ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯ ಕವಲುಗಳು

Last Updated 8 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅದೊಂದು ಗುಡ್ಡದಲ್ಲಿರುವ ಹೆಂಚಿನ ಮನೆ. ಆ ಮನೆ ಕಾವಲಿಗೆ ಒಬ್ಬ ಪೊಲೀಸ್‌ ಅಧಿಕಾರಿ. ಕೈಯಲ್ಲಿ ಲಾಠಿ ಇದ್ದರೂ ಉದ್ದನೆಯ ಬಂದೂಕು, ಹರಿತವಾದ ದೊಡ್ಡ ಕತ್ತಿಯನ್ನು ಗೋಡೆಗೆ ನೇತುಹಾಕಿಟ್ಟಿದ್ದಾನೆ. ಅವನೆದರು ಜಿಂಕೆಯಷ್ಟೇ ಅಲ್ಲ!, ಹುಲಿ, ಆನೆಗಳು ಸಹ ಮಿಸುಕಾಡದೇ ಸುಮ್ಮನೇ ನಿಂತುಕೊಂಡಿರುತ್ತವೆ.

ಇದನ್ನೆಲ್ಲ ನೋಡಬೇಕೆಂದರೆ 8 ಕಿ.ಮೀ. ದೂರ ಗುಡ್ಡದಲ್ಲಿ ಚಾರಣ ಮಾಡಬೇಕು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗುಡ್ಡಳ್ಳಿಯಲ್ಲಿರುವ ವಿಶ್ರಾಮ  ಗೌಡ ಅವರ ಮನೆಗೆ ಹೋದರೆ ಇಂತಹ ಸನ್ನಿವೇಶವನ್ನು ಕಾಣಬಹುದು. ಅಂದಹಾಗೆ ಅವುಗಳೆಲ್ಲ ಕಟ್ಟಿಗೆಯಲ್ಲಿ ಕೆತ್ತಿದ ಗೊಂಬೆಗಳು. ವಿಶ್ರಾಮ ಅವರ ಕೆತ್ತನೆಯ ಕೌಶಲ್ಯದಿಂದಾಗಿ ಈ ಗೊಂಬೆಗಳು ನೋಡುಗರ ಭಾವನೆಯನ್ನು ಕೆದಕಿ ನೈಜ ಕಲ್ಪನೆಯನ್ನು ಸೃಷ್ಟಿಸುತ್ತವೆ.

ವಿಶ್ರಾಮ ವೃತ್ತಿಯಲ್ಲಿ ಕೃಷಿಕ. ಅವರ ತಂದೆ ಬಾಬು ಗೌಡ ಅವರು ಶಿಲ್ಪಿಯಾಗಿ ಹೆಸರಾದವರು. ಅಪ್ಪನ ಕಲೆಯನ್ನು ನೋಡುತ್ತ ಬೆಳೆದ ಅವರು ಹವ್ಯಾಸಕ್ಕಾಗಿ ಕಟ್ಟಿಗೆಯಲ್ಲಿ ಮೂರ್ತಿ ಕೆತ್ತನೆಯನ್ನು ರೂಢಿಸಿಕೊಂಡರು. ಆ ಹವ್ಯಾಸವೇ ಕೈ ಹಿಡಿಯಿತು. ಅದರ ಫಲವಾಗಿ ಸುಮಾರು 100ಕ್ಕೂ ಹೆಚ್ಚು ಕಲಾಕೃತಿಗಳಿಗೆ ಸುಂದರ ರೂಪ ಕೊಟ್ಟಿದ್ದಾರೆ. ಪ್ರಭಾವಳಿ, ಬಾಗಿಲು ಕೆತ್ತನೆ ಸಹ ಅವರಿಗೆ ಕರಗತ. ತಾವೇ ರಚಿಸಿದ ಈಶ್ವರನ ಮೂರ್ತಿಯೊಂದನ್ನು ಅವರು ಮನೆಯಲ್ಲಿಟ್ಟು ಪೂಜಿಸುತ್ತಿದ್ದಾರೆ. ಶಾಲೆ ಮುಖ ಕಾಣದೇ ಇದ್ದರೂ ಸ್ವಂತ ಕಲಿಕೆಯಿಂದ ರೂಢಿಸಿಕೊಂಡಿರುವ ಅವರ ಕೌಶಲ ಎಲ್ಲರಲ್ಲೂ ಬೆರಗು ಮೂಡಿಸಿದೆ.

ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿ ಎತ್ತರದಲ್ಲಿರುವ ಗುಡ್ಡಳ್ಳಿ ಅರಣ್ಯದ ಮಧ್ಯೆ ಇರುವ ಕುಗ್ರಾಮ. ಹೀಗಾಗಿ ಇಲ್ಲಿಗೆ ಚಾರಣಕ್ಕೆ ಬರುವವರ ಸಂಖ್ಯೆ ಹೆಚ್ಚು. ಕೆಲವೊಮ್ಮೆ ವಿದ್ಯಾರ್ಥಿಗಳು ಸಹ ಪಿಕ್‌ನಿಕ್‌ಗೆ ಬಂದು ಹೋಗುತ್ತಾರೆ. ಅವರೆಲ್ಲ ತಪ್ಪದೇ ವಿಶ್ರಾಮ ಅವರ ಮನೆಗೆ ಭೇಟಿ ನೀಡುತ್ತಾರೆ. ಅದಕ್ಕಾಗಿ ತಾವು ತಯಾರಿಸುವ ಎಲ್ಲಾ ಮೂರ್ತಿಗಳನ್ನು ಮನೆಯಲ್ಲಿಯೇ ಪ್ರದರ್ಶನಕ್ಕಿಟ್ಟು ಜನರನ್ನು ಸೆಳೆಯಬೇಕು ಎನ್ನುವುದು ವಿಶ್ರಾಮ ಗೌಡ ಅವರ ಬಯಕೆ.

‘ಒಮ್ಮೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮನೆಗೆ ಬಂದಿದ್ದರು. ಎಲ್ಲರಿಗೂ ಕಾಣುವಂತೆ ಗೋಡೆಗೆ ನೇತುಹಾಕಿದ್ದ ಬಂದೂಕನ್ನು ನೋಡಿ ಗದರಿಸಿದರು. ‘ಏನಯ್ಯ ಬಂದೂಕನ್ನು ಈ ರೀತಿ ಇಟ್ಟುಕೊಂಡಿದ್ದೀಯಾ, ಪರವಾನಗಿ ಇದೆಯಾ’ ಎಂದು ವಿಚಾರಿಸಿದರು. ಮಾತನಾಡದೇ ಬಂದೂಕನ್ನು ಅವರ ಕೈಗೆ ಇಟ್ಟಾಗ ಆಶ್ಚರ್ಯಗೊಂಡರು. ಅದು ಕಟ್ಟಿಗೆಯಿಂದ ಮಾಡಿದ್ದ ಮಾದರಿಯಾಗಿತ್ತು’ ಎಂದು ವಿಶ್ರಾಮ ಗೌಡ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಳೆದ 15 ವರ್ಷಗಳಿಂದ ಈ ಹವ್ಯಾಸದಲ್ಲಿ ತೊಡಗಿರುವ ಅವರು, ಕೃಷಿಯಲ್ಲಿ ಬಿಡುವು ಸಿಕ್ಕಾಗ ಮನಸ್ಸಿಗೆ ತೋಚಿದ ಗೊಂಬೆಗಳ ಕೆತ್ತನೆಯಲ್ಲಿ ತೊಡಗುತ್ತಾರೆ. ಬೇಡವಾದ ಕಟ್ಟಿಗೆಗಳು, ಅರಣ್ಯ ಇಲಾಖೆಯಿಂದ ಕತ್ತರಿಸಿ ಬಿಟ್ಟು ಹೋದ ಮರದ ಬೇರುಗಳೇ ಅವರ ಕೆತ್ತನೆಯ ಕಚ್ಚಾ ವಸ್ತುಗಳು. ಇತ್ತೀಚೆಗೆ ಕಟ್ಟಿಗೆಯಲ್ಲಿ ಆಕೃತಿ ಮಾಡಿಕೊಡುವಂತೆ ಬಹಳ ಬೇಡಿಕೆ ಬರುತ್ತಿದೆ. ಕಟ್ಟಿಗೆ ಕೊಟ್ಟರೆ ಮಾಡಿಕೊಡುತ್ತೇನೆ. ಖರ್ಚು ವೆಚ್ಚದ ಬಗ್ಗೆ ಇನ್ನೂ ಎಣಿಸಿಲ್ಲ ಎಂದು ವಿಶ್ರಾಮ ಗೌಡ ಮುಗುಳ್ನಗು ಚೆಲ್ಲುತ್ತಾರೆ. ಅವರ ಸಂಪರ್ಕಕ್ಕೆ 9741365152.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT