ಭಾನುವಾರ, ಜನವರಿ 26, 2020
29 °C

ದುಬೈ ‘ಶಾಪಿಂಗ್‌ ಹಬ್ಬ’ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ ಪ್ರವಾಸಕ್ಕೆ ಡಿಸೆಂಬರ್‌ನಿಂದ ಮಾರ್ಚ್‌ತಿಂಗಳು ಸೂಕ್ತ ಸಮಯ. ಈ ವೇಳೆ ಹದವಾದ ಹವಾಮಾನವಿರುತ್ತದೆ. ಕ್ರಿಸ್‌ಮಸ್‌ – ಹೊಸ ವರ್ಷಾರಂಭದ ರಜೆಗಳೂ ಜತೆಗಿರುತ್ತವೆ. ಇದೇ ಅವಧಿಯಲ್ಲಿ ಪ್ರವಾಸ ಮಾಡುವವರಿಗೆ ದುಬೈನಲ್ಲಿ ನಡೆಯುವ ‘ಶಾಪಿಂಗ್ ಫೆಸ್ಟಿವಲ್‌’ ಬೋನಸ್‌ ಆಗುತ್ತದೆ. ಏಕೆಂದರೆ, ಪ್ರತಿ ವರ್ಷ ಜನವರಿ ತಿಂಗಳಲ್ಲಿ ದುಬೈ ಫೆಸ್ಟಿವಲ್‌ ರೀಟೇಲ್‌ ಎಸ್ಟಾಬ್ಲಿಷ್‌ಮೆಂಟ್‌ ಡಿಪಾರ್ಟ್‌ಮೆಂಟ್‌ (ಡಿಎಫ್‌ಆರ್‌ಐ) ‘ದುಬೈ ಶಾಪಿಂಗ್‌ ಫೆಸ್ಟಿವಲ್‌’ ಆಯೋಜಿಸುತ್ತದೆ. ಇದು ಜಗತ್ತಿನ ಅತ್ಯಂತ ಬೃಹತ್‌ ಶಾಪಿಂಗ್ ಉತ್ಸವ.

ಈ ವರ್ಷ ಡಿಸೆಂಬರ್‌ 26 – 27ರಂದು ದುಬೈನ ಡೌನ್‌ಟೌನ್‌ನಲ್ಲಿರುವ ಬುರ್ಜ್‌ ಖಲೀಫಾದಲ್ಲಿ ಶಾಪಿಂಗ್ ಉತ್ಸವ ಅದ್ಧೂರಿಯಾಗಿ ಆರಂಭವಾಗಿದೆ. ಈ ಉತ್ಸವ ಫೆಬ್ರುವರಿ 1ರವರೆಗೆ ನಡೆಯಲಿದೆ. 38 ದಿನಗಳ ಉತ್ಸವದಲ್ಲಿ ನಾಲ್ಕು ಸಾವಿರ ಮಳಿಗೆಗಳು, ಸಾವಿರಕ್ಕೂ ಹೆಚ್ಚು ಬ್ರಾಂಡ್‌ ಕಂಪೆನಿಗಳು ಭಾಗವಹಿಸಿವೆ. ನವೀನ ಬ್ರಾಂಡ್‌ಗಳು ಸೇರಿದಂತೆ ವೈವಿಧ್ಯಮಯ ವಸ್ತುಗಳ ಪ್ರದರ್ಶನವಿದೆ. ಉತ್ಸವದ ಅಂಗವಾಗಿ ಖರೀದಿಸುವ ವಸ್ತುಗಳ ಮೇಲೆ ಶೇ 25 ರಿಂದ ಶೇ 75ರವರೆಗೆ ರಿಯಾಯಿತಿಯೂ ಇರುತ್ತದೆ. ಜತೆಗೆ ಭರ್ಜರಿ ಕೊಡುಗೆಗಳಿರುತ್ತವೆ.

ಉತ್ಸವದಲ್ಲಿ ವ್ಯಾಪಾರವಷ್ಟೇ ಅಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಸ್ಥಳೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಂಗೀತಗಾರರು ಮತ್ತು ಬ್ಯಾಂಡ್‍ಗಳಿಂದ ಪ್ರದರ್ಶನವಿರುತ್ತದೆ. ಅದಕ್ಕಾಗಿಯೇ ಈ ಕಾರ್ಯಕ್ರಮಕ್ಕೆ ‘ಶಾಪಿಂಗ್ ಉತ್ಸವ’ ಎಂದು ಹೆಸರಿಸಿದ್ದಾರೆ.

ಈ ವರ್ಷ ಜನವರಿ 16ರಿಂದ ‘ಮಾರ್ಕೆಟ್ ಔಟ್‍ಸೈಡ್ ದಿ ಬಾಕ್ಸ್’ ಕಾರ್ಯಕ್ರಮದ ಹೆಸರಿನಲ್ಲಿ ಸಂಗೀತಗಾರರು ಮತ್ತು ಬ್ಯಾಂಡ್‍ಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜನವರಿ 10ರಂದು ಬ್ರಿಟಿಷ್ ಪಾಪ್‍ತಾರೆ ಎಲ್ಲೀ ಗೋಲ್ಡಿಂಗ್ ಅವರ ಪಾಪ್‌ ಗಾಯನವಿದೆ. ಉತ್ಸವದಲ್ಲಿ ಮಕ್ಕಳಿಗೆ ಕಿಡ್‌ ಝೋನ್‌, ಗೇಮ್‍ಝೋನ್‍ಗಳಿವೆ. ಶಾಪಿಂಗ್ ಮಾಡುತ್ತಾ, ವೈವಿಧ್ಯಮಯ ಖಾದ್ಯಗಳನ್ನು ಸವಿಯುತ್ತಾ, ಈ ಕಾರ್ಯಕ್ರಮಗಳನ್ನು ಆನಂದಿಸಬಹುದು.

ದುಬೈ ಶಾಪಿಂಗ್‌ ಫೆಸ್ಟಿವಲ್ ಕುರಿತ ಹೆಚ್ಚಿನ ಮಾಹಿತಿಗಾಗಿ www.mydsf.ae ಜಾಲತಾಣ ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು