ಮಂಗಳವಾರ, ಮೇ 26, 2020
27 °C

ವನಸಿರಿಯ ನಡುವೆ ಕೋದಂಡರಾಮ

ಹಿತೇಶ ವೈ. Updated:

ಅಕ್ಷರ ಗಾತ್ರ : | |

ಒಂದು ಬದಿ ವಿಜಯನಗರ ಶೈಲಿಯ ಪುರಾತನ ದೇವಾಲಯ, ಮತ್ತೊಂದು ಬದಿ ಅಚ್ಚ ಹಸಿರಿನ ದೇವರ ಕಾಡು, ನಡುವೆ ಸಾಗುತ್ತಿದ್ದರೆ ನಿಸರ್ಗದ ಆತ್ಮಾನುಸಂಧಾನ ಮಾಡಿದ ಅನುಭವ. ಈ ಚೈತನ್ಯಪೂರ್ಣ ಸ್ಥಳವೇ ಹರವು ಗ್ರಾಮದ ಶ್ರೀಕೋದಂಡ ರಾಮನ ದೇವಸ್ಥಾನ. ಮಂಡ್ಯ ಜಿಲ್ಲೆ ಪಾಂಡವಪುರದಿಂದ ದಕ್ಷಿಣಕ್ಕೆ ಆರು ಕಿಲೋಮೀಟರ್ ದೂರದಲ್ಲಿದೆ ಹರವು ಗ್ರಾಮ.

1447ರಲ್ಲಿ ವಿಜಯನಗರ ಅರಸರ ಕಾಲದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಈ ಗ್ರಾಮ ಸಾಂಸ್ಕೃತಿಕ, ಪಾರಂಪರಿಕ ಹಾಗೂ ನೈಸರ್ಗಿಕವಾಗಿ ಸಮೃದ್ಧಿಯಿಂದ ಕೂಡಿದ್ದ ಸ್ಥಳ. ಊರ ನಡುವೆ ಇರುವ ರಾಮ ದೇವರ ದೇವಸ್ಥಾನ ಇದಕ್ಕೆ ಸಾಕ್ಷಿ.

ರಾಮದೇಗುಲವನ್ನು 1369ರಲ್ಲಿ ವಿಜಯನಗರದ ಮೊದಲನೇ ದೊರೆ ವೀರ ಬುಕ್ಕಣ ಒಡೆಯರ್‌ ನಿರ್ಮಿಸಿದ್ದಾರೆ. 1911ರಲ್ಲಿ ಈ ಸ್ಮಾರಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಇತಿಹಾಸಕಾರ ಬಿ.ಎಲ್ ರೈಸ್ ದಾಖಲು ಮಾಡಿದ್ದಾರೆ.

1911 ರಿಂದ 1936 ನಡುವೆ ಕನ್ನಂಬಾಡಿ ಕಟ್ಟುವಾಗ ನೀರಿನ ನಾಲೆಗಳು ಗ್ರಾಮವನ್ನು ಹಾದು ಹೋಗಿದ್ದು, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ, ಜನರು ಸ್ಥಳಾಂತರವಾಗಬೇಕಾಯಿತು. ಜನರ ಒಡನಾಟವಿಲ್ಲದ ಕಾರಣ, ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ಈ ಸ್ಮಾರಕ ಪಾಳು ಬೀಳಲು ಕಾರಣವಾಯಿತು. ಹೀಗೆ ಕಾಲದ ಹೊಡೆತಕ್ಕೆ ಸಿಕ್ಕಿ, ಅಳಿದೇ ಹೋಗುವ ಅಪಾಯದಲ್ಲಿ ಇದ್ದ ಈ ಸ್ಮಾರಕವನ್ನು ಹರವು ಗ್ರಾಮದ ಸಮಾನ ಮನಸ್ಕರು ಸತತ ಪರಿಶ್ರಮದೊಂದಿಗೆ ರಕ್ಷಣೆ ಮಾಡಿದ್ದಾರೆ. ಈ ರಕ್ಷಣೆಯಾದ ಸ್ಮಾರಕಕ್ಕೆ ಗತ ವೈಭವದ ಸೊಬಗು ತರಲು ಎರಡು ದಶಕಗಳೇ ತಗುಲಿವೆ. ಈ ಸ್ಮಾರಕದ ಜೀರ್ಣೋದ್ಧಾರ ಕಾರ್ಯದಲ್ಲಿ ಹರವು ಗ್ರಾಮದ ಹವ್ಯಾಸಿ ಪತ್ರಕರ್ತ ಹರವು ದೇವೇಗೌಡ ಮತ್ತು ಪ್ರಾಚ್ಯಶಾಸ್ತ್ರದ ಪರಿಶ್ರಮ ಹೆಚ್ಚಿನದ್ದು.

ಹೀಗಿದೆ ಸ್ಮಾರಕ ದೇಗುಲ

ಸ್ಮಾರಕದ ಅಂಗಳ ಪ್ರವೇಶಿಸುತ್ತಿದ್ದ ಮುಂಭಾಗದಲ್ಲಿ ಸುಮಾರು 30 ಅಡಿ ಎತ್ತರದ ಗರುಡಸ್ತಂಭವಿದೆ. ಈ ಸ್ತಂಭದ ಬುಡದಲ್ಲಿ ಗರ್ಭಗೃಹಕ್ಕೆ ಎದುರಾಗಿ ಕೈ ಮುಗಿದು ನಿಂತಿರುವ ಗರುಡ ಶಿಲ್ಪವಿದೆ. ಪೂರ್ವಕ್ಕೆ ಶಂಖಚಕ್ರ, ಉತ್ತರಕ್ಕೆ ಸಿಂಹ, ದಕ್ಷಿಣಕ್ಕೆ ಅಂಜನೇಯರ ಉಬ್ಬು ಶಿಲ್ಪಗಳ ಭವ್ಯ ಕೆತ್ತನೆ ಇದೆ. ಈ ಸ್ತಂಭದ ಸಮೀಪದಲ್ಲೇ ಓಕಳಿಗುಂಡಿ ನಿರ್ಮಿಸಲಾಗಿದೆ. ಸ್ಮಾರಕವು ಎರಡು ಪ್ರದಕ್ಷಿಣಾಪಥಗಳನ್ನು ಹೊಂದಿದೆ. ಮೊದಲ ಪ್ರದಕ್ಷಣಾ ಪಥದಲ್ಲಿ ಒಂದು ಬಾರಿಗೆ ನಾಲ್ಕರಿಂದ ಐದು ಆನೆಗಳು ಒಮ್ಮೆಗೆ ಸಂಚರಿಸಬಹುದಾದಷ್ಟು ವಿಶಾಲವಾಗಿದೆ. 

ಬೃಹತ್ ಕಲ್ಲು ಕಂಬಗಳಿಂದ ನಿರ್ಮಾಣವಾಗಿರುವ ಈ ಸ್ಮಾರಕದ ಪ್ರವೇಶದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆಯೇ 42 ದೈತ್ಯ ಕಂಬಗಳ ಹಜಾರ ಎದುರಾಗುತ್ತದೆ. ಇಲ್ಲಿ ಮೂರು ಸಭಾಮಂಟಪಗಳಿವೆ. ಉತ್ತರ ದಿಕ್ಕಿಗಿರುವ ಅರ್ಧ ಮಂಟಪದಲ್ಲಿ 24 ಕಲ್ಲು ಕಂಬಗಳು, ದಕ್ಷಿಣಕ್ಕಿರುವ ಅರ್ಧ ಮಂಟಪದಲ್ಲಿ 28 ಕಲ್ಲು ಕಂಬಗಳಿವೆ. ಇವುಗಳಿಗೆ ಹೊಂದಿಕೊಂಡಂತೆಯೇ ಉತ್ತರಕ್ಕೆ ಯಾಗಶಾಲೆ, ದಕ್ಷಿಣಕ್ಕೆ ಪಾಕಶಾಲೆಯಿದೆ. ಈ ಪಾಕಶಾಲೆಯಲ್ಲಿ ಗಾಳಿ ಮತ್ತು ಹೊಗೆ ಹೋಗಲು ಮೇಲ್ಭಾಗದಲ್ಲಿ ನಾಲ್ಕೂ ಕಡೆಗಳಲ್ಲಿ ಕಿಟಕಿ ಇಡಲಾಗಿದೆ. ಮಳೆ ಬಂದರೂ ಇಲ್ಲಿ ಹನಿ ನೀರು ಬೀಳುವುದಿಲ್ಲ! ಪಾಕಕೋಣೆಯಲ್ಲಿ ತಯಾರಿಸಿದ ಪ್ರಸಾದವನ್ನು ಹೊರಗಿಡಲು ಹೊರ ಮುಖವಾಗಿ ಜಾಗ ಬಿಟ್ಟಿದ್ದಾರೆ. ಇದು ಆ ಕಾಲದ ಕ್ರಿಯಾಶೀಲತೆಗೆ ನಿದರ್ಶನವಾಗಿದೆ.

ಸಭಾಮಂಟಪಕ್ಕೆ ಏರಿ ಹೋಗಲು ‘ಹಸ್ತಿಹಸ್ತ’ ದಿಂದ ಕೂಡಿದ ಸೋಪಾನವಿದೆ. ಈ ಹಸ್ತಿಹಸ್ತದಲ್ಲಿ ಉತ್ತರಕ್ಕೆ ಆನೆ, ಪಶ್ಚಿಮಕ್ಕೆ ಶಭರ, ದಕ್ಷಿಣಕ್ಕೆ ಸಿಂಹದ ಚಿತ್ರ ಚಿತ್ರಿಸಲಾಗಿದೆ. ಸಭಾಮಂಟಪದಲ್ಲಿ ನವರಂಗ ಹಾಗೂ ಪ್ರದಕ್ಷಿಣ ಪಥವಲ್ಲದೆ ಇವೆರಡರ ಸುತ್ತ ಹೊರ ಪ್ರಕಾರವೂ ಇದೆ. ಗರ್ಭಗುಡಿಗೆ ಮೂರು ಕಡೆಗಳಿಂದ ಹತ್ತಿ ಇಳಿಯಲು ಇದರಿಂದ ಸಾಧ್ಯವಾಗುತ್ತದೆ. ಗರ್ಭಗುಡಿಯ ಉತ್ತರಕ್ಕೆ ಕಲಾತ್ಮಕ ಹಾಗೂ ಸುಂದರವಾದ ಪ್ರನಾಳವಿದೆ. ವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು ಹೊರ ಹೋಗಲು ಭಿತ್ತಿಯಲ್ಲಿ ‘ಸಿಂಹವಕ್ತ್ರ‘ ಶೈಲಿಯ ರಂಧ್ರಯುಕ್ತ ಪ್ರನಾಳವಿದೆ.  

 

ವಿಶೇಷ ಕಂಬ ಸಾಲುಗಳು

ಪ್ರತಿ ಕಂಬಗಳು ಆರು ಮೂಲೆಗಳಿಂದ ಕೂಡಿದೆ. ಕೆಳಭಾಗ ಚೌಕಾಕಾರದಲ್ಲಿದೆ. ದೀ‍ಪಗಳನ್ನು ಹಚ್ಚಲು ಕೆಲವು ಕಂಬಗಳಲ್ಲಿ ದೀಪಾಕೃತಿಗಳನ್ನು ಕೊರೆಯಲಾಗಿದೆ.   ಪ್ರವೇಶದ್ವಾರದಲ್ಲಿ 4 ಅಡಿ ಎತ್ತರದ ಜಯ–ವಿಜಯ ದ್ವಾರಪಾಲಕರಿದ್ದು, ನಂತರ ಅಂತರಾಳ ಸಿಗುತ್ತದೆ. ಇದು ಮುಚ್ಚಿದ ಅಂತರಾಳವಾಗಿದ್ದು, ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಶ್ರೀಕೋದಂಡ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ದೇವರ ವಿಗ್ರಹಗಳಿವೆ. ಮೂಲ ಶ್ರೀರಾಮ ದೇವರ ವಿಗ್ರಹ ಶತಮಾನಗಳ ಹಿಂದೆ ಕಳುವಾಗಿದ್ದರಿಂದ ಈಗ ಹೊಸ ವಿಗ್ರಹವನ್ನು ಸ್ಥಾಪಿಸಲಾಗಿದೆ. 

‘ಒಂದು ಸ್ಮಾರಕದ ಜೀರ್ಣೋದ್ಧಾರ ಎಂದರೆ ನಮ್ಮ ಪೂರ್ವಿಕರ ಕನಸಿನ ಪಳೆಯುಳಿಕೆಯನ್ನು ಜೋಪಾನ ಮಾಡಿ ಮುಂದಿನ ತಲೆಮಾರಿಗೆ ಬಿಟ್ಟುಕೊಡುವ ಒಟ್ಟಾರೆ ಪ್ರಕ್ರಿಯೆ. ಆ ಊರಿನ ಜನರಿಗೆ ಮತ್ತು ಸ್ಮಾರಕಕ್ಕೆ ಇರುವ ಅವಿನಾಭಾವ ಸಂಬಂಧವನ್ನು ತಿಳಿಸಬೇಕಾಗುತ್ತದೆ. ಆದರೆ, ಈ ಕೆಲಸ ನಡೆಯುತ್ತಿಲ್ಲ. ಸ್ಥಳೀಯರಿಗೆ ಸ್ಮಾರಕಗಳ ಬಗ್ಗೆ ಅರಿವು ಮೂಡಿಸಬೇಕು. ಈ ಕೆಲಸವಾಗದಿರುವುದು ದುರಂತ’ ಎನ್ನುತ್ತಾರೆ ಹರವು ದೇವೇಗೌಡ.

ದೇವರ ಕಾಡು

ಈ ಸ್ಮಾರಕದ ಮುಂಭಾಗ ಐದು ಎಕರೆಯಲ್ಲಿ ವೈವಿಧ್ಯಮಯ ಸಸ್ಯಸಂಕುಲವಿರುವ ಉದ್ಯಾನವಿದೆ. ಉದ್ಯಾನದ ತುಂಬಾ ದೇವ ಕಣಗಿಲೆ, ಉತ್ತರ ರಾಣಿ, ಆನೆ ನಗಲು ತರಹದ ಹುಲ್ಲು ಮರ, ಪೈರು ಬೆಳವನ ರಾಶಿಗಳಿವೆ. ಹೊನ್ನೆ, ಬಿದಿರು, ಬೀಟೆ, ಬೇವಿನಂತಹ ಕಾಡುಮರಗಳಿವೆ. ನೇರಳೆ, ಸಪೋಟ, ಸೀತಾಫಲ, ಜಂಬುನೇರಳೆ, ಹಲಸಿನಂತಹ ಹಣ್ಣಿನ ಮರಗಳೀವೆ. ದಾಸವಾಳ, ಪಾರಿಜಾತ, ಸೂಜಿ ಮಲ್ಲಿಗೆ, ಸಂಪಿಗೆ, ಕಣಗಿಲೆ ಹೂವಿನ ಗಿಡಗಳಿವೆ. ಗಿಡಮೂಲಿಕೆಗಳಾದ ನಾಗ ಮಟ್ಟಿ, ಅಂಟುವಾಳ, ಬೆಟ್ಟದ ನೆಲ್ಲಿ, ಮುರುಗ ಲೋಳೆ ಸರ, ದೊಡ್ಡ ಪಾತ್ರೆಯಂತಹ ಸಸ್ಯಗಳಿವೆ. ಸ್ವಾಭಾವಿಕವಾಗಿ ಬೆಳೆದಿರುವ ಸೋಗದೆ ಕೊನ್ನಾರಿ, ನಗಲು ನೆಲ್ಲಿ, ನಲ್ಲೆ ಚಕ್ರ, ಮುಟ್ಟಿದರೆ ಮುನಿ, ರೆಡ್ಡಿ ಮುರುಕಳುವಿನಂತಹ ಸಸ್ಯ ರಾಶಿಯಿದೆ.

ವೈವಿಧ್ಯಮಯ ಕೀಟಗಳು, ಬುಲ್ ಬುಲ್, ಮೈನಾ, ಗೀಜಗದಂತಹ ಹಕ್ಕಿಗಳು ಗೂಡು ಕಟ್ಟುತ್ತಿವೆ. ಅಳಿವಿನಂಚಿನಲ್ಲಿರುವ ಕೆಂದು ಗೂಬೆಗಳು ಆಗಾಗ ಕಾಣಿಸಿಕೊಳ್ಳುತ್ತವಂತೆ.

ಹಾವುಗಳು ಹಾಗೂ ಓತಿಕ್ಯಾತ ವೈವಿಧ್ಯಮಯ ಮಿಡತೆಯಂತಹ ಜೀವಿಗಳಿಗೂ ಈ ದೇವರ ಕಾಡು ಆಶ್ರಯವಾಗಿದೆ. ಚೆನ್ನೈನ ಪರಿಸರ ಶಿಕ್ಷಣ ಕೇಂದ್ರ ಎಂಬ ಸ್ವಯಂ ಸೇವಾ ಸಂಸ್ಥೆ ಆರಂಭದ ನಾಲ್ಕು ವರ್ಷ ದೇವರ ಕಾಡು ನಿರ್ಮಾಣಕ್ಕೆ ನೆರವಾಗಿದೆ. ಒಟ್ಟಾರೆ ಇಲ್ಲಿ ಜೀವಸಂಕುಲ, ಸಸ್ಯಸಂಕುಲ ಮತ್ತು ಸ್ಮಾರಕ ರಕ್ಷಣೆಯ ಜೊತೆಗೆ ಸಾಂಸ್ಕೃತಿಯ ರಕ್ಷಣಾ ಕೆಲಸ ನಡೆಯುತ್ತಿದ್ದು, ಎಲ್ಲವನ್ನು ಒಮ್ಮೆಗೆ ಸವಿಯಬಹುದು.  

‘ಈ ದೇವಾಲಯವು ಮಣ್ಣಿನಲ್ಲಿ ಹೂತುಹೋಗಿತ್ತು ಸಿಗುತ್ತಿರಲಿಲ್ಲ ಇದನ್ನು ಮೂಲ ಸ್ಥಿತಿಗೆ ತರಲು ಬಹಳಷ್ಟು ಕಷ್ಟವಾಗಿತ್ತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಅವರು ಸಹಾಯವನ್ನು ನೆನೆಯಲೇ ಬೇಕು’ ಎನ್ನುತ್ತಾರೆ ಅಂದಿನ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದ ತೈಲೂರು ವೆಂಕಟ ಕೃಷ್ಣ. 

***

ಅಳಿದು ಹೋಗುತ್ತಿದ್ದವು ಸಿಕ್ಕಿವೆ

ಪಾಳು ಬಿದ್ದು ಯಾರ ಕಣ್ಣಿಗೂ ಕಾಣಿಸದೆ ಮರೆಯಾಗಿ ಹೋಗಿದ್ದ ಹಲವು ಪಳೆಯುಳಿಕೆಗಳು ಸ್ಮಾರಕದ ಜೀರ್ಣೋದ್ಧಾರದ ಸಮಯದಲ್ಲಿ ಸಿಕ್ಕಿದೆ. ಅವುಗಳಲ್ಲಿ ಈ ಸ್ಮಾರಕ ವಾಣಿಜ್ಯ ಕೇಂದ್ರವಾಗಿತ್ತು ಎನ್ನುವ ಶಾಸನ, ಟಿಪ್ಪು ಕಾಲದ ನಾಣ್ಯ ಮತ್ತು ಸ್ಮಾರಕ ನಿರ್ಮಾಣದಲ್ಲಿ (ಕುರ್ಚಿಗಾರೆ ಅರೆಯುವ ಕಲ್ಲು) ಮಣ್ಣು ತಿರುಗಿಸಲು ಮತ್ತು ಕಂಬಗಳನ್ನು ಎತ್ತಲು ಬಳಸಲಾಗಿದ ಕಲ್ಲುಗಳು ಪ್ರಮುಖವಾದವಾಗಿವೆ.

ಬೇಸಿಗೆ ಶಿಬಿರ

ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಸುತ್ತಮುತ್ತಲಿನ ಶಾಲೆಯ ಮಕ್ಕಳು ಇಲ್ಲಿಗೆ ಬಂದು ಹೊಸ ವಿಷಯಗಳನ್ನು ಕಲಿಯುತ್ತಾರೆ. ಹರವು ದೇವೇಗೌಡ ಅವರು 2008ರಿಂದ ನಿರಂತರವಾಗಿ ಬೇಸಿಗೆ ಶಿಬಿರ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ವಿಭಿನ್ನ ವಿಷಯಗಳನ್ನು ಮಕ್ಕಳಿಗೆ ಈ ಶಿಬಿರದಲ್ಲಿ ಹೇಳಿಕೊಡಲಾಗುತ್ತಿದೆ. ಒಂದು ವರ್ಷ ಕಂಸಾಳೆ ಇನ್ನೊಂದು ವರ್ಷ ಸ್ಮಾರಕದ ಬಗ್ಗೆ ವಿಷಯತಜ್ಞರಿಂದ ಶಿಬಿರವನ್ನು ನಡೆಸಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.