ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಧಾಮದಲ್ಲೊಂದು ಕಲಾಧಾಮ

ಸ್ವರೂಪ್ ಕೊಟ್ಟೂರು
Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವಿಜಯನಗರ ಜಿಲ್ಲೆಯ ಗುಡೇಕೋಟೆ ಒನಕೆ ಓಬವ್ವಳ ತವರೂರು. ಇಲ್ಲಿಯ ಕರಡಿ ಧಾಮಕ್ಕೆ ಏಷ್ಯಾದಲ್ಲೇ ಎರಡನೇ ಕರಡಿ ಧಾಮ ಎಂಬ ಹೆಗ್ಗಳಿಕೆ. ಇದು ಬಯಲು ಸೀಮೆ. ಈ ಪರಿಸರದ ಬಹುಭಾಗ ಬೆಟ್ಟಗುಡ್ಡಗಳಿಂದ ಆವೃತಗೊಂಡಿದ್ದು, ಭಾಗಶಃ ಮಳೆ ನಂಬಿ ಉಳುವ ಇಲ್ಲಿನ ರೈತರ ಜಮೀನುಗಳನ್ನು ಅರ್ಧಕರ್ಧ ಕಲ್ಲು, ಗುಂಡುಗಳು ನುಂಗಿವೆ. ಫಲಗಳು ಕರಡಿ, ಕಾಡು ಹಂದಿ ಪಾಲಾಗುತ್ತವೆ. ಆದಿಮರು ನೆಲೆಸಿದ ಗುಹೆಗಹ್ವರಗಳೀಗ ಕರಡಿಗಳ ಆವಾಸಸ್ಥಾನ. ಹೀಗಾಗಿ ಗುಡೇಕೋಟೆಯಲ್ಲಿ ಬರೀ ಹೊರಭೂಮಿ, ಗುಡ್ಡ, ಗುಂಡುಕಲ್ಲುಗಳು, ಬೃಹತ್ ಬಂಡೆಗಳು, ಕರಡಿ, ಚಿರತೆಗಳು.. ಬಿಟ್ಟರೆ ಮತ್ತೇನಿದೆ? ಎನ್ನುವ ಉಪೇಕ್ಷೆಯ ಮಾತನ್ನು ಆಡುವವರೇ ಹಲವರು. ಇದು ಕರಡಿ ಧಾಮವೆಂತೋ ಹಾಗೆ ಬಯಲು ಕಲಾ ಧಾಮವೂ ಹೌದು. ಆದರಿದು ಕರಡಿ ಧಾಮದಲ್ಲಿ ಹುದುಗಿರುವುದರಿಂದ ಹೊರ ಜಗತ್ತಿಗೆ ಅಪರಿಚಿತವಷ್ಟೆ.

ಕರಡಿ ಧಾಮ ಪರಿಸರದಲ್ಲಿ ಅದ್ಭುತ, ಕಣ್ಮನ ಸೆಳೆಯುವ ಬಯಲು ಕಲಾ ಧಾಮವೂ ಇದೆ. ಇದಕ್ಕಾಗಿ ಅಪೇಕ್ಷೆಪಟ್ಟು ಒಮ್ಮೆ ಇಲ್ಲಿನ ಕಾಡು ಹೊಕ್ಕಬೇಕು. ಬೆಟ್ಟಗುಡ್ಡಗಳ ಸನಿಹ ಸುಳಿಯಬೇಕು. ಶಿಲಾ ಸಮೂಹಗಳನ್ನು ಧೇನಿಸಿ ನೋಡಬೇಕು. ಆಗ ಮಾತ್ರ ವಿಶೇಷ ಆಕೃತಿ, ವಿನ್ಯಾಸಗಳ ಕಲ್ಲುಗಳು ವಿಭಿನ್ನ, ವಿಶಿಷ್ಟವಾಗಿ ಕಂಗೊಳಿಸುತ್ತವೆ. ಅವೆಲ್ಲ ಅಮೂರ್ತ ಕಲ್ಪನೆಯನ್ನು ಉದ್ದೀಪಿಸುತ್ತವೆ. ಕೊನೆಯಿಲ್ಲದ ಬೆಟ್ಟಗುಡ್ಡಗಳಲ್ಲಿಯ ಸೋಜಿಗದ ಇಂತಹ ಶಿಲೆಗಳನ್ನೆಲ್ಲಾ ಒಟ್ಟು ಸೇರಿಸಿ, ಗುಡ್ಡೆ ಹಾಕಿದರೆ ನಿಸ್ಸಂದೇಹವಾಗಿ ಅದು ಮತ್ತೊಂದು ಬೃಹತ್ ಗುಡ್ಡವೇ ಆಗುತ್ತದೆ.

ಈ ಬೀಡು ಪ್ರಕೃತಿ ಕಟೆದ ಚಿತ್ರಪಟಗಳಿಂದ ಸಂಪದ್ಭರಿತವಾಗಿದೆ. ಗುಡೇಕೋಟೆ ಹೋಬಳಿಯಲ್ಲಿ ಎಲ್ಲಿ ಕಣ್ಣಾಡಿಸಿದರೂ ಕಲಾತ್ಮಕ ಕಲ್ಲುಗಳ ನಿಸರ್ಗ ಎದ್ದುಕಾಣುತ್ತದೆ. ಸೃಜಿಸಿದ ಶಿಲಾ ಸಮೂಹಗಳ ಸಮ್ಮೋಹಕ ತಾಣವಿದು. ಅದರಲ್ಲೂ ವಿಶೇಷವಾಗಿ ಮರಳು ಶಿಲೆಗಳಲ್ಲಿ (ಹಿಟ್ಟು ಕಲ್ಲು) ನಿಸರ್ಗದ ನಾಜೂಕಿನ ಕುಸುರಿ ನಿಬ್ಬೆರೆಗಾಗಿಸುತ್ತದೆ. ಅಡಿ ಅಡಿಗೂ ಕಲೆಯ ಬಲೆಯನ್ನೇ ಹೆಣೆದಿರುವ ಈ ಅಪೂರ್ವ, ಅನನ್ಯ ಶಿಲೆಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಸಾಗಿದರೆ ಮನಸ್ಸು ಉಲ್ಲಸಿತಗೊಳ್ಳುತ್ತದೆ.

ಚಲನಚಿತ್ರ ನಟರಾದ ದಿ. ಪುನೀತ್ ರಾಜಕುಮಾರ್, ರಿಷಬ್ ಶೆಟ್ಟಿ ಭೇಟಿ ನೀಡಿದ ಸುಪ್ರಸಿದ್ಧ ಜೋಡಿಕಲ್ಲುಗಳು ಇಲ್ಲಿವೆ. ಇನ್ನು ಹಾವಿನ ಎಡೆಯಂತೆ, ನೀರಾನೆ ಬಾಯಿ ತೆರೆದಂತೆ, ಎತ್ತು ವಿರಮಿಸುವಂತೆ, ಟೈಟಾನಿಕ್ ಹಡಗಿನಂತೆ, ಗದೆಯಂತೆ, ರೆಕ್ಕೆಯಂತೆ, ಆಮೆ ಮೂತಿ ಹೊರ ಚಾಚಿದಂತೆ... ಹೀಗೆ ಮೊಗೆದಷ್ಟೂ ಮುಗಿಯದ, ನೋಡಿದಷ್ಟೂ ತಣಿಯದ ಬಗೆಬಗೆಯ, ರಾಶಿ ರಾಶಿ ಪ್ರಕೃತಿ ಕಟೆದ ಚಿತ್ರಪಟಗಳಿವೆ.

ಇಂತಹ ಶಿಲೆಗಳ ಸೊಬಗು ಸವಿಯಲು ಅರಣ್ಯ ಇಲಾಖೆಯ ಪರವಾನಗಿ ಮತ್ತು ನೆರವು ಅವಶ್ಯಕ. ಇದು ಮೀಸಲು ಅರಣ್ಯ. ಕರಡಿ ಧಾಮ ಆಗಿರುವುದು ಇದೇ ಕಾರಣಕ್ಕೆ. ಇನ್ನುಮುಂದೆ ನಿಮ್ಮ ಪ್ರವಾಸದ ಯೋಜನೆ, ಯೋಚನೆಯಲ್ಲಿ ಗುಡೇಕೋಟೆ ಕರಡಿ ಧಾಮ ಇದ್ದರೆ ಕೇವಲ ಕರಡಿಗಳನ್ನಷ್ಟೆ ನೋಡುವುದಕ್ಕೆ ಪ್ರವಾಸ ಸೀಮಿತಗೊಳಿಸದಿರಿ. ಅಲ್ಲೇ ಇರುವ ಇಂತಹ ಅಪೂರ್ವ ಶಿಲಾಕೃತಿಗಳನ್ನು ಕಣ್ಣು ತುಂಬಿಕೊಳ್ಳಲು ಮರೆಯದಿರಿ.

ಪ್ರೇಮಿಗಳ ಪಾಲಿಗೆ ಇದು ‘ಲವ್ ರಾಕ್’ ಆದರೂ ಅಚ್ಚರಿ ಇಲ್ಲ
ಪ್ರೇಮಿಗಳ ಪಾಲಿಗೆ ಇದು ‘ಲವ್ ರಾಕ್’ ಆದರೂ ಅಚ್ಚರಿ ಇಲ್ಲ
ಈ ಶಿಲೆಯಲ್ಲಿ ಏನು ಕಂಡಿರಿ?
ಈ ಶಿಲೆಯಲ್ಲಿ ಏನು ಕಂಡಿರಿ?
ಕ್ಯಾಮೆರಾ ಕಣ್ಣಿಗೆ ಕಲೆಯ ಹಲವು ಬಗೆ
ಕ್ಯಾಮೆರಾ ಕಣ್ಣಿಗೆ ಕಲೆಯ ಹಲವು ಬಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT