೆ ಶಿವನಗೌಡ ಮಾಲಿ ಪಾಟೀಲ್, ನಟರಾಜ, ರುದ್ರಪ್ಪ ಮತ್ತು ನಾಗಪ್ಪ ಕಣವಿ ಇವರೆಲ್ಲರ ಅವಿರತ  ಶ್ರಮವಿದೆ.

ಅಪ್ಪಿಕೊ ಚಳವಳಿ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ ಸುಂದರಲಾಲ್ ಬಹುಗುಣ ಮತ್ತು ತನ್ನಿಡೀ ಜೀವನವನ್ನೇ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುವುದರಲ್ಲೇ ಜೀವ ಸವೆಸಿದ ಸಾಲು ಮರದ ತಿಮ್ಮಕ್ಕನ ಆದರ್ಶ ಪರಿಸರ ಪ್ರೇಮವೇ ನಮಗೆ ಪ್ರೇರಣೆ’ ಎನ್ನುತ್ತಾರೆ ಈ ಶಿಕ್ಷಕರು. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗಾಗಿ ‘ಸಾಂಸ್ಕೃತಿಕ ಕಲಾ ವೇದಿಕೆ’ಯನ್ನು ನಿರ್ಮಿಸಲಾಗಿದೆ. 

ಬಂಜರು ಭೂಮಿಯಲ್ಲಿ ಹಸಿರು: ಒಂದು ಹುಲ್ಲು ಕಡ್ಡಿಯೂ ಬೆಳೆಯಲಾರದಂತಹ ಬಂಜರು ಭೂಮಿಯಲ್ಲಿ ಸತತ ಹತ್ತು  ವರ್ಷಗಳ ಕಾಲ ಅವಿರತ ಶ್ರಮಿಸಿ ಸುಮಾರು 220 ಗಿಡಗಳನ್ನು ಬೆಳೆಸಿ ಶಾಲೆಯನ್ನು ಸುಂದರಗೊಳಿಸಿದ್ದಾರೆ ತಾಳಕನಕಾಪುರದ ಶಾಲೆ ಶಿಕ್ಷಕರು. ಯುವರಾಜ ಬಡಿಗೇರ ಎಂಬ ಶಿಕ್ಷಕರ ಪರಿಶ್ರಮದ ಫಲವಿದು. ಫಲವತ್ತಾದ ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ತರಿಸಿ  ಗಿಡ ನೆಡಬೇಕಾದ ಜಾಗದಲ್ಲೆಲ್ಲ ಹಾಕಿಸಿ ಆ ಗಿಡಗಳಿಗೆ ನೀರುಣಿಸಿ, ಗೊಬ್ಬರ ಹಾಕಿ ಹಸಿರಾಗಿಸಿದ್ದಾರೆ.

ಅವರ ಪ್ರಯತ್ನದ ಫಲವಾಗಿ ಇಂದು ನೂರಾರು ಗಿಡಗಳು ಬೆಳೆದು ನಿಂತಿವೆ. ಗಿಡಗಳ ನೆರಳಿನಡಿಯಲ್ಲಿ ಮಕ್ಕಳ ಕಲಿಕೆ ಸಾಗುತ್ತಿದೆ. ಸುಸುಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಶಿಕ್ಷಣ, ಯೋಗ, ಸಾಮೂಹಿಕ ಕವಾಯತಿನ ಮೂಲಕ ಮಕ್ಕಳಿಗೆ ಶಿಸ್ತಿನ ಪಾಠ ಕಲಿಸಿದ್ದಾರೆ. ಕಲೆ, ಸಾಹಿತ್ಯ, ಕ್ರೀಡೆ, ಕ್ವಿಜ್ ಕಾರ್ಯಕ್ರಮಗಳಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮಟ್ಟದವರೆಗೆ ಸ್ಪರ್ಧಿಸಿ  ಬಹುಮಾನ ತಂದಿದ್ದಾರೆ. ಶಿಕ್ಷಕರಾದ ರವಿ, ಸೂಗರೇಶ, ಫಕೀರಸಾಬ, ಈರಣ್ಣ ಇವರುಗಳು ಮುಖ್ಯಶಿಕ್ಷಕರು ಕೈಗೊಳ್ಳುವ ಕಾರ್ಯಕ್ಕೆ ಸಹಕರಿಸುತ್ತಾ ಶಾಲಾಭಿವೃದ್ಧಿಗೆ ಶ್ರಮಿಸುತ್ತಿದಾರೆ.

ಈ ಶಿಕ್ಷಕರೆಲ್ಲಾ ಹಸಿರುಕ್ಕಿಸಿರುವ ಭಗೀರಥರೆಂದರೆ ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಬೇಸಿಗೆಯಲ್ಲಿ ನೀರಿನ ಕೊರತೆಯುಂಟಾದಾಗ ಎಷ್ಟೋ ಜನ ಶಿಕ್ಷಕರು ತಮ್ಮ ಸ್ವಂತ ಹಣದಿಂದ ಟ್ಯಾಂಕರ್ ಮೂಲಕ ನೀರುಣಿಸಿದ್ದಾರೆ; ತಮ್ಮ ಮಕ್ಕಳಂತೆ ಗಿಡಗಳನ್ನು ಪ್ರೀತಿಸಿದ್ದಾರೆ. ಇದರಿಂದಾಗಿಯೇ ಕೊಪ್ಪಳದ ಹಲವು ಸರಕಾರಿ ಶಾಲೆಗಳು ಸಂಪೂರ್ಣ ಹಸಿರುಮಯವಾಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT