ಗುರುವಾರ , ಡಿಸೆಂಬರ್ 8, 2022
18 °C

ಪ್ರವಾಸ | ಈಜಿಪ್ಟ್ ಪಿರಮಿಡ್‌ಗಳ ಲೋಕದಲ್ಲಿ...

ರಾಜೇಶ್‌ ಕಲ್ಲಾಜೆ Updated:

ಅಕ್ಷರ ಗಾತ್ರ : | |

ಕಾಲಿಗೆ ಚಕ್ರ ಕಟ್ಟಿ ಸಾಧ್ಯವಾದಷ್ಟು ಪ್ರಪಂಚ ಸುತ್ತುವ ಬಯಕೆಯಿಂದ ಹೊರಟು ನಿಂತಾಗ ಮೊದಲು ತೋಚಿದ ದೇಶ ಈಜಿಪ್ಟ್. ನಾನು ಮತ್ತು ನನ್ನ ಪತ್ನಿ ಪ್ರಣೀತಾ ಈಜಿಪ್ಟಿನ ರಾಜಧಾನಿ ಕೈರೊಗೆ ಬಂದಿಳಿದಾಗ, ನಿಗದಿ ಮಾಡಿದ್ದ ಪ್ರವಾಸಿ ಕಂಪನಿಯ ಪ್ರತಿನಿಧಿ ನಮ್ಮನ್ನು ಸ್ವಾಗತಿಸಿ ಹೋಟೆಲಿನತ್ತ ಕರೆದೊಯ್ದ.

ಹತ್ತು ಕೋಟಿ ಜನಸಂಖ್ಯೆಯ ಈಜಿಪ್ಟ್ ದೇಶದ ಶೇ 20ರಷ್ಟು ಜನ ಕೈರೊ ನಗರದ ನಿವಾಸಿಗಳು! ಆದ್ದರಿಂದ ಕೈರೊದಲ್ಲಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚು. ಆದರೆ ನಗರದೊಳಗೆ ಪ್ರಯಾಣಿಸುವಾಗ ಟ್ರಾಫಿಕ್ ಭಯಾನಕ ಎಂದೆನಿಸಲಿಲ್ಲ. ಬೆಂಗಳೂರಿನ ಟ್ರಾಫಿಕ್ ಕಂಡವರಿಗೆ ಕೈರೊ ಏನು ಮಹಾ!

ಮಧ್ಯಾಹ್ನದ ಊಟ ಮುಗಿಸಿ ಈಜಿಪ್ಟಿನ ಕೇಂದ್ರಬಿಂದು ಗೀಜಾ ಪಿರಮಿಡ್‌ಗಳ ಕಡೆಗೆ ಹೊರಟೆವು. ವಿಶ್ವದ ಏಳು ಅದ್ಭುತಗಳಲ್ಲಿ ಅತ್ಯಂತ ಹಳೆಯದು ಇದು. ಸುಮಾರು ನಾಲ್ಕೂವರೆ ಸಾವಿರ ವರ್ಷಗಳಿಂದ ಭವ್ಯವಾಗಿ ನಿಂತು ತನ್ನ ಮೊನಚಾದ ತುದಿಯಿಂದ ಆಕಾಶವನ್ನು ಚುಚ್ಚುವಂತೆ ಗೋಚರಿಸುವ ಈಜಿಪ್ಟಿನ ಪಿರಮಿಡ್‌ಗಳ ವೈಭವಕ್ಕೆ ಸಾಟಿಯಿಲ್ಲ. ನಿರ್ಮಾಣ ಸಮಯದಿಂದ ಮುಂದಿನ ಸುಮಾರು 3,800 ವರ್ಷಗಳವರೆಗೆ ಪ್ರಪಂಚದಲ್ಲಿ ಪಿರಮಿಡ್‌ಗಳಿಗಿಂತ ಎತ್ತರದ ಯಾವುದೇ ಮಾನವ ನಿರ್ಮಿತ ಭವನ/ಆಕೃತಿ ಇರಲಿಲ್ಲ.


ಸ್ಫಿಂಕ್ಸ್ ಮೂರ್ತಿ

ಕ್ರಿಸ್ತಪೂರ್ವ 26ನೇ ಶತಮಾನದಲ್ಲಿ ಈಜಿಪ್ಟಿನ ರಾಜ (ಫೆರೋ) ಖುವು ಕಟ್ಟಿಸಿದ ‘ಗೀಜಾ’ದ, ‘ಮಹಾ’ ಪಿರಮಿಡ್ 27ವರ್ಷಗಳಲ್ಲಿ ಪೂರ್ಣಗೊಂಡಿತು. ಈ ಮಹಾಪಿರಮಿಡ್ಡಿನ ನಿರ್ಮಾಣಕ್ಕೆ ಸುಮಾರು 20 ಲಕ್ಷಕ್ಕಿಂತಲೂ ಹೆಚ್ಚು ಸುಣ್ಣದ ಕಲ್ಲುಗಳನ್ನು ಬಳಸಲಾಗಿದೆ ಮತ್ತು ಇವುಗಳ ಒಟ್ಟೂ ತೂಕ 60 ಲಕ್ಷ ಟನ್‌ಗಳು. ಪ್ರತಿ ಕಲ್ಲಿನ ತೂಕ ಎರಡರಿಂದ ಮೂರು ಟನ್‌ಗಳು. ಪಿರಮಿಡ್ಡಿನ ಒಳಗಡೆ ಶವಪೆಟ್ಟಿಗೆಯ (ಮಮ್ಮಿ) ಸುತ್ತ ಸುಮಾರು 80 ಟನ್ ಭಾರದ ಕಲ್ಲುಗಳನ್ನು ಬಳಸಲಾಗಿದೆ. ಸುಣ್ಣದ ಕಲ್ಲು ಮತ್ತು ಗ್ರಾನೈಟ್‌ಗಳನ್ನು ದೂರದಿಂದ ತರಲಾಗಿದೆ. 4,500 ವರ್ಷಗಳ ಹಿಂದೆ ನೈಲ್ ನದಿ ಮತ್ತು ಮರಳುಗಾಡಿನ ಮೇಲೆ ಮಣಭಾರದ ಕಲ್ಲುಗಳನ್ನು ಸಾಗಿಸಿದ್ದ ಈಜಿಪ್ಟ್ ಜನರ ಕೌಶಲ ಎಂತಹದಿದ್ದೀತು?

ಹಲವು ಶತಮಾನಗಳ ಕಾಲ ಪಿರಮಿಡ್‌ಗಳನ್ನು ಕಟ್ಟಿಸಿದ ಫೆರೋಗಳು ನಂತರ, ಪ್ರಾಯಶಃ ಗೋರಿಗಳನ್ನು ಲೂಟಿ ಮಾಡುವ ದರೋಡೆಕೋರರನ್ನು ದೂರವಿಡುವ ಉದ್ದೇಶದಿಂದ ಲಕ್ಸರ್‌ ಎಂಬಲ್ಲಿ ಪರ್ವತಗಳ ಒಳಗೆ ಹೊಸ ಗೋರಿಗಳನ್ನು ಕಟ್ಟಲು ಪ್ರಾರಂಭಿಸಿದರು. ಶುಷ್ಕ ಹವೆ, ಹವಾಮಾನ ವೈಪರಿತ್ಯ, ನೀರಿನ ಅಭಾವ- ಈ ಎಲ್ಲ ಕಾರಣಗಳಿಂದ ಕಳ್ಳರು ಗೋರಿಗಳನ್ನು ದೋಚಲು ಬರಲಾರರೆಂದು ಫೆರೋಗಳು ನಂಬಿದ್ದರು. ಲಕ್ಸರ್‌ನ ಸಮೀಪ ಇರುವ ಈ ಗೋರಿಗಳ ಸ್ಥಳಕ್ಕೆ ‘ರಾಜರ ಕಣಿವೆ’ ಅಥವಾ ‘ಮೃತ ರಾಜರ ಕಣಿವೆ’ ಎಂದು ಕರೆಯುತ್ತಾರೆ. ಬೆಟ್ಟಗಳನ್ನು ಕೊರೆದು ಸುರಂಗ ಮಾಡಿ ಒಳಗೆ ರಾಜರುಗಳಿಗೆ ಸಲ್ಲಬೇಕಾದ ಎಲ್ಲ ಗೌರವಗಳೊಂದಿಗೆ, ಅವರ ಮೃತದೇಹಗಳನ್ನು ಮಮ್ಮೀಕರಿಸಿ, ಜೊತೆಗೆ ಅವರ ಇಷ್ಟದ ವಸ್ತುಗಳು, ಅಪಾರ ಚಿನ್ನಾಭರಣಗಳನ್ನು ಇಡಲಾಗುತ್ತಿತ್ತು. ಈ ಗೋರಿಗಳನ್ನು ನೋಡುವುದು ಒಂದು ಮರೆಯಲಾಗದ ಅನುಭವ.

ಪ್ರಾಚೀನ ಈಜಿಪ್ಟಿನ ಫೆರೋ ರಾಜರು ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದರು: ಫೆರೋಗಳ ಮರಣಾನಂತರ ಅವರು ಇನ್ನೊಂದು ಲೋಕಕ್ಕೆ ಹೋಗಲು ಅನುಕೂಲವಾಗುವಂತೆ ಪಿರಮಿಡ್‌ಗಳ ಒಳಗೆ ಅವರ ಶವಪೆಟ್ಟಿಗೆಯ ಜೊತೆಗೆ ಚಿನ್ನಾಭರಣಗಳು, ಪಾತ್ರೆ, ಕುರ್ಚಿ, ಮೃತ ವ್ಯಕ್ತಿಗೆ ಇಷ್ಟವಾದ ಅನ್ಯ ಸಾಮಗ್ರಿಗಳನ್ನು ಇಡಲಾಗುತ್ತಿತ್ತು. ಪಿರಮಿಡ್ಡಿನ ಮೊನಚಾದ ತುದಿಯ ಮೂಲಕ ಮೃತ ರಾಜನ ಆತ್ಮ ನೇರವಾಗಿ ಆಕಾಶಕ್ಕೆ ಹೋಗಿ ಸ್ವರ್ಗ ಸೇರುವುದು ಎಂಬ ನಂಬಿಕೆ ಇತ್ತು. ಫೆರೋಗಳ ಮುಖ್ಯ ದೇವತೆ ಸೂರ್ಯ ಅಥವಾ ‘ರಾ’. ಸೂರ್ಯ ಮುಳುಗುವಾಗ ಕತ್ತಲು ಅಥವಾ ಮರಣ: ಹಾಗಾಗಿ ಈಜಿಪ್ಟಿನ ಎಲ್ಲ ಪಿರಮಿಡ್‌ಗಳು (ಈಜಿಪ್ಟಿನಲ್ಲಿ ಒಟ್ಟು 118 ಪಿರಮಿಡ್‌ಗಳಿವೆ) ನೈಲ್ ನದಿಯ ಪಶ್ಚಿಮ ಭಾಗದಲ್ಲಿ. ಸೂರ್ಯ ಉದಯಿಸುವಾಗ ಬೆಳಕು, ಹೊಸ ಜೀವನ. ಆದ್ದರಿಂದ ಈಜಿಪ್ಟ್ ದೇವತೆಗಳ ಎಲ್ಲ ದೇವಾಲಯಗಳು ನೈಲ್ ನದಿಯ ಪೂರ್ವ ತಟದಲ್ಲಿ.


ರಾಜರ ಕಣಿವೆಯ ಗೋರಿಯೊಳಗೆ ಗೋಡೆಯ ಮೇಲಿನ ಚಿತ್ರ.

ಗೀಜಾ ಪಿರಮಿಡ್‌ಗಳ ಸಮೀಪದಲ್ಲೇ ಮನುಷ್ಯನ ತಲೆ ಮತ್ತು ಸಿಂಹ ಶರೀರದ ವಿಶ್ವಪ್ರಸಿದ್ಧ ಬೃಹದ್ ಸ್ಫಿಂಕ್ಸ್‌ ಮೂರ್ತಿಯಿದೆ. ಫೆರೋ ಖುಫ್ರೂವನ್ನು ವೈಭವೀಕರಿಸಲು ಅವನ ಪ್ರತಿರೂಪವಾಗಿ ಪ್ರಾಯಶಃ ಅವನೇ ಅಥವಾ ಅವನ ವಂಶಜರು ನಿರ್ಮಿಸಿದ ಪ್ರತಿಮೆಯಿದು ಎಂದು ಇತಿಹಾಸಕಾರರ ನಂಬಿಕೆ.

ಬಾಲಕ ಯೇಸು, ಮೇರಿ ಮತ್ತು ಸಂತ ಜೋಸೆಫ್ 2,000 ವರ್ಷಗಳ ಹಿಂದೆ ಈಜಿಪ್ಟಿಗೆ ಬಂದಾಗ ಉಳಿದುಕೊಂಡಿದ್ದರು ಎನ್ನಲಾಗುವ ಸ್ಥಳದಲ್ಲಿ ಈಗ ಬಹಳ ಪ್ರಸಿದ್ಧವಾದ ಸಂತ ಸರ್ಜಿಯಸ್ ಇಗರ್ಜಿಯಿದೆ. ನಗರದ ಇಸ್ಲಾಂ ಕೈರೊ ಭಾಗದಲ್ಲಿ ಪುರಾತನ ಮಸೀದಿಗಳು ಮತ್ತು ಅರೇಬಿಯನ್ ನೈಟ್ಸ್ ಕತೆಗಳನ್ನು ನೆನಪಿಸುವ ಹೆಸರಾಂತ ಖಾನ್-ಎಲ್ ಖಿಲೀಲಿ ಸಂತೆಯಿದೆ.

ನಮ್ಮ ಮುಂದಿನ ನಿಲ್ದಾಣ ಕೈರೊದಿಂದ ಸುಮಾರು 650 ಕಿ.ಮೀ. ದೂರದಲ್ಲಿರುವ ಲಕ್ಸರ್‌. ರಾಜರ ಕಣಿವೆಯಲ್ಲಿ ಇಬ್ಬರು ಫೆರೋಗಳ ಗೋರಿಗಳನ್ನು ನೋಡಿದ ಬಳಿಕ ಈಜಿಪ್ಟಿನ ಅತಿ ಪ್ರಸಿದ್ಧ ರಾಣಿ ಹಟ್‌ಶೆಪ್‌ಸುಟ್‌ ಕಟ್ಟಿಸಿದ ಮಂದಿರ ನೋಡಲು ಹೊರಟೆವು. ಈಜಿಪ್ಟಿನಲ್ಲಿ ಕೆಲವು ರಾಣಿಯರು ಹಟ್‌ಶೆಪ್‌ಸುಟ್‌ಗಿಂತ ಮೊದಲು ಮಹಿಳಾ ಫೆರೋ ಆಗಿ ರಾಜ್ಯಭಾರ ಮಾಡಿದ್ದರೂ, 21 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಹಟ್‌ಶೆಪ್‌ಸುಟ್‌ ಎಲ್ಲರಿಗಿಂತ ಹೆಚ್ಚು ಪ್ರಖ್ಯಾತೆ.

ಫೆರೋಗಳು ತಾವು ಅಧಿಕಾರ ವಹಿಸಿಕೊಂಡ ತಕ್ಷಣ ಪ್ರಾರಂಭ ಮಾಡುತ್ತಿದ್ದ ಕೆಲಸ - ತಮ್ಮ ಮರಣಾ ನಂತರದ ಗೋರಿಯ ತಯಾರಿ ಮತ್ತು ತಮ್ಮ ಹೆಸರು ಮತ್ತು ಘನತೆಯನ್ನು ಹೆಚ್ಚಿಸಲು ಭವ್ಯ ಮಂದಿರಗಳ ನಿರ್ಮಾಣ. ಈ ಭವ್ಯ ದೇಗುಲಗಳನ್ನು ಹೆಚ್ಚಾಗಿ ಫೆರೋಗಳ ಗೋರಿಯ ಸಮೀಪದಲ್ಲೇ ಕಟ್ಟಲಾಗುತ್ತಿತ್ತು. ಆದ್ದರಿಂದ ಈ ದೇವಾಲಯಗಳಿಗೆ ‘ಅಂತ್ಯಸಂಸ್ಕಾರದ ದೇವಾಲಯ’(ಫ್ಯುನರರಿ ಟೆಂಪಲ್) ಎಂದೂ ಕರೆಯುತ್ತಾರೆ. ಮೂರು ಹಂತಗಳಲ್ಲಿ ಹಟ್‌ಶೆಪ್‌ಸುಟ್‌ ರಾಣಿ ಕಟ್ಟಿಸಿದ ಈ ಮಂದಿರ ಆ ಕಾಲದಲ್ಲಿ ಇಡೀ ಈಜಿಪ್ಟ್‌ನಲ್ಲೇ ಅತ್ಯಂತ ಭವ್ಯ ಮತ್ತು ಸುಂದರ ದೇವಾಲಯವಾಗಿತ್ತು.

ವಿಭಿನ್ನ ಫೆರೋಗಳು ಹಂತ ಹಂತವಾಗಿ ಕಟ್ಟಿಸಿದ ಲಕ್ಸರ್‌ ಮಂದಿರ, ಪುರಾತನ ಈಜಿಪ್ಟ್‌ನ ಅತಿ ದೊಡ್ಡ ದೇವಾಲಯ. ಸುಮಾರು ಇಪ್ಪತ್ತು ಅಡಿ ಉದ್ದದ 61 ಕಂಬಗಳ ಮೇಲೆ ಹಟ್‌ಶೆಪ್‌ಸುಟ್‌ ರಾಣಿಯ ಅಡಳಿತಾವಧಿಯ ಸಾಧನೆಗಳು, ಹಲವು ದೇವರ ಕತೆಗಳು ಹಾಗೂ ಧರ್ಮಾಚರಣೆಗಳನ್ನು ಕೆತ್ತಲಾಗಿದೆ.


ಕಾರ್ನಕ್ ಮಂದಿರ

ಲಕ್ಸರ್‌ ದೇಗುಲದ ಸಮೀಪದಲ್ಲೇ ಇರುವ ಇನ್ನೊಂದು ದೊಡ್ಡ ದೇಗುಲ ಸಂಕೀರ್ಣ ಕಾರ್ನಕ್‌. ಮೂವತ್ತಕ್ಕಿಂತಲೂ ಹೆಚ್ಚು ಫೆರೋಗಳು ಒಂದು ಸಾವಿರ ವರ್ಷಗಳ ಅವಧಿಯಲ್ಲಿ ಕಟ್ಟಿಸಿದ ಈ ಬೃಹತ್‌ ದೇವಾಲಯದ ಮಧ್ಯಭಾಗದಲ್ಲಿ 50,000 ವರ್ಗ ಮೀಟರ್ ಅಳತೆಯ ಸಭಾಂಗಣ ಇದೆ. ಹಲವು ಕಡೆ ಪಾಳು ಬಿದ್ದಿರುವ, 20 ರಿಂದ 24 ಮೀಟರ್ ಎತ್ತರದ 134 ಕಂಬಗಳು ಸೂರನ್ನು ಎತ್ತಿ ಹಿಡಿದಿವೆ: ದೇಗುಲದ ಕಂಬಗಳ ಮೇಲೆ ಹಲವು ಫೆರೋಗಳ ಯುದ್ಧದ ದೃಶ್ಯಗಳು ಮತ್ತು ಧರ್ಮಾಚರಣೆಗಳನ್ನು ಕೆತ್ತಲಾಗಿದೆ: ಕಾರ್ನಕ್‌ ದೇಗುಲ ಸಂಕೀರ್ಣದಲ್ಲಿ ಅಮುನ್, ಮಟ್, ಮೊಂತು ಹೀಗೆ ಹಲವು ದೈವಗಳ ದೇವಾಲಯಗಳಿವೆ.

ಈಜಿಪ್ಟಿನಲ್ಲಿ ನಮ್ಮ ಕಡೆಯ ದಿನದ ಭೇಟಿ ಅರುವತ್ತು ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ ಫೆರೋ, ಎರಡನೇ ರಾಂಸೀಸ್‌ ಕಟ್ಟಿಸಿದ ‘ಆಬು ಸಿಂಬಲ್’ ದೇವಾಲಯಕ್ಕೆ. ಕೈರೊದಿಂದ ದಕ್ಷಿಣಕ್ಕೆ ಸುಮಾರು 1,100 ಕಿ.ಮೀ. ದೂರದಲ್ಲಿರುವ ಆಬು ಸಿಂಬಲ್‌ನಲ್ಲಿ ಎರಡು ದೇವಾಲಯಗಳಿವೆ- ಅಮುನ್, ರಾ, ಟಾಃ ಎಂಬ ಪುರಾತನ ಈಜಿಪ್ಟಿನ ದೈವಗಳಿಗೆ ಕಟ್ಟಿಸಿದ ದೊಡ್ಡ ದೇವಾಲಯ. ಇದರಲ್ಲಿ ಎರಡನೇ ರಾಂಸೀಸ್‌ನನ್ನು ದೈವೀಕರಿಸಿ ಬಿಂಬಿಸಲಾಗಿದೆ. ಇನ್ನೊಂದು ದೇವತೆ ಹಾಗೂ‌ ಮತ್ತು ಎರಡನೇ ರಾಂಸೀಸ್‌ನ ಮುಖ್ಯ ರಾಣಿ ನೆಫೆರ್ಟೀಟಿ ಎಂಬಾಕೆಗೆ ಕಟ್ಟಿಸಲಾದ ಸಣ್ಣ ದೇವಾಲಯ.

ಈ ದೇವಾಲಯದ ಪ್ರವೇಶ ದ್ವಾರದಲ್ಲಿ ಎರಡನೇ ರಾಂಸೀಸ್‌ನ ವಿಗ್ರಹದ ಸಮೀಪದಲ್ಲಿ ಅಷ್ಟೇ ಎತ್ತರದ ನೆಫೆರ್ಟೀಟಿ ವಿಗ್ರಹ ಕೆತ್ತಲಾಗಿದೆ. ಈ ಎರಡೂ ವಿಗ್ರಹಗಳ ಮೇಲೆ ವರ್ಷದಲ್ಲಿ ಎರಡು ಬಾರಿ ಸೂರ್ಯನ ಕಿರಣಗಳು ಬೀಳುವಂತೆ ದೇಗುಲದ ದಿಕ್ಕನ್ನು ಹೊಂದಿಸಲಾಗಿದೆ. ಆದರೆ ಇವರ ಪಕ್ಕದಲ್ಲೇ ಇರುವ ಪಾತಾಳಲೋಕದ (ಅಥವಾ ಕತ್ತಲಲೋಕ) ದೈವ ‘ಟಾಃ’ ಮೇಲೆ ಬೆಳಕು ಬೀಳುವುದೇ ಇಲ್ಲ!

ಪುರಾತನ ಈಜಿಪ್ಟಿನ ದೇವ ದೇವತೆಗಳ ಕತೆಗಳೂ ನಮ್ಮಲ್ಲಿಯ ಕತೆಗಳಂತೆಯೇ ಮನರಂಜಿಸುತ್ತವೆ. ಇಲ್ಲಿ ಹೆಜ್ಜೆಹೆಜ್ಜೆಗೂ ಇತಿಹಾಸವಿದೆ, ಕತೆಗಳಿವೆ. ಫೆರೋಗಳ ಆಳ್ವಿಕೆಯ ಕುರುಹುಗಳಿಗಾಗಿ ಶೋಧ ಕಾರ್ಯಗಳು ಇನ್ನೂ ನಡೆಯುತ್ತಲೇ ಇವೆ. ಇತಿಹಾಸ ಪ್ರಿಯರು ತಪ್ಪದೇ ಭೇಟಿ ಕೊಡಬೇಕಾದ ದೇಶ ಈಜಿಪ್ಟ್‌.


ರಾಣಿ ಹಟ್‌ಶೆಪ್‌ಸುಟ್‌ ಕಟ್ಟಿಸಿದ ದೇವಾಲಯ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು