ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಬಣ ಬಣ

Last Updated 27 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಮೈಸೂರು- ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಸಾರ್ವಜನಿಕರಿಗೆ ಸಫಾರಿ ನಿಷೇಧಿಸಲಾಗಿದೆ. ಹೀಗಾಗಿ ಸದಾ ಗಿಜಿಗುಡುತ್ತಿದ್ದ ಬಂಡೀಪುರ ಪ್ರವಾಸಿಗರಿಲ್ಲದೆ, ಯಾವುದೇ ಗೌಜು ಗದ್ದಲ ಇಲ್ಲದೆ ಮೌನವಾಗಿದೆ.

ಅಲ್ಲಿನ ಸ್ವಾಗತ ಕಚೇರಿಯಲ್ಲಿ ಈಗ ಪರಿಚಾರಕರಿಲ್ಲ. ಹೀಗಾಗಿ ನೀವೇನಾದರೂ ಹೋದರೆ ನಿಮಗೆ ಸಿಗೋದು ಮುಚ್ಚಿದ ಬಾಗಿಲುಗಳ ಸ್ವಾಗತ.   ನಿಮ್ಮ ಬ್ಯಾಗ್ ಎಗರಿಸುವ ಕೋತಿಗಳ ಕಾಟವಿಲ್ಲ, ವಾಹನ ದಟ್ಟಣೆಯಿಲ್ಲ. ಕ್ಯಾಂಪ್‌ನ ಕೊಠಡಿಗಳು ಖಾಲಿ ಖಾಲಿ.
ಪ್ರವಾಸಿಗಳ ದಣಿವ ನೀಗುವ ಭಾಸ್ಕರನ ಹೋಟೆಲ್ ಕಾಫಿ ರುಚಿ ನೋಡುವಂತಿಲ್ಲ. ಎಲ್ಲವೂ ಈಗ ಬಂದ್. ಏಕೆಂದರೆ ಕಾಡಿಗೆ ಹೋಗುವ ಎಲ್ಲ ಮಾರ್ಗಗಳಿಗೆ ಬೀಗ ಹಾಕಲಾಗಿದೆ.

ಹೆದ್ದಾರಿಯಲ್ಲೂ ವಾಹನ ಸಂಚಾರ ವಿರಳವಾಗಿದೆ. ಸದಾ ಗಿಜಿಗುಡುತ್ತಿದ್ದ ಜನಜಂಗುಳಿ, ಅಲ್ಲಲ್ಲಿ ಊಟ ಮಾಡಿ ಬಿಸಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು ಈಗ ಕಾಣುತ್ತಿಲ್ಲ. ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಪ್ರಾಣಿಗಳಿಗೆ ಆಹಾರ ನೀಡಿ ಪ್ಲಾಸ್ಟಿಕ್ ಬಾಟಲ್ ಎಸೆಯುವವರು ಇಲ್ಲ. ಅಷ್ಟರ ಮಟ್ಟಿಗೆ ಬಂಡೀಪುರ ಶುಚಿಯಾಗಿದೆ.  ನಾಯಿಕೊಡೆಯಂತೆ ತಲೆ ಎತ್ತಿದ್ದ ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಬಿದ್ದಿದೆ.

ಅದರ ಅಸಲಿ ಕಾಡಿನ ವಾತಾವರಣ, ನೀರವ ಮೌನವನ್ನು ಭೇದಿಸುವ ಹಕ್ಕಿಗಳ ಚಿಲಿಪಿಲಿ ಕಲರವ ನಿಸರ್ಗದ ಸೊಬಗನ್ನು ಹೆಚ್ಚಿಸಿದೆ. ಹೌದು. ಕಳೆದ ಕೆಲ ವಾರದಿಂದ ದೇಶಾದ್ಯಂತ ಎಲ್ಲ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಬಂದಾಗಿದೆ. ಅದೇ ರೀತಿ ಬಂಡೀಪುರದಲ್ಲೂ. ಇದರಿಂದ ಪ್ರವಾಸಿಗರಿಗೆ ನಿರಾಸೆಯಾದರೂ ವನ್ಯಜೀವಿಗಳಂತೂ ನಿರಾಳವಾಗಿವೆ.

ಯಾವುದೇ ಅಡ್ಡಿ ಆತಂಕ, ಗಲಾಟೆ ಗದ್ದಲಗಳಿಲ್ಲದೇ ತಮ್ಮ ನೆಲೆಯಲ್ಲಿ ತಮ್ಮ ಇಚ್ಛೆಯಂತೆ ವಿಹರಿಸುವ, ವಿರಮಿಸುವ ಬಂಡೀಪುರದ ಪ್ರಾಣಿಗಳು ಸಂತಸದ ಬಂಡಿ ಏರಿವೆ.

ಪ್ರತಿ ದಿನ ಸಫಾರಿ ಗದ್ದಲ, ಸುಮಾರು 30 ಸಫಾರಿ ವಾಹನಗಳ ಓಡಾಟದ ಆರ್ಭಟ ಈಗಿಲ್ಲ. ಸಾಯಂಕಾಲ 6 ಘಂಟೆ ಸುಮಾರಿಗೆ ತಮ್ಮ ನೆಲೆಗಳಿಗೆ ಮರಳುತ್ತಿದ್ದ ಜಿಂಕೆಗಳು ಈಗ ಮಧ್ಯಾಹ್ನ 3ಕ್ಕೇ ಹಾಜರ್. ಹುಲಿ, ಚಿರತೆಗಳು ಬೇಟೆಯಾಡಲು ಕ್ಯಾಂಪ್‌ಗೆ ಪ್ರದಕ್ಷಿಣೆ ಹಾಕಲಾರಂಭಿಸಿವೆ. ಕಾಡುಹಂದಿಗಳು ತಮ್ಮ 30 ಮರಿಗಳೊಂದಿಗೆ ಓಡಾಟ ನಡೆಸಿವೆ.

ದೊಡ್ಡ ದೊಡ್ಡ ಗಂಡು ಆನೆಗಳು ನಿರ್ಭಯವಾಗಿ ಹೆದ್ದಾರಿ ದಾಟುತ್ತಿವೆ. ಮುಂಜಾನೆಯೇ ಹುಲಿಗಳೂ ಕೂಡ ಗಾಂಭೀರ್ಯದಿಂದ ಹೆದ್ದಾರಿ ದಾಟುವ ಸನ್ನಿವೇಶ ನಿರ್ಮಾಣವಾಗಿದೆ. ಅಷ್ಟರ ಮಟ್ಟಿಗೆ ಜನರ ಓಡಾಟದ ವಿರಳತೆಯನ್ನು ಅವು ಸ್ವಾಗತಿಸಿವೆ ಎನ್ನಬಹುದು.

ಸಫಾರಿ ನಡೆಯುತ್ತಿದ್ದ ಕ್ಯಾಂಪ್‌ನಲ್ಲೇ ಪ್ರಾಣಿಗಳು ಇಷ್ಟು ಸ್ವೇಚ್ಛೆಯಿಂದ ಇರಬೇಕಾದರೆ ಕಾಡಿನ ಒಳಗಡೆ ಅವು ಎಷ್ಟು ನಿರಾಳವಾಗಿರಬಹುದು ಎಂಬುದನ್ನು ಊಹಿಸಿ. ಸಫಾರಿ ಸ್ಥಗಿತದಿಂದ ವನ್ಯಜೀವಿ ಪ್ರೇಮಿಗಳಿಗೆ ನಿರಾಸೆಯಾಗಿದ್ದರೂ, ಪ್ರಾಣಿಗಳ ತಾಣದಲ್ಲಿ ನಡೆಯುತ್ತಿದ್ದ ಗದ್ದಲಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಲೇಬೇಕಿತ್ತು. ಏಕೆಂದರೆ ಇಲ್ಲಿ ಮೋಜು ಮಾಡಲು ಬರುವವರ ಸಂಖ್ಯೆಯೇ ಹೆಚ್ಚಿತ್ತು. ಅವರಿಗೆ ವನ್ಯಜೀವಿಗಳ ಬಗ್ಗೆ ಇದ್ದ ಕಾಳಜಿ ಅಷ್ಟಕಷ್ಟೆ. ಅದೆಲ್ಲಕ್ಕೂ ವಿರಾಮ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT