ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಕಲ್ ಜಂಗಮನ ವಿಶ್ವಯಾನ

Last Updated 29 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಮೂರು ವರ್ಷಗಳ ಹಿಂದೆ ಶುರುವಾದ ಡಾ.ರಾಜ್ ಫೆಂಡನ್ ಅವರ ಸೈಕಲ್‌ ಯಾನ ಮುಂದಿನ ದಿನಗಳಲ್ಲಿ ಆಫ್ರಿಕಾ, ದಕ್ಷಿಣ– ಉತ್ತರ ಅಮೆರಿಕ ಖಂಡಗಳನ್ನು ಸುತ್ತಿ ಮತ್ತೆ ಹರಿಯಾಣದ ಭುನಾಕ್ಕೆ ತಲುಪಬಹುದು.

ನೀವು ಇಂಗ್ಲೆಂಡಿನ ರಸ್ತೆಯಲ್ಲಿ ಸಾಗುತ್ತಿದ್ದರೆ ಭಾರತದ ಪತಾಕೆಯನ್ನು ಹಿಂದೆ ಸಿಕ್ಕಿಸಿಕೊಂಡ ಸೈಕಲ್ಲೊಂದು ನಿಮ್ಮನ್ನು ಹಾದು ಹೋಗಬಹುದು. ಮತ್ತೆ ಮಣ್ಣಿನಲ್ಲಿ ಆ ಸೈಕಲ್ಲಿನ ಚಕ್ರಗಳು ಮೂಡಿಸುತ್ತಾ ಬಂದ ಚಿಹ್ನೆಗಳ ಜಾಡು ಹಿಡಿದು ಹೊರಟರೆ ಅದು ನಿಮ್ಮನ್ನು ಭಾರತದ ಹರಿಯಾಣ ರಾಜ್ಯದ ಭುನಾ ಎನ್ನುವ ಸ್ಥಳಕ್ಕೆ ತಂದು ನಿಲ್ಲಿಸಬಹುದು.

ಈ ಸೈಕಲ್ ಈಗಷ್ಟೇ ತಲುಪಿದ ಇಂಗ್ಲೆಂಡ್ ಮತ್ತು ಇಂತಹ ಪಯಣವೊಂದನ್ನು ಶುರು ಮಾಡಿದ ಸ್ಥಳವಾದ ಹರಿಯಾಣ ಇವುಗಳ ನಡುವೆ ಸುಮಾರು ಐವತ್ತು ದೇಶಗಳನ್ನು ಸುತ್ತಿ ಅಲೆದಿದೆ. ತನ್ನ ಸೈಕಲ್ಲಿನ ಮೇಲೆ ನಲವತ್ತು ಕಿಲೋ ತೂಕದ ಸರಂಜಾಮುಗಳು, ಪ್ರವಾಸ ಸ್ನೇಹಿ ಅತ್ಯಾಧುನಿಕ ಉಪಕರಣಗಳು, ಹಾಸಿಗೆ, ಡೇರೆಗಳನ್ನು ಹೇರಿಕೊಂಡು ದೇಶಗಳನ್ನು ದಾಟಿ, ಖಂಡಗಳನ್ನು ಮೀರಿ ಸೈಕಲ್ ತುಳಿಯುತ್ತಿರುವ ವ್ಯಕ್ತಿ ಡಾ.ರಾಜ್ ಫೆಂಡನ್.

ಕೆಲವು ವರ್ಷಗಳ ಹಿಂದಿನವರೆಗೂ ಹರಿಯಾಣದ ಭುನಾದಲ್ಲಿ ಆಯುರ್ವೇದ ಆಸ್ಪತ್ರೆ ಕಟ್ಟಿಕೊಂಡು ವ್ಯವಸ್ಥಿತ ಜೀವನ ನಡೆಸುತ್ತಿದ್ದವರು ಬದುಕಿನಲ್ಲಿ ಆಕಸ್ಮಿಕವಾಗಿ ಎದುರಾದ ಸರಣಿ ದುರಂತಗಳ ಪರಿಣಾಮವಾಗಿ ಪಥ ಬದಲಿಸಿದ್ದಾರೆ. ಗರ್ಭಿಣಿಪತ್ನಿಯ ಅಕಾಲಿಕ ಸಾವು, ಅದರ ಬೆನ್ನಲ್ಲೇ ತಂದೆ– ತಾಯಿರ ಅಗಲುವಿಕೆಯಿಂದ ತತ್ತರಗೊಂಡು ತನ್ನ ಆಸ್ಪತ್ರೆಯನ್ನು ದಯಾಧರ್ಮ ಸಂಸ್ಥೆಯಾಗಿ ಬದಲಾಯಿಸಿ ಆಸ್ತಿಯನ್ನು ತಂಗಿಯ ಹೆಸರಿಗೆ ವರ್ಗಾಯಿಸಿ ಸೈಕಲಿನೊಟ್ಟಿಗೆ ಮನೆ
ಬಿಟ್ಟಿದ್ದಾರೆ.

ಜಗತ್ತಿನ ದಿಕ್ಕು ಮೂಲೆಗಳನ್ನು ಸುತ್ತುವ ಗುರಿ ಹೊಂದಿದ ಇವರು ಹೋದಲ್ಲೆಲ್ಲಾ ಪರಿಸರ ಸಂರಕ್ಷಣೆಯ ಸಂದೇಶ ಬಿತ್ತುತ್ತಿದ್ದಾರೆ. ತನ್ನ ಈ ಮಹಾಯಾನವನ್ನು ‘ವೀಲ್ಸ್ ಫಾರ್ ಗ್ರೀನ್’ ಎಂದು ಕರೆದುಕೊಳ್ಳುತ್ತಾರೆ. ಈಗಾಗಲೇ 49 ಸಾವಿರ ಕಿಲೋಮೀಟರ್‌ಗಳನ್ನು ನಂಬಿಗಸ್ಥ ದ್ವಿಚಕ್ರಗಳನ್ನು ತುಳಿಯುತ್ತ ಕ್ರಮಿಸಿದ್ದಾರೆ. ರಾಜ್ ಅವರ ಇಲ್ಲಿಯವರೆಗಿನ ಯಾನ ಭೂಮಿಯ ಸುತ್ತಳತೆಗಿಂತ ಹೆಚ್ಚು!

ಭಾರತೀಯ ಸಿನಿಮಾಗಳ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಮತ್ತು ಜನಾಕರ್ಷಣೆ ಪಡೆದ ‘ಶೋಲೆ’ ಚಿತ್ರದ ಅಭಿಮಾನಿಯಾದ ಇವರು ತಮ್ಮ ಸೈಕಲ್‌ಗೆ ‘ಧನ್ನೋ’ ಎಂದು ಹೆಸರಿಟ್ಟಿದ್ದಾರೆ. ಚಿತ್ರದುದ್ದಕ್ಕೂ ಕಥಾನಾಯಕಿ ‘ಬಸಂತಿ’ ಸವಾರಿ ಮಾಡುವ ಗಾಡಿಯ ಕುದುರೆ ‘ಧನ್ನೋ’ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿಯೂ ಚಲಾಯಿಸುವವಳನ್ನು ನಿರಾಶೆಗೊಳಿಸುವುದಿಲ್ಲ. ಹಾಗೆಯೇ ತನ್ನ ಸೈಕಲ್ ಕೂಡ ಎಂದು ರಾಜ್ ನಂಬುತ್ತಾರೆ.

ಭಾರತ, ಭೂತಾನ್, ಶ್ರೀಲಂಕಾ, ಯುರೋಪ್, ಅರ್ಮೇನಿಯಾ, ಟರ್ಕಿ, ಸಿಂಗಪುರ, ಮಲೇಷ್ಯಾ, ಮಧ್ಯಪ್ರಾಚ್ಯದ ದೇಶಗಳು, ಇಂಗ್ಲೆಂಡ್ ಹೀಗೆ ಇಲ್ಲಿಯತನಕ ಅಲೆದ ದೇಶಗಳ ಹೆಸರುಗಳನ್ನು ನಿರರ್ಗಳವಾಗಿ ಒಂದೇ ಉಸಿರಿನಲ್ಲಿ ಹೇಳುವ ಇವರು ಹೋಟೆಲ್‌ನ ಸರ್ವರ್‌ ತಿನಿಸುಗಳ ಪಟ್ಟಿಯ ಬಾಯಿಪಾಠ ಒಪ್ಪಿಸುವುದನ್ನು ನೆನಪಿಸುತ್ತಾರೆ.

ನಿಲ್ಲಿಸಿ ಮಾತನಾಡಿಸುವವರ ಜೊತೆಗೆ ತಮ್ಮ ಅನುಭವದ ಆಳದಿಂದ ಎಳೆಗಳನ್ನು ಬಿಡಿಸಿ ಹಂಚುತ್ತಾರೆ. ಪ್ರತಿ ದೇಶವೂ ಕುತೂಹಲದ ರೋಚಕ ತಾಣ ಎಂದು ತಿಳಿಯುತ್ತ ನಿತ್ಯವೂ ಸಿಗುವ ನವೀನ ಅನುಭೂತಿಗಳಿಗೆ, ಸವಾಲುಗಳಿಗೆ ಮುಕ್ತವಾಗಿ ಒಗ್ಗಿ ಒಪ್ಪಿಸಿಕೊಳ್ಳುತ್ತಾರೆ. ಇವರ ಅತ್ಯಂತ ಮಧುರ ಮತ್ತು ಕರಾಳ ಅನುಭವಗಳೆರಡೂ ಇರಾನ್ ದೇಶದಲ್ಲಿ ದೊರಕಿವೆಯಂತೆ.

ಮಾತನಾಡಿದ ಅಪರಿಚಿತ ವ್ಯಕ್ತಿಗೆ ಚಹಾ ಕುಡಿಸುವ, ಚಹಾ ಜೊತೆಗಾರಿಕೆಯ ಎಳೆಯಲ್ಲಿ ಮನೆಗೆ ಊಟಕ್ಕೆ ಕರೆಯುವ, ಊಟ ಮಾಡಿದ ನೆಪಕ್ಕೆ ಮನೆಯಲ್ಲಿ ಮೂರ್ನಾಲ್ಕು ದಿನ ಉಳಿಸಿಕೊಳ್ಳುವ ಇರಾನಿಯರ ಹೃದಯ ವೈಶಾಲ್ಯ, ಆತ್ಮೀಯತೆಗೆ ಶರಣು ಹೇಳುತ್ತಾರೆ.

ಹೊಟ್ಟೆ ತುಂಬಾ ಹಸಿವು ಮತ್ತು ಖಾಲಿ ಜೇಬು ಎರಡನ್ನೂ ಕಟ್ಟಿಕೊಂಡು ಓಮನ್ ದೇಶದಲ್ಲಿ ಸೈಕಲ್ ತುಳಿಯುವಾಗ ಕೇರಳದ ಹೋಟೆಲಿನವನು ಊಟ ಹಾಕಿ ಹಣ ಕೇಳಿದ್ದು, ಪಾಕಿಸ್ತಾನಿ ಖಾನಾವಳಿಯವನು ಪುಕ್ಕಟೆಯಾಗಿ ಹೊಟ್ಟೆ ತುಂಬಿಸಿ ಕಳುಹಿಸಿದ್ದನ್ನು ನೆನೆಯುತ್ತಾರೆ.

ಪರದೇಶದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವ ಆಸೆಯಲ್ಲಿ ಮಾನವ ಕಳ್ಳಸಾಗಾಣಿಕೆಯ ಮಾರ್ಗ ಅವಲಂಬಿಸಿ ಸಾಗುವ ಕೆಲವು ದೇಶೀಯರನ್ನು ನಡುದಾರಿಯ ದೇಶವಾದ ಅರ್ಮೇನಿಯಾದಲ್ಲಿ ಹಣ ಪಡೆದ ಏಜೆಂಟ್ ಬಿಟ್ಟು ಪರಾರಿಯಾದಾಗ ದಿಕ್ಕುತಪ್ಪಿ ಅಲೆದೋ ಅಥವಾ ಗಡಿರಕ್ಷಕರಿಂದ ಶಿಕ್ಷಿತರಾಗಿಯೋ ಘಾಸಿಗೊಂಡು ಬಳಲುವವರಿಗೆ ಚಿಕಿತ್ಸೆ ನೀಡಿದ ಕಥೆಗಳನ್ನು ಹೇಳುತ್ತಾರೆ. ದೇಶ, ಭಾಷೆ, ಸಂಸ್ಕೃತಿ, ಧರ್ಮಗಳನ್ನು ತೆರೆದ ಮನಸ್ಸಿನಿಂದ ನೋಡುವ ಈ ಸೈಕಲ್ ಪಯಣಿಗನನ್ನು ಫಿಲಿಫೇನ್ಸಿನ ಭಾರತೀಯ ರಾಯಭಾರ ಕಚೇರಿಯವರು ‘ಸೈಕಲ್ ಬಾಬಾ’ ಎಂದು ಕರೆದಿದ್ದಾರೆ.

ನಮ್ಮ ಸುತ್ತಮುತ್ತ ನಿತ್ಯ ಕಾಣುವ ಸಿದ್ಧ ಮಾದರಿಯ ವೇಷಭೂಷಣ, ಓತಪ್ರೋತವಾದ ವಾಗ್ಝರಿ, ಭಯ, ಗೊಂದಲ ಮೂಢನಂಬಿಕೆಗಳನ್ನು ಹುಟ್ಟಿಸುವ ಹೆಚ್ಚಿಸುವ ಬೂಟಾಟಿಕೆಯ ಬಾಬಾಗಳ ನಡುವೆ ರಾಜ್ ನಿಜವಾದ ಸಂತನಂತೆ ಕಾಣುತ್ತಾರೆ. ಹರಿಯಾಣದ ರೋಟರಿ ಸಂಸ್ಥೆ, ಶಿಕ್ಷಣ ಪಡೆದ ನವೋದಯ ವಿದ್ಯಾಸಂಸ್ಥೆಯ ಜಗತ್ವ್ಯಾಪಿ ಹಳೇ ವಿದ್ಯಾರ್ಥಿಗಳು, ಅಚಾನಕ್ ಆಗಿ ಸಿಗುವ ದಾನಿಗಳು ನೀಡಿದ ನೀಡುವ ಸಣ್ಣ ಸಣ್ಣ ಸಹಾಯ, ಸಹಕಾರ, ತಿರುಗಾಟದ ವಿಶಿಷ್ಟ ಅನುಭಗಳ ವಿಡಿಯೊಗಳನ್ನೂ ‘ಸೈಕಲ್ ಬಾಬಾ ಯೂಟ್ಯೂಬ್ ಚಾನೆಲ್’ಗೆ ಏರಿಸಿ ವೀಕ್ಷಕರನ್ನು ಹೆಚ್ಚಿಸಿಕೊಂಡಿದ್ದಕ್ಕೆ ಸಿಗುವ ಕಿರು ಆದಾಯವನ್ನು ಭಿಕ್ಷುವಿನಂತೆ ಸ್ವೀಕರಿಸುತ್ತ ಲೋಕವೆಲ್ಲ ತನ್ನದೇ ಎನ್ನುತ್ತ ಸಾಗುತ್ತಿದ್ದಾರೆ.

ಡಾ.ರಾಜ್ ಫೆಂಡನ್ ಅವರ ಸೈಕಲ್ ‘ಧನ್ನೋ’

ತಮ್ಮ ಯಾನದುದ್ದಕ್ಕೂ ಬಿಸ್ಲೆರಿಯಂತಹ ಶುದ್ಧೀಕರಿಸಿದ ಬಾಟಲಿ ನೀರನ್ನು ಕೊಳ್ಳದ ಇವರು ಊರು, ದೇಶಗಳಲ್ಲಿರುವ ಗುರುದ್ವಾರ, ಮಂದಿರ, ಮಸೀದಿಗಳಲ್ಲಿ ಆಶ್ರಯ ಪಡೆಯುತ್ತಾರೆ. ನಲ್ಲಿ ನೀರಿನಲ್ಲೇ ಬಾಯಾರಿಕೆ ಇಂಗಿಸಿಕೊಳ್ಳುತ್ತಾರೆ. ಬಯಲಿನಲ್ಲಿ ಡೇರೆ ಹಾಕಿಕೊಂಡು ನಿಶೆಯ ತಾರಾಮಂಡಲದೊಟ್ಟಿಗೆ ಮಾತನಾಡುತ್ತ ರಾತ್ರಿ ಕಳೆಯುತ್ತಾರೆ. ಅಪರಿಚಿತನೊಬ್ಬನನ್ನು ಪ್ರೀತಿಯಲ್ಲಿ ಬರಮಾಡಿಕೊಂಡು ಸತ್ಕರಿಸುವ ಗುರುದ್ವಾರಗಳ ಆತಿಥ್ಯ ಇನ್ನೆಲ್ಲೂ ಸಿಗದೇನೋ ಎನ್ನುತ್ತಾರೆ.

ಅಚ್ಚುಕಟ್ಟಾದ ಯೋಜನೆ, ಆಳವಾದ ಪೂರ್ವತಯಾರಿಯೊಂದಿಗೆ ಅಣಿಯಾಗುವ ವಿಶ್ವ ಪಯಣಿಗರಂತಲ್ಲದ ‘ಸೈಕಲ್ ಬಾಬಾ’ ಆ ದಿನದ ಅಲೆದಾಟ, ವಸತಿ, ವಿಶ್ರಾಂತಿಗಿಂತ ಬಹಳ ಮುಂದೆ ಯೋಚಿಸಿದ್ದಿಲ್ಲ. ಕಳೆದ ಮೂರು ತಿಂಗಳುಗಳಲ್ಲಿ ಬ್ರಿಟನ್‌ನ ಮೂಲೆ ಮೂಲೆ ಸುತ್ತಿರುವ ಇವರ ಸೈಕಲ್ ಇದೀಗ ಫ್ರಾನ್ಸಿನ ಮೂಲಕ ಯುರೋಪ್ ಅನ್ನು ಇನ್ನೊಮ್ಮೆ ಪ್ರವೇಶಿಸಿ ಅಲ್ಲಿಂದ ಮುಂದೆ ಆಫ್ರಿಕಾವನ್ನು ತಲುಪಿ ಸಹಾರಾ ಮರಳುಗಾಡಿನಲ್ಲಿ ಚಕ್ರದ ಗೆರೆ ಎಳೆಯುವ ತವಕದಲ್ಲಿದೆ.

ಮೂರು ವರ್ಷಗಳ ಹಿಂದೆ ಭಾರತದಲ್ಲಿ ಶುರುವಾದ ಈ ಯಾನ ಮುಂದಿನ ದಿನಗಳಲ್ಲಿ ಆಫ್ರಿಕಾ, ದಕ್ಷಿಣ– ಉತ್ತರ ಅಮೆರಿಕ ಖಂಡಗಳನ್ನು ಸುತ್ತಿ ಆಮೇಲೆ ಆಸ್ಟ್ರೇಲಿಯಾ ತಲುಪಿ ಐದೋ ಹತ್ತೋ ವರ್ಷಗಳಲ್ಲಿ ಮತ್ತೆ ಹರಿಯಾಣದ ಭುನಾ ತಲುಪಬಹುದು. ಹೋದಲ್ಲಿ ನಿಂತಲ್ಲಿ ಗಿಡ ನೆಡುವ ಬಗೆಗೆ, ಮಾಲಿನ್ಯರಹಿತ ಸಾಗಾಟದ ಕುರಿತು ಮಾತನಾಡುವ ಇವರು ‘ಪರಿಸರ ಬಾಬಾ’ ಕೂಡ ಹೌದು.

ಭಾರತದಿಂದ ಸೈಕಲ್ ತುಳಿದುಕೊಂಡು ವಿಶ್ವ ಪರ್ಯಟನಕ್ಕೆ ಹೊರಟವರಲ್ಲಿ ಇವರು ಮೊದಲಿಗರಲ್ಲ; ಕೊನೆಯವರೂ ಇರಲಿಕ್ಕಿಲ್ಲ. ಸುಮಾರು ನೂರು ವರ್ಷಗಳ ಹಿಂದೆ ಮುಂಬೈಯಿಂದ ಮೂವರು ಪಾರ್ಸಿ ಪುರುಷರು ಸೈಕಲ್ ಏರಿ ನಾಲ್ಕೂವರೆ ವರ್ಷಗಳ ಕಾಲ ದೇಶ, ವಿದೇಶಗಳನ್ನು ಸುತ್ತಿ ಬಂದಿದ್ದರು.

‘ವಿತ್ ಸೈಕ್ಲಿಸ್ಟ್ಸ್ ಅರೌಂಡ್ ದಿ ವರ್ಲ್ಡ್’ ಎನ್ನುವ ಹೆಸರಿನ ಪುಸ್ತಕ ಬರೆದಿದ್ದರು. ಆ ಕಾಲದಲ್ಲಿ ಜವಾಹರಲಾಲ್ ನೆಹರೂ ಅವರ ಮುನ್ನುಡಿಯೊಡನೆ ಪ್ರಕಟವಾದ ಪುಸ್ತಕ ಇತ್ತೀಚೆಗೆ ಡಿಜಿಟಲ್ ಮುದ್ರಣವನ್ನೂ ಕಂಡಿತು.

‘ಈ ಯುವಕರ ಸಾಹಸಕ್ಕೆ ನಾನು ಅಸೂಯೆ ಪಡುತ್ತೇನೆ. ನನ್ನಲ್ಲೂ ಈ ಯುವಕರಂತಹದೇ ಕೆಂಪು ರಕ್ತ ಇದೆ. ಆದರೆ, ಸಂದರ್ಭ, ಸನ್ನಿವೇಶಗಳಿಂದ ಇಷ್ಟು ಸಾಮಾನ್ಯ ರೀತಿಯಲ್ಲಿ ಸಾಕಾರಗೊಳಿಸಿಕೊಳ್ಳಲಾಗುತ್ತಿಲ್ಲ’ ಎಂದು ನೆಹರೂ ಬರೆದಿದ್ದರು.

1920 ಹಾಗೂ 30ರ ಮಧ್ಯ ಇನ್ನೂ ಕೆಲವು ಯುವಕರು ಸೈಕಲ್‌ನಲ್ಲಿ ವಿದೇಶ ಸುತ್ತಿ ಬಂದಿದ್ದರು. 1930 ಮತ್ತು 40ರ ನಡುವೆ ಆಗಿನ ಅವಿಭಜಿತ ಭಾರತದ ಬಾಂಗ್ಲಾದಲ್ಲಿದ್ದ ರಾಮನಾಥ್ ಬಿಸ್ವಾಸ್ ಮೂರು ಬಾರಿ ಪ್ರಪಂಚದ ಬೇರೆ ಬೇರೆ ದೇಶಗಳನ್ನು ಭೇಟಿ ಮಾಡಿ ಬಂದಿದ್ದರು.

ಅಂದಿನಿಂದ ಇಂದಿನವರೆಗೆ ಸೈಕಲ್ ತುಳಿಯುತ್ತ ಭಾರತದಿಂದ ಹೊರಟು ಮರಳಿದ ಸಾಹಸಿಗಳು ಹಲವರಿದ್ದರೂ ಇದೀಗ ಸುಧೀರ್ಘ ಯಾನದಲ್ಲಿ ತೊಡಗಿರುವ ಸೈಕಲ್ ಬಾಬಾ ಅನ್ವೇಷಕ, ಅಲೆಮಾರಿ, ಚಿಂತಕ, ಸಂದೇಶದೂತ ಎಲ್ಲವೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT