ಶುಕ್ರವಾರ, ಜೂನ್ 25, 2021
20 °C
ಪರ್ಯಾಯ ಬಳಕೆಗಿಲ್ಲ ಅವಕಾಶ

ಪರಿಶಿಷ್ಟ ವಿದ್ಯಾರ್ಥಿಗಳ ಕೊರತೆ; ಹಾಸ್ಟೆಲ್‌ ಬಂದ್‌, ಹಾಳು ಕೊಂಪೆಯಾದ ಕಟ್ಟಡ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Deccan Herald

ದೇವರ ಹಿಪ್ಪರಗಿ: ಬಾಲಕರ ಶೈಕ್ಷಣಿಕ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ವಸತಿ ನಿಲಯವೊಂದು, ಇದೀಗ ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಅನಾಥವಾಗಿದೆ. ಯಾವೊಬ್ಬ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿ ಇಲ್ಲಿ ಪ್ರವೇಶಾತಿ ಪಡೆಯದಿದ್ದರಿಂದ ಖಾಲಿಯಿರುವ ಸುಸಜ್ಜಿತ ಕಟ್ಟಡ ಹಾಳು ಕೊಂಪೆಯಾಗಿದೆ.

ಪರ್ಯಾಯ ಬಳಕೆಗೆ ಸ್ಥಳೀಯರು ಮೂರು ವರ್ಷದ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದನೆ ಸಿಗದ ಪರಿಣಾಮ ಲಕ್ಷ, ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ಕಟ್ಟಡವೊಂದು ಇದೀಗ ಅನಾಥ ಸ್ಥಿತಿ ಎದುರಿಸುತ್ತಿದೆ. ಸೂಕ್ತ ಭದ್ರತೆಯಿಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯವೇ ಇಂಥ ದುಃಸ್ಥಿತಿಯಲ್ಲಿದೆ.

ಕಟ್ಟಡ ಸುಸಜ್ಜಿತವಾಗಿದೆ. ವಿಶಾಲವಾದ ಆರು ಕೋಣೆಗಳು. ಐದು ಸ್ನಾನ ಗೃಹಗಳು, ಐದು ಶೌಚಾಲಯ, ಅಡುಗೆ ಮನೆ, ಕೈ ತೊಳೆದುಕೊಳ್ಳಲು ನೀರಿನ ತೊಟ್ಟಿ, ನಡುವೆ ವಿಶಾಲವಾದ ಒಳಾಂಗಣವಿದೆ. ಇವುಗಳನ್ನು ಬಳಸಲು ವಿದ್ಯಾರ್ಥಿಗಳೇ ಇಲ್ಲದಿರುವುದರಿಂದ ಇಡೀ ಕಟ್ಟಡ ಪಾಳು ಬೀಳುತ್ತಿದೆ.

‘ವಸತಿ ನಿಲಯ ಈ ಹಿಂದೆ ವಿದ್ಯಾರ್ಥಿಗಳಿಂದ ತುಂಬಿತ್ತು. ಆದರೆ ಇದೀಗ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಪುನಃ ಆರಂಭಿಸಿ ಸಾಮಾನ್ಯ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶ ನೀಡಬೇಕು. ನಾವು ಇಲ್ಲಿನ ಪ್ರೌಢಶಾಲೆಗೆ ದೂರದ ತೋಟದ ಮನೆಗಳಿಂದ ಬರುತ್ತಿದ್ದು, ನಮ್ಮ ಮನೆಗಳು ಇಲ್ಲಿಂದ 3-4 ಕಿ.ಮೀ. ದೂರದಲ್ಲಿವೆ.

ನಿತ್ಯ ಮನೆಗೆ ಹೋಗಿ ಬರುವುದರಲ್ಲಿಯೇ ನಮ್ಮ ಸಮಯ ವ್ಯರ್ಥವಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೃಂದ ನಮ್ಮ ಪರಿಸ್ಥಿತಿ ಅರಿತು, ನಿಯಮ ಸಡಿಲಿಸಿ ಪುನಃ ನಿಲಯ ಆರಂಭಿಸಬೇಕು. ಇದರಿಂದ ತೋಟದ ವಸತಿಯಿಂದ ಶಾಲೆಗೆ ಬರುವ ಕನಿಷ್ಠ 30 ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ’ ಎಂದು ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳಾದ ದಯಾನಂದ ಬಸರಕೋಡ, ಸಂತೋಷ ತಳವಾರ, ರಾಹುಲ ನಾಯ್ಕೋಡಿ ಹೇಳಿದರು.

‘ವಸತಿ ನಿಲಯವನ್ನು ಈವರೆಗೆ ನಿರ್ಲಕ್ಷ್ಯ ಮಾಡಿದ ಪರಿಣಾಮವೇ ಇಂದಿನ ಸ್ಥಿತಿಗೆ ಕಾರಣ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ ಇನ್ನಾದರೂ ಎಚ್ಚೆತ್ತು ಸಾಮಾನ್ಯ ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಅನ್ವಯವಾಗುವ ನಿಲಯ ಆರಂಭಿಸಬೇಕು. ಇಲ್ಲವೇ ಈ ಕಟ್ಟಡವನ್ನು ಪ್ರೌಢಶಾಲೆ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಗಾಗಿ ಹಸ್ತಾಂತರಿಸಬೇಕೆಂದು’ ವಿದ್ಯಾರ್ಥಿಗಳಾದ ಆಕಾಶ ಕುಂಬಾರ, ಮಹೇಶ ನಾಯ್ಕೋಡಿ, ವಿಲಾಸ ಕಾವಳೆ, ಗ್ರಾಮದ ಪ್ರಮುಖರಾದ ಉಮೇಶ ಬಿರಾದಾರ, ಸಂಗನಗೌಡ ಬಿರಾದಾರ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು