ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಕೃತಿಗಳ ಶೇ ರೂಂ -ಒಡಿಶಾ ಕಲಾಗ್ರಾಮ

Last Updated 24 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಉತ್ಕಲ ಒಡಿಶಾ ರಾಜ್ಯದ ಮೂಲ ಹೆಸರು. ಉತ್ಕಲ ಎಂದರೆ ಕಲೆಯ ‘ಉತ್ಕರ್ಷ’. ಹೆಸರೇ ಹೇಳುವಂತೆ ಈ ರಾಜ್ಯವೇ ಕಲೆಯ ಬೀಡು. ಅಲ್ಲಿನ ಕಲೆಯ ಕಂಪಿನ ಬಗ್ಗೆ ಅರಿಯ ಬೇಕೆಂದರೆ, ಒಮ್ಮೆ ರಾಜಧಾನಿ ಭುವನೇಶ್ವರದ ಈ ಕಲಾಭೂಮಿಗೆ ಒಮ್ಮೆ ಭೇಟಿಕೊಡಿ.

ಭುವನೇಶ್ವರದ ಹೃದಯಭಾಗದಲ್ಲಿ ಹನ್ನೆರಡು ಎಕರೆ ವಿಶಾಲ ಜಾಗದಲ್ಲಿ ಸ್ಥಾಪಿತವಾಗಿರುವ ಈ ಕಲಾಗ್ರಾಮವನ್ನು ಎರಡು ಮುಖ್ಯವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯದರಲ್ಲಿ ಕರಕುಶಲ ಕಲಾಕೃತಿಗಳಿವೆ. ಇದರಲ್ಲಿ ಐದು ಗ್ಯಾಲರಿಗಳಿವೆ. ಟೆರ್ರಾಕೋಟಾ, ಚಿತ್ರಕಲೆ, ಮರ ಮತ್ತು ಶಿಲ್ಪ ಕೆತ್ತನೆ, ಲೋಹದ ಕಲಾಕೃತಿ, ನೈಸರ್ಗಿಕ ವಸ್ತುಗಳಿಂದ ತಯಾರಾದ ಕಲಾಕೃತಿಗಳನ್ನು ಈ ಗ್ಯಾಲರಿಗಳಲ್ಲಿ ವ್ಯವಸ್ಥಿತವಾಗಿ ಪ್ರದರ್ಶನಕ್ಕಿಡಲಾಗಿದೆ.

ಎರಡನೆಯ ವಿಭಾಗದಲ್ಲಿ ಕೈಮಗ್ಗಗಳಿಗಾಗಿ ಮೂರು ಪ್ರತ್ಯೇಕ ಗ್ಯಾಲರಿಗಳಿವೆ. ನೇಕಾರಿಕಾ ತಂತ್ರಜ್ಞಾನ, ಬುಡಕಟ್ಟು ಜನರ ಕಲಾಕೃತಿಗಳು, ಕೈಮಗ್ಗದಲ್ಲಿ ತಯಾರಾದ ಒಡಿಶಾದ ಸಾಂಪ್ರದಾ ಯಿಕ ಉಡುಪುಗಳನ್ನು ಅಲ್ಲಿ ಪ್ರದರ್ಶಿಸಲಾಗಿದೆ. ಈ ಮಳಿಗೆಗಳಲ್ಲಿನ ಮೇಲ್ವಿಚಾರಕರು ಖುದ್ದು ಆಸಕ್ತಿ ವಹಿಸಿ ನಿಮಗೆ ವೈಯಕ್ತಿಕವಾಗಿ ಕಲಾಕೃತಿಗಳನ್ನು ರಸವತ್ತಾಗಿ ಬಣ್ಣಿಸುತ್ತಾರೆ.

ಕಳೆದ ವರ್ಷ ಶುರುವಾಗಿದ್ದು

ಕಳೆದ ವರ್ಷವಷ್ಟೇ ಆರಂಭಗೊಂಡಿರುವ ಈ ಕಲಾಗ್ರಾಮದಲ್ಲಿ ಅಪೂರ್ವ ವಸ್ತುಗಳ ಜೊತೆಗೆ ಒಳಾಂಗಣ ವಿನ್ಯಾಸದಲ್ಲಿ ಒಡಿಶಾದ ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದ ಜೀವನಶೈಲಿಯನ್ನು ಪ್ರತಿಬಿಂಬಿಸಲಾಗಿದೆ. ಈ ಕಟ್ಟಡದೊಳಗೆ ನೀವು ಹೆಜ್ಜೆ ಹಾಕುತ್ತಿದ್ದರೆ ಒಡಿಶಾದ ಯಾವುದೋ ಗ್ರಾಮದಲ್ಲೋ ಸುತ್ತಾಡುತ್ತಿರುವಂತೆ, ಬುಡಕಟ್ಟು ಜನರ ನಡುವೆ ನಿಂತಿರುವಂತೆ ಭಾಸವಾಗುತ್ತದೆ.

ಕಲಾಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಪುಟ್ಟ ಸಿನಿಮಾ ಹಾಲ್‍ ಕಾಣುತ್ತದೆ. ಅದರಲ್ಲಿ ಒಡಿಶಾ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಕಿರುಚಿತ್ರವನ್ನು ತೋರಿಸುತ್ತಾರೆ. ಇಡೀ ರಾಜ್ಯದ ಪ್ರವಾಸಿ ತಾಣಗಳ ಸ್ಥೂಲ ಚಿತ್ರಣವನ್ನು ನಿಮ್ಮ ಎದುರು ತೆರೆದಿಡುತ್ತಾರೆ. ಮುಂದೆ ಒಂದೊಂದೆ ಮಳಿಗೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ಅದರ ಲ್ಲಿರುವ ಪುರಾತನ ಕಲಾಕೃತಿಗಳು ನಿಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ.

ಕಲಾಕೃತಿಗಳ ಖಜಾನೆ

ಕಲಾಗ್ರಾಮವು ನಿಮಗೆ ಹಲವು ಕಾಲ ನೆನಪಿನಲ್ಲುಳಿಯಲು ಎರಡು ಮುಖ್ಯ ಕಾರಣಗಳಿವೆ. ಒಂದು ಇಲ್ಲಿ ಸಂಗ್ರಹಿಸಲಾಗಿರುವ ಕಲಾಕೃತಿಗಳ ಖಜಾನೆ ಮತ್ತು ಎರಡನೆಯದಾಗಿ ಅವುಗಳನ್ನು ಕಲಾತ್ಮಕವಾಗಿ ಜೋಡಿಸಿರುವ ಬಗೆ. ಉದಾಹರಣೆಗೆ ಇಲ್ಲಿನ ಲೋಹ ಕಲಾಕೃತಿಗಳ ಗ್ಯಾಲರಿಯಲ್ಲಿ ಕ್ರಿ.ಪೂ 3000ದಷ್ಟು ಹಳೆಯ ಕುಸುರಿಕಲೆಗಳು ಲಭ್ಯವಿವೆ. ಕೈಮಗ್ಗದ ಪ್ರದರ್ಶನದಲ್ಲಿ ಒಡಿಶಾದ ಸಾಂಪ್ರದಾಯಿಕ ಶೈಲಿಯ 104 ಪ್ರಕಾರದ ಸೀರೆಗಳಿವೆ.

ಅಲ್ಲಿನ ನೇಕಾರರು ಸೀರೆಗಳಿಗೆ ನೈಸರ್ಗಿಕ ಬಣ್ಣಗಳನ್ನೇ ಹಚ್ಚುತ್ತಾರೆ. ಹಾಗೆ ನೈಸರ್ಗಿಕವಾಗಿ ಬಣ್ಣಗಳನ್ನು ತಯಾರಿಸುವ ವಿಭಾಗವಂತೂ ಭಾರತದ ನೇಕಾರರ ಪರಿಣಿತಿಯ ಪರಿಚಯವನ್ನು ನಿಮಗೆ ನೀಡುತ್ತದೆ.

ಹಚ್ಚಹಸಿರಿನ ಹುಲ್ಲುಹಾಸಿನ ನಡುವೆ ಕಲಾತ್ಮಕವಾಗಿ ನಿರ್ಮಿಸಿರುವ ಈ ಕಲಾಗ್ರಾಮದಲ್ಲಿ ನಿಮ್ಮ ಭೇಟಿಯ ನೆನಪನ್ನು ಹಸಿರಾಗಿಡುವಂತಹ ಸ್ಮರಣಿಕೆಗಳಿಗಾಗಿಯೇ ಒಂದು ವಿಭಾಗವಿದೆ. ಅದರ ಇನ್ನೊಂದು ಭಾಗದಲ್ಲಿ ಬಯಲು ರಂಗಮಂದಿರವಿದೆ. ಸಂಜೆ ಹೊತ್ತಿನಲ್ಲಿ ಹಲವು ಖ್ಯಾತ ಕಲಾವಿದರು ಇಲ್ಲಿ ತಮ್ಮ ಕಲೆಗಳನ್ನು ಪ್ರದರ್ಶಿ
ಸುತ್ತಾ, ಸುಂದರ ಸಂಜೆಯನ್ನು ಮತ್ತಷ್ಟು ರಂಗಾಗಿಸು
ತ್ತಾರೆ. ಇಲ್ಲಿನ ಒಡಿಶಾ ಸಂಸ್ಕೃತಿ ಇಲಾಖೆ ಕೂಡ ಸದಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾಗ್ರಾಮವನ್ನು ಚಟುವಟಿಕೆಗಳ ತಾಣವನ್ನಾಗಿಸಿದೆ.

ಈ ಕಲಾಗ್ರಾಮ ಹಿರಿಯರು, ಮಕ್ಕಳಾದಿಯಾಗಿ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಯಾಕೆಂದರೆ, ಅಷ್ಟು ವೆರೈಟಿಯ ಕಲಾ ಪ್ರಾಕಾರಗಳು ಇಲ್ಲಿವೆ. ಇಲ್ಲಿಗೆ ಭೇಟಿ ನೀಡುವವರು ಹೆಚ್ಚಿನ ವಿವರಗಳಿಗಾಗಿ ಕಲಾಗ್ರಾಮದ ಕಾರ್ಯಾಲಯದ ದೂರವಾಣಿ 0674-2353210 ಗೆ ಸಂಪರ್ಕಿಸಬಹುದು.

(ಚಿತ್ರಗಳು: ಸುನೀಲ್ ಬಾರ್ಕೂರ್)‌‌‌

ಹೋಗುವುದು ಹೇಗೆ?

ಭುವನೇಶ್ವರ ನಗರದ ಜಗಮಾರಾ ಸುಂದರಪಾಡಾ ರಸ್ತೆಯ ಪೋಖರಿಪುಟ್‍ ಸಮೀಪದ ಮಧುಸೂದನ ಪಾರ್ಕ್‌ ಹತ್ತಿರದಲ್ಲಿದೆ ಕಲಾಗ್ರಾಮ.

ಭುವನೇಶ್ವರಕ್ಕೆ ದೇಶದ ಎಲ್ಲ ಭಾಗಗಳಿಂದಲೂ ವಿಮಾನ, ರೈಲು ಸೌಲಭ್ಯಗಳಿವೆ. ಖಾಸಗಿಯಾಗಿ ಪ್ರವಾಸ ಮಾಡುವವರು ಬಸ್‌, ಕಾರುಗಳಲ್ಲೂ ಹೋಗಬಹುದು. ಭುವನೇಶ್ವರದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದಿಂದ 6 ಕಿ.ಮೀ ದೂರವಿದೆ. ರೈಲ್ವೆ ನಿಲ್ದಾಣದಿಂದ 8 ಹಾಗೂ ಬಾರಾಮುಂಡಾ ಬಸ್ ನಿಲ್ದಾಣದಿಂದ 5 ಕಿ.ಮಿ. ದೂರದಲ್ಲಿದೆ. ಎಲ್ಲ ನಿಲ್ದಾಣದಿಂದಲೂ ಕಲಾಗ್ರಾಮ ತಲುಪಲು ಆಟೊ, ಟ್ಯಾಕ್ಸಿಗಳು ಲಭ್ಯವಿವೆ.

ಊಟ–ವಸತಿ

ಭುವನೇಶ್ವರದಲ್ಲಿ ಉತ್ತಮ ಹೋಟೆಲ್‌ಗಳಿವೆ. ಎಲ್ಲ ವರ್ಗಕ್ಕೂ ಅನುಕೂಲವಾಗುವ ಹೋಟೆಲ್, ವಸತಿ ಗೃಹಗಳಿವೆ. ಕಲಾಗ್ರಾಮದ ಪ್ರಾಂಗಣದಲ್ಲೇ ಕ್ಯಾಂಟಿನ್ ವ್ಯವಸ್ಥೆ ಇದೆ. ಆದರೆ, ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೆ, ಅಕ್ಕಪಕ್ಕದಲ್ಲಿರುವ ಹೋಟೆಲ್‌ಗಳನ್ನು ನೋಡಿಕೊಳ್ಳುವುದು ಉತ್ತಮ.

ಕಲಾಗ್ರಾಮದ ಪ್ರವೇಶ ವಿವರ

ಪ್ರತಿ ಸೋಮವಾರ ಮತ್ತು ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಎಲ್ಲ ದಿನಗಳಲ್ಲೂ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ರವರೆಗೆ ಕಲಾಗ್ರಾಮ ಪ್ರವೇಶಕ್ಕೆ ಅವಕಾಶವಿದೆ.

ಪ್ರತಿದಿನ ಬೆಳಿಗ್ಗೆ 11 ರಿಂದ ಗೈಡ್ ಸೇವೆ ಸಹ ಇಲ್ಲಿ ಲಭ್ಯವಿದ್ದು ಪ್ರತಿ ಭಾನುವಾರ ಮದ್ಯಾಹ್ನ 3;30 ರಿಂದ ಆಯೋಜಿಸಲಾಗುವ ವಾರದ ನಡೆ ವೀಕ್ಲಿ ವಾಕ್‍ನಲ್ಲಿ ತಂಡದಲ್ಲಿ ಗೈಡ ಸಹಾಯದಿಂದ ಈ ಕಲಾಗ್ರಾಮದ ವಿಶೇಷತೆ ಹಾಗೂ ಕಲೆಯ ಬಗ್ಗೆ ಅರಿವನ್ನು ಮೂಡಿಸುವ ವಿಶೇಷ ಅಭಿಯಾನವನ್ನೂ ಸಹ ಆಯೋಜಿಸಲಾಗುತ್ತದೆ.

ಪ್ರವೇಶ ಶುಲ್ಕ ಹಿರಿಯರಿಗೆ ₹ 50 ವಿದ್ಯಾರ್ಥಿಗಳಿಗೆ ₹ 20 ಮತ್ತು 12 ವರ್ಷಕ್ಕಿಂತ ಕಿರಿಯರಿಗೆ ಸಂಪೂರ್ಣ ಉಚಿತ.

ಇನ್ನು ಏನೇನು ನೋಡಬಹುದು :ಭುವನೇಶ್ವರ ನಗರದೊಳಗಡೆ ಅನೇಕ ಪ್ರವಾಸಿ ತಾಣಗಳಿವೆ. ಅದರಲ್ಲಿ ಏಕಮ್ರಾ ಖಾನ್ ಸುಂದರ ಉದ್ಯಾನ, ಎಕಮ್ರಾ ಹಾತ್ – ಕಲಾ ಕುಸುರಿ ವಸ್ತುಗಳ ಖರೀದಿ ತಾಣ, ಒಡಿಶಾ ಸ್ಟೇಟ್ ಮ್ಯೂಸಿಯಂ, ಲಿಂಗರಾಜ ದೇಗುಲ, ಮುಕ್ತೇಶ್ವರ ದೇಗುಲ ಪ್ರಮುಖವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT