‘ಅರಳಿ ತೀರ್ಥ’–ಇದು ಐತಿಹಾಸಿಕ, ಬಾದಾಮಿ ಪರಿಸರದಲ್ಲಿರುವ ಒಂದು ಸುಂದರ ಸ್ಥಳ. ಜನರಿಗೆ ಹೆಚ್ಚು ಪರಿಚಯವಿಲ್ಲದ ಪ್ರಶಾಂತ ತಾಣ. ಈ ಪ್ರದೇಶದ ಕುರಿತು ಕೇಳಿದ್ದ ನನಗೆ ನೋಡಬೇಕೆಂಬ ಹಂಬಲ ಇದ್ದೇ ಇತ್ತು. ಅದೊಂದು ದಿನ ಆ ಸ್ಥಳವನ್ನು ನೋಡಬೇಕೆಂದು ಏಕಾಂಗಿಯಾಗಿ ನಡೆದೇಬಿಟ್ಟೆ.

ಬಾದಾಮಿ ಪರಿಸರ ನನಗೇನೂ ಹೊಸದಲ್ಲ. ಆದರೆ ನಾನು ಸಂದರ್ಶಿಸಿದ ಪ್ರತಿ ಬಾರಿಯೂ ಹೊಸದಾಗಿ ಕಾಣುವುದು. ಅಲ್ಲಿನ ಬೃಹತ್ ಬಂಡೆಗಳು ನೋಡಿದಷ್ಟು ಬಾರಿಯೂ ಹೊಸ ನೋಟಕ್ಕೆ ಎಡೆಮಾಡಿಕೊಡುವವು. ಚಾಲುಕ್ಯರ ಕಾಲದ ಇಲ್ಲಿನ ಸ್ಮಾರಕಗಳನ್ನು, ಶಿಲ್ಪಗಳನ್ನು ನೋಡಿದರೆ ಬಗೆದಷ್ಟೂ ಆಳ ಎಂಬಂತೆ ಐತಿಹಾಸಿಕ ನೆಲೆಯಲ್ಲಿ ಮಾತ್ರವಲ್ಲದೆ, ಸೌಂದರ್ಯದ ನೆಲೆಯಲ್ಲಿಯೂ ಆಪ್ಯಾಯಮಾನವಾಗಿ ಪೂರ್ಣದೃಷ್ಟಿಯೊಂದು ನಮ್ಮೊಳಗೆ ತೆರೆದುಕೊಳ್ಳುವುದು. ಇಲ್ಲಿನ ಮೇಣ ಬಸದಿ, ವಸ್ತುಸಂಗ್ರಹಾಲಯ, ಬಂಡೆಗಳ ಮಧ್ಯೆ ಹಾಯ್ದುಹೋದಾಗ ಎತ್ತರದ ಬೆಟ್ಟದ ಮೇಲೆ ಸಿಗುವ ಮೇಲಣ ಶಿವಾಲಯ, ಕೆಳಗಣ ಶಿವಾಲಯ, ಎರಡಂತಸ್ತಿನ ಮಂಟಪ, ಕನ್ನಡದ ಮೊದಲ ತ್ರಿಪದಿ ಶಾಸನವಾದ ಕಪ್ಪೆ ಅರಭಟ್ಟನ ಶಾಸನ, ಅಗಸ್ತ್ಯತೀರ್ಥದ ಪರಿಸರದಲ್ಲಿನ ಪೂರ್ವದ ಬೆಟ್ಟಕ್ಕೆ ಹೊಂದಿಕೊಂಡಂತೆ ಕಾಣುವ ಭೂತನಾಥ ಗುಡಿಗಳ ಗುಂಪು - ಹೀಗೆ ಹತ್ತು ಹಲವು ಪ್ರದೇಶಗಳನ್ನು ಹಲವಾರು ಬಾರಿ ನೋಡಿ ಆನಂದಿಸಿದ್ದೆ. ಈಗ ನಾನು ಹುಡುಕಿಕೊಂಡು ಹೊರಟ ‘ಅರಳಿ ತೀರ್ಥ’ದ ದಾರಿ ಹೊಸತು. ಆದ್ದರಿಂದ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಆ ಪ್ರದೇಶದ ಕುರಿತು ವಿಚಾರಿಸಿ, ಆ ದಿಶೆಯಲ್ಲಿ ಮುನ್ನಡೆದೆ. ಮ್ಯೂಸಿಯಂನಿಂದ ಹೊರಟು ಭೂತನಾಥ ಗುಡಿಗಳ ಹಿಂದಿನ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆ.

ಅದೊಂದು ನಿರ್ಜನ ಪ್ರದೇಶ. ಕೆಂಪುಮರಳು ಶಿಲೆಯಿಂದ ರಚಿತವಾದ ಬಂಡೆಗಳಿಂದ ಕೂಡಿದ ಬೆಟ್ಟ ಪ್ರದೇಶ. ವಿರಳವೆನಿಸಿದರೂ ಮರಗಳಿಂದ ಆವೃತವಾಗಿ ನೋಟಕ್ಕೆ ತುಂಬಿಕೊಳ್ಳುವ ಹಸಿರು. ಅತ್ಯಂತ ದುರ್ಗಮ ಅಲ್ಲದಿದ್ದರೂ ಅಲ್ಲಲ್ಲಿ ಮುಳ್ಳು-ಕಂಟಿಗಳಿಂದ ಕೂಡಿ ಹತ್ತಿರ ಹೋದಾಗ ಮಾತ್ರ ತೆರೆದುಕೊಳ್ಳುವ ದಾರಿ. ಪ್ರಾಕೃತಿಕವಾಗಿ ನಿರ್ಮಾಣವಾದ ಚಪ್ಪಡಿಕಲ್ಲುಗಳಿಂದ ಕೂಡಿದ ದಾರಿ ನನ್ನ ಅಂದಿನ ಏಕಾಂಗಿ ಪಯಣಕ್ಕೆ ಸವಾಲಾಗಿ ತೋರುತ್ತಿತ್ತು. ಆದರೂ ನಾನು ಹುಡುಕಿಕೊಂಡು ಹೊರಟ ಸ್ಥಳವನ್ನು ನೋಡಬೇಕೆಂಬ ಗಾಢವಾದ ಹಂಬಲದಿಂದ ಮುನ್ನಡೆದೆ. ನೀರವ ಮೌನ ತುಂಬಿದ ಆ ಪ್ರದೇಶದಲ್ಲಿ ಆಗಾಗ ಚಿಕ್ಕ ಹಕ್ಕಿಗಳ ಕೂಗು. ಒಂದೇ ಅಳತೆಯಲ್ಲಿ ಹರಡಿದ ಪರಿಚಿತವೆನಿಸಿದರೂ ಭಯತರುವ ಶಬ್ದ. ಕೊಂಚ ಭಯದಲ್ಲಿಯೇ ಸುಮಾರು ಅರ್ಧ ಕಿಲೋಮೀಟರ್ ಸಾಗಿದೆ. ಎತ್ತರಕ್ಕೆ ಹೋದಂತೆಲ್ಲ ಅಲ್ಲಲ್ಲಿ ಸಿಗುವ ಬಯಲು, ಆ ಬಯಲಲ್ಲಿ ನಿಂತು ನೋಡಿದರೆ ರುದ್ರರಮಣೀಯವಾಗಿ ಕಾಣುವ ಬೆಟ್ಟ, ಬಂಡೆಗಳು. ಅಲ್ಲಿಂದ ಹತ್ತಿರದ ಬೆಟ್ಟದ ತುದಿಯಲ್ಲಿ ಕಾಣುವ ಪ್ರಾಚೀನ ಸ್ಮಾರಕ. ಅದನ್ನೇ ಕೇಂದ್ರವಾಗಿಸಿಕೊಂಡು ಬೆಟ್ಟದ ಮೇಲೆ ಹೋದೆ. ಆ ಎತ್ತರದ ಮೇಲಿಂದ ಅಲ್ಲಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ ನಾನು ನಿಂತ ಸ್ಥಳದಿಂದ ಅನತಿ ದೂರದಲ್ಲಿ ಚಿಕ್ಕ ಹೊಂಡ ಕಾಣಿಸಿತು. ಅಚ್ಚರಿ ಎಂಬಂತೆ ಅಲ್ಲಿನ ಚಿಕ್ಕ ಗವಿಯಲ್ಲಿ ಕೆತ್ತಲಾದ ಪ್ರಾಚೀನ ಮೂರ್ತಿಗಳು ಕಾಣಿಸಿದವು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಯಾಸವೆಲ್ಲ ಕರಗಿತು. ನಾನು ಹುಡುಕಿಕೊಂಡು ಹೊರಟ ‘ಅರಳಿ ತೀರ್ಥ’ ಸ್ಥಳವನ್ನು ತಲುಪಿದ್ದೆ.

ಬೆಟ್ಟದ ಮೇಲಿರುವ ಚಿಕ್ಕ ಹೊಂಡವೇ ಈ ‘ಅರಳಿ ತೀರ್ಥ’. ಅಷ್ಟೇನೂ ಆಳವಲ್ಲದ ತಿಳಿನೀರಿನಿಂದ ಆವೃತವಾದ ಈ ಹೊಂಡ ಅಲ್ಲಲ್ಲಿ ಪಾಚಿ ಮತ್ತು ಜಲಸಸ್ಯಗಳಿಂದ ಕೂಡಿ ಮೋಹಕವಾಗಿದೆ. ಆಗಸದ ಮೇಘಗಳ ಓಟವನ್ನು ಸ್ಪುಟವಾಗಿ ನಮ್ಮ ನೋಟಕ್ಕೆ ತೆರೆದಿಡುವ ಈ ‘ತೀರ್ಥ’(ಹೊಂಡ) ಅಲ್ಲಿನ ಪರಿಸರದ ಒಂದು ಚಿಕ್ಕ ಕನ್ನಡಿಯಂತೆ ತೋರುವುದು.

ಕೆಂಪು ಮರಳುಶಿಲೆಗಳಿಂದ ಆಚ್ಛಾದಿತವಾದ ‘ಅರಳಿ ತೀರ್ಥ’ ಬೆಟ್ಟ ಪ್ರದೇಶವು ನೈಸರ್ಗಿಕ ಗುಹೆಗಳ ರಚನೆಗಳಿಂದ ಕೂಡಿದೆ. ಪ್ರಾಕೃತಿಕವಾಗಿ ಛತ್ತಿನಂತೆ ನಿರ್ಮಾಣವಾದ ರಚನೆಗಳು ಸಹಜವಾಗಿಯೇ ತೆರೆದ ಚಿಕ್ಕ ಗವಿ ವಿನ್ಯಾಸವನ್ನು ರೂಪಿಸಿವೆ. ಈ ಬಗೆಯ ಬಂಡೆಯ ರಚನೆಗಳ ಮೇಲೆ ಅನೇಕ ಶಿಲ್ಪಗಳಿವೆ. ಇಲ್ಲಿರುವ ಸುಮಾರು 25 ಅಡಿಗಳಷ್ಟು ಅಗಲವಾದ ತೆರೆದ ಗವಿಯ ಒಳಭಿತ್ತಿಯ ಮೇಲೆ ಗಣೇಶ, ಅನಂತಶಯನ, ಮಹಿಷಾಸುರಮರ್ಧಿನಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಹಾಗೂ ಸೂರ್ಯದೇವನ ಮೂರ್ತಿಗಳಿವೆ. ಅಲ್ಲಲ್ಲಿ ಮಾಡುಗಳ ರಚನೆಯಲ್ಲಿ ಭಕ್ತಶಿಲ್ಪಗಳಿವೆ.

ಪ್ರತಿಮಾ ಶಾಸ್ತ್ರದ ನೆಲೆಯಲ್ಲಿ ಶಿಲ್ಪಗಳನ್ನು ಪ್ರಮಾಣಬದ್ಧವಾಗಿ ರಚಿಸಲಾಗಿದೆ. ಹೆಚ್ಚುಕಡಿಮೆ ಎರಡೂವರೆ ಅಡಿ ಎತ್ತರದ ಅಳತೆಯ ಒಳಹೊರಗೆ ರಚನೆಗೊಂಡ ಶಿಲ್ಪಗಳು ಒಂದೇ ಸಾಲಿನಲ್ಲಿ ಕಾಣುವಂತಿವೆ. ಇಲ್ಲಿರುವ ಶಿಲ್ಪಗಳಲ್ಲಿ ನನಗೆ ಸೂರ್ಯದೇವನ ಶಿಲ್ಪ ಅತ್ಯಂತ ಮೋಹಕವಾಗಿ ಕಂಡಿತು. ವಿಶೇಷವೆಂಬಂತೆ ಎಂಟು ಕೈಗಳಿರುವ ಸೂರ್ಯದೇವನು ಖಡ್ಗ, ಢಾಲು, ಬಿಲ್ಲು, ಬಾಣ, ತ್ರಿಶೂಲಗಳಲ್ಲದೆ ಕಮಲದ ಹೂವನ್ನು ಹಿಡಿದು ಸಾರಥಿಯೊಡನೆ ಸಪ್ತಕುದುರೆಗಳಿರುವ ರಥದಲ್ಲಿ ಕಮಲದ ಪೀಠದ ಮೇಲೆ ನಿಂತಿದ್ದಾನೆ. ಅವನ ಪಕ್ಕದಲ್ಲಿ ಚಾಮರಧಾರಿಣಿ ಶಿಲ್ಪಗಳಿವೆ. ಈ ಸೂರ್ಯದೇವನ ಎಡಗಡೆಯ ಭಿತ್ತಿಯಲ್ಲಿ ಶಾಸನವೊಂದಿದೆ. ಈ ಶಾಸನವನ್ನು ನೋಡುತ್ತಿದ್ದಂತೆ ನನ್ನಲ್ಲಿ ಮತ್ತಷ್ಕು ಕುತೂಹಲ ಗರಿಗೆದರಿತು.

17ನೇ ಶತಮಾನಕ್ಕೆ ಸಂಬಂಧಿಸಿದ ಶಾಸನವು ದೇವನಾಗರಿ ಲಿಪಿಯಲ್ಲಿದ್ದು ‘ಕೊಲ್ಲಾಪುರದ ಮಹಾಲಕ್ಷ್ಮಿಯ ಭಕ್ತನಾದ ಹಾರೀತ ಕುಲದ ರವಿದೇವ ತ್ರಿದಂಡಿಗೆ ಮಂಗಳವಾಗಲಿ’ ಎಂದು ಉಲ್ಲೇಖಿಸುತ್ತದೆ. ಈ ಕುರಿತು ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಸಾರಾಂಗ ಪ್ರಕಟಣೆಯ ‘ಬಾಗಲಕೋಟೆ ಜಿಲ್ಲೆಯ ಶಾಸನ ಸಂಪುಟ’ವನ್ನು ನೋಡಬಹುದಾಗಿದೆ.

ಬೆಟ್ಟದ ತುದಿಯಲ್ಲಿ ನಸುಗೆಂಪು ಬಣ್ಣದ ಚೌಕಾಕಾರದ ಹಳೆಯ ಆಲಯವೊಂದಿದೆ. ಅದರಲ್ಲಿ ಯಾವುದೇ ಮೂರ್ತಿಯಿಲ್ಲ. ಬೆಟ್ಟದ ಮೇಲೆ ಸಾಗಿದರೆ ವಿಶಾಲವಾದ ಸುಂದರ ಬಯಲು ಪ್ರದೇಶ ಸಿಗುವುದು. ಅಲ್ಲಿಂದಲೇ ಬಾದಾಮಿ ನಗರ ಹಾಗೂ ಅಗಸ್ತ್ಯತೀರ್ಥ ಪರಿಸರದ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು. ಒಂದು ಬಗೆಯ ದೃಶ್ಯ ಸಂವೇದನೆ ಅದು. ನನ್ನಲ್ಲಿ ಅವ್ಯಕ್ತ ಅನುಭೂತಿ ನೆಲೆಗೊಂಡಿತ್ತು. ಒಲ್ಲದ ಮನಸ್ಸಿನಿಂದಲೇ ನನ್ನ ಪಯಣಕ್ಕೆ ವಿರಾಮ ನೀಡಿ ಅಲ್ಲಿಂದ ಮರಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.