ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯ ದರ್ಶನ: ನಂಜನಗೂಡಿನ ಶ್ರೀಕಂಠೇಶ್ವರ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ನಂಜನಗೂಡಿನ ಶ್ರೀ ಕಂಠೇಶ್ವರ ಸನ್ನಿಧಿ ‘ದಕ್ಷಿಣ ಕಾಶಿ’ ಎಂದೇ ಹೆಸರುವಾಸಿ. ಇದು ದಕ್ಷಿಣ ಭಾರತದ ಪ್ರಸಿದ್ಧ  ಶಿವ ಕ್ಷೇತ್ರಗಳಲ್ಲಿ ಒಂದು.

ಶ್ರೀಕಂಠೇಶ್ವರ ದೇವಸ್ಥಾನ ವಿಶಿಷ್ಟ ವಾಸ್ತು ಶೈಲಿಗೆ ಹೆಸರಾಗಿದೆ. ದೇವಸ್ಥಾನ 424 ಅಡಿ ಉದ್ದ, 159 ಅಡಿ ಅಗಲವಿದೆ. ಕರ್ನಾಟಕದ ಅತ್ಯಂತ ಉದ್ದನೆಯ ದೇವಸ್ಥಾನ ಎಂಬ ಖ್ಯಾತಿ ಪಡೆದಿದೆ. ಮುಂಭಾಗದ ರಾಜಗೋಪುರದ ಎತ್ತರ 120 ಅಡಿಗಳು, ತಳಭಾಗ 53 ಅಡಿ ಅಗಲ ಹಾಗೂ 46 ಅಡಿಗಳಷ್ಟು ಉದ್ದವಿದೆ. ಗೋಪುರ ಏಳು ಅಂತಸ್ತುಗಳಲ್ಲಿದೆ.

ನಂಜನಗೂಡು ಪುರಾಣ ಕಾಲದಲ್ಲಿ ದಂಡಕಾರಣ್ಯವಾಗಿತ್ತು. ಶ್ರೀಕಂಠೇಶ್ವರ ಸ್ವಾಮಿ ಕೇಶಿ ಎಂಬ ರಾಕ್ಷಸನನ್ನು ಸಂಹಾರ ಮಾಡಿದಾಗ ಅವನ ದೇಹದಲ್ಲಿದ್ದ ವಿಷವು ಭೂಮಿಯಲ್ಲಿ ವ್ಯಾಪಿಸಿದ ಕಾರಣ ಈ ಪ್ರದೇಶಕ್ಕೆ ‘ಗರಳಪುರಿ’ ಕ್ಷೇತ್ರ ಎಂಬ ಹೆಸರಿತ್ತು. ಕಪಿಲಾ ಮತ್ತು ಕೌಂಡಿನ್ಯ (ಗುಂಡ್ಲು ನದಿ) ನದಿಗಳ ಸಂಗಮ ಸ್ಥಳದ ದಂಡೆ ಮೇಲೆ ಶ್ರೀಕಂಠೇಶ್ವರ ದೇವಸ್ಥಾನವಿದೆ. ಇಲ್ಲಿ ವರ್ಷಕ್ಕೆ ಎರಡು ಸಲ ಜಾತ್ರೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ಸ್ವಾಮಿಯ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತವಾಗುತ್ತದೆ ಎಂಬ ಪ್ರತೀತಿ ಇದೆ.

ಅನೇಕ ದೋಷಗಳ ಪರಿಹಾರಕ್ಕಾಗಿ ಜನರು ಶ್ರೀಕಂಠೇಶ್ವರನ ಸನ್ನಿಧಿಗೆ ಬರುತ್ತಾರೆ. ಏಕವಾರ ರುದ್ರಾಭಿಷೇಕ, ಕ್ಷೀರಾಭಿಷೇಕ,ಅಂಗಾರಕ ದೋಷ ಪರಿಹಾರಕ್ಕಾಗಿ ಪಾರ್ವತಿ ಹಾಗೂ ಶ್ರೀಕಂಠೇಶ್ವರನಿಗೆ ಎಳ್ಳು ಪೂಜೆ, ಪಂಚಾಮೃತ ಅಭಿಷೇಕ, ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ, ಶನಿ ದೇವರಿಗೆ ಎಳ್ಳು ದೀಪ ಹಚ್ಚುವ ಸೇವೆ, ನವಗ್ರಹ ಪೂಜೆ ಇತ್ಯಾದಿಗಳು ಇಲ್ಲಿ ನಿತ್ಯ ನಡೆಯುತ್ತವೆ.

ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಶ್ರೀಕಂಠೇಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರಸ್ವಾಮಿ ಉತ್ಸವಗಳು ಪ್ರತ್ಯೇಕವಾದ ಪಂಚ ರಥಗಳಲ್ಲಿ ಜರುಗುತ್ತವೆ. ಈ ಬಗೆಯ ಐದು ರಥೋತ್ಸವಗಳು ಭಾರತದ ಬೇರಾವ ಭಾಗದಲ್ಲೂ ಕಂಡು ಬರುವುದಿಲ್ಲ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಿಕ್ಕಜಾತ್ರೆಯಲ್ಲಿ ಮೂರು ರಥಗಳ ಉತ್ಸವ ನಡೆಯುತ್ತದೆ.

ನಂಜನಗೂಡಿನಲ್ಲಿ ಪರಶುರಾಮ, ಚಾಮುಂಡೇಶ್ವರಿ, ಲಿಂಗಾಭಟ್ಟರ ಕಾಶಿ ವಿಶ್ವನಾಥೇಶ್ವರ, ರಾಘವೇಂದ್ರಸ್ವಾಮಿ ಮೂಲ ಮಠ, ಶಂಕರಮಠ, ಕನ್ನಿಕಾ ಪರಮೇಶ್ವರಿ, ಚಿಕ್ಕಯ್ಯನ ಛತ್ರದ ಪ್ರಸನ್ನ ನಂಜುಂಡೇಶ್ವರ ಹಾಗೂ ಕಪಿಲಾ ನದಿತೀರದಲ್ಲಿರುವ ಶಬರಿಮಲೆ ಮಾದರಿಯ ಅಯ್ಯಪ್ಪಸ್ವಾಮಿಯ ದೇವಸ್ಥಾನ ಸೇರಿ ಹಲವಾರು ದೇವಾಲಯಗಳು ನಂಜನಗೂಡಿನಲ್ಲಿವೆ.

ಭಕ್ತರಿಗೆ ದೇವಸ್ಥಾನದ ವತಿಯಿಂದ ನಿತ್ಯ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯುತ್ತದೆ. ಶನಿವಾರ, ಭಾನುವಾರ ರಾತ್ರಿ ಮತ್ತು ಹುಣ್ಣಿಮೆಯ ಹಿಂದಿನ ರಾತ್ರಿ ಅನ್ನ ಸಂತರ್ಪಣೆ ನಡೆಯುತ್ತದೆ. ಭಕ್ತರೂ ಅನ್ನ ಸಂತರ್ಪಣೆಯ ಸೇವಾಕರ್ತರಾಗಲು ಅವಕಾಶವಿದೆ.

ದೇವಸ್ಥಾನ ಬೆಳಿಗ್ಗೆ 6 ಗಂಟೆಗೆ ತೆರೆಯುತ್ತದೆ. ರಾತ್ರಿ 9 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ನಿತ್ಯ ಬೆಳಿಗ್ಗೆ 6.30, 9.00, 11.00, ಮಧ್ಯಾಹ್ನ 12ಕ್ಕೆ, ಸಂಜೆ 5.30 ಮತ್ತು ರಾತ್ರಿ 8 ಗಂಟೆಗೆ ಅಭಿಷೇಕ ಹಾಗೂ ಪೂಜೆಗಳು ನಡೆಯುತ್ತವೆ.

ನಂಜನಗೂಡಿಗೆ ದಾರಿ
ನಂಜನಗೂಡಿಗೆ ಬಸ್ ಸೌಕರ್ಯವಿದೆ. ರೈಲು ಮೂಲಕ ಬರುವವರು ಮೈಸೂರು- ಚಾಮರಾಜನಗರದಿಂದ ಬರಬಹುದು. ಮೈಸೂರಿನಿಂದ ಪ್ರತಿ 5 ನಿಮಿಷಗಳಿಗೊಮ್ಮೆ ನಂಜನಗೂಡಿಗೆ ಬಸ್ ಸೌಲಭ್ಯವಿದೆ. ಅರ್ಧ ಗಂಟೆಗೊಮ್ಮೆ ವೋಲ್ವೊ ಬಸ್‌ಗಳಿವೆ. ದೇವಸ್ಥಾನಕ್ಕೆ ಸೇರಿದ ಗಿರಿಜಾ ಕಲ್ಯಾಣ ಮಂದಿರದಲ್ಲಿ 28 ಕೊಠಡಿಗಳು (ಬಾಡಿಗೆ ದಿನಕ್ಕೆ ರೂ 50), 32 ಡಾರ್ಮಿಟರಿಗಳಿವೆ (ಒಂದಕ್ಕೆ ದಿನದ ಬಾಡಿಗೆ ರೂ 125), ವಿಐಪಿ ಕಾಟೇಜ್‌ಗೆ 750 ರೂಪಾಯಿ ಬಾಡಿಗೆ. ಮೂರು ಕುಟೀರಗಳಿವೆ- ಬಾಡಿಗೆ 400 ರೂಪಾಯಿ. ಇದಲ್ಲದೆ ಖಾಸಗಿ ವಸತಿ ಗೃಹಗಳು ಸಾಕಷ್ಟು ಇವೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಪೋನ್ ನಂಬರ್- 08221-226245.

ಸೇವಾ ವಿವರ
ನಿತ್ಯ ಕಲ್ಯಾಣೋತ್ಸವ (ಸಂಜೆ ವೇಳೆ )-    ರೂ.2001
ದೊಡ್ಡ ಉತ್ಸವ ರೂ.1501
ಬಣ್ಣದ ರಥದ ಉತ್ಸವ ರೂ.1501
ಏಕದಶವಾರ ರುದ್ರಾಭಿಷೇಕ ರೂ 1000
ಕಟ್ಟಿನಗಾಲಿ ಉತ್ಸವ ರೂ.751
2ನೇ ಕಟ್ಟಿನಗಾಲಿ ಉತ್ಸವ ರೂ.401
ಕೈ ತೋಳು ಉತ್ಸವ ರೂ. 301
ಮಂಟಪೋತ್ಸವ ರೂ.251
ಪ್ರಸಾದೋತ್ಸವ ರೂ.501
ದೇವಸ್ಥಾನದಲ್ಲಿ ಶಾಲ್ಯಾನ್ನ ಅಭಿಷೇಕ, ಪಂಚಾಮೃತ ಅಭಿಷೇಕ, ದೊಡ್ಡ ಬಸವೇಶ್ವರಸ್ವಾಮಿ ಅಭಿಷೇಕ, ಸಹಸ್ರನಾಮ, ಪೊಂಗಲ್ ನಿವೇದನೆ, ತ್ರಿಶತಿ, ಅಷ್ಟೋತ್ತರ, ಬೆಣ್ಣೆಸೇವೆ (ಬೆಣ್ಣೆಯನ್ನು ಸೇವಾಕರ್ತರೇ ತರಬೇಕು), ತುಲಾಭಾರದ ಕಾಣಿಕೆ, ವಸ್ತ್ರಧಾರಣೆ, ನಗಧಾರಣೆ, ಕಿವಿ ಚುಚ್ಚುವುದು, ನಾಮಕರಣ, ಅಕ್ಷರ ಅಭ್ಯಾಸ, ಅನ್ನಪ್ರಾಶನ ಮತ್ತು ನವಗ್ರಹ ಪೂಜೆ, ವಾಹನಪೂಜೆ ಇತ್ಯಾದಿ ಪೂಜೆಗಳಿಗೆ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT