ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಹೇಳುತ್ತವೆ ಕಲ್ಲು ಬಂಡೆಗಳು

Last Updated 1 ಮೇ 2017, 19:30 IST
ಅಕ್ಷರ ಗಾತ್ರ
ADVERTISEMENT

ಅಡಗಿಹೋಗಿದ್ದ ಕಲ್ಲು ಬಂಡೆಗಳೆಲ್ಲ ಈಗ ನೀರಿಲ್ಲದ ನದಿಪಾತ್ರದಲ್ಲಿ ಮೈದಡವಿ ಎದ್ದು ಕುಳಿತಿವೆ. ಹೀಗಾಗಿ ಮುನಿರಾಬಾದ್‌ ಅಣೆಕಟ್ಟೆಯಿಂದ ಮುಂದಕ್ಕೆ ಕಣ್ಣು ಹಾಯಿಸಿದಷ್ಟೂ ದೂರ ಕಾಣುವುದು ಬರೀ ಹಾಸುಬಂಡೆಗಳು, ಗುಂಡು ಕಲ್ಲುಗಳು. ದಡದತ್ತ ಹೆಜ್ಜೆಹಾಕುವ ಆನೆಯಂತೆ, ನೀರಲ್ಲಿ ಬಿದ್ದುಕೊಂಡ ಎಮ್ಮೆಯಂತೆ, ಕಿವಿಯಲ್ಲಿ ಪಿಸುಗುಡುವ ಗಂಡ–ಹೆಂಡತಿಯಂತೆ, ಧ್ಯಾನಕ್ಕೆ ಕುಳಿತ ವ್ಯಕ್ತಿಗಳಂತೆ ಏನೇನೋ ನೋಟಗಳು.

ನದಿಯ ಹಾದಿಯಗುಂಟ ಹುಲಗಿ, ಮುನಿರಾಬಾದ್‌, ವಿರೂಪಾಪುರ ಹಾಗೂ ಹಂಪಿ ಪರಿಸರದಲ್ಲಿ ಸುತ್ತಾಡಿದರೆ ಜಾತ್ರೆಯಲ್ಲಿ ನೆರೆಯುವ ಜನಜಂಗುಳಿಯಂತೆ ಉದ್ದಕ್ಕೂ ಕಾಣುವುದು ಕಲ್ಲಜಂಗುಳಿ! ಹಾಸುಬಂಡೆಗಳು ಇಲ್ಲೇನು ದೊಡ್ಡ ಜಾತ್ರೆಯನ್ನೇ ಹೂಡಿಬಿಟ್ಟಿವೆಯೇ ಎಂಬ ಅನುಮಾನ.

ಮಳೆಗಾಲದಲ್ಲಿ ತುಂಗಭದ್ರೆಗೆ ಮಂಜುಳ ನಿನಾದ ಹೊರಡಿಸಲು ನೆರವಾಗುತ್ತಿದ್ದ ಈ ಬಂಡೆಗಳು, ಈಗ ಬೆವರು ಹರಿಸುತ್ತಾ ಹತ್ತಿರ ಬಂದವರಿಗೆ ಏನೇನೋ ಕಥೆ ಹೇಳುತ್ತವೆ. ‘ಸದಾ ನನ್ನ ಮೈಮೇಲೆ ಆಟವಾಡುತ್ತಿದ್ದ ಮೀನುಗಳು ಈಗ ಅಲ್ಲಿ ಕಾಣುತ್ತದಲ್ಲ, ಆ ಕೊಚ್ಚೆಗುಂಡಿ, ಅದರಲ್ಲಿ ಆಶ್ರಯ ಪಡೆದಿವೆ. ಪಾಪ, ಲಕ್ಷಾಂತರ ಮೀನುಗಳು ನೀರಿಲ್ಲದೆ ಸಾವನ್ನಪ್ಪಿವೆ’ ಎನ್ನುತ್ತದೆ ಒಂದು ಬಂಡೆ.

‘ನಾವೆಲ್ಲ ಮುಳುಗಿದ್ದಾಗ ಪುರಂದರ ಮಂಟಪದ ಹತ್ತಿರವಷ್ಟೇ ಸುಳಿದಾಡುತ್ತಿದ್ದ ಅಪರಕರ್ಮ ಪಾರಂಗತ ಭಟ್ಟರು, ಈಗ ನಮ್ಮನ್ನೂ ದಾಟಿಕೊಂಡು ನೀರು ಅರಿಸಿ ಮುಂದಕ್ಕೆ ಹೋಗುತ್ತಾರೆ. ಅಗೋ ಆ ಹಾಸುಗಲ್ಲಿನ ಮೇಲೆ ಪಿಂಡಕ್ಕಾಗಿ ಕಾಗೆಗಳು ಹೇಗೆ ಮುತ್ತಿಕ್ಕುತ್ತಿವೆ ನೀವೇ ನೋಡಿ’ ಎಂದು ಹೇಳುತ್ತದೆ ಮತ್ತೊಂದು ಗುಂಡುಕಲ್ಲು.

ಕಲ್ಲುಬಂಡೆಗಳು ಸೃಷ್ಟಿಸಿರುವ ಪುಟ್ಟ–ಪುಟ್ಟ ಗುಹೆಗಳಲ್ಲಿ ಅದೆಂತಹ ತಂಪು ಹವಾ. ನಾಲ್ಕಾರು ಅಡಿಗಳ ದೂರದಲ್ಲೇ ಕೆಂಡದಂತಹ ಬಿಸಿಲು ಹರಡಿಕೊಂಡಿದ್ದರೂ ತಂಪಾಗಿರುವ ಈ ಪುಟ್ಟ ಗುಹೆಗಳ ಮುಂದೆ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ಬಂಗಲೆಯನ್ನೂ ನೀವಾಳಿಸಿ ಒಗೆಯಬೇಕು. ನದಿಪಾತ್ರದಲ್ಲಿ ಓಡಾಡಿ ಬಿಸಿಲಲ್ಲಿ ಬಳಲಿದವರು ಈ ಗುಹೆಗಳಲ್ಲಿ ಮೈಮರೆತು ನಿದ್ದೆ ಹೊಡೆಯುತ್ತಾರೆ, ಗಡದ್ದು ಗೊರಕೆ ಹೊಡೆಯುತ್ತಾ!

ಇಸ್ಪೀಟ್‌ ಎಲೆಗಳ ಹಾಗೆ ಒಂದರ ಮೇಲೆ ಒಂದರಂತೆ ಬಿದ್ದುಕೊಂಡಿರುವ ಹಾಸುಗಲ್ಲುಗಳು ಎಲ್ಲಿ ಆಯ ತಪ್ಪುವುವೋ ಎಂದು ಭಯ. ಈ ಕಲ್ಲುಗಳ ಮೇಲೆ ಓಡಾಡುತ್ತಲೇ ಬಹುಪಾಲು ಆಯುಷ್ಯ ಕಳೆದಿರುವ ವಿರೂಪಾಪುರದ ಭೀಮಪ್ಪ, ‘ಅವು ಅಷ್ಟss ಇರ್ತಾವು ಬಿಡ್ರಿ ಸಾಹೇಬ್ರ, ಏನಾದ್ರೂ ಬೀಳಂಗಿಲ್ಲ’ ಎನ್ನುತ್ತಾ ಆ ಬಂಡೆಗಳ ಮೇಲೇ ಸರಬರ ಏರಿ ಸಾಗುತ್ತಾನೆ.

ಅದೇನು ಆತುರವೋ, ಎಷ್ಟೋ ಹೆಬ್ಬಂಡೆಗಳು ತುದಿಗುಂಡಿಯ ಮೇಲೇ ಕುಳಿತುಬಿಟ್ಟಿವೆ. ನೀರಿನ ರಭಸಕ್ಕೆ, ಗಾಳಿಯ ಒತ್ತಡಕ್ಕೆ ಒಂದಿನಿತೂ ಜಗ್ಗದೆ, ಬಗ್ಗದೆ ಅವುಗಳು ಸಮತೋಲನ ಕಾಯ್ದುಕೊಂಡ ಪರಿ ಬೆರಗು ಮೂಡಿಸುತ್ತದೆ. ಮಳೆಗಾಲದಲ್ಲಿ ತುಂಬಿ ಹರಿದ ನೀರು ಬಂಡೆಗಳ ಮೇಲ್ಮೈಗೆ ಪಾಲಿಶ್‌ ಮಾಡಿದೆಯೇನೋ! ಅವುಗಳೆಲ್ಲ ನುಣುಪು ನುಣುಪಾಗಿವೆ. ಇವೇನು ಕಲ್ಲುಬಂಡೆಗಳೋ ಕರಗುತ್ತಿರುವ ಮೇಣದ ಉಂಡಿಗಳೋ ಎಂಬ ಭ್ರಮೆ ಮೂಡಿಸುತ್ತವೆ.

‘ಈ ಕಲ್ಲುಗಳು ಏನೇನೋ ಭ್ರಮೆ ಮೂಡಿಸುತ್ತವೆಯಪ್ಪ, ಇಲ್ಲಿ ನೋಡಿದರೆ ಮೊಸಳೆಗಳಂತೆ ಕಾಣುತ್ತವೆ’ ಎಂದುಕೊಳ್ಳುತ್ತಾ ಶಿವಪುರದಲ್ಲಿ ಅವುಗಳ ಹತ್ತಿರ ಹೋದೀರಿ ಜೋಕೆ. ಅಲ್ಲಿರುವುದು ನೈಜ ಮೊಸಳೆಗಳೇ. ಪಾಪ, ನೀರಿನಿಂದ ಬರಗೆಟ್ಟು, ಬಿಸಿಲಿಗೆ ಕಂಗೆಟ್ಟು ಆಗೊಂದು–ಈಗೊಂದು ಸಾವನ್ನಪ್ಪುತ್ತಿವೆ, ಏನು ಮಾಡೋದು?
ಹುಲಿಗಿ, ಹಿಟ್ನಾಳ, ಶಿವಪುರ, ಶಹಾಪುರ, ಬಂಡಿ ಹರ್ಲಾಪುರ ಪ್ರದೇಶದಲ್ಲಿ ಕಾಲುವೆಯ ಬಸಿನೀರನ್ನೇ ಬಳಸಿಕೊಂಡು ಭೂಮಿಯನ್ನು ಹಸಿರುಗೊಳಿಸುವ ಪ್ರಯತ್ನ ಕಣ್ಣಿಗೆ ಬೀಳುತ್ತದೆ. ಹೊಲಗಳಲ್ಲಿ ಉಳುಮೆ ಮಾಡುವ ಟ್ರ್ಯಾಕ್ಟರ್‌ಗಳು, ಕುಂಟೆ ಹೊಡೆಯುವ ರೈತರು, ಬಿತ್ತನೆಯಲ್ಲಿ ತೊಡಗಿರುವ ಕಾರ್ಮಿಕರು ಕಾಣಸಿಗುತ್ತಾರೆ. ಅಲ್ಲಿನ ಬೆಳೆಗಳಿಗೆ ಬೇಕಾದ ನೀರನ್ನು ಪೂರೈಸಲಾಗದಲ್ಲ ಎಂದು ನದಿಯೊಳಗಿನ ಕಲ್ಲುಬಂಡೆಗಳು ಮರಗುತ್ತವೆ. ‘ಶಹಾಪುರದ ರಾಮಪ್ಪ ನನ್ನ ಮೇಲಿನಿಂದಲೇ ಡೈವ್‌ ಮಾಡಿ ನದಿಯಲ್ಲಿ ಈಜು ಹೊಡೆಯುತ್ತಿದ್ದ. ಮಳೆಗಾಲ ಶುರುವಾದರೆ ಮತ್ತೆ ಬರ್ತಾನೆ’ ಎನ್ನುವ ಹೆಬ್ಬಂಡೆಯೊಂದರ ಸ್ವಗತ ಕಿವಿಗೆ ಬಿದ್ದಂತಾಗುತ್ತದೆ.  

ಢಣಾಪುರದ ಬಳಿ ತುಂಗಭದ್ರಾ ನದಿ ಗುಡ್ಡವನ್ನು ಸುತ್ತಿ ಬರುತ್ತದೆ. ಅಲ್ಲಿ ಕಾಂಕ್ರೀಟ್‌ ತಡೆಗೋಡೆಯೊಂದನ್ನು ನಿರ್ಮಿಸಲಾಗಿದೆ. ಅದರೊಳಗೆ ಸಂಗ್ರಹವಾದ ನೀರು ಸಣಾಪುರ, ಢಾಣಾಪುರ, ಆನೆಗೊಂದಿ ಭಾಗಗಳಿಗೆ ಜೀವಜಲ. ಜಲಚರಗಳ ಉಳಿವಿಗೆ, ಮೀನುಗಾರರ ಬಲೆಗೆ, ತೆಪ್ಪದ ಹರಿಗೋಲಿಗೆ ಈ ಜಲತಾಣವೇ ಆಸರೆ. ಇಲ್ಲಿನ ನೀರಿನೊಳಗಿನ ಕಲ್ಲುಗಳು ಯಾವ ಕಥೆಗಳನ್ನು ಹೇಳುತ್ತಿವೆಯೋ? ಕೇಳಿಸಿಕೊಂಡ ಮೀನುಗಳಿಗೆ ಮಾತ್ರ ಗೊತ್ತು!

ಪ್ರವಾಸಿಗರಿಗೂ ನದಿ ನಡುವಿನ ಈ ಬಂಡೆಗಲ್ಲುಗಳು ಮುದ ನೀಡುತ್ತವೆ. ಎಷ್ಟೋ ಜೋಡಿಗಳು ಅಲ್ಲಿಯೇ ಏಕಾಂತದಲ್ಲಿ ಮೈಮರೆಯುತ್ತವೆ. ತುಂಟ ಹುಡುಗರಿಗೆ ಈಜಾಡಲು ಈ ಬಂಡೆಗಳ ನಡುವಿನ ನೀರೇ ಸಾಕು. ಅಲ್ಲಲ್ಲಿ ಗೀಜಗ, ಗುಬ್ಬಚ್ಚಿಗಳು ಗೂಡು ಕಟ್ಟಿವೆ. ಅವುಗಳ ಸಂಸಾರದಲ್ಲಿ ಅದೇನು ತಾಪತ್ರಯವೋ, ಆಗಾಗ ಚಿಲಿಪಿಲಿ ಸದ್ದೇ ಸದ್ದು. ಅಲ್ಲಲ್ಲಿ ಹಾಸುಬಂಡೆಗಳ ಮಧ್ಯದಲ್ಲಿ ತಿಳಿನೀರ ಸಂಗ್ರಹ. ಕೆಲಸದ ನಿಮಿತ್ತ ಓಡಾಡುವ ಜನರಿಗೆ, ಸುತ್ತಮುತ್ತ ಸಂಸಾರ ಹೂಡಿರುವ ಪಕ್ಷಿಗಳಿಗೆ ಈ ಸಿಹಿನೀರಿನ ಆಗರವೇ ಸ್ವರ್ಗ. ಅಂದಹಾಗೆ, ಒಂದಿಷ್ಟು ವಿದೇಶಿಯರು ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಕಲ್ಲುಗಳ ನೋಟ ಸೆರೆ ಹಿಡಿಯಲು ದಿನವಿಡೀ ನದಿಪಾತ್ರದಲ್ಲಿ ಸುತ್ತುತ್ತಾರೆ. ಬೆಳ್ಳಂಬೆಳಿಗ್ಗೆ ಸೂರ್ಯ ರಥವೇರಿ ಬಂದಾಗಿನಿಂದ ಮುಸ್ಸಂಜೆವರೆಗೆ ನೋಡುಗರು ಬಯಸಿದಷ್ಟೂ ಖುಷಿ ಕೊಡುವ ಈ ಬಂಡೆಗಳು ರಾತ್ರಿ ಆಗುತ್ತಿದ್ದಂತೆ ಕತ್ತಲಲ್ಲಿ ಕರಗಿಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT