ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣದ ನಡುವೆ ಪಶ್ಚಿಮ ಘಟ್ಟ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಹಲವು ಕಾಮಗಾರಿಗಳು ಪಶ್ಚಿಮ ಘಟ್ಟದ ಚೆಲುವನ್ನು ಕಸಿದುಕೊಳ್ಳುವುದರೊಂದಿಗೆ ಇಲ್ಲಿನ ಜನಜೀವನವನ್ನೂ ಬುಡಮೇಲು ಮಾಡಿವೆ. ಈ ಯೋಜನೆಗಳ ಸರಮಾಲೆಗೆ ಸಿಲುಕಿ ಹೆಣಗಾಡುತ್ತಿರುವ ಜನರಿಗೆ ‘ಎತ್ತಿನ ಹೊಳೆ ನದಿ ತಿರುವು ಯೋಜನೆ’ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹತ್ತಾರು ಮೈಲು ದೂರ ಶ್ರಮಿಸಿದರೂ ನೋಡಲು ಸಿಗದ ಕಡವೆ, ಕಾಡೆಮ್ಮೆ, ಕಾಡಾನೆ ಕೆಂಚಳಿಲು ಈಗ ಮನೆ ಬಾಗಿಲಲ್ಲಿರುವ ಹೂವಿನ ಗಿಡಗಳನ್ನು ತಿಂದು ಹೋಗುತ್ತಿವೆ. ನಮ್ಮ ತಾತ, ಮುತ್ತಾತರೇ ಕಂಡಿರದ ಮಲೇ ಸರ್ಪ (ಕಾಳಿಂಗ ಸರ್ಪ) ಕೆರೆ ಹಾವಿನಂತೆ ಊರೊಳಗೇ ಬೀಡುಬಿಟ್ಟಿವೆ. ಈ ಹಿಂದೆ ನರಿ ಕೂಗಿದರೆ ಹತ್ತಾರು ಮೈಲಿಗೆ ಕೇಳಿಸುತ್ತಿತ್ತು, ಈಗ ಕೋಳಿಗಳೂ ಬೆಚ್ಚದ ಪರಿಸ್ಥಿತಿ. ಕಾಡಿನಲ್ಲಷ್ಟೇ ಇರಬೇಕಿದ್ದ ವನ್ಯಜೀವಿಗಳು ಊರೊಳಗೆ ಪ್ರತ್ಯಕ್ಷವಾಗಿ ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮೇಲೆರಗುತ್ತಿವೆ!

ಇದು ಪಶ್ಚಿಮ ಘಟ್ಟದ ತಪ್ಪಲಿನ ದಿನನಿತ್ಯದ ಚಿತ್ರಣ. ನೂರಾರು ವರ್ಷಗಳಿಂದ ಕೃಷಿ ಮಾಡಿ ಬದುಕುತ್ತಿರುವ ಜನರಲ್ಲಿ ಸೃಷ್ಟಿಸಿರುವ ಆತಂಕದ ಕಥೆ. ಮೌನದಲ್ಲಿದ್ದ ಪಶ್ಚಿಮಘಟ್ಟ ಪ್ರದೇಶದ ಜನರಲ್ಲಿ ಉಂಟಾಗಿರುವ ತಲ್ಲಣ.

ಇದಕ್ಕೆಲ್ಲಾ ಕಾರಣ ಪರಿಸರದಲ್ಲಿನ ಅಸಮತೋಲನ, ಮೇಲಿಂದ ಮೇಲೆ ಜಾರಿಯಾಗುತ್ತಿರುವ ಯೋಜನೆಗಳ ಪ್ರಭಾವ. ಘೋರಾರಣ್ಯದ ನಡುವಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲು ಸಂಚಾರ, ಹೈ ಟೆನ್ಷನ್‌ ಲೈನ್, ಪೆಟ್ರೋಲ್ ಪೈಪ್‌ಲೈನ್, ಗ್ಯಾಸ್ ಪೈಪ್‌ಲೈನ್ ಸ್ಥಾಪಿಸಿರುವುದು ಇಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿಮಾಡಿದೆ. ಕಾಡಿನ ನಡುವೆ ಇದ್ದ ಕೆಂಪುಹೊಳೆಗೆ ಜಲವಿದ್ಯುತ್ ತಯಾರಿಕೆ ಹೆಸರಿನಲ್ಲಿ ಅಣೆಕಟ್ಟು ಕಟ್ಟಿದ್ದರಿಂದ ಕೆಂಪುಹೊಳೆ ಅಲ್ಲದೆ ಅದರ ಉಪನದಿಗಳು ಬತ್ತಿಹೋಗಿವೆ. ಕಾಡೊಳಗೆ ಶುದ್ಧ ನೀರು ಸಿಗದ ಸ್ಥಿತಿ ಎದುರಾಗಿದೆ.

ಗುಡ್ಡಗಳನ್ನೇ ಕೊರೆದು ರಾಷ್ಟ್ರೀಯ ಹೆದ್ದಾರಿ ಮಾಡುವ ಯೋಜನೆಗೂ ತಯಾರಿ ನಡೆಯುತ್ತಿದೆ.
ಇಷ್ಟೆಲ್ಲ ಸಹಿಸಿಕೊಳ್ಳಲು ಹೆಣಗಾಡುತ್ತಿದ್ದ ಜನರ ಗಾಯದ ಮೇಲೆ ಬರೆ ಎಳೆದಂತೆ ಈಗ ಎತ್ತಿನ ಹೊಳೆ ನದಿ ತಿರುವು ಯೋಜನೆ. ಈ ಯೋಜನೆಯಿಂದಾಗಿ ನೂರಾರು ಎಕರೆ ಅರಣ್ಯ ನಾಶವಾಗಲಿದೆ. ಅರಣ್ಯವನ್ನೇ ಇಬ್ಭಾಗ ಮಾಡುವ ಯೋಜನೆಗೆ ಕೈ ಹಾಕಲಾಗಿದೆ. ಇಷ್ಟೆಲ್ಲಾ ದಬ್ಬಾಳಿಕೆಯ ನಡುವೆ ಆನೆ ಕಾರಿಡಾರ್ ಯೋಜನೆಯ ಪರಿಕಲ್ಪನೆಯೂ ಸರ್ಕಾರದ ಮುಂದಿದೆ.

ಸಮುದ್ರಕ್ಕೇ ಸವಾಲು ಹಾಕಿರುವ ನದಿ ತಿರುವು ಯೋಜನೆಗೆ ಕನಿಷ್ಠ 500 ಎಕರೆ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದ ಅರಣ್ಯ ಬಲಿಯಾಗಲಿದೆ. ಈ ಯೋಜನೆಯಿಂದ ಮಳೆಗಾಲದಲ್ಲಿ ಧುಮ್ಮಿಕ್ಕುವ ಝರಿತೊರೆಗಳು ಮುಂದಿನ ದಿನಗಳಲ್ಲಿ ಕಾಣೆಯಾದರೂ ಅನುಮಾನವಿಲ್ಲ. ಅರಣ್ಯದೊಳಗಿನ ವಿವಿಧತೆ ಎಂಬುದು ಪ್ರತಿ ಎರಡು ಮೈಲು ಅಂತರಕ್ಕೆ ವ್ಯತ್ಯಾಸವಿದೆ. ನೇತ್ರಾವತಿ ನದಿಗೆ ಅಡ್ಡವಾಗಿ ಕಟ್ಟಿದ ತುಂಬೆ ವೆಂಡರ್ ಡ್ಯಾಮ್‌ನಿಂದ ಆಸುಪಾಸಿನ ಕೆರೆ ಕಟ್ಟೆ ಬಾವಿಗಳ ನೀರು ನಸು ಉಪ್ಪು ರುಚಿಗೆ ತಿರುಗಿದೆ. ಈ ಹಿಂದೆ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಈ ಬದಲಾವಣೆ ಕಾಣಿಸುತ್ತಿತ್ತು. ಈಗ ಡಿಸೆಂಬರ್ ತಿಂಗಳಲ್ಲೇ ಉಪ್ಪಾಗುತ್ತಿದೆ. ಇದು ನಾಡಿನ ಎದುರಲ್ಲಿರುವ ಪ್ರತ್ಯಕ್ಷ ಸತ್ಯ. ನದಿ ನೀರು ಸಾಗರವ ಸೇರಿದರೆ ತಪ್ಪೇನು? ಸಮುದ್ರದ ಸಮತೋಲನ ಕಾಯ್ದುಕೊಳ್ಳಲು ಸಿಹಿ ನೀರೂ ಬೇಕು.

ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು. ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು. ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ. ಮೌನವಾಗಿರುವ ಅರಣ್ಯದೊಳಗೆ ಬೃಹದಾಕಾರದ ವಾಹನಗಳಿಂದ ಈ ಕೆಲಸ ಕಾರ್ಯಗಳು ಸಾಗುವುದರಿಂದ ಕಾಡು ಜೀವಿಗಳ ಪಾಡೇನು?

ಈಗಾಗಲೇ ಜೆಸಿಬಿ ಯಂತ್ರಗಳಿಂದ ದೊಡ್ಡ ದೊಡ್ಡ ಹೊಂಡಗಳನ್ನೇ ಮಾಡಲಾಗಿದ್ದು, ಈ ಹೊಂಡಕ್ಕೆ ಬಿದ್ದ ಕಾಡಾನೆ ಮೊದಲ ಬಲಿಯಾಗಿದೆ. ಇನ್ನು ಸಣ್ಣ ಪುಟ್ಟ ಪ್ರಾಣಿಗಳ ಗತಿ ದೇವರೇ ಬಲ್ಲ ಎನ್ನುತ್ತಾರೆ ಕ್ಯಾನಳ್ಳಿ ಗ್ರಾಮಸ್ಥರು. ‘ಈ ಯೋಜನೆಗೆ ಕಸ್ತೂರಿ ರಂಗನ್ ವರದಿ ಅಡ್ಡಿ ಬರುವುದಿಲ್ಲವೆ?’ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಕಾರ್ಯದರ್ಶಿಗಳಾದ ಎಂ.ಹೆಚ್.ಪ್ರಕಾಶ್ ಪ್ರಶ್ನಿಸುತ್ತಾರೆ.

ತಜ್ಞರ ಅಭಿಪ್ರಾಯ
ಕೃಷಿ ಹೆಸರಿನಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದ್ದು, ಹತ್ತಾರು ನಗರಗಳಿಗೆ ಕುಡಿಯುವ ನೀರಿನ ಜೊತೆಗೆ ಕೃಷಿಗೂ ನೀರು ಒದಗಿಸಲಾಗುವುದೆಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ರಾಜ್ಯದ ಹಾಗೂ ದೇಶದ ಶೇ 65 ಭಾಗ ಒಣ ಭೂಮಿ ಬೇಸಾಯ ಮಾಡಲಾಗುತ್ತಿದೆ. ನೀರಾವರಿ (ನಾಲಾನೀರು) ಆಶ್ರಯಿಸಿ ಬೆಳೆ ಬೆಳೆಯುತ್ತಿರುವುದರಿಂದ ಕೃಷಿಯ ವೈವಿಧ್ಯ ನಾಶವಾಗಿದೆ. ಮಂಡ್ಯ ಭಾಗದಲ್ಲಿ ನಾಲಾನೀರು ಬರುವ ಮೊದಲು ಹತ್ತಾರು ನಮೂನೆಯ ಬೆಳೆ ಬೆಳೆಯಲಾಗುತ್ತಿತ್ತು. ಈಗ ಕೇವಲ ಭತ್ತ, ಕಬ್ಬು ಬೆಳೆಗೆ ಸೀಮಿತವಾಗಿದೆ. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಕೋಟಿ ಹಣ ಖರ್ಚುಮಾಡಿ ಕಟ್ಟಿದ ಅಣೆಕಟ್ಟೆಯ ನೀರಿಂದ ಬೆಳೆಯುತ್ತಿರುವ ಬೆಳೆ ಕಬ್ಬು, ಅಲ್ಲಿನ ಸಕ್ಕರೆ ಕಾರ್ಖಾನೆಗಳೆಲ್ಲಾ ಪ್ರಭಾವಿ ರಾಜಕಾರಣಿಗಳದ್ದೇ. ಕಬ್ಬಿನ ಉಳಿದ ಭಾಗದಿಂದ ತಯಾರಾಗುವ ಮದ್ಯವನ್ನು ತಯಾರಿಸುವ ಘಟಕಗಳೂ ರಾಜಕಾರಣಿಗಳ ಅಧೀನದಲ್ಲಿವೆ. ಅಂತೂ ನೀರಾವರಿಯ ಸಂಪೂರ್ಣ ಲಾಭ ಬಂಡವಾಳಶಾಹಿಗಳಿಗೇ ಹೊರತು ಬಡ ರೈತರಿಗಿಲ್ಲ ಎಂಬುದು ಗಮನಾರ್ಹ.

ಕಿರುಧಾನ್ಯಗಳಿಗೆ ಉತ್ತೇಜನ
ದೇಶಕ್ಕೆ ಯಥೇಚ್ಛವಾಗಿ ಬೇಕಿರುವ ಎಣ್ಣೆ ಕಾಳು, ಬೇಳೆ, ಕಿರುಧಾನ್ಯಗಳನ್ನು ಬೆಳೆಯುತ್ತಿರುವುದು ಒಣ ಭೂಮಿಯಲ್ಲಿ. ಎಣ್ಣೆ ಕಾಳುಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ಲಕ್ಷಾಂತರ ಕೋಟಿ ಹಣವನ್ನು ಪ್ರತಿ ವರ್ಷ ವ್ಯಯ ಮಾಡಲಾಗುತ್ತಿದೆ.
ನದಿ ತಿರುವು, ಅಣೆಕಟ್ಟೆ, ನಾಲಾಗಳಿಂದ ಕೃಷಿಯಲ್ಲಿನ ವಿವಿಧತೆಯನ್ನು ಕೊಲೆ ಮಾಡಿದಂತಾಗುತ್ತದೆ. ಇವುಗಳನ್ನು ನಿರ್ಮಿಸುವ ಬದಲು ಕಿರುಧಾನ್ಯ ಬೆಳೆಗಳಿಗೆ ಉತ್ತೇಜನ ನೀಡಿದರೆ ಸಾಕು. ರಾಜ್ಯದ ರೈತರ ಬದುಕು ಹಸನಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದಲ್ಲಿ ಮಳೆನೀರು ಸಂಗ್ರಹ ಯೋಜನೆಯನ್ನು ಕಡ್ಡಾಯಗೊಳಿಸಿ ಬೋಳು ಗುಡ್ಡಗಳಲ್ಲಿ ಗಿಡ ಮರಗಳನ್ನು ಬೆಳೆಸಿದರೆ ಬರಗಾಲ ಹತ್ತಿರ ಸುಳಿಯದು ಎನ್ನುತ್ತಾರೆ ಆಹಾರ ತಜ್ಞರಾದ
ಕೆ.ಸಿ. ರಘು.

ಎತ್ತಿನ ಹೊಳೆ ಯೋಜನೆ ವರದಿ

ಈ ಯೋಜನೆ ಆರಂಭಿಸಲು ಸರ್ಕಾರ ನೀಡಿರುವ ಮಾಹಿತಿ ಹೀಗಿದೆ: ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಲ್ಲಿ ನೀರಿನ ತೀವ್ರ ಅಭಾವದ ಹಿನ್ನೆಲೆಯಲ್ಲಿ, ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸುವ ದೃಷ್ಟಿಯಿಂದ ಯಾವುದೇ ಅಂತರರಾಜ್ಯ ವಿವಾದಗಳಿಲ್ಲದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಈ ಭಾಗದ ಪ್ರದೇಶಗಳಿಗೆ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ) ಪೂರೈಸಲು ನಿರ್ಧರಿಸಲಾಗಿದೆ.

ಯೋಜನೆಯ ವಿವರಗಳು; ಈ ಯೋಜನೆಯಲ್ಲಿ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆಗೆ 4, ಕಾಡುಮನೆಹೊಳೆಗೆ 2, ಕೇರಿಹೊಳೆಗೆ 2, ಹೊಂಗಡಹಳ್ಳಕ್ಕೆ 2, ಒಟ್ಟು 8 ಬ್ಯಾರೇಜ್‌ಗಳನ್ನು ನಿರ್ಮಿಸಲಾಗುವುದು. ಈ ಬ್ಯಾರೇಜ್‌ಗಳಿಂದ ಎತ್ತುವ ನೀರನ್ನು ಹೆಚ್ಚಿನ ಭೂಸ್ವಾಧೀನವಾಗದಂತೆ ಎಚ್ಚರವಹಿಸಿ ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ರೈಲ್ವೆ ಮತ್ತು ರಸ್ತೆ ಮಾರ್ಗಗಳ ಪಕ್ಕದಲ್ಲಿಯೇ ಸಮನಾಂತರವಾಗಿ ಭೂಮಿಯೊಳಗೆ ಹೂತು ಹಾಕಲಾಗುವ ಪೈಪ್‌ಗಳ ಮುಖಾಂತರ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರನ್ನು ಕೊಂಡೊಯ್ಯಲಾಗುವುದು.

ಸುಮಾರು 274 ಕಿ.ಮೀ. ಉದ್ದದ ಗುರುತ್ವ ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಕೊರಟಗೆರೆ ತಾಲ್ಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಲು ಯೋಜಿಸಲಾಗಿದೆ. ವಾರ್ಷಿಕ 24.01 ಟಿ.ಎಂ.ಸಿ ನೀರನ್ನು ಸಕಲೇಶಪುರದಿಂದ ರಾಜ್ಯದ ಪೂರ್ವಭಾಗಕ್ಕೆ ತಿರುಗಿಸುವ ಎತ್ತಿನಹೊಳೆ ಯೋಜನೆಗೆ
ರೂ 12912.36 ಕೋಟಿ ವೆಚ್ಚವಾಗಲಿದೆ.
ಈ ಯೋಜನೆಯ ಏತಕಾಮಗಾರಿಗಳಿಗೆ ಮೊದಲನೆ ಹಂತವಾಗಿ ಒಟ್ಟು 235.65 ಹೆಕ್ಟೇರ್ ಭೂಮಿ ಅವಶ್ಯವಿದೆ. ಎರಡನೇ ಹಂತದ ಕಾಮಗಾರಿಗೆ 4900 ಹೆಕ್ಟೇರ್ ಭೂಮಿ ಅವಶ್ಯವಿದೆ. ಯೋಜನೆಯಿಂದ ಸುಮಾರು 68.35ಲಕ್ಷ ಜನ ಪ್ರಯೋಜನ ಪಡೆಯಲಿದ್ದಾರೆ. ಏತ ಕಾಮಗಾರಿಗೆ ಒಟ್ಟು 274.86 ಮೆಗಾ ವ್ಯಾಟ್ ವಿದ್ಯುತ್ತಿನ ಅವಶ್ಯವಿದೆ.

ಊರು ತೊರೆಯುವ ನಿರ್ಧಾರ!
ಎತ್ತಿನಹೊಳೆ ಯೋಜನೆಯಿಂದಾಗಿ ನೂರಾರು ಕಾಫಿ ಬೆಳೆಗಾರರು ನಿರಾಶ್ರಿತರಾಗಲಿದ್ದಾರೆ. ಅಲ್ಲದೇ ಇಲ್ಲಿನ ಕೃಷಿಕರ ಜಮೀನಿಗೆ ಉತ್ತಮ ಪರಿಹಾರ ನೀಡಿದರೆ ಊರನ್ನೇ ಬಿಟ್ಟು ಹೋಗಲು ಸಜ್ಜಾಗಿದ್ದಾರೆ. ಮಲೆನಾಡು ಭಾಗದ, ಅದರಲ್ಲೂ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು, ಸರ್ಕಾರಿ ಸೌಲಭ್ಯ ವಂಚಿತ ತಾಲ್ಲೂಕೆಂದರೆ ತಪ್ಪಿಲ್ಲ. ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿಲ್ಲ, ನೀರಿನ ಸೌಲಭ್ಯವಿಲ್ಲ, ಸರಿಯಾದ ವಿದ್ಯುತ್ ಸಂಪರ್ಕವಿಲ್ಲ, ಒತ್ತುವರಿ ಸಮಸ್ಯೆ, ಅಧಿಕ ಮಳೆಯಿಂದಾಗಿ ಪ್ರತಿ ವರ್ಷ ಬೆಳೆಹಾನಿ, ಬೆಲೆಕುಸಿತ, ಕಾರ್ಮಿಕರ ಸಮಸ್ಯೆ, ನಕ್ಸಲ್ ಹಾವಳಿ, ಕಾಡಿನಲ್ಲಿ ನಡೆಯುವ ಬೃಹತ್ ಯೋಜನೆಗಳಿಂದ ಪ್ರಾಣಿಗಳು ಕಾಡು ತೊರೆದು ಕೃಷಿ ಭೂಮಿಗೆ ದಾಳಿ, ಸರ್ಕಾರಿ ಅಧಿಕಾರಿಗಳ ದಬ್ಬಾಳಿಕೆ ಹೀಗೆ ಹತ್ತಾರು ಸಮಸ್ಯೆಗಳಲ್ಲಿ ಗ್ರಾಮಸ್ಥರು ದಿನದೂಡುತ್ತಿದ್ದಾರೆ. ತಮ್ಮ ಜಮೀನಿಗೆ ಸೂಕ್ತ ಬೆಲೆ ನೀಡಿದರೆ ಮಲೆನಾಡು ತೊರೆದು ಹೊರ ಹೋಗಲು ತಯಾರಾಗಿರುವ ಒಂದು ವರ್ಗವಿದ್ದರೆ, ನದಿ ತಿರುವು ಯೋಜನೆಯನ್ನು ವಿರೋಧಿಸುವ ಇನ್ನೊಂದು ವರ್ಗವೂ ಪ್ರತಿಭಟನೆಗೆ ಸಜ್ಜಾಗಿದೆ.

ಜಲ ತಜ್ಞರ ಅಭಿಪ್ರಾಯ
ಅರಣ್ಯ ನಾಶಗೊಳಿಸಿ ಎತ್ತಿನಹೊಳೆ ತಿರುವು ಯೋಜನೆ ರೂಪುಗೊಳಿಸುವುದು ಪಶ್ಚಿಮಘಟ್ಟಕ್ಕೇ ಮಾರಕ ಎನ್ನುತ್ತಾರೆ ಜಲತಜ್ಞರಾದ ಅಯ್ಯಪ್ಪ ಮಸಗಿ. ಈ ಹಿಂದೆ ಕುದುರೆಮುಖ ಅರಣ್ಯದಲ್ಲಿ ಗಣಿಗಾರಿಕೆ ಮಾಡಿದ್ದರಿಂದ ಹತ್ತು ವರ್ಷಗಳ ಕಾಲ ಆ ಭಾಗದಲ್ಲಿ ಸರಿಯಾಗಿ ಮಳೆಯಾಗಲಿಲ್ಲ. ಲಿಂಗನ ಮಕ್ಕಿ ಜಲಾಶಯ ತುಂಬಲಿಲ್ಲ. ನೀರಿನ ಅಭಾವ ನೀಗಿಸುವುದು ಅವಶ್ಯ. ಆದರೆ ಪರಿಸರವನ್ನು ನಾಶಮಾಡಿ ಕಾರ್ಯಸಾಧಿಸುವುದು ನಾಡಿಗೇ ಒಳಿತಲ್ಲ. ಇದರ ಪರಿಣಾಮ ಮುಂದೊಂದು ದಿನ ಮಲೆನಾಡಿಗರಿಗೇ ಮಾರಕವಾಗಲಿದೆ ಎನ್ನುತ್ತಾರೆ ಅವರು.

ಕೋಲಾರ, ಮುಳಬಾಗಿಲು ಪ್ರದೇಶದಲ್ಲಿನ ಕುಡಿಯುವ ನೀರಿನ ಅಭಾವ ಕಂಡರೆ ಯಾವುದೇ ಯೋಜನೆಗಳನ್ನು ವಿರೋಧಿಸಲು ಮನಸ್ಸಾಗುವುದಿಲ್ಲ. ಮಳೆಯ ಅಭಾವದಿಂದಾಗಿ ಕೆರೆ, ಕಟ್ಟೆಗಳು, ಸಾವಿರಾರು ಕೊಳವೆ ಬಾವಿಗಳು ಬತ್ತಿದ್ದರಿಂದ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆಯ ವರದಿಯಲ್ಲಿ ಕಾಣಿಸಿರುವಂತೆ ಹರಿಯುವ ಹಳ್ಳಗಳಿಗೆ ಒಡ್ಡುಗಳನ್ನು ನಿರ್ಮಿಸಿ ಮೋಟರ್‌ಗಳ ಸಹಾಯದಿಂದ ಆ ನೀರನ್ನು ಮೇಲೆತ್ತಿ ನೂರಾರು ಮೈಲು ದೂರಕ್ಕೆ ಸಾಗಿಸುವ ಯೋಜನೆ ಫಲ ನೀಡದು. ಕಾಡು ಕಡಿದು ನೀರೆತ್ತುವುದು ಅದೆಷ್ಟು ಸರಿ. ಈ ಯೋಜನೆ ಈಗ ಕಾರ್ಯಗತಗೊಂಡರೂ ಮುಂದಿನ ದಿನಗಳಲ್ಲಿ ಲೋಪದೋಷಗಳೇ ಹೆಚ್ಚಾಗಿ ವಿಫಲವಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಪರಿಸರ ಪ್ರಿಯರಾದ ರಂಗನಾಥ ಗೌಡ್ರು.

ಈ ಭಾಗಗಳಲ್ಲಿ ಜಲಮಟ್ಟ ಕುಗ್ಗಲು ಮುಖ್ಯ ಕಾರಣ ಸಾವಿರಾರು ಎಕರೆಯಲ್ಲಿ ಬೆಳೆದಿರುವ ನೀಲಗಿರಿ ತೋಪುಗಳು. ಇದಕ್ಕೆ ಸವಾಲೆಂಬಂತೆ ಆದಿಚುಂಚನಗಿರಿ ಸಂಸ್ಥಾನದ ಕೋಲಾರ ಸಮೀಪದ ನಲವತ್ತು ಎಕರೆ ಬರಡು ಭೂಮಿಯಲ್ಲಿ ದೇಶೀಯ ಮರಗಳಾದ ನೇರಳೆ, ಹಲಸು, ನೆಲ್ಲಿ, ಹೊಂಗೆಯಂತಹ ಸಾವಿರಾರು ಮರಗಳನ್ನು ಬೆಳೆಸಲು ಶ್ರಮವಹಿಸಿರುವ ರಂಗನಾಥಗೌಡರ ತಂಡ ಮಳೆನೀರು ಹಿಡಿದಿಟ್ಟುಕೊಳ್ಳುವ ಕೆಲಸವನ್ನೂ ಮಾಡಿ ಅಂತರ್ಜಲಮಟ್ಟ ಕಾಯ್ದುಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT