ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚೀನ ಪೆಟ್ರಾದ ಜೋರ್ಡನ್ - ಸ್ನೇಹಮಯಿ ಜನರ ದೇಶ

Last Updated 9 ಜುಲೈ 2022, 20:30 IST
ಅಕ್ಷರ ಗಾತ್ರ

ಮುಂಬೈನಿಂದ ಬಹರೇನ್ ಮೂಲಕ ಜೋರ್ಡನ್‌ನ ರಾಜಧಾನಿ ಅಮ್ಮಾನ್‌ನ ‘ರಾಣಿ ಆಲಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ಬಂದಿಳಿದಾಗ ಬೆಳಗ್ಗೆ 11 ಗಂಟೆ. ಕೈಯಲ್ಲಿದ್ದ ಸ್ವಲ್ಪ ಡಾಲರುಗಳನ್ನು ಜೋರ್ಡನ್ ದಿನಾರುಗಳಿಗೆ (ಒಂದು ಜೋರ್ಡನ್ ದಿನಾರು= 110 ರೂಪಾಯಿ) ಪರಿವರ್ತಿಸಿ ಹೋಟೆಲ್ ಕಡೆ ಹೊರಟೆವು. ಚೊಕ್ಕ ರಸ್ತೆ, ವ್ಯವಸ್ಥಿತ ನಗರ, ರಸ್ತೆ ಬದಿಯಲ್ಲೆಲ್ಲೂ ಕಸ, ಗಲೀಜು ಕಾಣದು. ದ್ವಿಚಕ್ರ ವಾಹನಗಳ ಸುಳಿವಿಲ್ಲ. ಹೆಚ್ಚಾಗಿ ಕಾರುಗಳದ್ದೇ ಕಾರುಬಾರು. ಶುಷ್ಕ, ಮರಳುಗಾಡಿನ ಪ್ರದೇಶವಾದ ಕಾರಣ ಹೆಚ್ಚು ಮರಗಳಿಲ್ಲ. ವಿಮಾನದಿಂದ ಕೆಳಗೆ ನೋಡಿದಾಗ ಅಮ್ಮಾನ್ ನಗರದ ಸುತ್ತಮುತ್ತೆಲ್ಲ ಮರಳು ಬಣ್ಣದ ಒಣಭೂಮಿ ಕಾಣಿಸುತ್ತದೆ.

ಬೈಬಲ್ ಕಾಲದ ಇತಿಹಾಸವಿರುವ ಜೋರ್ಡನ್ ನದಿಯ (ಈ ನದಿಯಿಂದಲೇ ದೇಶಕ್ಕೆ ಆ ಹೆಸರು) ಪೂರ್ವ ಭಾಗದಲ್ಲಿಯ ಈ ದೇಶಕ್ಕೆ ಉತ್ತರದಲ್ಲಿ ಸಿರಿಯಾ, ಪೂರ್ವದಲ್ಲಿ ಇರಾಕ್ ಮತ್ತು ದಕ್ಷಿಣದಲ್ಲಿ ಸೌದಿ ಅರೇಬಿಯಾ ನೆರೆರಾಷ್ಟ್ರಗಳು. ಮಧ್ಯಪ್ರಾಚ್ಯದ ದೇಶವಾದರೂ ಇಲ್ಲಿ ತೈಲ ಉತ್ಪನ್ನಗಳಿಲ್ಲ. ರಸಗೊಬ್ಬರದ ತಯಾರಿಗೆ ಬೇಕಾಗುವ ಪೊಟಾಷ್, ಫಾಸ್ಫೇಟ್ ನಿಕ್ಷೇಪಗಳು ಮತ್ತು ಪ್ರವಾಸಾದ್ಯೋಮ ಇಲ್ಲಿನ ಆರ್ಥಿಕತೆಯ ಬೆನ್ನೆಲುಬು.

ಅಮ್ಮಾನ್ ಹೊರವಲಯದ ‘ಆಯಿನ್ ಗಝಲ್’ ಎಂಬ ಸ್ಥಳದಲ್ಲಿ ಸುಮಾರು ಹತ್ತು ಸಾವಿರ ವರ್ಷಗಳಷ್ಟು ಹಳೆಯದಾದ ನಗರವೊಂದರ ಕುರುಹಗಳಿವೆ. ಜೋರ್ಡನ್ ಪ್ರದೇಶ ಅಸಿರಿಯನ್ನರು, ಬ್ಯಾಬಿಲೋನಿಯರು, ಈಜಿಪ್ಟಿಗರ ನಂತರ ಕ್ರಿಸ್ತಪೂರ್ವ ಒಂದನೇ ಶತಮಾನದಲ್ಲಿ ರೋಮನ್ನರ ಆಳ್ವಿಕೆಗೆ ಒಳಪಟ್ಟಿತು. ಅಮ್ಮಾನ್ ನಗರದಲ್ಲಿ ‘ಜೆಬೆಲ್ ಅಲ್ ಕಲಾ’ ಎಂಬ ಗುಡ್ಡದ ಮೇಲೆ ವಿಭಿನ್ನ ರಾಜ ಮನೆತನಗಳು ತಮ್ಮ ರಾಜ್ಯಭಾರದ ಸಮಯದಲ್ಲಿ ಕಟ್ಟಿದ ಕೋಟೆ, ಹರ್ಕುಲಿಸ್‌ನ ದೇವಾಲಯ, ಉಮ್ಮಯದ್ ಮಸೀದಿಯ ಅವಶೇಷಗಳಿವೆ. ಇವುಗಳಲ್ಲಿ ಇತ್ತೀಚಿನದಾದ ಮಸೀದಿ ಕೆಲವೊಮ್ಮೆ ದುರಸ್ತಿ ಮಾಡಲ್ಪಟ್ಟು ಈಗ ಸುಸ್ಥಿತಿಯಲ್ಲಿದೆ.

ಕಂಬಗಳ ನಗರ ಜೆರಾಶ್
ಕಂಬಗಳ ನಗರ ಜೆರಾಶ್

ಜೋರ್ಡನ್‌ನ ವಸ್ತು ಸಂಗ್ರಹಾಲಯದಲ್ಲಿ ದೇಶದ ಪ್ರಾಚೀನ ಇತಿಹಾಸದ ಪುಟಗಳನ್ನು ವಿಸ್ತೃತವಾಗಿ ಬಿಡಿಸಿ ದರ್ಶಕರಿಗೆ ವಿವರಿಸಲಾಗಿದೆ. ಪೆಟ್ರಾ, ಜೆರಾಶ್‌ ಉತ್ಖನನ, ಕ್ರೈಸ್ತ ಧರ್ಮದ ಇತಿಹಾಸ, ಬೆಡೊಯಿನ್ ಅಲೆಮಾರಿಗಳ ಜೀವನ ಶೈಲಿ- ಇವೆಲ್ಲವನ್ನೂ ಚಿತ್ರ, ಪ್ರತಿರೂಪ ಮತ್ತು ವಿಡಿಯೊಗಳ ಮೂಲಕ ಇಲ್ಲಿ ಕಾಣಬಹುದು.

ವಸ್ತುಸಂಗ್ರಹಾಲಯ ನೋಡಿದ ನಂತರ ದೇಶದ ಉತ್ತರ ಭಾಗದಲ್ಲಿರುವ ರೋಮನ್ ನಗರದ ಭಗ್ನಾವಶೇಷಗಳನ್ನು ಕಾಣಲು ಜೆರಾಶ್‌ಗೆ ಪ್ರಯಾಣ ಬೆಳೆಸಿದೆವು. ಅಮ್ಮಾನ್ ದಾಟಿದ ಮೇಲೆ ಎಲ್ಲೆಲ್ಲೂ ಶುಷ್ಕ, ಮರಳುಭರಿತ ಭೂಮಿ. ರಸ್ತೆಯ ಎರಡೂ ಕಡೆ ಜೋರ್ಡನ್‌ನ ವಾಣಿಜ್ಯ ಬೆಳೆಯಾದ ಆಲಿವ್‌ ಮರಗಳ ತೋಟ. ಸಾಧಾರಣ ಎತ್ತರದ ಈ ಮರದ ಎಲೆಗಳು ಸ್ವಲ್ಪ ಬೆಳ್ಳಿ ಬಣ್ಣದಂತೆ ಹೊಳೆಯುವ ಕಾರಣ ಗುರುತಿಸಲು ಸುಲಭ.

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಿಂದ ಕ್ರಿಸ್ತಶಕ ಏಳನೇ ಶತಮಾನದವರೆಗೆ ಗ್ರೀಕರು ಹಾಗೂ ರೋಮನ್ನರ ಆಳ್ವಿಕೆಯಲ್ಲಿ ಜೆರಾಶ್ ನಗರ ಬೆಳೆಯಿತು. ಇಡೀ ವಿಶ್ವದಲ್ಲಿ ಇಟಲಿಯ ನಂತರ ಚೆನ್ನಾಗಿ ಸಂರಕ್ಷಿತವಾಗಿರುವ ರೋಮನ್ನರ ಕಟ್ಟಡಗಳ ಅವಶೇಷದ ನಗರ ಇದು. ನಗರದ ಮಧ್ಯಭಾಗದಲ್ಲಿ ವ್ಯಾಪಾರಕ್ಕೆಂದು ನಿರ್ಮಾಣವಾದ ಬೃಹತ್‌ ಮಾರುಕಟ್ಟೆ, ಭೂಗತ ಚರಂಡಿ ವ್ಯವಸ್ಥೆ, ಮಾರುಕಟ್ಟೆಯ ಸುತ್ತ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಭವ್ಯ ಕಂಬಗಳು, ನಗರ ಅಧಿಕಾರಿಗಳ ಸಭೆ, ಗ್ಲಾಡಿಯೇಟರ್ ಕಾಳಗ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆಂದು ನಿರ್ಮಿತ ಎರಡು ರಂಗಭೂಮಿಗಳು(ಆ್ಯಂಫಿಥಿಯೇಟರ್), ಕುದುರೆ ಓಟದ ಸ್ಪರ್ಧೆಯ ಮೈದಾನ- ಹೀಗೆ ಹಲವಾರು ನೋಟ-ಕಥೆಗಳ ನಗರ ಜೆರಾಶ್. ತೀವ್ರ ಪ್ರಮಾಣದ ಹಲವು ಭೂಕಂಪಗಳಿಗೆ ತುತ್ತಾದ ಈ ನಗರ ಕ್ರಮೇಣ ತನ್ನ ಮಹತ್ವ ಕಳೆದುಕೊಂಡು ಪಾಳುಬಿದ್ದಿತಂತೆ.

ರಾಜ ಅರೆಟಸ್‌ನ ಸಮಾಧಿಯಿಂದ ಶಿಲಾಗುಹಾಲಯದ ಹೊರನೋಟ
ರಾಜ ಅರೆಟಸ್‌ನ ಸಮಾಧಿಯಿಂದ ಶಿಲಾಗುಹಾಲಯದ ಹೊರನೋಟ

ಮರುದಿನ ಬೆಳಗ್ಗೆ ಸಂತ ಜಾನ್‌ಬ್ಯಾಪ್ಟಿಸ್ಟನು ಏಸುವಿಗೆಕ್ರೈಸ್ತ ಧರ್ಮದ ದೀಕ್ಷಾಸ್ನಾನ ಮಾಡಿಸಿದ ಸ್ಥಳವನ್ನು ನೋಡಿದೆವು. ಇತಿಹಾಸಕಾರರ ಪ್ರಕಾರ ಈ ಸ್ಥಳ ಹಾಗೂ ದೀಕ್ಷಾಸ್ನಾನದ ಬಗ್ಗೆ ಸಂದೇಹಗಳಿದ್ದರೂ, ಇಡೀ ವಿಶ್ವದಲ್ಲೇ ಇದು ಕ್ರೈಸ್ತರ ಪವಿತ್ರ ಸ್ಥಳಗಳಲ್ಲೊಂದು. ಇಲ್ಲಿಂದ ಕೇವಲ 20 ಕಿಲೊ ಮೀಟರ್ ದೂರದಲ್ಲಿ ಪ್ರಸಿದ್ಧ ಮೃತ ಸಮುದ್ರ. ಸಾಮಾನ್ಯ ಸಾಗರಕ್ಕಿಂತ ಇಲ್ಲಿನ ಉಪ್ಪಿನ ಪ್ರಮಾಣ ಹತ್ತು ಪಟ್ಟು ಹೆಚ್ಚು. ತಟದಿಂದ ಎಷ್ಟೇ ದೂರ ಹೋಗಿ ಮುಳುಗಲು ಪ್ರಯತ್ನಪಟ್ಟರೂ ಮುಳುಗಲು ಅಸಾಧ್ಯವಾದ ವಿಚಿತ್ರ ಅನುಭವ!

ಜೋರ್ಡನ್ ದೇಶದಲ್ಲಿ ಕಡೆಯ ದಿನದ ಪ್ರವಾಸ ವಿಶ್ವಪ್ರಸಿದ್ಧ ಪೆಟ್ರಾ ನಗರಿಗೆ. ಅಮ್ಮಾನ್‌ನಿಂದ ದಕ್ಷಿಣಕ್ಕೆ 230 ಕಿಲೊ ಮೀಟರ್ ದೂರದಲ್ಲಿರುವ ಈ ಪ್ರಾಚೀನ ನಗರ ಕ್ರಿಸ್ತ ಪೂರ್ವ 4ನೇ ಶತಮಾನದಲ್ಲಿ ಅಲೆಮಾರಿ ಅರಬ್ ಜನಾಂಗ- ನೆಬಿಷಿಯನ್ನರ ರಾಜಧಾನಿಯಾಗಿತ್ತು. ಆ ಕಾಲದಲ್ಲಿ ಧಾರ್ಮಿಕ ವಿಧಿಗಳಿಗೆ ಅತ್ಯಾವಶ್ಯಕವಾಗಿದ್ದ ಸುಗಂಧದ್ರವ್ಯಗಳ ವ್ಯಾಪಾರದ ಮೂಲಕ ಆರ್ಥಿಕ ಉನ್ನತಿಯನ್ನು ಕಂಡುಕೊಂಡ ನೆಬಿಷಿಯನ್ನರು ಮರುಭೂಮಿಯ ಯುದ್ಧಕಲೆ, ಮಳೆನೀರು ಸಂಗ್ರಹಣೆ ಮತ್ತು ಕಲ್ಲಿನ ಕೆತ್ತನೆಗೆ ಹೆಸರುವಾಸಿಯಾಗಿದ್ದರು.

ಪೆಟ್ರಾದ ಹೆಸರಾಂತ ಭವ್ಯ ಕಲ್ಲಿನ ಕೆತ್ತನೆ, ನೆಬಿಷಿಯನ್ನರ ರಾಜ ಆರೆಟಸ್ ಎಂಬಾತನ ಸಮಾಧಿ. ಎತ್ತರದ ಬೃಹತ್ ಬಂಡೆಗಳ ನಡುವೆ ಸುಮಾರು ಎರಡು ಕಿಲೊ ಮೀಟರುಗಳಷ್ಟು ನಡೆದ ಮೇಲೆ ದೂರದಲ್ಲಿ ಕಲ್ಲುಗಳಲ್ಲಿ ಸಂದಿಯಿಂದ ಇಣುಕುವ ಈ ಸುಂದರ ನಿರ್ಮಾಣ, ಎಲ್ಲೋರಾದ ಕೈಲಾಸ ಮಂದಿರದಂತೆ ಬಂಡೆಕಲ್ಲಿನೊಳಗೇ ಕೆತ್ತಲ್ಪಟ್ಟಿದೆ. ಕ್ರಿಸ್ತಶಕ ಎರಡನೇ ಶತಮಾನದಿಂದ ರೋಮನ್ನರ ಆಳ್ವಿಕೆಗೆ ಒಳಪಟ್ಟ ಪೆಟ್ರಾದಲ್ಲಿ ಆ್ಯಂಫಿಥಿಯೇಟರ್, ಭವ್ಯ ಕಂಬಗಳು, ರೋಮನ್ನರ ದೇವಾಲಯಗಳನ್ನು ಕಾಣಬಹುದು.

ಇಸ್ಲಾಮಿಕ್ ದೇಶವಾದರೂ ಬುರ್ಖಾ ಕಾಣಸಿಗದ, ವಿಭಿನ್ನ ಮಧ್ಯಪ್ರಾಚ್ಯದ ಊಟ-ತಿನಿಸುಗಳ, ಸ್ವಚ್ಛ, ಸುವ್ಯವಸ್ಥಿತ ಶಹರುಗಳ, ಸರಳ, ಸ್ನೇಹಮಯಿ ಜನರ ಆಕರ್ಷಕ ರಾಷ್ಟ್ರ ಜೋರ್ಡನ್.

(ಲೇಖಕ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಛತ್ತೀಸ್‌ಗಡ ಅರಣ್ಯ ಇಲಾಖೆ)

ಮೃತ ಸಮುದ್ರ
ಮೃತ ಸಮುದ್ರ
ಯೇಸುಕ್ರಿಸ್ತನ ದೀಕ್ಷಾಸ್ನಾನದ ಸ್ಥಳ
ಯೇಸುಕ್ರಿಸ್ತನ ದೀಕ್ಷಾಸ್ನಾನದ ಸ್ಥಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT