ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಒಂದು ಸುಂದರ ನಗರ. ಇಲ್ಲಿನ ಅಟ್ಲಾಂಟಿಕ್ ಮಹಾಸಾಗರ, ಟೇಬಲ್ ಮೌಂಟೇನ್, ರಾಬೆನ್ ದ್ವೀಪ, ಪೆಂಗ್ವಿನ್ಗಳ ನೆಲೆ ಬೌಲ್ಡರ್ಸ್ ಬೀಚ್, ಕೇಪ್ ಆಫ್ ಗುಡ್ ಹೋಪ್ಗಳು ಅಪೂರ್ವ ಅನುಭವವನ್ನು ನೀಡುತ್ತವೆ...

‘ಮನುಕುಲದ ತೊಟ್ಟಿಲು’ ಎಂದೇ ಹೆಸರಾದ ದಕ್ಷಿಣ ಆಫ್ರಿಕಾ ಹಲವು ವಿಸ್ಮಯಗಳ ಆಗರ. ಇನ್ನು ಅದರ ಅತ್ಯಂತ ಪ್ರಾಚೀನ ನಗರವಾದ ಕೇಪ್ ಟೌನ್ ಅಂತೂ ದಕ್ಷಿಣ ಆಫ್ರಿಕಾದ ಮಾತೃ ನಗರವೆಂದೇ ಖ್ಯಾತವಾದ ಅತ್ಯಂತ ಆಕರ್ಷಕ ಸ್ಥಳ. ಸುಮಾರು ಒಂದು ಲಕ್ಷ ವರ್ಷಗಳಷ್ಟು ಹಿಂದೆ ಮಾನವ ತನ್ನ ಮೊದಲ ಹೆಜ್ಜೆಯನ್ನು ಕೇಪ್ ಮೇಲೆ ಇರಿಸಿದನೆಂದು ಪುರಾತತ್ವ ಶಾಸ್ತ್ರ ಹೇಳುತ್ತದೆ. ಆ ದೇಶದ ಶಾಸಕಾಂಗದ ರಾಜಧಾನಿಯೂ ಇದಾಗಿದೆ. ಇದೊಂದು ಸದಾ ಬಿಜಿಯಾಗಿರುವ ಬಂದರು ನಗರವೂ ಹೌದು. ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕ ನೆಲ್ಸನ್ ಮಂಡೇಲಾರನ್ನು ಬಿಳಿಯರು 27 ವರ್ಷ ಸೆರೆಯಿಟ್ಟಿದ್ದ, ಈಗ ರಾಷ್ಟ್ರೀಯ ಮ್ಯೂಸಿಯಂ ಆಗಿರುವ ಜೈಲು ಇರುವ ರಾಬೆನ್ ದ್ವೀಪಕ್ಕೆ ಇಲ್ಲಿಂದಲೇ ಹೋಗಬೇಕು. ಡಚ್ಚರು, ಇಂಗ್ಲಿಷರು, ಮಲಯನ್ನರು, ಖೋಯ್ ಜನರು ಮತ್ತು ಇಲ್ಲಿಯ ಮೂಲ ನಿವಾಸಿಗಳಿಂದ ಝಗಮಗಿಸುವ ಸಮ್ಮಿಶ್ರ ಸಂಸ್ಕೃತಿಗಳ ನಗರ ಕೇಪ್ ಟೌನ್.

ಕೇಪ್ ಟೌನ್ನ ಒಂದು ಕಡೆ ಭೋರ್ಗರೆವ ವಿಶಾಲವಾದ ಅಟ್ಲಾಂಟಿಕ್ ಮಹಾಸಾಗರವಿದ್ದರೆ, ಅದರ ಎದುರೆದುರೇ ‘ನಿನಗಿಂತ ನಾನು ಯಾವುದರಲ್ಲಿ ತಾನೆ ಕಡಿಮೆ’ ಎಂದು ಅದಕ್ಕೆ ಸವಾಲೊಡ್ಡುವಂತೆ ನಿಂತ ಮರಳುಗಲ್ಲಿನಿಂದಾದ ಮುಗಿಲು ಮುಟ್ಟುವ ‘ಟೇಬಲ್ ಮೌಂಟೇನ್’ ಇದೆ. ಮತ್ತೊಂದು ಕಡೆ ಪೆಂಗ್ವಿನ್ಗಳಿಗೆ ನೆಲೆಯಾದ ‘ಬೌಲ್ಡರ್ಸ್ ಬೀಚ್’ (ಹೂಟ್ಸ್ ಬೇ) ಕೂಡ ಇಲ್ಲೇ ಇದೆ. ಮಗದೊಂದು ಕಡೆ ಎಲ್ಲಕ್ಕಿಂತ ಮುಖ್ಯವಾದ ತಾಣ ಗುಡ್ ಹೋಪ್ ಭೂಶಿರವೆಂದೇ ಚರಿತ್ರೆಯಲ್ಲಿ ಹೆಸರಾದ ‘ಕೇಪ್ ಆಫ್ ಗುಡ್ ಹೋಪ್’ ಇದೆ. ಇಷ್ಟೇ ಅಲ್ಲದೆ ಎರಡು ಸಾಗರಗಳ ಅಕ್ವೇರಿಯಂ, ಬಟಾನಿಕಲ್ ಗಾರ್ಡನ್ಗಳೂ ಇವೆ.

ನಾವು ಮೊದಲು ಹೋದದ್ದೇ ಕೇಪ್ ಟೌನಿಗೆ. ಕ್ಯಾಂಪ್ಸ್ ಬೇ ಎಂಬ ಸಮುದ್ರದ ದಡದಲ್ಲಿರುವ ಉಪನಗರದ ತಂಗುದಾಣದಲ್ಲಿ ಎರಡು ದಿನ ತಂಗಿದ್ದು ಅಲ್ಲಿಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು. ನಾವು ಅಲ್ಲಿಗೆ ಹೋದಾಗ ಚಳಿಗಾಲ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳಿದ್ದವು (ಏಪ್ರಿಲ್ ಮಧ್ಯಭಾಗ). ಹಗಲೆಲ್ಲಾ ಕೊರೆಯುವ ಚಳಿ ಆಗಲೇ ಆರಂಭವಾಗಿಬಿಟ್ಟಿತ್ತು. ರಾತ್ರಿ ಹೊತ್ತಂತೂ ಕೊಠಡಿಯಲ್ಲಿ ಹೀಟರ್ ಹಾಕಿಕೊಂಡು ದಪ್ಪ ರಗ್ಗು ಹೊದ್ದು ಮಲಗಿದರೂ ಮೈಕೊರೆವ ಚಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಬೆಳಗಿನ ಸಮಯದಲ್ಲಂತೂ ಸದಾ ಮೋಡ ಮುಸುಕಿರುತ್ತದೆ. ಸಾಗರದ ನೀರಿಗೆ ಕೈ ಹಾಕಿದರೆ ಅಲ್ಲೇ ಸೆಟೆದುಕೊಂಡುಬಿಡುವಷ್ಟು ಥಂಡಿ. ಹಾಗಾಗಿ ಬೇರೆ ಕಡೆ ಬೀಚ್ಗೆ ಮುಗಿಬೀಳುವ ಹಾಗೆ ಇಲ್ಲಿಯ ಬೀಚ್ನಲ್ಲಿ ಮುಗಿಬೀಳುವಷ್ಟು ಜನ ಇರಲಿಲ್ಲ. ಇದಕ್ಕೆ ಕಾರಣ ಧ್ರುವ ಪ್ರದೇಶ ಅಂಟಾರ್ಟಿಕಾದ ಕಡೆಯಿಂದ ಹಿಮಬಂಡೆಗಳ ಕರಗಿದ ನೀರು ಬಂದು ಸೇರುವುದು.

ಮೊದಲು ನಾವು ನೋಡಲು ಹೋದದ್ದೇ ಕೇಪ್ ಟೌನಿನ ಆತ್ಮವೆನಿಸಿದ ಟೇಬಲ್ ಮೌಂಟೇನ್ಗೆ. ವಾಸ್ತವವಾಗಿ ಕೇಪ್ ಟೌನ್ ನಗರ ನಿರ್ಮಿತವಾಗಿರುವುದೇ ಈ ಪರ್ವತದ ಸುತ್ತ. ಜಗತ್ತಿನ ಅದ್ಭುತಗಳಲ್ಲಿ ಒಂದು ಎಂದೇ ಖ್ಯಾತವಾದ ಇದು, ಪ್ಯಾರಿಸ್ಗೆ ಐಫೆಲ್ ಟವರ್ ಹೇಗೋ ಹಾಗೆಯೇ ಕೇಪ್ ಟೌನಿಗೆ ಟೇಬಲ್ ಮೌಂಟೇನ್. ಒಂದು ಕಾಲದಲ್ಲಿ ಸಮುದ್ರ ಸಮತಲದ ಭಾಗವೇ ಆಗಿದ್ದ ಟೇಬಲ್ ಮೌಂಟೇನ್ ಈಗ ಸಮುದ್ರಮಟ್ಟದಿಂದ ಒಂದು ಸಾವಿರ ಮೀಟರ್ ಮೇಲಿದೆ. ಶಿಖರಭಾಗ ಟೇಬಲ್ನಂತೆ ಸಪಾಟಾಗಿರುವ ಕಾರಣದಿಂದಲೇ ಇದನ್ನು ಟೇಬಲ್ ಮೌಂಟೇನ್ ಎಂದು ಕರೆಯುತ್ತಾರೆ. ಬಿಳಿಯ ಟೇಬಲ್ ಕ್ಲಾತ್ ಹಾಸಿದಂತೆ ಸಾಮಾನ್ಯವಾಗಿ ಸದಾ ಮೋಡದ ತೆರೆ ಇದನ್ನು ಆವರಿಸಿರುತ್ತದೆ. ಸಾಗರದ ಮೇಲಿನಿಂದ ಬೀಸಿ ಬರುವ ಆಗ್ನೇಯ ಮಾರುತದಿಂದ ರೂಪುಗೊಂಡ ಮೋಡದ ತೆರೆ ಅದು. ಅದೊಂದು ರೋಚಕ ಅನುಭವ. ಪರ್ವತ ಶಿಖರದ ಸಪಾಟಾದ ಶಿಲಾ ಭಾಗ ಪೂರ್ವದಿಂದ ಪಶ್ಚಿಮಕ್ಕೆ ಮೂರು ಕಿಲೋಮೀಟರ್ ಉದ್ದವಿದೆ. ಹೊರಗಿನಿಂದ ನೋಡಿದಾಗ ಬೋಳುಬೆಟ್ಟದಂತೆ ಕಾಣುವ ಟೇಬಲ್ ಮೌಂಟೇನ್ ಸನಿಹದಿಂದ ನೋಡಿದಾಗ ಸಸ್ಯ ಸಮೃದ್ಧಿಯಿಂದ ಕೂಡಿದ್ದು, 1400 ಜಾತಿಯ ವಿವಿಧ ಗಿಡಮರಗಳು ಪರ್ವತವನ್ನು ಆವರಿಸಿಕೊಂಡಿದ್ದು, ಜಗತ್ತಿನ ಅತಿಹೆಚ್ಚು ಸಸ್ಯ ಸಮೃದ್ಧ ಸಾಮ್ರಾಜ್ಯಗಳಲ್ಲೊಂದೆಂದು ಹೆಸರಾಗಿದೆ. ಪರ್ವತದ ಪೂರ್ವದ ತುದಿ ಅತಿ ಎತ್ತರದ ಬಿಂದುವಾಗಿದ್ದು 1086 ಮೀಟರ್ ಗಳಷ್ಟು ಎತ್ತರವಿರುವ ಅದನ್ನು ಮ್ಯಾಕ್ಲಿರ್ಸ್ ಬೀಕನ್ ಎಂದು ಕರೆಯಲಾಗುತ್ತದೆ. ಅದರ ಪಕ್ಕದ ಇಳಿಜಾರಿನ ನಂತರ ಕಾಣುವುದೇ ಡೆವಿಲ್ಸ್ ಪೀಕ್. ಕೇಬಲ್ ಕಾರನ್ನೇರಿ ಟೇಬಲ್ ಮೌಂಟೇನ್ ತುದಿಯನ್ನು ತಲುಪಬಹುದು. ಕೇಬಲ್ ಕಾರ್ಗಳು ಏರುವಾಗ ಮತ್ತು ಇಳಿಯುವಾಗ 360 ಡಿಗ್ರಿ ತಿರುಗುವುದರಿಂದ ಟೇಬಲ್ ಮೌಂಟೇನ್ನಿನ ಅದ್ಭುತ ರಮ್ಯ ದೃಶ್ಯಗಳನ್ನು ಒದಗಿಸುತ್ತವೆ. ಇದಲ್ಲದೆ ಉತ್ಸಾಹಿ ಚಾರಣಿಗರು ಕಾಲ್ನಡಿಗೆಯಲ್ಲಿ ಪರ್ವತದ ವಿವಿಧ ಪಾರ್ಶ್ವಗಳಿಗೆ ತಲುಪಲು 350ಕ್ಕಿಂತ ಹೆಚ್ಚು ದಾರಿಗಳಿವೆ ಎಂದು ಹೇಳಲಾಗುತ್ತದೆ. ಪರ್ವತದ ಮೇಲೆ ರೆಸ್ಟುರಾ ಕಲಾವಸ್ತುಗಳ ಅಂಗಡಿ ಇವೆ.

ಅಟ್ಲಾಂಟಿಕ್ ಸಾಗರದ ಕಣ್ಣುಕೋರೈಸುವ ಬೆಳ್ಳನೆಯ ಬೀಚ್ಗಳು ಕೂಡ ಮರಳು ಶಿಲೆಯ ಟೇಬಲ್ ಮೌಂಟೇನ್ನಿನ ಶಿಥಿಲಗೊಂಡ ಕೋಡುಗಲ್ಲುಗಳ ಪರಿಣಾಮವೇ. ಇಂಥ ಬೀಚ್ಗಳಲ್ಲಿ ಒಂದಾದ ‘ಬೌಲ್ಡರ್ಸ್ ಬೀಚ್’ ಪೆಂಗ್ವಿನ್ಗಳ ನೆಲೆ. ಇಲ್ಲಿಯ ಗ್ರಾನೈಟ್ ಬಂಡೆಗಳ ನಡುವಣ ತಾಣಗಳಲ್ಲಿ ಆಶ್ರಯ ಪಡೆದುಕೊಂಡು ನಿರಾತಂಕವಾಗಿ ಈಜಿಕೊಂಡು, ಓಡಾಡಿಕೊಂಡಿರುವ ಚಿಕ್ಕ ದೊಡ್ಡ ಪೆಂಗ್ವಿನ್ಗಳನ್ನು ಕಾಣಬಹುದು.

ದಕ್ಷಿಣ ಆಫ್ರಿಕಾದ ದಕ್ಷಿಣದ ತುತ್ತತುದಿಗೆ ಕೇಪ್ ಆಫ್ ಗುಡ್ ಹೋಪ್ (ಗುಡ್ ಹೋಪ್ ಭೂಶಿರ) ಎಂದು ಹೆಸರು. ಸಮುದ್ರಯಾನದ ಇತಿಹಾಸ ಪ್ರಸಿದ್ಧ ಕೇಪ್ ಎಂದರೆ ‘ಕೇಪ್ ಆಫ್ ಗುಡ್ ಹೋಪ್’. ಕೇಪ್ ಎಂದರೆ ಸಮುದ್ರದೊಳಕ್ಕೆ ಚಾಚಿರುವ ಭೂಭಾಗ. 1485ರಲ್ಲಿ ಇದನ್ನು ಮೊದಲಿಗೆ ಕಂಡುಹಿಡಿದವನು ಬಾರ್ಟಲೊಮಿಯೊ ಡಿಯಾಸ್(Bartolomeu Dias) ಎಂಬ ಪೋರ್ಚುಗೀಸ್ ನಾವಿಕ. ಯೂರೋಪಿನಿಂದ ಏಷ್ಯಾದ ಕಡೆಗಿನ ಸರ್ವ–ಜಲಮಾರ್ಗವನ್ನು ಇದು ತೆರೆದಿಟ್ಟಿತು. ಪೂರ್ವದೇಶಗಳಿಗೆ ಜಲಮಾರ್ಗದ ಭರವಸೆಯ ಸಂಕೇತ ‘ಕೇಪ್ ಆಫ್ ಗುಡ್ ಹೋಪ್’. ಪೋರ್ಚುಗಲ್ ರಾಜ ಇದಕ್ಕೆ ಈ ಹೆಸರನ್ನಿಟ್ಟ. ಯೂರೋಪಿಯನ್ನರಿಗೆ ಭಾರತಕ್ಕೆ ಸಮುದ್ರಮಾರ್ಗವನ್ನು ತೆರೆದಿಟ್ಟದ್ದೂ ಇದೇ ಭೂಶಿರವೇ. ಗುಡ್ ಹೋಪ್ನ ದೂರ ಪೂರ್ವಕ್ಕೆ ‘ಕೇಪ್ ಪಾಯಿಂಟ್’ ಇದೆ. ನಾವಿಕರಿಗೆ ದಿಗ್ದರ್ಶಕವಾದ ಲೈಟ್ ಹೌಸ್ ಇಲ್ಲಿದೆ.

ಟೇಬಲ್ ಬೇ ಹಾರ್ಬರ್ ಸುತ್ತ ನಿರ್ಮಿಸಲಾಗಿರುವ ಹೆಸರಾಂತ ವಿಕ್ಟೋರಿಯಾ ಮತ್ತು ಆಲ್ಫ್ರೆಡ್ (ವಿಎ) ವಾಟರ್ ಫ್ರಂಟ್ ಹಲವಾರು ದೋಣಿಗಳಿಗೆ ಮತ್ತು ಯುದ್ಧನೌಕೆಗಳಿಗೆ ನೆಲೆಯೊದಗಿಸುತ್ತದೆ.

ಕೇಪ್ ಟೌನ್ ಎಂಬ ಮೋಹಕ ಸುಂದರಿಯ ಸೌಂದರ್ಯಕ್ಕೆ ಮರುಳಾಗದವರೇ ವಿರಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.