ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿಲ್ಲದೇ ಒಲಿದ ಕಲೆ

Last Updated 14 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಿದನೂರು ಕೋಟೆ, ಜೋಗ ಜಲಪಾತ, ಹೆಗ್ಗೋಡಿನ ನಿನಾಸಂ ನಾಟ್ಯಕಲಾಮಂದಿರ, ಶಿವಪ್ಪನಾಯಕ ರಾಜನ ಕಾಲದ ದೇವಗಂಗೆ ಈಜುಕೊಳ, ಕೊಡಚಾದ್ರಿ ಪರ್ವತ, ಹಂಪಿಯ ಕಲ್ಲಿನ ರಥ, ವಿಧಾನ ಸೌಧ, ಹೈಕೋರ್ಟ್... ಇಂತಹ ವಿಭಿನ್ನ ಕಣ್ಮನ ಸೆಳೆಯುತ್ತಿರುವ ಈ ರಚನೆಗಳು ಮೂಡಿಬಂದಿರುವುದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತೂದೂರು ಅಬೂಬಕರ್ ಅವರ ಕರಗಳಿಂದ.

ಮೀನು ವ್ಯಾಪಾರ ಮಾಡುವ ತುಂಬು ಕುಟುಂಬದಲ್ಲಿ ಜನಿಸಿ, ಬಡತನದಲ್ಲಿಯೇ ಬೆಳೆದಿರುವ ತೂದೂರು ಅವರದ್ದು ಗುರುವಿನ ನೆರವಿಲ್ಲದ ಕಲೆ. 2001ರಲ್ಲಿ ಸರ್ವಶಿಕ್ಷಣ ಅಭಿಯಾನದ ಯೋಜನೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿವಿಧ ಬಗೆಯ ಶೈಕ್ಷಣಿಕ ಪ್ರಗತಿಯ ಸಮಗ್ರ ಮಾಹಿತಿ ನೀಡುವ ಬೋರ್ಡ್‌ಗಳನ್ನು ಬರೆಯುವ ಅವಕಾಶ ದೊರೆಯಿತು.

ತಾಲ್ಲೂಕು ಆಡಳಿತವು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ನಡೆದ ದಸರಾ ಮಹೋತ್ಸವ­ದಲ್ಲಿ ಆದಿಶೇಷ ಹಾಗೂ ಅಂಬಾರಿ ಹೊತ್ತ ಜಂಬೂ­­ಸವಾರಿಯ ಟ್ಯಾಬ್ಲೋಗಳನ್ನು ರಚಿಸಲು ಅನು ಮಾಡಿಕೊಟ್ಟಿತು. ಬೆಜ್ಜವಳ್ಳಿಯ ಅಯ್ಯಪ್ಪಸ್ವಾಮಿ ದೇವಾಲಯದ ಚಿತ್ರಗಳನ್ನು ರಚಿಸುವ ಅವಕಾಶ ದೊರೆತು ಇವರ ಕಲಾ ನೈಪುಣ್ಯತೆ ನೂರಾರು ಜನರಿಗೆ ಗೋಚರಿಸಿತು.

ಮನೆಗಳಿಗೆ ಪೇಂಟಿಂಗ್‌ ಮಾಡಿ, ತಳ್ಳು ಗಾಡಿಯಲ್ಲಿ ವಿವಿಧ ಖಾದ್ಯ ತಯಾರಿಸಿ ಮಾರುವ ಕಾಯಕದಿಂದ ಬರುವ ಆದಾಯದಲ್ಲಿ ಇವರ ಜೀವನ ಸಾಗಬೇಕು.  ಈ ಕಷ್ಟ ಸಂಕಷ್ಟಗಳ ನಡುವೆಯೂ ಇವರ ಕಲೆಯ ಚತುರತೆ ಮುಂದುವರಿದಿದೆ. ಸರ್ಕಾರ, ಸಂಘಸಂಸ್ಥೆಗಳು ಇವರ ನೆರವಿಗೆ ಬಂದರೆ ಅವರ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳಲಿದೆ.

ನೀರಲ್ಲಿ ನೇತಾರ
ಎಲ್ಲರೂ ನೆಲದ ಮೇಲೆ ರಂಗೋಲಿ ಚಿತ್ತಾರ ಮೂಡಿಸಿದರೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗಿರಿಯಾಲ (ಕೆ.ಬಿ) ಗ್ರಾಮದ ಸಿದ್ಧು ಇಟಗಿ ರಾಷ್ಟ್ರನಾಯಕರು ಹಾಗೂ ದೇವಾನುದೇವತೆಗಳನ್ನು ನೀರಿನ ಮೇಲೆ ಮೂಡಿಸುತ್ತಾರೆ. ನಿಸರ್ಗವೂ ಇವರ ಕೈಯಲ್ಲಿ ನೀರಿನಲ್ಲಿಯೇ ಕಂಗೊಳಿಸುತ್ತದೆ!

ಮರದ ಇದ್ದಿಲನ್ನು ಪುಡಿಯಾಗಿಸಿ ಅದನ್ನು ನೀರಿನ ಮೇಲೆ ಹರಡಿ ಅದರ ಮೇಲೆ ರಂಗೋಲಿ ಮೂಡಿಸಿದರೆ ನೋಡಿದವರು ನಿಬ್ಬೆರಗು. ರಂಗೋಲಿಯನ್ನು ನೀರಿನ ಮೇಲೆ ತೇಲಿಸುತ್ತಾ ಕಲಾಕೃತಿಗಳನ್ನು ರಚಿಸುತ್ತಾರೆ.

ಬಡ ರೈತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಕಲೆಯ ಬಗ್ಗೆ ತುಂಬಾ ಆಸಕ್ತಿಯುಳ್ಳವರು. ಅಕ್ಕಪಕ್ಕದವರ ಮನೆಯ ಬಿಳಿ ಸುಣ್ಣದ ಗೋಡೆಯ ಮೇಲೆ ಮರದ ಇದ್ದಿಲಿನಿಂದ ಚಿತ್ರಮೂಡಿಸಿ ಅವರಿಂದ ಬೈಸಿಕೊಂಡವರು. ಅಪ್ಪ ಕೊಡಿಸಿದ ಹೊಸ ಬಿಳಿ ಬಟ್ಟೆಯ ಮೇಲೆ ಸ್ಕೆಚ್ ಪೆನ್ನಿನಿಂದ ಚಿತ್ರಮೂಡಿಸಿ ಅವರಿಂದ ಏಟು ತಿಂದವರು. ಹೀಗೆ ಏನಾದರೊಂದು ಕೀಟಲೆಯಿಂದ ಕಲೆಯನ್ನು ಕರಗತ ಮಾಡಿಕೊಂಡು ಸಾಕಷ್ಟು ಜನರಿಗೆ ಪರಿಚಿತರಾಗಿದ್ದಾರೆ.

ಚಾಕ್‌ಪೀಸ್‌ನಲ್ಲಿ, ಮರದ ಅಂಟಿನಲ್ಲಿ, ಕಬ್ಬಿನ ಸಿಪ್ಪೆಯಲ್ಲಿ ಮತ್ತು ಬಿದಿರಿನಲ್ಲಿ ಹೀಗೆ ಕಸವಾಗಿ ಬಿಸಾಡಿದ ವಸ್ತುಗಳಿಂದ ಸಾಕಷ್ಟು ಕಲಾಕೃತಿಗಳನ್ನು ರಚಿಸಿದ್ದಾರೆ. ಅನಂತಪುರ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು ಮಕ್ಕಳಿಗೂ ಈ ಕಲೆಯನ್ನು ಕರಗತ ಮಾಡಿಸುತ್ತಿದ್ದಾರೆ. ಸಾಹಿತ್ಯಾಸಕ್ತರಾದ ಇವರು ತಮ್ಮ ಚಿಕ್ಕಪ್ಪನ ಮಗ ತೀರಿಕೊಂಡಾಗ ಅವನ ನೆನಪಿಗಾಗಿ ‘ಅರಳುವ ಮುನ್ನ ಬಾಡಿದ ಹೂ’ ಎಂಬ ಕವನ ಸಂಕಲನವನ್ನು ರಚಿಸಿದ್ದಾರೆ.

ಇವರು ಜಲಯೋಗ ಪರಿಣಿತರು ಕೂಡ. ಸ್ನೇಹಿತ ಮಲ್ಲಿಕಾರ್ಜುನ ಅಣ್ಣಪ್ಪಾ ಗೋಡಕಾರ ಅವರ ಜೊತೆಗೂಡಿ ನೀರಿನಲ್ಲಿ ಗಂಟೆಗಟ್ಟಲೆ ತೇಲುತ್ತಾ ಯೋಗಾಸನ ಮಾಡುವಲ್ಲಿಯೂ ಸಿದ್ಧಹಸ್ತರು. ನೀರಿನ ಮೇಲೆ ತೇಲುತ್ತಾ ಪದ್ಮಾಸನ, ಮರ್ಕಟಾಸನ, ಅಂಗುಷ್ಠಾಸನ ಮುಂತಾದ ಯೋಗಾಸನಗಳನ್ನು ಮಾಡಿದರೆ ನೋಡುಗರು ನಿಬ್ಬೆರಗು. ಆಸಕ್ತರಿಗೆ ಉಚಿತವಾಗಿ ಜಲಯೋಗ ತರಬೇತಿಯನ್ನು ನೀಡುತ್ತಿದ್ದಾರೆ.

ಈಜುಕೊಳ ಇಲ್ಲದಿರುವುದರಿಂದ ತಮ್ಮ ಗದ್ದೆಯಲ್ಲಿರುವ ಕೃಷಿ ಹೊಂಡದಲ್ಲೇ ಜಲಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ. ನೆಲದ ಮೇಲೆ  5 ಗಂಟೆಗಳಲ 45 ಅಡಿ ವಿಸ್ತಾರದ ಸುಭಾಸ್ ಚಂದ್ರ ಬೋಸ್ ರವರ ರಂಗೋಲಿ ಬಿಡಿಸಿರುವ ಇವರು ಇದನ್ನೇ ಇನ್ನೂ ದೊಡ್ಡ ಆಕಾರದಲ್ಲಿ ನೀರಿನಲ್ಲಿ ಬಿಡಿಸುವ ತವಕದಲ್ಲಿದ್ದು, ಆಯೋಜಕರಿಗಾಗಿ ಕಾಯುತ್ತಿದ್ದಾರೆ.
ಸಂಪರ್ಕಕ್ಕೆ 9538424311.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT