5
‘ದಕ್ಷಿಣ ಅಮೆರಿಕ ಒಂದು ಸುತ್ತು’

ರಿಯೊ ಎಂದರೆ ಅಷ್ಟೆ ಸಾಕೆ?

Published:
Updated:

ಡಾ. ಜಿ.ಎಸ್. ಶಿವಪ್ರಸಾದ್ (ಡಾ. ಜಿ.ಎಸ್. ಶಿವರುದ್ರಪ್ಪ ಅವರ ಎರಡನೆಯ ಮಗ) ಅವರ ದಕ್ಷಿಣ ಅಮೆರಿಕ ಪ್ರವಾಸ ಕಥನದ ಪುಸ್ತಕ ‘ದಕ್ಷಿಣ ಅಮೆರಿಕ ಒಂದು ಸುತ್ತು’ ಇದೇ 15ರಂದು ಬಿಡುಗಡೆ ಆಗಲಿದೆ. ‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ. ಈ ಪುಸ್ತಕದಲ್ಲಿನ ‘ರಿಯೊ ಡಿ ಜನೈರೊ’ ನಗರದ ಕುರಿತ ಬರಹದ ಆಯ್ದ ಭಾಗ ಇಲ್ಲಿದೆ.:

ರಿ ಯೊ ಡಿ ಜನೈರೊ ಎಂಬ ಅದ್ಭುತ ನಗರದ ಹಲವಾರು ಛಾಯಾಚಿತ್ರಗಳನ್ನು ನಾನು ಬಾಲಕನಾಗಿದ್ದಾಗ ಹಲವಾರು ಗ್ಲಾಸಿ ಪತ್ರಿಕೆಗಳಲ್ಲಿ, ಮುಂದೆ ಯುವಕನಾಗಿದ್ದಾಗ ‘ಮೂನ್ ರೇಕರ್‌’ ಎಂಬ ಜೇಮ್ಸ್ ಬಾಂಡ್ ಚಿತ್ರದಲ್ಲಿ ಕಂಡು ಪುಳಕಿತನಾಗಿದ್ದೆ. ಮುಂದೆ ಎಂದಾದರೂ ಒಂದು ದಿನ ರಿಯೊ ನಗರವನ್ನು ನೋಡುವ ಕನಸು ಕಟ್ಟಿಕೊಂಡಿದ್ದೆ.

ನಾನು ಈ ದಕ್ಷಿಣ ಅಮೆರಿಕದ ಪ್ರವಾಸ ಕೈಗೊಳ್ಳುವ ಮುಂಚೆ ಪ್ರಪಂಚದ ಇತರ ಅದ್ಭುತ ನಗರಗಳಾದ ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ನೋಡಿ ಮುಗಿಸಿದ್ದೆ. ಇದಾವ ನಗರಗಳಿಗೂ ರಿಯೊಗಿರುವ ನೈಸರ್ಗಿಕ ಅಲಂಕಾರಗಳಿಲ್ಲ. ಇವು ಮಾನವ ನಿರ್ಮಿತ ಬೃಹತ್‌ ನಗರಗಳು. ಹಾಗೆ ವಿನ್ಯಾಸ ಶೈಲಿ, ಸ್ವಚ್ಛತೆ, ಆರ್ಥಿಕ ಶ್ರೀಮಂತಿಕೆ ಈ ನಗರಗಳ ಹೆಗ್ಗಳಿಕೆ. ಆದರೆ ರಿಯೊ ನಗರಕ್ಕೆ ಒಂದು ಕಡೆ ಅಟ್ಲಾಂಟಿಕ್ ಸಾಗರದ ಸುಂದರ ಕಡಲ ತೀರವಿದ್ದರೆ ಇನ್ನೊಂದು ಬದಿಯಲ್ಲಿ ಹಸಿರು ಅರಣ್ಯಗಳಿಂದ ಕೂಡಿದ ಬೆಟ್ಟಗಳ ಸಿಂಗಾರವಿದೆ. ಇಲ್ಲಿ ಆರ್ಥಿಕ ಸಿರಿವಂತಿಕೆಗಿಂತ ನೈಸರ್ಗಿಕ ಶ್ರೀಮಂತಿಕೆ ಎದ್ದು ತೋರುತ್ತದೆ. ರಿಯೊ ಡಿ ಜನೈರೊ ಎಂಬ ಈ ನಗರದ ಹೆಸರು ಪೋರ್ಚುಗೀಸ್ ಭಾಷೆಯಲ್ಲಿ ಅಭಿವ್ಯಕ್ತಗೊಂಡು ಅದರ ಇಂಗ್ಲಿಷ್ ಭಾಷಾಂತರ ‘ರಿವರ್ ಆಫ್ ಜನವರಿ’ ಎನ್ನಬಹುದು. ಕನ್ನಡದಲ್ಲಿ ಇದನ್ನು ‘ಜನವರಿಯಲ್ಲಿ ಕಂಡ ನದಿ ಎಂದು ಅರ್ಥೈಸಬಹುದು. ಈ ಹೆಸರಿನಲ್ಲಿ ಒಂದು ದೋಷವಿದ್ದು ಅದರ ಹಿನ್ನೆಲೆ ಹೀಗಿದೆ. ಪೋರ್ಚುಗೀಸ್ ಅನ್ವೇಷಕ ಗ್ಯಾಸ್‌ಪರ್ ಡಿ ಲಿಮಾಸ್ 1501ರಲ್ಲಿ ದಕ್ಷಿಣ ಅಮೇರಿಕದ (ಈಗಿನ ರಿಯೊ) ಈ ಪ್ರದೇಶಕ್ಕೆ ಜನವರಿ ತಿಂಗಳಲ್ಲಿ ತಲುಪಿ ಗ್ವಾನಬಾರ ಬೇ ಎಂಬ ಕೊಲ್ಲಿಯನ್ನು ಕಂಡು ಅದು ನದಿ ಮುಖವೆಂದು ತಪ್ಪಾಗಿ ಗ್ರಹಿಸಿ ‘ಜನವರಿ ತಿಂಗಳ ನದಿ ಎಂದು ಹೆಸರಿಸಿದ. ಇದು ನನ್ನ ನೆಚ್ಚಿನ ರಿಯೊ ಡಿ ಜನೀರೊ. ಸರಳವಾಗಿ ರಿಯೊ ಎಂಬ ಹೆಸರಿನಲ್ಲಿ ಈ ನಗರವನ್ನು ಗುರುತಿಸಬಹುದು.

ವಿಮಾನ ನಿಲ್ದಾಣದ ಸ್ವಾಗತ ಭವನದಲ್ಲಿ ಸ್ಥಳೀಯ ಮಾರ್ಗದರ್ಶಿ ಹೆಲನ್ ನಮ್ಮನ್ನು ಎದುರುಗೊಂಡು ಸ್ವಾಗತಿಸಿದಳು. ಎಂಟು ಆಸನಗಳ ಹವಾನಿಯಂತ್ರಿತ ಲಕ್ಷುರಿ ವ್ಯಾನಿನೊಳಗೆ ಎಲ್ಲರೂ ಕುಳಿತೆವು. ಮೊದಲು ನಮ್ಮ ಪರಿಚಯ ಕೇಳಿಕೊಂಡು ಇಲ್ಲಿಯವರೆಗೆ ಪ್ರವಾಸ ಹೇಗೆ ನಡೆದಿದೆ ಎಂದು ವಿಚಾರಿಸಿದಳು. ಹೆಲನ್ ಎತ್ತರಕ್ಕಿದ್ದು ಅವಳು ಬ್ರಿಟನ್ ಮೂಲದವಳೆಂದು, ತಾನು ಕಳೆದ ಹಲವಾರು ವರ್ಷಗಳ ಹಿಂದೆ ಇಲ್ಲಿಗೆ ವಲಸೆ ಬಂದು, ತನ್ನ ಗಂಡ ಮತ್ತು ಇಬ್ಬರ ಮಕ್ಕಳೊಡನೆ ಸಂಸಾರ ಮಾಡುತ್ತ ತನ್ನ ಬಿಡುವಿನ ವೇಳೆಯಲ್ಲಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದಳು. ದೂರದ ಬ್ರಿಟನ್‌ನಿಂದ ಬಂದು ಇಲ್ಲಿ ನೆಲೆಸಿ, ರಿಯೊ ನಗರವನ್ನು ತನ್ನದಾಗಿಸಿಕೊಂಡು ಪ್ರೀತಿಯಿಂದ ಅದನ್ನು ಇತರರಿಗೆ ಪರಿಚಯ ಮಾಡುವ ವೃತ್ತಿಯನ್ನು ಕೈಗೆತ್ತಿಕೊಂಡ ಹೆಲನ್ ನನ್ನ ಮೆಚ್ಚುಗೆಗೆ ಪಾತ್ರಳಾದಳು. ಇವಳು ನಮಗೆ ಪರಿಚಯವಾದ ಶುದ್ಧ ಬ್ರಿಟನ್ ಇಂಗ್ಲಿಷ್ ಶೈಲಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಳು. ಮುಂದಿನ ಮೂರು ದಿನಗಳಲ್ಲಿ ನಮಗೆ ಒಳ್ಳೆ ಮಾರ್ಗದರ್ಶನ ಮತ್ತು ಮಾಹಿತಿಗಳು ದೊರಕಿದವು.

ರಿಯೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಗರದಿಂದ ಹಲವು ಮೈಲಿ ದೂರದಲ್ಲಿ, ಬೆಟ್ಟಗಳಿಂದ ಮುಕ್ತವಾದ ಪ್ರದೇಶದಲ್ಲಿತ್ತು. ಈ ವಿಮಾನ ನಿಲ್ದಾಣ ಬ್ರೆಜಿಲ್ ಡೊಮೆಸ್ಟಿಕ್ ಫ್ಲೈಟ್‌ಗಳಲ್ಲದೆ 19 ಇತರ ರಾಷ್ಟ್ರಗಳ ಸಂಪರ್ಕ ಹೊಂದಿದೆ. ಇಲ್ಲಿನ ಎರಡು ಟರ್ಮಿನಲ್ ಸೌಲಭ್ಯ ವರ್ಷಕ್ಕೆ ಸುಮಾರು 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಲು ಸಮರ್ಥವಾಗಿದೆ. ಹೆಚ್ಚಿನ ಪ್ರವಾಸೋದ್ಯಮದಿಂದಾಗಿ ನಗರದ ಮಧ್ಯಭಾಗದಲ್ಲಿ ‘ಸಾಂಟೋಸ್ ಡುಮೊಂಟ್’ ಎಂಬ ಇನ್ನೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ನಗರದ ಉತ್ತರದಲ್ಲಿದ್ದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ನಗರದ ದಕ್ಷಿಣ ಭಾಗದಲ್ಲಿರುವ ಪ್ರಖ್ಯಾತ ‘ಕೋಪಕಬಾನ’ ಪ್ರದೇಶದಲ್ಲಿದ್ದ ನಮ್ಮ ಹೋಟಲಿಗೆ ತಲುಪಲು ಮುಕ್ಕಾಲು ಗಂಟೆ ಹಿಡಿಯಿತು. ದಾರಿಯಲ್ಲಿ ಎಡಕ್ಕೆ ನೀಲಿ ಅಟ್ಲಾಂಟಿಕ್ ಸಾಗರ ವಿಸ್ತಾರವಾಗಿ ಹರಡಿಕೊಂಡಿತ್ತು. ಸಾಗರದ ಮಧ್ಯದಲ್ಲಿ ಬಂಡೆಗಳೇ ಪ್ರಧಾನವಾದ ಹಲವಾರು ಆಕೃತಿಗಳ ನುಣುಪಾದ ಬೆಟ್ಟಗಳು ಸಮುದ್ರಕ್ಕೆ ಚಾಚಿಕೊಂಡಿದ್ದವು. ಕೆಲವು, ನಡುಗಡ್ಡೆಯಂತೆ ಗೋಚರಿಸಿದವು. ಆದರೆ ಕೆಲವು ಹತ್ತಿರ ದಿಂದ ಕಂಡಾಗ ಅದು ಭೂಸಂಧಿ (Isthamus)ಯಾಗಿ ನಗರದ ಸಂಪರ್ಕವನ್ನು ಉಳಿಸಿಕೊಂಡಿದ್ದವು. ಕಿರಿದಾದ ಭೂಭಾಗದಲ್ಲೂ ನಗರ ಹಬ್ಬಿಕೊಂಡಿರುವುದನ್ನು ಗಮನಿಸಿದಾಗ ಇಲ್ಲಿಯ ಕಿಕ್ಕಿರಿದ ಜನಸಂದಣಿಯ ಬಗ್ಗೆ ಒಂದು ಅಂದಾಜು ಸಿಗುತ್ತದೆ. ನಗರದ ಇನ್ನೊಂದೆಡೆ ಭಾರಿ ಬೆಟ್ಟಗಳು ಮತ್ತು ಅರಣ್ಯ ಹಬ್ಬಿರುವುದರಿಂದ ನಗರ ವಿಸ್ತಾರವಾಗಿ ಹರಡಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ನಗರದ ತುಂಬಾ ಬಹು ಅಂತಸ್ತಿನ ಕಟ್ಟಡಗಳು! ನಗರದ ಹೃದಯವನ್ನು ತಲುಪಿದಾಗ ನನಗೆ ತಟ್ಟನೆ ನಮ್ಮ ಮುಂಬೈ ನಗರ ನೆನಪಿಗೆ ಬಂತು. ನಾವು ತಂಗಿದ್ದ ಹೋಟೆಲಿನಲ್ಲಿ 25ನೆಯ ಅಂತಸ್ತಿನಲ್ಲಿ ಕೋಣೆಯನ್ನು ಒದಗಿಸಲಾಗಿತ್ತು. ಲಿಫ್ಟ್‌ನಲ್ಲಿ ಮೇಲೇರುತ್ತಿದ್ದಾಗ ಅಲ್ಲಿಂದ ಸಮುದ್ರದ ಒಳ್ಳೆಯ ನೋಟ ಸಿಗಬಹುದು ಎಂದು ಆಲೋಚಿಸಿ ನಮಗೆ ಕೋಣೆಯ ಒಳಗೆ ಹೋದಾಗ ಆದದ್ದು ನಿರಾಸೆ. ಏಕೆಂದರೆ ಎದುರಿಗೆ ಮತ್ತು ಪಕ್ಕಕ್ಕೆಲ್ಲಾ ಇನ್ನೂ ಮೇಲಕ್ಕೇರಿದ್ದ ಕಟ್ಟಡಗಳು! ಒಟ್ಟಾರೆ ಕಾಂಕ್ರೀಟ್ ಅರಣ್ಯ ಎಂದು ವಿವರಿಸಬಹುದು. ಮುಂದಿನ ಮೂರು ದಿವಸ ಅಂತರಿಕ್ಷ ವಾಸ ಅನುಭವಿಸಿದ್ದಾಯಿತು.

ರಿಯೊ ನಗರದಲ್ಲಿ ನಾಲ್ಕು ವಲಯಗಳನ್ನು ಗುರುತಿಸಬಹುದು. ಉತ್ತರ ಭಾಗ ಸ್ವಲ್ಪ ಸಮತಟ್ಟಾಗಿ ವಿಮಾನ ನಿಲ್ದಾಣವನ್ನು ಒಳಗೊಂಡು, ಮರಕಾನವೆಂಬ ಪ್ರಖ್ಯಾತ ಸ್ಟೇಡಿಯಂ ಈ ಪ್ರದೇಶದಲ್ಲಿದೆ. 2 ಲಕ್ಷ ಜನರು ಕೂತು ವೀಕ್ಷಿಸಬಹುದಾದ ಈ ಸ್ಟೇಡಿಯಂ ಪ್ರಪಂಚದಲ್ಲಿನ ಅತ್ಯಂತ ವಿಸ್ತಾರವಾದ ಸ್ಟೇಡಿಯಂ ಎಂದು ಹೆಸರುವಾಸಿಯಾಗಿದ್ದು ಮುಂದಿನ ಕೆಲವು ದಶಕಗಳಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಕಾರಣಗಳಿಂದ ಇದರ ಆಸನಗಳ ಸಂಖ್ಯೆಯನ್ನು 90,000ಕ್ಕೆ ಇಳಿಸಲಾಗಿದೆ. ಬ್ರೆಜಿಲ್ ಜನಗಳಿಗೆ ಫುಟ್‌ಬಾಲ್ ಎಂದರೆ ಅತ್ಯಂತ ಪ್ರೀತಿ. ಇಲ್ಲಿ 2014ರಲ್ಲಿ ವರ್ಲ್ಡ್ ಕಪ್ (FIFA World Cup) ಫುಟ್‌ಬಾಲ್ ಪಂದ್ಯವನ್ನು ಏರ್ಪಡಿಸಲಾಗಿತ್ತು. ಅದನ್ನು ಇಂಗ್ಲೆಂಡಿನಲ್ಲಿ ಕೂತು ನೋಡಿದ್ದು ನನಗೆ ಚೆನ್ನಾಗಿ ನೆನಪಿದೆ. ನಾವು ರಿಯೊ ಪ್ರವಾಸ ಕೈಗೊಂಡಿದ್ದು 2015 ಜೂನ್ ತಿಂಗಳಲ್ಲಿ. 2016ರ ಒಲಿಂಪಿಕ್ಸ್ ಪಂದ್ಯ ರಿಯೊನಲ್ಲಿ ಜರುಗಲಿದೆ ಎಂಬ ವಿಚಾರ ತಿಳಿದಿದ್ದೆವು. ನಾವು ರಿಯೊದಲ್ಲಿ ಪ್ರವಾಸ ಮಾಡುವಾಗ ಒಲಿಂಪಿಕ್ಸ್ ಸಿದ್ಧತೆ ಬಿರುಸಾಗಿ ಸಾಗಿತ್ತು.

ಇಲ್ಲಿ ಒಂದಷ್ಟು ವಿಚಾರಗಳನ್ನು ಗಮನಿಸಬಹುದು. ಮರಕಾನ ಸ್ಟೇಡಿಯಂನಲ್ಲೇ ಒಲಿಂಪಿಕ್ಸ್ ಪಂದ್ಯದ ಆರಂಭ ಮತ್ತು ಮುಕ್ತಾಯ ಸಂಭ್ರಮಗಳು. ಒಲಿಂಪಿಕ್ಸ್ ಫುಟ್‌ಬಾಲ್ ಕ್ರೀಡೆಯನ್ನು ಇಲ್ಲಿಯೇ ಏರ್ಪಡಿಸಲಾಗಿತ್ತು. ಅಂದ ಹಾಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊಟ್ಟ ಮೊದಲನೆ ಬಾರಿ ಪಂದ್ಯವನ್ನು ಅಭಿವೃದ್ಧಿಗೊಳ್ಳುತ್ತಿರುವ ದಕ್ಷಿಣ ಅಮೆರಿಕ ಬ್ರೆಜಿಲ್‌ನಲ್ಲಿ ಏರ್ಪಡಿಸಿದ್ದು ವಿಶೇಷ. ಒಲಿಂಪಿಕ್ಸ್ ಪಂದ್ಯವನ್ನು ಶ್ರೀಮಂತ ದೇಶಗಳಲ್ಲಿ ಏರ್ಪಡಿಸುವುದು ಸಾಮಾನ್ಯ. ಈ ಪಂದ್ಯಾವಳಿಗಳನ್ನು ಏರ್ಪಡಿಸಲು ಇತ್ತೀಚಿನ ವರ್ಷಗಳಲ್ಲಿ 30 ರಿಂದ 40 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಹಿಡಿಯುತ್ತದೆ. ಅಭಿವೃದ್ಧಿಗೊಳ್ಳುತ್ತಿರುವ ರಾಷ್ಟ್ರಗಳು ಪ್ರತಿಷ್ಠೆಗಾಗಿ ಅರ್ಜಿ ಹಾಕಿರುವುದುಂಟು. ಅವು ತಮ್ಮ ಆದ್ಯತೆಗಳನ್ನು ಅರಿತುಕೊಂಡು ನೈತಿಕ ಜವಾಬ್ದಾರಿ ಮತ್ತು ವಿವೇಚನೆಯನ್ನು ಇಟ್ಟುಕೊಂಡು ಒಲಿಂಪಿಕ್ಸ್ ಏರ್ಪಡಿಸುವ ಅಗತ್ಯವನ್ನು ವಿಚಾರ ಮಾಡಬೇಕು. ಬ್ರೆಜಿಲ್ ಜನರು ಇದರ ಬಗ್ಗೆ ಆಲೋಚಿಸಿ ಒಲಿಂಪಿಕ್ಸ್ ಏರ್ಪಡಿಸುವ ಉದ್ದೇಶವನ್ನು ತೀವ್ರವಾಗಿ ಪ್ರತಿಭಟಿಸಿದರು. ಒಲಿಂಪಿಕ್ಸ್ ಪಂದ್ಯದ ಆರಂಭ ಸಮಯದಲ್ಲಿ ಬ್ರೆಜಿಲ್‌ನ ರಿಯೊ ಸೇರಿದಂತೆ ಹಲವಾರು ನಗರಗಳಲ್ಲಿ ದೊಡ್ಡ ಪ್ರತಿಭಟನೆಗಳಾಗಿ ಪೊಲೀಸರು ಟಿಯರ್ ಗ್ಯಾಸ್ ಉಪಯೋಗಿಸಬೇಕಾಯಿತು. ಒಲಿಂಪಿಕ್ಸ್ ತರಬೇತಿಗೆ ಬಂದ ಜಲಕ್ರೀಡಾಪಟುಗಳು ರಿಯೊದಲ್ಲಿನ ಸರೋವರದಲ್ಲಿ ಮಾಲಿನ್ಯವಿದ್ದು ಕ್ರೀಡೆಗೆ ಯೋಗ್ಯವಾಗಿಲ್ಲವೆಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಒಲಿಂಪಿಕ್ಸ್‌ಗೆ ಇನ್ನು ಕೆಲವು ತಿಂಗಳಿದ್ದಾಗ ರಿಯೊ ಸೇರಿದಂತೆ ಬ್ರೆಜಿಲ್‌ನ ನಗರ ಮತ್ತು ಹಳ್ಳಿಗಳಲ್ಲಿ ಜೀಕಾ ವೈರಸ್ ಎಂಬ ಕಾಯಿಲೆ ಹರಡುತ್ತಿರುವುದರ ಬಗ್ಗೆ ಸುದ್ದಿ ಮಾಧ್ಯಮಗಳು ಬಿರುಸಿನ ಪ್ರಚಾರ ಮಾಡಿದವು. ಈ ಜೀಕಾ ವೈರಸ್ ಸೊಳ್ಳೆಗಳಿಂದ ಹರಡಿದ್ದು ಗರ್ಭ ಧರಿಸುವ ಹೆಣ್ಣುಮಕ್ಕಳಿಗೆ ಹಾಗೂ ಭ್ರೂಣಕ್ಕೆ ಅಪಾಯ ಒದಗುವ ಬಗ್ಗೆ ಮಾಹಿತಿಗಳು ಹೊರಬಂದವು. ಇದರ ಬಗ್ಗೆ ಸಾಕಷ್ಟು ಭೀತಿ ಮತ್ತು ಅಪಪ್ರಚಾರಗಳು ಹುಟ್ಟಿಕೊಂಡು ರಿಯೊ ಒಲಿಂಪಿಕ್ಸ್ ರದ್ದು ಮಾಡಬೇಕು ಅಥವಾ ಸ್ಥಳಾಂತರಿಸಬೇಕು ಎಂಬ ಬೇಡಿಕೆಗಳು, ಒತ್ತಾಯಗಳು ಮುಂದುವರಿದ ದೇಶಗಳಿಂದ ಬಂದವು. ಜೀಕಾ ವೈರಸ್ ಕಾಯಿಲೆ ಇದ್ದದ್ದು ನಿಜವೇ, ಆದರೂ ಅದು ಎಷ್ಟರ ಮಟ್ಟಿಗೆ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಮಾಡುತ್ತಿದೆ ಎಂಬ ಬಗ್ಗೆ ವೈಜ್ಞಾನಿಕ ತಜ್ಞರು ಚರ್ಚಿಸಿದರು. ಕೊನೆಗೆ ವಿಶ್ವ ಆರೋಗ್ಯ ಸಂಸ್ಥೆ ರಿಯೊದಲ್ಲಿ ಒಲಿಂಪಿಕ್ಸ್ ಏರ್ಪಡಿಸಲು ತೊಂದರೆ ಇಲ್ಲ ಎಂಬ ಹೇಳಿಕೆಯನ್ನು ಕೊಟ್ಟಿತು. ಹಾಗೆಯೆ ಕೆಲವು ಸುರಕ್ಷತಾ ಸೂಚನೆಗಳನ್ನು ಕೊಡಲಾಯಿತು. ಹಲವಾರು ಸ್ತ್ರೀ ಕ್ರೀಡಾಪಟುಗಳು ತಾವು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿದರು. ಒಲಿಂಪಿಕ್ಸ್‌ಗೆ ಇನ್ನು ಕೆಲವೇ ತಿಂಗಳಿದ್ದಾಗ ಬ್ರೆಜಿಲ್ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿತು! ಬ್ರೆಜಿಲ್ ಅಧ್ಯಕ್ಷೆ ಡಿಲ್ಮಾ ರೂಸಫ್ ಮೇಲೆ ಬಜೆಟ್‌ ಉಲ್ಲಂಘನೆ ಮತ್ತು ಸರಕಾರದ ಹಿಡಿತದಲ್ಲಿದ್ದ ಅಯಿಲ್ ಕಂಪನಿಯ ಭ್ರಷ್ಟಾಚಾರದ ಆಪಾದನೆಗಳನ್ನು ಹೊರಿಸಿ ಅವರನ್ನು ಕೆಳಗಿಳಿಸಿ ಉಪಾಧ್ಯಕ್ಷ ಮೈಕೆಲ್ ಥರಮರ್‌ನನ್ನು ಹಂಗಾಮಿ ಅಧ್ಯಕ್ಷನಾಗಿ ನೇಮಿಸಲಾಯಿತು. ಈ ಎಲ್ಲಾ ತುಮುಲಗಳ ನಡುವೆ, ಕೊನೆಗೂ 5ನೇ ಆಗಸ್ಟ್ 2016ರಲ್ಲಿ ರಿಯೊ ನಗರದಲ್ಲಿ ಅದ್ಧೂರಿಯ ಉದ್ಘಾಟನಾ ಸಮಾರಂಭದಿಂದ ಹಿಡಿದು 21ನೇ ಆಗಸ್ಟ್‌ವರೆಗೆ ಬಹುಪಾಲು ಸುಗಮವಾಗಿ ಒಲಿಂಪಿಕ್ಸ್ ಜರುಗಿತು. ಚೈನಾದ ಬೀಜಿಂಗ್ ಒಲಿಂಪಿಕ್ಸ್‌ಗೆ 40 ಬಿಲಿಯನ್ (ಅಮೆರಿಕ ಡಾಲರ್) ಖರ್ಚು ಮಾಡಿದ್ದು, ರಿಯೊದಲ್ಲಿ 4.5 ಬಿಲಿಯನ್ ಬಜೆಟ್‌ನಲ್ಲಿ ನಿಭಾಯಿಸಲಾಗಿತ್ತು. ಒಲಿಂಪಿಕ್ಸ್ ಕಮಿಟಿ 2009ರಲ್ಲಿ ರಿಯೊ ಪಂದ್ಯಾವಳಿಯನ್ನು ಏರ್ಪಡಿಸಲು ಒಪ್ಪಿಕೊಂಡಾಗ ಬ್ರೆಜಿಲ್‌ನ ಆರ್ಥಿಕ ಬೆಳವಣಿಗೆ ಬಹಳಷ್ಟು ಚುರುಕಾಗಿತ್ತು. ಆದರೆ ಮುಂದಿನ ಕೆಲವು ವರ್ಷಗಳಲ್ಲಿ ಆರ್ಥಿಕ ಹಿನ್ನಡೆಯಾಗಿ ಒಲಿಂಪಿಕ್ಸ್ ಸಿದ್ಧತೆಗಳು ನಡೆದಿರುವಾಗ ಬೆಲೆಗಳು ಮೇಲೇರಿ ಬಜೆಟ್‌ನಲ್ಲಿ ಆರೋಗ್ಯ, ವಸತಿ ಇವುಗಳಲ್ಲಿ ಹಿಡಿತ ತರಬೇಕಾಯಿತು. ಒಲಿಂಪಿಕ್ಸ್ ಕಾರಣದಿಂದ ಹಲವಾರು ಕೊಳೆಗೇರಿಗಳನ್ನು ಸ್ಥಳಾಂತರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ರಿಯೊ ಜನಸಾಮಾನ್ಯರು ಅಸಮಾಧಾನದಿಂದ ಪ್ರತಿಭಟಿಸಿದ್ದು ಸಹಜವೆ.

ಬ್ರೆಜಿಲ್ ದೇಶದಲ್ಲಿ ಫುಟ್‌ಬಾಲ್ ಎಂದರೆ ಪ್ರೀತಿ ಎನ್ನುವುದಕ್ಕಿಂತ ‘ಹುಚ್ಚು ಎನ್ನುವುದು ಸೂಕ್ತ. ಬ್ರೆಜಿಲ್ ವಿಶ್ವಕಪ್ ಪಂದ್ಯವನ್ನು ಐದು ಬಾರಿ ಗೆದ್ದುಕೊಂಡಿದ್ದು ಪ್ರಪಂಚದಲ್ಲಿನ ಖ್ಯಾತ ಫುಟ್‌ಬಾಲ್ ಪಟು ಪೀಲೆ ಮೂರು ಬಾರಿ ಈ ಗೆದ್ದ ತಂಡದಲ್ಲಿ ಭಾಗಿಯಾಗಿದ್ದ. ನೆಲ್ಸನ್ ಮಂಡೇಲಾ, ಹೆನ್ರಿ ಕಿಸಿಂಜರ್ ಅಂತಹವರಿಂದ ಪ್ರಶಂಸೆಗೆ ಪಾತ್ರನಾಗಿದ್ದ. 1997ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬೆತ್‌ರಿಂದ ಗೌರವ ನೈಟ್‌ಹುಡ್ ಪಡೆದುಕೊಂಡ. ಎಡಿನ್‌ಬರೊ ವಿಶ್ವವಿದ್ಯಾಲಯ ಪೀಲೆಗೆ ಗೌರವ ಡಾಕ್ಟರೇಟ್ ಪದವಿ ಕೊಟ್ಟಿದೆ. ಪೀಲೆ ಯುನೈಟೆಡ್ ನೇಷನ್‌ನ ಪರಿಸರ ರಾಯಭಾರಿಯಾಗಿ ಕೆಲಸ ಮಾಡಿದ್ದಾನೆ. ‘ಪೀಲೆ ಬರ್ತ್ ಆಫ್ ಲೆಜೆಂಡ್’ ಎಂಬ ಹಾಲಿವುಡ್ ಚಲನಚಿತ್ರವನ್ನು ಅವನ ಫುಟ್‌ಬಾಲ್ ದಿನಗಳ ಮೇಲೆ ಆಧರಿಸಿ ಚಿತ್ರಿಸಲಾಗಿದೆ. ಬಹಳ ಸೋಜಿಗದ ಸಂತಸದ ವಿಷಯವೆಂದರೆ ಈ ಚಲನಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ! ಹಾಗೆ ‘ಗಿಂಗಾ’ ಎಂಬ ಹಾಡನ್ನು ಈ ಚಿತ್ರದಲ್ಲಿ ಹಾಡಿದ್ದಾರೆ. ಪೀಲೆಯಂತಹಾ ಉನ್ನತ ವ್ಯಕ್ತಿತ್ವ ಬ್ರೆಜಿಲ್ ಜನಸಾಮಾನ್ಯರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದು ಫುಟ್‌ಬಾಲ್ ಪಂದ್ಯದ ಬಗ್ಗೆ ಸ್ಥಳೀಯರಿಗೆ ಭಾವೋದ್ವೇಗವಿದೆ ಎಂದು ಹೇಳಬಹುದು. ರಿಯೊದಲ್ಲಿ ಬಟಫೋಗೊ, ಫ್ಲೆಮಿಂಗ್ ಮುಂತಾದ ಪ್ರಖ್ಯಾತ ಫುಟ್‌ಬಾಲ್ ಕ್ಲಬ್‌ಗಳಿವೆ. ಫುಟ್‌ಬಾಲ್ ಪಂದ್ಯಾವಳಿಗಳಾದಾಗ ಜನ ಕೆಲಸಕ್ಕೆ ಹಾಜರಾಗದೆ ಮನೆಯಲ್ಲಿ ಟಿ.ವಿ.ಗೆ ಗಂಟುಬೀಳುತ್ತಾರೆ. ವರ್ಲ್ಡ್‌ಕಪ್ ಸಮಯದಲ್ಲಿ ರಿಯೊದ ಕೆಲವು ಕಚೇರಿಗಳಲ್ಲಿ ಫುಟ್‌ಬಾಲ್ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವುದರ ಬಗ್ಗೆ ತಿಳಿದಿದ್ದೇನೆ. ಈ ವಿಚಾರವನ್ನು ಗಮನಿಸಿದಾಗ ನಮ್ಮ ಭಾರತೀಯರ ಕ್ರಿಕೆಟ್ ಗೀಳು ನೆನಪಿಗೆ ಬರುತ್ತದೆ. ಬ್ರೆಜಿಲ್‌ನ ಸಂಸತ್ತಿನಲ್ಲಿ ಕೂಡಾ ಕೆಲವು ನಿವೃತ್ತ ಫುಟ್‌ಬಾಲ್ ಪಟುಗಳಿದ್ದು ಫುಟ್‌ಬಾಲ್ ಪಂದ್ಯಕ್ಕೂ ರಾಜಕೀಯಕ್ಕೂ ಇರುವ ನಂಟನ್ನು ಗಮನಿಸಬಹುದು.

ರಿಯೊ ನಗರದ ಉತ್ತರ ಭಾಗದಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳಿವೆ. ನಗರದ ಮಧ್ಯವಲಯದಲ್ಲಿ ನ್ಯಾಷನಲ್ ಲೈಬ್ರರಿ, ಮ್ಯೂಸಿಯಂ, ಹಳೆ ಮುನ್ಸಿಪಲ್ ನಾಟಕ ಮಂದಿರ, ಗವರ್ನರ್ ಮನೆ - ಹೀಗೆ ಹಲವಾರು ಕಲೋನಿಯಲ್ ಭವನ ಮತ್ತು ಅದರ ಕುರುಹುಗಳನ್ನು ಒಳಗೊಂಡಿದೆ. ನಗರದ ದಕ್ಷಿಣ ಭಾಗದಲ್ಲಿ ಕೋಪಕಬಾನ, ಇಪನೀಮ ಲೇಬ್‌ಲಾನ್ ಮುಂತಾದ ಪ್ರತಿಷ್ಠಿತ ಬಡಾವಣೆಗಳು ಅಟ್ಲಾಂಟಿಕ್ ಸಾಗರದ ಪಕ್ಕದಲ್ಲಿ ಹಬ್ಬಿಕೊಂಡಿವೆ. ನಗರದ ಪಶ್ಚಿಮಕ್ಕೆ ಪರ್ವತ ಶ್ರೇಣಿಗಳಿದ್ದು ಪೆಡ್ರ ಬ್ರಾಂಕಾ ಎಂಬ ಮೂರು ಸಾವಿರ ಅಡಿ ಬೆಟ್ಟವಿದ್ದು ಅದರ ಮೇಲೆ ಹಬ್ಬಿರುವ ಅರಣ್ಯ ಪ್ರದೇಶವನ್ನು ಸ್ಟೇಟ್ ಪಾರ್ಕ್ ಎಂದು ರಕ್ಷಿಸಿದ್ದಾರೆ. ಈ ಬೆಟ್ಟಗಳ ಕೆಳಗೆ ನಗರ ಹಬ್ಬಿಕೊಂಡು ಬಹಳಷ್ಟು ಮಧ್ಯಮ ವರ್ಗದವರ ಮನೆಗಳಿವೆ. ನಗರದ ಹೊರವಲಯಗಳಲ್ಲಿ ‘ಫವೇಲಾ’ ಎಂದರೆ ನಮಗೆ ತಿಳಿದಿರುವಂತೆ ಸ್ಲಂಗಳು ಹಬ್ಬಿಕೊಂಡಿವೆ.

ನಮ್ಮ ಮಾರ್ಗದರ್ಶಿ ಹೆಲನ್ ನಮ್ಮನ್ನು ಕೋಪಕಬಾನ ಪ್ರದೇಶದಲ್ಲಿರುವ ರಾಯಲ್ ರಿಯೊ ಪ್ಯಾಲೆಸ್ ಹೋಟೆಲ್ಲಿಗೆ ತಲುಪಿಸಿದಾಗ ಸಂಜೆ ಏಳು ಗಂಟೆಯಾಗಿತ್ತು. ನಮ್ಮ ಹೋಟೆಲ್ ಪ್ರಖ್ಯಾತ ಕೋಪಕಬಾನ ಬೀಚಿನಿಂದ ಐದು ನಿಮಿಷ ದೂರವಿದ್ದು ಅಲ್ಲಿ ನಾವು ಒಳ್ಳೆ ರೆಸ್ಟೊರೆಂಟ್ ಹುಡುಕಿಕೊಂಡು ಊಟವನ್ನು ಮುಗಿಸಿದೆವು.

(ಬಟಾಫೋಗೊ ಸಿಹಿನೀರಿನ ಕೊಳ ಮತ್ತು ಬಟಾಫೋಗೊ ಬಡಾವಣೆಯ ನೋಟ)

(ರಿಯೊ ನಗರದ ಅಚ್ಚುಕಟ್ಟಾದ ರಸ್ತೆ)

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !