ನಂಜಿಲ್ಲದ ಸಮಾಜಕ್ಕಾಗಿ ನಂಜುಂಡರು ಬೇಕಿದೆ: ಡಾ.ಧರಣಿದೇವಿ ಮಾಲಗತ್ತಿ ಅಭಿಮತ

ಬುಧವಾರ, ಜೂನ್ 19, 2019
31 °C
ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ನಂಜಿಲ್ಲದ ಸಮಾಜಕ್ಕಾಗಿ ನಂಜುಂಡರು ಬೇಕಿದೆ: ಡಾ.ಧರಣಿದೇವಿ ಮಾಲಗತ್ತಿ ಅಭಿಮತ

Published:
Updated:
Prajavani

ಮೈಸೂರು: ‘ನಂಜಿಲ್ಲದ ಸಮಾಜ ನಿರ್ಮಾಣಕ್ಕೆ ಹಲ ನಂಜುಂಡರು ಬೇಕಿದೆ’ ಎಂದು ಸಾಹಿತಿ, ಪೊಲೀಸ್ ಅಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಮುಳ್ಳೂರು ನಾಗರಾಜ 9ನೇ ವರ್ಷದ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜಶೇಖರ ಕೋಟಿ ನೆನಪು ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ನಂಜನ್ನು ಅಮೃತವನ್ನಾಗಿ ಪರಿವರ್ತಿಸುವುದು ಬಲು ಕಷ್ಟದ ಕೆಲಸ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

‘ನಂಜಿಲ್ಲದ ಬದುಕು, ದೇಶ, ಪ್ರಪಂಚ, ಸಮಾಜ ಬೇಕು ಎಂಬುದು ಎಲ್ಲರ ಕನಸು. ಆದರೆ ಅಲ್ಲಿಗೆ ತಲುಪೋದು ಕಷ್ಟದ ಕೆಲಸ. ಗಗನ ಕುಸುಮವಿದ್ದಂತೆ. ಆದರೂ ಗುರಿಯೆಡೆಗೆ ಸಾಗಲು ಈ ಹಾದಿಯನ್ನೇ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಸಾಹಿತ್ಯ ಜನಾಭಿಪ್ರಾಯ ಮೂಡಿಸಲಿದೆ. ಸಾಮಾಜಿಕ ಬದ್ಧತೆಯ ಜತೆಯಲ್ಲೇ ಬದಲಾವಣೆಯ ಆಶಯವನ್ನು ಹೊಂದಿದೆ. ದೌರ್ಜನ್ಯದ ವಿರುದ್ಧ ಧ್ವನಿ ಮೊಳಗಿಸಲಿದೆ. ವರ್ಣನೆ, ಬಣ್ಣನೆ ಸಾಹಿತ್ಯವಲ್ಲ. ಸಾಮಾಜಿಕ ಬದಲಾವಣೆ ತರುವುದೇ ಸಾಹಿತ್ಯ. ಇದೇ ಸೃಷ್ಟಿಯಾಗಬೇಕು’ ಎಂದು ಧರಣಿದೇವಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

‘ದಲಿತ ಪರ, ಸಮಾಜ ಪರ ಚಳವಳಿ, ಚಿಂತನೆ ಇಂದಿಗೂ ಜೀವಂತವಿವೆ. ಇವೆರೆಡೂ ಕಾಲಕ್ಕೆ ತಕ್ಕಂತೆ ಬದಲಾಗಿವೆ. ದಲಿತ ಚಳವಳಿ ಆರಂಭದ ದಿನಗಳಲ್ಲಿ ಆಕ್ರೋಶ, ಆವೇಶದ ನುಡಿಗಳಿಗೆ ಸೀಮಿತವಾಗಿತ್ತು. ನಂತರ ಸಂಸ್ಕೃತಿಯ ಆಳಕ್ಕಿಳಿಯಿತು. ಬಳಿಕ ಕಾವ್ಯದ ಸ್ಪ‌‌ರ್ಶ ಪಡೆಯಿತು. ಜಾಗತೀಕರಣಕ್ಕೂ ತೆರೆದುಕೊಳ್ಳುವ ಜತೆ ಜತೆಯಲ್ಲೇ ಬುದ್ಧ, ಅಂಬೇಡ್ಕರ್‌ ಆರಾಧನೆಗೂ ವಿಸ್ತರಿಸಿಕೊಂಡಿತು.

ತೆಲುಗು, ಮರಾಠಿ, ಕನ್ನಡ ದಲಿತ ಸಾಹಿತ್ಯದಲ್ಲಿ ಚಳವಳಿಯಲ್ಲೇ ತೊಡಗಿಸಿಕೊಂಡವರೇ ಸಾಹಿತ್ಯ ಸೃಷ್ಟಿಸಿದರು. ಜನಾಭಿಪ್ರಾಯ ಮೂಡಿಸಲು ಸಾಹಿತ್ಯದ ಮಾರ್ಗದಲ್ಲಿ ಯತ್ನಿಸಿ ಯಶಸ್ಸು ಕಂಡುಕೊಂಡವರು ಹಲವರು’ ಎಂದು ಹೇಳಿದರು.

ಮೌಲ್ಯ ದೊಡ್ಡದು:

‘ರಾಜಕಾರಣ ಮೌಲ್ಯ ಕಳೆದುಕೊಂಡಿದೆ. ಅಕ್ರಮ ಹಣ ಹೊಂದಿದವರ ಪಾಲಾಗಿದೆ. ಇಂದು ಇವರೇ ಆದರ್ಶಪ್ರಾಯರಾಗಿದ್ದಾರೆ. ರಾಮ ಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡರ ಹಿಂದೆ ಸಂಸದ, ಶಾಸಕರ ಸಂಖ್ಯಾಬಲ ಎಂದೆಂದೂ ಇರಲಿಲ್ಲ. ಆದರೆ ಈ ಇಬ್ಬರೂ ಪಾಲಿಸಿದ ಆದರ್ಶ, ಸಿದ್ಧಾಂತದ ಮೌಲ್ಯ ಸಂಖ್ಯಾಬಲಕ್ಕಿಂತ ದೊಡ್ಡದಿತ್ತು’ ಎಂದು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಸಾಹಿತಿ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

‘ಪ್ರಶಸ್ತಿಯ ಹೆಸರಿನ ಮೌಲ್ಯ ದೊಡ್ಡದು. ಮೊತ್ತ ಎಷ್ಟಿದ್ದರೂ ದೊಡ್ಡದಲ್ಲ. ಪ್ರಶಸ್ತಿಯ ಹೆಸರೇ ಅದರ ಮುಖಬೆಲೆಯಿದ್ದಂತೆ’ ಎಂದು ಬಂಜಗೆರೆ ಅಭಿಪ್ರಾಯಪಟ್ಟರು.

‘ಪ್ರಾದೇಶಿಕ ಭಾಷೆಗಳು ಇಂಗ್ಲಿಷ್ ಮುಂದೆ ಮಂಡಿಯೂರಿವೆ. ಇದರಲ್ಲಿ ಕನ್ನಡವೂ ಹೊರತಾಗಿಲ್ಲ. ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ನಾಮ ಮಾತ್ರ ಕನ್ನಡವಿದೆ. ಭವಿಷ್ಯದಲ್ಲಿ ಕನ್ನಡ ಸಾಹಿತ್ಯ ಓದುವವರೇ ಇಲ್ಲವಾದರೆ, ಬೆಳವಣಿಗೆ ಎಷ್ಟರ ಮಟ್ಟಿಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಮುಳ್ಳೂರು ನಾಗರಾಜ, ರಾಜಶೇಖರ ಕೋಟಿ ಕುರಿತು ಮೈಸೂರು ವಿಶ್ವವಿದ್ಯಾಲಯದ ವ್ಯವಹಾರ ನಿರ್ವಹಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ತಮ್ಮ ಅನಿಸಿಕೆ ಹಂಚಿಕೊಂಡರು. ರಂಗಾಯಣದ ಮಾಜಿ ನಿರ್ದೇಶಕ ಎಚ್‌.ಜನಾರ್ಧನ್ ಅಧ್ಯಕ್ಷತೆ ವಹಿಸಿದ್ದರು.

ಶಿವಮೊಗ್ಗದ ಕವಿ ಎನ್.ರವಿಕುಮಾರ್ ಅವರಿಗೆ ಮುಳ್ಳೂರು ನಾಗರಾಜ 9ನೇ ವರ್ಷದ ಕಾವ್ಯ ಪ್ರಶಸ್ತಿ ವಿತರಿಸಲಾಯಿತು. ರಂಗಕರ್ಮಿ ಕೆ.ಆರ್.ಗೋಪಾಲಕೃಷ್ಣ ಉಪಸ್ಥಿತರಿದ್ದರು. ಚಾಮರಾಜನಗರದ ರಂಗವಾಹಿನಿಯ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರುಣ್‌ಕುಮಾರ್ ವಚನ ಗಾಯನ ಮಾಡಿದರು. ಮುಳ್ಳೂರು ರಾಜು ನಿರೂಪಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !