ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಿಷ್ಟ ವಿವಾಹ ಪೊಮ್ಮಂಗಲ

Last Updated 9 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಕೊಡಗು ಜಿಲ್ಲೆ ಬಿರುನಾಣಿಯ ಶ್ರೀ ಪುತ್ತು ಭಗವತಿ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ದಿನ (ಏ. 13) ವಾರ್ಷಿಕ ಹಬ್ಬ. ಅದರ ಮುನ್ನಾ ದಿನ (ಏ. 12) ನಡೆಯುವ `ಪೊಮ್ಮಂಗಲ~ ಅಥವಾ `ಹೊನ್ನಿನ ಮದುವೆ~ ಎಂಬ ಹರಕೆ ಮದುವೆ ಈ ಹಬ್ಬದ ವಿಶೇಷ.

ಊರ ದೇವರಾದ ಶ್ರೀ ಪುತ್ತು ಭಗವತಿಗೆ ಹರಕೆ ಹೊತ್ತುಕೊಂಡವರು ವಾರ್ಷಿಕ ಹಬ್ಬದ ಸಂದರ್ಭದಲ್ಲಿ ಪೊಮ್ಮಂಗಲ ನಡೆಸುತ್ತಾರೆ. ಪೋಷಕರು ತಮ್ಮ ತಮ್ಮ ಮನೆಯಲ್ಲಿ ಹರಕೆ ಹೊತ್ತ ಮಗನಿಗೆ ಸಾಂಪ್ರದಾಯಿಕ ಕೊಡವ ವಧುವಿನ ಸಿಂಗಾರ ಮಾಡುತ್ತಾರೆ ಮತ್ತು ಮಗಳಿಗೆ ಕೊಡವ ವರನಂತೆ ಅಲಂಕಾರ ಮಾಡಿ, ಮದುವೆ ಮುಹೂರ್ತ ನಡೆಸಿ ದೇವಸ್ಥಾನಕ್ಕೆ ಬರುತ್ತಾರೆ. ಅಲ್ಲಿ ಎಲ್ಲಾ ಹರಕೆ ಹೊತ್ತವರು ಸೇರಿ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ.

ಕಷ್ಟ ಪರಿಹಾರ, ಉತ್ತಮ ಆರೋಗ್ಯ, ವಿವಾಹ, ಕುಟುಂಬ ಕ್ಷೇಮ ಹೀಗೆ ಒಳಿತನ್ನು ಬಯಸಿ ಪೋಷಕರು ಮಕ್ಕಳ ಹೆಸರಿನಲ್ಲಿ ಪೊಮ್ಮಂಗಲ ನಡೆಸುವ ಹರಕೆ ಹೊತ್ತುಕೊಳ್ಳುತ್ತಾರೆ. ಪದ್ಧತಿಯಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚಿ, ನೆರೆಕೆರೆಯವರು ಹಾಗೂ ಬಂಧು ಬಾಂಧವರನ್ನು ಆಹ್ವಾನಿಸುತ್ತಾರೆ.

ಮದುವೆ ಕಾರ್ಯದ ಎಲ್ಲ ಪದ್ಧತಿಯನ್ನೂ ಪಾಲಿಸುತ್ತಾರೆ. ದೇವಸ್ಥಾನಕ್ಕೆ ಹಣ ಕಟ್ಟುತ್ತಾರೆ. ಬಂದವರಿಗೆ ಭರ್ಜರಿ ಭೋಜನ ಬಡಿಸುತ್ತಾರೆ. ವಾದ್ಯದೊಂದಿಗೆ ಕುಣಿದು ಸಂತೋಷಪಡುತ್ತಾರೆ.

ಪೊಮ್ಮಂಗಲ ನಡೆಸಿದವರೆಲ್ಲ ಸಂಜೆ ನಾಲ್ಕು ಗಂಟೆಯ ನಂತರ ದೇವಸ್ಥಾನಕ್ಕೆ ತಮ್ಮ ಮಾವಂದಿರ ಜೊತೆ ಮನೆಯಿಂದ ಬರುತ್ತಾರೆ. ಆಗ ವಧು ತಲೆಯಲ್ಲಿ ಕಳಸ ಹೊತ್ತು ತರಬೇಕು. ಹರಕೆ ಹೊತ್ತವರು ಒಗ್ಗೂಡಿ ಪ್ರದಕ್ಷಿಣೆ ಹಾಕಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ನಂತರ ತಮ್ಮ ಮದುವೆ ಉಡುಪನ್ನು ಬದಲಿಸಿ ಎಲ್ಲರೊಂದಿಗೆ ಬೆರೆಯುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಬಿರುನಾಣಿ ಹಾಗೂ ಸುತ್ತು ಮುತ್ತಲು ಮಕ್ಕಳ  ಪೊಮ್ಮಂಗಲ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಶ್ರೀ ಪುತ್ತು ಭಗವತಿ ಹಬ್ಬ ಗಮನ ಸೆಳೆಯುತ್ತಿದೆ.
 

ದೇವಸ್ಥಾನದ ದಾರಿ
ಬಿರುನಾಣಿಗೆ ಉತ್ತರ ಕೊಡಗಿನ ಗೋಣಿಕೊಪ್ಪ- ಪೊನ್ನಂಪೇಟೆ- ಹುದಿಕೇರಿ- ಟಿ.ಶೆಟ್ಟಗೇರಿ ಮಾರ್ಗವಾಗಿ ತೆರಳಬೇಕು. ಶ್ರೀ ಪುತ್ತು ಭಗವತಿ ದೇವಸ್ಥಾನ ಬಿರುನಾಣಿ ನಗರದಿಂದ 2 ಕಿಮಿ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT