ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರಕ್ಕೆ ಬೇಕಿದೆ ಫೈಬರ್ ಗ್ಲಾಸ್ ಬೋನು

Last Updated 14 ಡಿಸೆಂಬರ್ 2015, 19:59 IST
ಅಕ್ಷರ ಗಾತ್ರ

ಕಾಡಂಚಿನ ಗ್ರಾಮಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಅಂಕೆ ಮೀರುತ್ತಿದೆ. ಇದಕ್ಕೆ ಬಂಡೀಪುರ ಹೊರತಲ್ಲ. ಪ್ರಸಿದ್ಧ ಹುಲಿ ಸಂರಕ್ಷಿತ ಕೇಂದ್ರ ಎಂಬ ಹೆಗ್ಗಳಿಕೆ ಇದ್ದರೂ ಇಲ್ಲಿ ಮಾನವ- ವನ್ಯಜೀವಿಗಳ ಸಂಘರ್ಷ ಮಾಮೂಲಿಯಾಗಿದೆ. ಹೌದು. ತುಸು ಬೇಸರವಾದರೂ ಇದನ್ನು ಒಪ್ಪಬೇಕಿದೆ. ಬಂಡೀಪುರ ಕಾಡಂಚಿನ ಗ್ರಾಮಗಳಾದ ಕುಂದಕೆರೆ, ಹಂಗಳ ಮುಂತಾದ ವಲಯಗಳಲ್ಲಿ ವನ್ಯಜೀವಿಗಳು ಊರಿಗೆ ಲಗ್ಗೆ ಇಟ್ಟು ಬೆಳೆಗಳನ್ನು ಹಾನಿಮಾಡುವ ಹಾಗೂ ಜೀವ ಹಾನಿ ಮಾಡುವ ಪರಿಪಾಠ ಹೆಚ್ಚಿದೆ.

ಆನೆಗಳ ದಾಳಿ ಮಾಮೂಲು ಎಂಬಂತಾಗಿದೆ. ಜನರು ಜೀವ ಕೈಲಿ ಹಿಡಿದು ಜೀವಿಸುವ ಪರಿಸ್ಥಿತಿ ಇದೆ. ಅಲ್ಲದೇ ಇತ್ತೀಚಿಗೆ ಆನೆಗಳಲ್ಲದೆ ಕರಡಿ ಹಾಗೂ ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆಗಳು ಹಳ್ಳಿಗೆ ದಾಳಿ ಮಾಡುತ್ತಿವೆ. ಜಾನುವಾರುಗಳನ್ನು ತಿಂದು ಜನರ ಚಿಂತೆಗೆ ಕಾರಣವಾಗಿವೆ. ಮದ್ದೂರಿನಲ್ಲಿ ಹಾಗೂ ಬಂಡೀಪುರದಲ್ಲಿ ಹುಲಿ ಹಾಗೂ ಚಿರತೆಗಳು ಕಳೆದ ವರ್ಷ ಮನುಷ್ಯರ ಜೀವ ಹಾನಿಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂಥ ಸಮಯದಲ್ಲೆಲ್ಲಾ ಇವುಗಳನ್ನು ಬೋನಿನಲ್ಲಿ ಹಿಡಿದು ಕಾಡಿಗೆ ಸಾಗಿಸುತ್ತಾರೆ. ಇಲ್ಲಿ ಯೋಚಿಸಬೇಕಿರುವ ನಾಜೂಕಿನ ಸಂಗತಿಯೊಂದಿದೆ. ಅದು ನಾವು ಹುಲಿ, ಕರಡಿ ಹಾಗೂ ಚಿರತೆಗಳ ಸೆರೆಹಿಡಿಯಲು ಬಳಸುತ್ತಿರುವ ಬೋನಿನ ಸಂಗತಿ.

ಕೇವಲ ನಾವು ವನ್ಯಜೀವಿಗಳ ಸೆರೆ ಹಿಡಿಯುವ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅವುಗಳ ಸುರಕ್ಷತೆ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸುತ್ತಿಲ್ಲ ಎನ್ನಬಹುದೇನೋ.  ಹಳೆಯ ಸಾಂಪ್ರದಾಯಿಕ ಕಬ್ಬಿಣದ, ಯಾವುದೋ ಅಳತೆಯ, ಹಾನಿಕಾರಕ ಹಾಗೂ ಸರಿಯಾಗಿ ನಿರ್ವಹಣೆ ಇಲ್ಲದ ಬೋನುಗಳನ್ನು ಬಳಸಲಾಗುತ್ತದೆ. ಈ ಬೋನಿನಲ್ಲಿ ಸೆರೆ ಸಿಗುವ ವನ್ಯಜೀವಿಗಳು ಎಷ್ಟು ಚಿತ್ರಹಿಂಸೆ ಅನುಭವಿಸುತ್ತವೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ.

ಮೊದಲೇ ಸೆರೆ ಸಿಕ್ಕಿ ಗಾಬರಿಯಾದ ವನ್ಯಜೀವಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಬೋನಿನ ಕಬ್ಬಿಣದ ಸಲಾಕೆಗೆ ಡಿಕ್ಕಿ ಹೊಡೆದು ಹಣೆ, ಕೈ ಕಾಲು ಹಾಗೂ ಬೋನನ್ನು ಕಚ್ಚುವಾಗ ಬಾಯಿ ಹಾಗೂ ಹಲ್ಲುಗಳನ್ನು ಗಾಯ ಮಾಡಿಕೊಳ್ಳುತ್ತವೆ. ಕಬ್ಬಿಣದ ಬೋನು ಅಲ್ಲಲ್ಲಿ ತುಕ್ಕು ಹಿಡಿದಿರುವುದರಿಂದ ವನ್ಯಜೀವಿಗಳ ದೇಹದ ಮೇಲೆ ಪರಿಣಾಮ ಬೀರುತ್ತವೆ. ಹಿಂದೂ ಮುಂದು ನೋಡದೆ ಅವುಗಳನ್ನು ಕಾಡಿಗೆ ಬಿಡುತ್ತೇವೆ. ತುಕ್ಕು ಹಿಡಿದ ಅಂಶ ಗಾಯದ ಮೂಲಕ ದೇಹಕ್ಕೆ ಹೋಗುವುದರಿಂದ ತತ್ತರಿಸುತ್ತವೆ ಪ್ರಾಣಿಗಳು. ಇದರಿಂದ ಕೆಲವು ಪ್ರಾಣಿಗಳು ಕೋಪಗೊಂಡು ಮತ್ತೆ ಮನುಷ್ಯರ ಮೇಲೆ ಎರಗುವ ಅಪಾಯವನ್ನು ತಂದೊಡ್ಡುತ್ತವೆ.

ಹಲವು ಬೋನುಗಳು ಸಾಮಾನ್ಯ ರೂಪು ರೇಷೆ ಹೊಂದಿರುವುದಿಲ್ಲ. ಬೋನು ಕನಿಷ್ಠ 6 ಅಡಿ ಉದ್ದವಿರಬೇಕು. ಅದರ ಬಾಗಿಲಿನ ಕೆಳಗಡೆ ಒಂದರಿಂದ ಒಂದೂವರೆ ಇಂಚು ಸಂದಿ ಇರಬೇಕು (ಬಾಲ ತುಂಡಾಗದ ಹಾಗೆ). ಹುಲಿ ಚಿರತೆಗಳು ಕನಿಷ್ಠ 4 ಅಡಿ ಉದ್ದ,  ಬಾಲ ಸುಮಾರು 3 ಅಡಿ ಇರುತ್ತವೆ. ಹಲ್ಲುಗಳಿಗೆ ತೊಂದರೆ ಆಗದಂತೆ ಪ್ರತಿ ಕಂಬಿಗಳು ಕನಿಷ್ಠ 8 ಸೆಂ.ಮೀ ಅಂತರವಿರಬೇಕು. ಆದರೆ ಈಗಿರುವ ಬೋನಿನ ಕಂಬಿ ಹೆಚ್ಚು ದೂರವಿದ್ದು ಅದನ್ನು ಕಚ್ಚಿ ತಪ್ಪಿಸಿಕೊಳ್ಳುವ ಲೆಕ್ಕಾಚಾರದ ವನ್ಯಜೀವಿಗಳು ಬಾಯಿ, ಹಲ್ಲು ಹಾಗೂ ಕೈಗಳಿಗೆ ಗಾಯ ಮಾಡಿಕೊಂಡು ನಿತ್ರಾಣವಾಗುತ್ತವೆ.

ಅವುಗಳನ್ನು ಸೆರೆ ಹಿಡುವುದೇ ನಮ್ಮ ಮೊದಲ ತಪ್ಪು. ಅಂತಹುದರಲ್ಲಿ ಅವುಗಳ ಸುರಕ್ಷತೆಗೆ ಗಮನ ಕೊಡದಿದ್ದರೆ ಹೇಗೆ? ಹಲವು ಬಾರಿ ಬೋನುಗಳ ಅಭಾವ ತಲೆದೋರುತ್ತದೆ. ಏಕ ಕಾಲದಲ್ಲಿ ಬೇರೆ ಬೇರೆ ಕಡೆ ಬೋನು ಇರಿಸುವ ಸಂದರ್ಭಗಳು ಬರುತ್ತವೆ. ಹಾಗಾಗಿ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಫೈಬರ್ ಗ್ಲಾಸ್ ಬೋನು ಅಳವಡಿಸಿಕೊಳ್ಳುವುದು ಇಲಾಖೆಯ ಹಾಗೂ ಪ್ರಾಣಿಗಳ ದೃಷ್ಟಿಯಿಂದ ಒಳ್ಳೆಯದು.

ಈಗಾಗಲೇ ಇದರ ಮಹತ್ವ ಕಂಡ ಮಹಾರಾಷ್ಟ್ರ ಸರ್ಕಾರ ಪ್ರಾಣಿಗಳ ಸೆರೆ ಹಿಡಿಯಲು ಫೈಬರ್ ಗ್ಲಾಸ್ ಬೋನು ಬಳಸುತ್ತಿದೆ. ಅದು ಸುರಕ್ಷಿತ ಮತ್ತು ತುಕ್ಕು ಹಿಡಿಯುವುದಿಲ್ಲ. ಅದರ ಸಾಗಣೆಯೂ ಸುಲಭ. ಕೇವಲ ನಾಲ್ಕು ಜನ ಪ್ರಾಣಿ ಸಮೇತ ಬೋನನ್ನು ಮೇಲಕ್ಕೆತ್ತಬಹುದು. ಅದೇ ಮದ್ದೂರಿನ ಪ್ರಕರಣದಲ್ಲಿ ಬೋನು ಎತ್ತಲು ಆನೆ ಬರಬೇಕಾದ ಪ್ರಮೇಯ ಎದುರಾಯಿತು. ಇನ್ನಾದರೂ ಬಂಡೀಪುರಕ್ಕೆ ಫೈಬರ್ ಗ್ಲಾಸ್ ಬೋನು ಬರಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT