ಶನಿವಾರ, ಜೂನ್ 6, 2020
27 °C
3 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯುತ್ತಿರುವ ಸಂತೇಮರಹಳ್ಳಿಯ ರೈತ ಮಹಿಳೆ

ಬೇಬಿಗೆ ಕೃಷಿ–ಹೈನುಗಾರಿಕೆಯೇ ಬಂಧು ಬಾಂಧವರು!

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ರೈತರು ತಮ್ಮ ಕೃಷಿ ಚಟುವಟಿಕೆಯ ಜತೆಗೆ ಹೈನುಗಾರಿಕೆಯನ್ನು ಉಪಕಸುಬಾಗಿ ಅಳವಡಿಸಿಕೊಂಡರೆ ಆರ್ಥಿಕ ಪ್ರಗತಿ ಹೊಂದಬಹುದು ಎನ್ನುವುದಕ್ಕೆ ಸಂತೇಮರಹಳ್ಳಿಯ ಬೇಬಿ ಎಂಬ ರೈತ ಮಹಿಳೆ ಸಾಕ್ಷಿಯಾಗಿದ್ದಾರೆ.

ಬಸವಟ್ಟಿ ಗ್ರಾಮದ ಎಲ್ಲೆಗೆ ಸೇರಿದ ತಮ್ಮ 3 ಎಕರೆ ಜಮೀನಿನಲ್ಲಿ ವ್ಯವಸಾಯ ಹಾಗೂ ಹೈನುಗಾರಿಕೆಯೊಂದಿಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಗ್ರಾಮದ ಸಂಪರ್ಕವಿಲ್ಲದ ಇವರು ಹಸುಕರುಗಳು ಹಾಗೂ ಗಿಡಮರಗಳನ್ನೇ ಬಂದು ಬಾಂಧವರಂತೆ ಕಾಣುತ್ತಾ ಪೂರ್ಣಪ್ರಮಾಣದಲ್ಲಿ ಕೃಷಿಯಲ್ಲಿ ನಿರತರಾಗಿದ್ದಾರೆ.

ಹೈನುಗಾರಿಕೆ ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಇದು ಚಿಕ್ಕ, ವೈವಿಧ್ಯಮಯ ಒಕ್ಕಲು ಜಮೀನುಗಳ ಒಂದು ಭಾಗ ಎನಿಸಿಕೊಂಡಿದೆ. ಈ ಭಾಗದಲ್ಲಿ ಹೈನುಗಾರಿಕೆ ಹಾಗೂ ವ್ಯವಸಾಯ ಹೊಸದೇನಲ್ಲ. ಈ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಆರ್ಥಿಕವಾಗಿ ಪ್ರಗತಿ ಕಾಣುವ ಜಾಣ್ಮೆಯನ್ನು ಬೇಬಿ ಅವರು ಹೊಂದಿದ್ದಾರೆ.

ವ್ಯವಸಾಯ ಮಾಡುವುದರೊಂದಿಗೆ 3 ಹಸುಗಳನ್ನು ಆರೈಕೆ ಮಾಡುತ್ತ ಹಾಲು ಕರೆದು ವಾರಕೊಮ್ಮೆ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. ತಮ್ಮಲ್ಲಿರುವ 3 ಹಸುಗಳಿಂದ ಬೆಳಿಗ್ಗೆ ಮತ್ತು ಸಾಯಂಕಾಲದ ವೇಳೆ ಸೇರಿ ಒಟ್ಟು 15 ಲೀಟರ್ ವರೆಗೂ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡುತ್ತಾರೆ. ಪ್ರತಿ ಲೀಟರ್‌ಗೆ ಸರ್ಕಾರ ನೀಡುವ ಪ್ರೋತ್ಸಾಹಧನ ಸೇರಿ ಪ್ರತಿದಿನ ₹ 400ರ ವರೆಗೂ ದುಡ್ಡು ಬರುತ್ತದೆ.

ಅಂತರ ಬೆಳೆ ವ್ಯವಸಾಯ: ಎರಡು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ ಬೆಳೆದಿದ್ದೇನೆ. ಅರ್ಧ ಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆಸಿದ್ದೇನೆ. ಉಳಿದ ಅರ್ಧ ಎಕರೆಯಲ್ಲಿ ಹೂವಿನ ಗಿಡಗಳು ಹಾಗೂ ನೆರಳಿಗಾಗಿ ಗಿಡಗಳನ್ನು ಬೆಳೆಸಲಾಗಿದೆ. ಕೊಳವೆಬಾವಿಯಿಂದ ನೀರು ಹರಿಯಬಿಡುತ್ತೇನೆ. ಈಗ ನೇಂದ್ರ ಬಾಳೆ ಕಟಾವು ಹಂತಕ್ಕೆ ಬಂದಿದೆ. ಒಂದು ಬಾಳೆಗಿಡದ ಗೊನೆ 10 ಕೆಜಿಯಂತೆ ಎಕರೆಗೆ 10 ಟನ್ ಬರುವ ನಿರೀಕ್ಷೆ ಇದೆ. ಬಾಳೆಯೊಂದಿಗೆ ಅಂತರ ಬೆಳೆ ಬೇಸಾಯವಾಗಿ ಮೆಣಸು, ಚೊಟ್ಟೆಕಾಯಿ, ಈರುಳ್ಳಿ, ಮಂಗಳೂರು ಸೌತೆಕಾಯಿ ಬೆಳೆಗಳನ್ನು ಬೆಳೆಯಲಾಗಿದೆ. ಅಂತರ ಬೆಳೆಯಿಂದಲೂ ಲಾಭ ಗಳಿಸಬಹುದು ಎಂದು ಬೇಬಿ ಅವರು ‘ಪ್ರಜಾವಾಣಿ’ಗೆ ಹೇಳಿದರು.

ಸುಂದರ ತೋಟ: ಇದರೊಂದಿಗೆ ಜಮೀನಿನ ಸುತ್ತಲೂ ತೆಂಗು ಬೆಳೆದಿದ್ದಾರೆ. ಜತೆಗೆ ನೂರಕ್ಕೂ ಹೆಚ್ಚು ತೇಗದ ಮರಗಳನ್ನು ಬೆಳೆದಿದ್ದು, ನೋಡಿದಾಗ ಸುಂದರ ತೋಟವಾಗಿ ನಿರ್ಮಾಣಗೊಡಿರುವಂತೆ ಕಾಣುತ್ತದೆ. ಭವಿಷ್ಯದ ದಿನಗಳಲ್ಲಿ ಈ ಮರಗಳು ಹೆಚ್ಚು ಲಾಭದಾಯಕವಾಗುವ ಆಶಾಭಾವನೆಯನ್ನು ಅವರು ವ್ಯಕ್ತಪಡಿಸುತ್ತಾರೆ.

‘ಜಮೀನಿನಲ್ಲಿ ನಾವೇ ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವುದರಿಂದ ಹೆಚ್ಚು ಹಣ ಪೋಲು ಮಾಡಲು ಅವಕಾಶವಿಲ್ಲ. ಹಸುಗಳನ್ನು ಕಟ್ಟಿಕೊಂಡು ಜಮೀನಿನಲ್ಲಿ ಇರುವುದರಿಂದ ನಮಗೆ ಎಲ್ಲಕ್ಕಿಂತ ಹೆಚ್ಚು ನೆಮ್ಮದಿಯ ವಾತಾವರಣವಿದೆ. ಅಂತರ ಬೆಳೆಗಳಿಂದ ಕೆಲವೊಮ್ಮೆ ಕಡಿಮೆ ಪ್ರಮಾಣದ ನಷ್ಟ ಉಂಟಾಗುತ್ತದೆ. ಅದನ್ನು ಹೊರತುಪಡಿಸಿದರೆ ಹೆಚ್ಚಿನ ಆರ್ಥಿಕ ಹೊರೆ ಇಲ್ಲ’ ಎನ್ನುತ್ತಾರೆ ಬೇಬಿ.

ಖರ್ಚು ಕಡಿಮೆ; ಉಳಿತಾಯ ಹೆಚ್ಚು

‘ಹಸುಗಳನ್ನು ಸಾಕುತ್ತಿರುವುದರಿಂದ ನಮಗೆ ಯಥೇಚ್ಛವಾಗಿ ಕೊಟ್ಟಿಗೆ ಗೊಬ್ಬರ ಸಿಗುತ್ತಿದೆ. ಹಾಗಾಗಿ, ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಆದ್ಯತೆ ನೀಡಿಲ್ಲ. ಕುಟುಂಬವೇ ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವುದರಿಂದ ಕೂಲಿ ಆಳುಗಳನ್ನು ಪೂರ್ಣ ಪ್ರಮಾಣದಲ್ಲಿ  ಬಳಸಿಕೊಂಡಿಲ್ಲ. ಜತೆಗೆ, ಕಡಿಮೆ ಕೂಲಿ ಆಳು ಹಾಗೂ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಔಷಧಿ ಬಳಸುವುದರಿಂದ ಕಡಿಮೆ ಖರ್ಚು. ಇದರಿಂದ ಹೆಚ್ಚು ಉಳಿತಾಯವಾಗುತ್ತಿದೆ. ಆದ್ಯತೆಗೆ ಅನುಗುಣವಾಗಿ ಹಣ ವ್ಯಯ ಮಾಡುತ್ತೇನೆ’ ಎಂದು ಬೇಬಿ ಅವರು ಹೇಳುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು