ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕರ ಕರೆಯುತಿಹ ವೀರಗಲ್ಲು

Last Updated 21 ಸೆಪ್ಟೆಂಬರ್ 2015, 19:54 IST
ಅಕ್ಷರ ಗಾತ್ರ

ಇದೊಂದು ಅಪರೂಪದ ವೀರಗಲ್ಲು. ರಾಯಚೂರಿನ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಸಂರಕ್ಷಣೆಯಾಗಿದೆ. ಎಲ್ಲೆಲ್ಲಿಂದಲೋ ಎತ್ತಿ ತಂದು, ಆವರಣದ ಗೋಡೆಯ ಉದ್ದಕ್ಕೂ ಸಾಲಾಗಿ ಜೋಡಿಸಿಡಲಾಗಿದೆ. ನಮ್ಮ ಸಾಂಪ್ರದಾಯಿಕ ವೀರಗಲ್ಲುಗಳಲ್ಲಿನ ಎಲ್ಲಾ ಲಕ್ಷಣಗಳೂ ಇದರಲ್ಲಿ ಸ್ಪಷ್ಟವಾಗಿವೆ.

ಇಬ್ಬರು ವೀರರು ನಿಂತಿರುವ ಭಂಗಿ, ತಲೆ ಮೇಲಿನ ವೀರ ಜಡೆ, ಕೈಯಲ್ಲಿನ ಕಂಕಣಗಳು, ಖಡ್ಗ, ಸೊಂಟಕ್ಕೆ ಬಿಗಿದ ಚಲ್ಲಣ, ಸೊಂಟದಲ್ಲಿ ಸಿಕ್ಕಿಸಿಕೊಂಡ ದೊಡ್ಡ ಕಠಾರಿ, ಕಾಲ ಕಡಗ, ಕೊರಳ ಪದಕ, ಆಭರಣ, ಹುರಿ ಮೀಸೆಯೊಂದಿಗಿನ ತೇಜೋಪುಂಜ ಮುಖ, ಜಯದ ನಗು, ಶಿಲ್ಪದ ಮೇಲಂಚಿನಲ್ಲಿ ಸೂರ್ಯ, ಚಂದ್ರ , ಕೆಳ ಭಾಗದಲ್ಲಿ ಅವರ ಬೇಟೆ ನಾಯಿ ಇತ್ಯಾದಿ. ಈ ಕೊರಳ ಆಭರಣ ಹಾಗೂ ಮುಖ ಕಾಂತಿಗಳಿಂದಾಗಿ ಇವರು ರಾಜ ಮನೆತನದವರಿರಬಹುದು ಎನಿಸುತ್ತದೆ.

ಇದರ ವಿಶೇಷವಿರುವುದು ಅದರಲ್ಲಿನ ಇತರ ಕೆಲವು ಚಿತ್ರಣಗಳಲ್ಲಿ. ಮುಖ್ಯವಾಗಿ, ಇವರು ತಮ್ಮ ಬಲಗೈಗಳಲ್ಲಿ ಎತ್ತಿ ಹಿಡಿದಿರುವುದು ಶತ್ರುಗಳ ರುಂಡವನ್ನಲ್ಲ; ಬದಲಿಗೆ, ಗಿಣಿಗಳಂತಹ ಎರಡು ಪಕ್ಷಿಗಳನ್ನು. ತಮ್ಮ ಎಡಗೈಗಳಲ್ಲಿ ಒಬ್ಬ ಖಡ್ಗ ಹಿಡಿದಿದ್ದರೆ, ಮತ್ತೊಬ್ಬ ಮುಂದಾಳು ಬಂದೂಕು ಹಿಡಿದಿದ್ದಾನೆ! ಈ ಶಿಲ್ಪದಲ್ಲಿ ವೀರರ ಉಡುಗೆ ಹಾಗೂ ಪಕ್ಷಿಗಳಿಗೆ ಬಣ್ಣ ಹಚ್ಚಿರುವುದೂ ಕಾಣಬರುತ್ತದೆ.

ಬಂದೂಕಿನ ಚಿತ್ರದಿಂದಾಗಿ, ಈ ಶಿಲ್ಪ 18–19ನೇ ಶತಮಾನದ ಆಸು ಪಾಸಿನದ್ದೆಂದು ಊಹಿಸಬಹುದು. ಕಾಲಕ್ಕಿಂತಲೂ ಮಿಗಿಲಾಗಿ ಕುತೂಹಲ ಕೆರಳಿಸುವುದು, ಆಸಕ್ತಿದಾಯಕವಾದುದು, ಈ ಶಿಲ್ಪದಲ್ಲಿನ ಗಿಣಿಗಳಂತಹ ಪಕ್ಷಿಗಳಿಂದಾಗಿ. ಬೇಟೆಯಾಡುವುದು ಹೊಸದೂ ಅಲ್ಲ, ಅಪರೂಪದ್ದೂ ಅಲ್ಲ. ಇಂದು ಬೇಟೆ ಶಿಕ್ಷಾರ್ಹವಾದ ಅಪರಾಧವಾಗಿದ್ದರೂ, ಹಿಂದೆ ಇದಕ್ಕೆ ನಿಷೇಧವಿರಲಿಲ್ಲ. ಆದರೂ, ಪಕ್ಷಿಗಳನ್ನು ಅದರಲ್ಲೂ, ಅಹಿಂಸಾ ಜೀವಿಗಳೂ, ಮುದ್ದಿನವೂ ಎಂದು ಜನ ಪ್ರಿಯತೆಗಳಿಸಿದ ಗಿಣಿಗಳಂತಹ ಪಕ್ಷಿಗಳನ್ನು ಹಿಡಿದವರನ್ನು (ಅಥವಾ ಬೇಟೆಯಾಡಿ ಕೊಂದವರನ್ನು?) ಮಹಾ ವೀರರೆಂಬಂತೆ ಕೊಂಡಾಡಿರುವುದು ವಿಶೇಷವಾಗಿದೆ. ಪಕ್ಷಿಗಳ ಬೇಟೆಯಲ್ಲಿ ಇವರು ಕೇವಲ ಜಯ ಸಾಧಿಸಿದ್ದರೋ ಅಥವಾ ಮರಣವನ್ನು ಅಪ್ಪಿದರೋ ತಿಳಿಯುತ್ತಿಲ್ಲ.

ಇದರಲ್ಲಿ ಯಾವ ಬರಹವೂ ಕಾಣುತ್ತಿಲ್ಲವಾದ್ದರಿಂದ, ಇದರ ಹಿನ್ನೆಲೆ ಬಗ್ಗೆ ಹೇಳುವುದು ಕಷ್ಟ. ವಿದ್ವಾಂಸರ ಯಾವ ಅಧ್ಯಯನ ಗ್ರಂಥದಲ್ಲೂ ಈ ಶಿಲ್ಪ ವಿಶೇಷದ ಉಲ್ಲೇಖವಿದ್ದಂತಿಲ್ಲ ಎನ್ನುತ್ತಾರೆ ಡಾ ಎಂ.ಜಿ. ಮಂಜುನಾಥ್. ರಾಜ, ರಾಣಿಯರೊಂದಿಗೆ ಪಕ್ಷಿಗಳನ್ನು ಚಿತ್ರಿಸುವುದು ಸಾಮಾನ್ಯ ಪದ್ಧತಿ. ಈ ಶಿಲ್ಪದಲ್ಲಿರುವವರು ಬೇಟೆಗೆ ಹೋಗಿ ಬಂದ ಅಥವಾ ಬೇಟೆಯಲ್ಲಿ ಇನ್ನೇನೋ ಕಾರಣದಿಂದ ಮರಣವನ್ನಪ್ಪಿದ ಅರಸು ಮನೆತನದವರಿದ್ದಿರಬಹುದು ಎಂಬ ಊಹೆ ಡಾ. ದೇವರ ಕೊಂಡಾರೆಡ್ಡಿ ಅವರದು. ಇದರ ಬಗ್ಗೆ ಇನ್ನಷ್ಟೇ ವಿಶ್ಲೇಷಣೆ ನಡೆಯಬೇಕಾಗಿದೆ.

ಇತಿಹಾಸ ಹೇಳುವ ಕಲ್ಲುಗಳು
ವೀರನ ನೆನಪಿಗಾಗಿ ಇಡುತ್ತಿದ್ದ ಶಿಲ್ಪವನ್ನು ವೀರಗಲ್ಲು ಎಂದೂ, ಆತನ ಚಿತೆಯೊಂದಿಗೆ ಆತ್ಮಾಹುತಿ ಮಾಡಿಕೊಂಡ ಆತನ ಮಡದಿಯ ಶಿಲ್ಪವನ್ನು ಮಾಸ್ತಿಕಲ್ಲು ಎಂದೂ ಕರೆಯಲಾಗುತ್ತದೆ. ಅದರಲ್ಲಿ ಮರಣದ ವಿಷಯವನ್ನು ಕೆತ್ತಲಾಗುತ್ತದೆ. ಕಳ್ಳರಿಂದ ತನ್ನ ಊರ ಪಶುಗಳ ರಕ್ಷಣೆಗಾಗಿ ಕಾದಾಡಿದ್ದರೆ ವೀರನ ಪಕ್ಕ ದನಗಳ ಚಿತ್ರಣ, ಕಾಡು ಹಂದಿ ಅಥವಾ ಹುಲಿಯೊಂದಿಗೆ ಕಾದಾಡಿ ಸತ್ತಿದ್ದರೆ ಆತನ ಎದುರು ಆರ್ಭಟಿಸುತ್ತಿರುವ ಆಯಾ ಪ್ರಾಣಿಗಳ ಶಿಲ್ಪವನ್ನು ಕಾಣಬಹುದು.

ತನ್ನ ಒಡೆಯನ ಸಾಹಸದಲ್ಲಿ ತಾನೂ ಪಾಲ್ಗೊಂಡು ಹೋರಾಡಿ ಮರಣವನ್ನಪ್ಪಿದ ಒಂದು ನಾಯಿಯ ಸ್ಮರಣೆಗೂ ‘ವೀರಗಲ್ಲು’ ನೆಡಿಸಿದ ಅಪರೂಪದ ದಾಖಲೆಯೂ ಇದೆ. ವಿಶೇಷ ಕಾರಣಕ್ಕಾಗಿ ತನ್ನ ತಲೆಯನ್ನು ತಾನೇ ಕೈಯಾರ ಕತ್ತರಿಸಿಕೊಂಡ ವೀರನ ಶಿಲ್ಪವೂ ಇದೆ. ಇಂಥ ಕೆಲವು ಕಲ್ಲುಗಳ ಮೇಲೆ ಆ ವೀರನ ಸಾಹಸಾದಿಗಳ ಮಾಹಿತಿಯನ್ನೂ ಕೆತ್ತಲಾಗಿದೆ. ಅಮೂಲ್ಯ ಐತಿಹಾಸಿಕ ದಾಖಲೆಗಳು, ಪುಸ್ತಕಗಳಲ್ಲಿ ಸಿಗದ ಚಾರಿತ್ರಿಕ ಸಂಗತಿಗಳು ಅಲ್ಲಿರುತ್ತವೆ . ಇಂಥ ಅಪರೂಪದ ಸ್ಮಾರಕಗಳನ್ನು ಹಾಳಾಗದಂತೆ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT