ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಅಮೀರರ ಸಂತೆಯಲ್ಲಿ ಆರು ದಿನ

ಈರಪ್ಪ ಎಂ. ಕಂಬಳಿ
Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ದುಬೈ ಪ್ರವಾಸಕ್ಕೆ ಬಹುಸಂಖ್ಯಾತರು ಹಾಕುವ ಚೌಕಟ್ಟೇ ಬೇರೆ. ಬರಹಗಾರರೊಬ್ಬರು ತಮ್ಮ ಆರು ದಿನಗಳ ಅಲ್ಲಿನ ಪ್ರವಾಸದ ಅನುಭವಗಳನ್ನು ಲಹರಿಯಾಗಿ ಇಲ್ಲಿ ಕಟ್ಟಿದ್ದಾರೆ.

‘ಝುಮ್ಕಾ ಗಿರಾರೇ ಬರೇಲಿ ಕೆ ಬಾಜಾರ್ ಮೇ ಹಾಯ್, ಹಮ್ ದೋನೋಂ ಕಿ ತಕರಾರ್ ಮೇ’

ಝುಮ್ಕಾ ಹೋಗಲಿ, ನಮಗೆ ಗೊತ್ತಾಗದ ಹಾಗೇ, ಜಾಗತೀಕರಣದ ಮಾರುಕಟ್ಟೆಯಲ್ಲಿ ಹರಾಜಿಗೆ ಬಿದ್ದ ಸರಕುಗಳಂತೆ ನಮಗೆ ನಾವೇ ಕಳೆದುಕೊಳ್ಳುತ್ತಿರುವ ಅನುಭವ. ಇತ್ತೀಚೆಗೆ ಶಿವಶಂಕರ ಎಂಬೊ ನನ್ನ ‘ಪರಮಾಪ್ತ’ ದುಬೈಗೆ ಬರ್ತೀರೇನ್ರೀ ಅಂದಿದ್ದೇ ತಡ, ದಿಮ್ಮಿ ರಂಗನಂತೆ ಹೊರಟು ನಿಂತಿದ್ದೆ. ವಿಪರೀತ ಕಾಡುತ್ತಿರುವ, ನನ್ನ ಅಪ್ಪನ ಕಾಲದ ಆ ಸಿನಿಮಾ ಹಾಡಿನಿಂದಲೇ ಈ ಬರಹ ಆರಂಭಿಸಿದ್ದೇನೆ. ಎಷ್ಟೇ ಆದರೂ ಅದು ಕೂಡ ಕಾಡುವ ಗುಣವಿರುವ, ಎಲ್ಲ ಕಾಲಕ್ಕೂ ಸಲ್ಲುವ ‘ಹಳೆಯ ಒಡವೆ’ ಬಲ್ಲಿರಾ.

ಅಂದಹಾಗೆ, ತೆರಿಗೆ ಮುಕ್ತ ದೇಶವೆಂಬ ಕಾರಣಕ್ಕೆ ಚಿನ್ನದ ಗುಪ್ತ ಸಾಗಣೆಗಾಗಿ ದೇಹದ ಇಡಬಾರದ ಜಾಗಗಳಲ್ಲಿ ಇಟ್ಟುಕೊಂಡು ಬಂದು ಸ್ವದೇಶದಲ್ಲಿ ಸಿಕ್ಕಿಬೀಳುವ ಲಫಂಗರ ಆ ನಗೆಪಾಟಲು! ದುಬೈಗೆ ಹೊರಟ ವಾಸನೆ ಬಡಿಯುತ್ತಲೇ ‘ಯಲ್ಲೋ ಮೆಟಲ್ ಯಾ ಲಿಕ್ಕರ್ ಬಾಟಲ್’ ಬೇಕೆಂದು ಅಲವತ್ತುಕೊಳ್ಳುವ ಬಂಧುಮಿತ್ರರ ಬಗ್ಗೆ ಯೋಚಿಸುತ್ತಾ ಜೋಂಪು ಹತ್ತಿ, ಕಣ್ಣು ಬಿಡುವ ಹೊತ್ತಿಗಾಗಲೇ ಬೆಳಕು ಹರಿದು ಎಮಿರೇಟ್ಸ್ ನೆಲದಲ್ಲಿಳಿದು ನಿಂತಿದ್ದೆವು, ಇದೆಂಥಾ ಸೋಜಿಗ.

ಬರಹಗಾರರಾದ ನಮಗೆ ಕುತೂಹಲದ ಕ್ಯಾಮೆರಾ ಕಣ್ಣೂ ಸಾಮಾನ್ಯ ಜನರ ನಡುವೆ ನಿಸ್ಸಂಕೋಚವಾಗಿ ಬೆರೆಯುವ ಅಲೆಮಾರಿತನವೂ ಇರಬೇಕು. ಹಾಗಿದ್ದಾಗಲೇ ಬದುಕಿನ ಪರಮ ಸತ್ಯಗಳನ್ನು, ಪ್ರಪಂಚದ ಕಣ್ಕಟ್ಟುಗಳನ್ನು ಹೆಕ್ಕಲು ಸುಲಭ ಸಾಧ್ಯವಾಗುವುದು.

ನಿಸರ್ಗವು ಮಹಾ ಉದಾರಿ. ಏನೂ ಬೆಳೆಯದ ಅರಬ್ ಮರಳುಗಾಡಿನಲ್ಲಿ ಸಾತ್ವಿಕ(ಟಾನಿಕ್) ಅನ್ನಬಹುದಾದ ಉತ್ತತ್ತಿ (ಖರ್ಜೂರ)ಮರಗಳು; ಭೂಮಿಯಾಳದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಭಾರಿ ನಿಧಿ. ಇದೆಂಥಾ ಅಚ್ಚರಿ. ‘It's beauty that testifies to the spirit of human possibility’ - ಇದು ಖ್ಯಾತ ಪ್ರವಾಸೀ ಕೇಂದ್ರವಾದ ದುಬೈ ಬಗ್ಗೆ ಅರಬ್ ಸಂಯುಕ್ತ ಸಂಸ್ಥಾನಗಳ(ಯುಎಇ) ಘೋಷವಾಕ್ಯ. ಹೌದು, ಹುಲ್ಲು ಕಡ್ಡಿಯೂ ಬೆಳೆಯಲಾರದ ಮರುಭೂಮಿಯನ್ನು ಸುಂದರವಾದ ಹಸಿರು ಸ್ವರ್ಗವನ್ನಾಗಿಸಲು ಪಣ ತೊಟ್ಟವರಂತೆ‌ ಅಲ್ಲಿನ ಮರಳುಗಾಡಿಗೆ ಹಸಿರುಡಿಸುವ ಇವರ ಛಲ ಮೆಚ್ಚಬೇಕು. ಇಲ್ಲಿನ ‘ಮಿರ್‍ಯಾಕಲ್ ಗಾರ್ಡನ್’ ಅದಕ್ಕೆ ನಿದರ್ಶನ.

ಮಾನವ ಸಾಮರ್ಥ್ಯದಲ್ಲಿ ಅಡಗಿದ ಆ ಮಹಾನ್ ಕರ್ತೃತ್ವ ಶಕ್ತಿಯನ್ನು ಸಾಬೀತುಪಡಿಸುವ ತೆರದಲ್ಲಿ ಭಾರಿ ಸೌಂದರ್ಯ ಮೆರೆಯುತ್ತಿರುವ ‘ದುಬೈ - ಅಬುಧಾಬಿ’ ಅವಳೀ ನಗರದ ಆ ಅಭಿವೃದ್ಧಿಯ ಹಿಂದಿರುವ ಸಾಹಸ, ಅದರಿಂದ ದಕ್ಕಿದ ಆ ಶ್ರೇಯಸ್ಸು ಅಲ್ಲಿನ ಮುಸ್ಲಿಂ ದೊರೆಗಳಿಗೆ ಸಲ್ಲಬೇಕು. ಅದರ ಸಾಕ್ಷಾತ್ ದರ್ಶನವಾಗಬೇಕೆಂದರೆ ಒಮ್ಮೆ ಆ ನಗರಗಳಿಗೆ ಖುದ್ದು ಭೇಟಿ ಕೊಡಬೇಕು. ಈ ಪ್ರತಿಷ್ಠಿತ ದೇಶದ ಹೆಸರು UAE (ಯುನೈಟೆಡ್ ಅರಬ್ ಎಮಿರೇಟ್ಸ್) ಅನ್ನುವಲ್ಲಿನ ಆ ಎಮಿರೇಟ್ಸ್ ಅಂದರೇನೆ ಕನ್ನಡದಲ್ಲಿ ‘ಅಮೀರರು’- ಸಾಹುಕಾರರು ಎಂದು ಅರ್ಥ. ಅಂಥ ಅಮೀರರ ನೆಲದಲ್ಲಿ ಅಚಾನಕ್ಕಾಗಿ ಆರು ದಿನ ಕಳೆದ ಬಂದ ಅನುಭವ ಇಲ್ಲಿದೆ.

ಬೃಹತ್ ಇಮಾರತ್

ಅಬುಧಾಬಿ ನಗರದಲ್ಲಿನ ‘ಶೇಖ್ ಝಯದ್‌ ಮಸೀದಿ’ ಅತ್ಯದ್ಭುತ ಕಟ್ಟಡ ವಿನ್ಯಾಸದಿಂದಾಗಿ ವಿಶ್ವದ ಕಣ್ಣು ಕುಕ್ಕುವಂತಿದೆ. ಅರಬ್ ಸಂಯುಕ್ತ ಸಂಸ್ಥಾನದ ಸಂಸ್ಥಾಪಕ-ಪ್ರಥಮ ಅಧ್ಯಕ್ಷ ಶೇಖ್ ಝಯದ್‌ ಬಿನ್ ಸುಲ್ತಾನ್ ಅಲ್ ನಹ್ಯಾಂರ ಸ್ಮಾರಕವಾಗಿ ಕಟ್ಟಲಾಗಿರುವ ಈ ಬೃಹತ್ ಇಮಾರತ್ ಅನ್ನು ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಂಡು ನಿರ್ಮಿಸಲಾಗಿದೆಯಂತೆ. ಅಲ್ಲಿ ಮಾರಾಟಕ್ಕಿದ್ದ ಕೈಪಿಡಿಯಲ್ಲಿನ ಉಲ್ಲೇಖ- ‘Here seemingly Indian influenced, from different angles and in different lights a variety of aesthetics can stand out.’

ಈ ಭವ್ಯ ಕಟ್ಟಡ ವಿನ್ಯಾಸದಲ್ಲಿ ವಿಶೇಷ ಪ್ರತಿಭೆಯಿರುವ ವಿಶ್ವ ವಿಖ್ಯಾತ ಎಂಜಿನಿಯರುಗಳನ್ನೆಲ್ಲ ಬಳಸಿಕೊಂಡು ಕಟ್ಟಲಾಗಿರುವ ನಾನಾ ಬಗೆಯ ‘ಇಮಾರತ್’ ಅಂದರೆ ಭವ್ಯವಾದ ಸುಂದರ ಕಟ್ಟಡ ಸಂಕೀರ್ಣವನ್ನು ಗಂಟೆಗಟ್ಟಲೆ ನಿಂತು ನೋಡುವುದೇ ಕಣ್ಣಿಗೆ ಹಬ್ಬ. ಒಂದು ಕಾಲದಲ್ಲಿ ಪ್ಯಾರಿಸ್‌ನ ಐಫೆಲ್ ಗೋಪುರವೇ ವಿಶ್ವದ ಆಕರ್ಷಣೆಯಾಗಿತ್ತು. ಈಗ ದುಬೈನ 2,717 ಅಡಿ ಎತ್ತರದಿಂದ ಆಕಾಶ ತಿವಿಯುವ ವಿಶ್ವದ ನಂಬರ್ ಒನ್ ಗೋಪುರ ‘ಬುರ್ಜ್ ಖಲೀಫಾ’ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ದುಬೈನ ‘ದಿ ಪಾಮ್ ಜುಮೇರಾಹ್’ ಕಟ್ಟಡದ ಮೇಲಿಂದ ಒಂದು ಪಕ್ಷಿನೋಟ ಹರಿಸಿದರೆ ತಾಳೆ ಮರದ ಜಾತಿಗೆ ಸೇರಿದ ಖರ್ಜೂರ್ ಮರದ ವಿನ್ಯಾಸದಲ್ಲಿ ಸಮುದ್ರದಲ್ಲಿ ಕಟ್ಟಿದ ಬಡಾವಣೆ; ರಸ್ತೆಗಳಲ್ಲಿ ವೇಗವಾಗಿ ಇರುವೆಗಳಂತೆ ಶಿಸ್ತುಬದ್ಧವಾಗಿ ಸಂಚರಿಸುತ್ತಿರುವ ವಾಹನಗಳು. ವಾಹ್, ಕ್ಯಾ ಬಾತ್ ಹೈ. ಹಾಗೆಯೇ ಅಷ್ಟು ದೂರದಿಂದಲೇ ಕೈ ಮಾಡಿ ಕರೆಯುವ ವಿಶಿಷ್ಟ ವಿನ್ಯಾಸದ ಆಕರ್ಷಕ ಕಟ್ಟಡ ‘ದುಬೈ ಫ್ರೇಮ್’ ಕೂಡ ಮತ್ತೊಂದು ಅಚ್ಚರಿ.

ಶೇಖ್ ಝಯದ್‌ ಮಸೀದಿ ಪ್ರವೇಶದಲ್ಲಿ ಮಾತ್ರ ವಿದೇಶೀ ಮಹಿಳಾ ಪ್ರವಾಸಿಗರಿಗೂ- ಅವರು ಯಾವುದೇ ಧರ್ಮಕ್ಕೆ ಸೇರಿರಲಿ, ತಲೆ ಮುಚ್ಚುವ ‘ಡ್ರೆಸ್ ಕೋಡ್’ ಅನುಸರಿಸಬೇಕೆನ್ನುವ ತಾಕೀತು. ಆದರೆ ಅದೇ ಅಬುಧಾಬಿಯ ಮರಳುಗಾಡಿನ ಹೋಟೆಲ್ ಮೇಜವಾನಿಯಲ್ಲಿ ಮತ್ತು ಹಡಗಿನ ಡಿನ್ನರ್‌ನಲ್ಲಿ ಊಟದ ಕೊನೆಗೆ ಪ್ರವಾಸಿಗರನ್ನು ತೃಪ್ತಿಪಡಿಸಲೆಂದೇ ಒಂದೆರಡು ಐಟಂ ಸಾಂಗ್ ಹಾಕಿ ಹೆಣ್ಣಿನ ಅರೆಬೆತ್ತಲೆ ನೃತ್ಯ ಪ್ರದರ್ಶನಕ್ಕೆ ಅವಕಾಶ ಇತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ.

ಸೂಕ್ಷ್ಮವಾಗಿ ಗಮನಿಸಿದರೆ, ಇದರ ಹಿಂದೆ ಆಧುನಿಕ ಮಾಲ್ ಸಂಸ್ಕೃತಿಯನ್ನು ಉತ್ತೇಜಿಸುವ; ಅಂತರಂಗದಲ್ಲಿ ವ್ಯಾಪಾರೀ ಕೇಂದ್ರವನ್ನು ಬಚ್ಚಿಟ್ಟುಕೊಂಡ ‘ವಿಶ್ವವಿಖ್ಯಾತ ಪ್ರವಾಸೀ ತಾಣ’ವನ್ನಾಗಿ ರೂಪಿಸುವ ಜರ್ಬು ಇದರ ಹಿಂದಿರುವುದು ನೂರಕ್ಕೆ ನೂರು ಸತ್ಯ. ಅದಕ್ಕಾಗಿಯೇ ಆ ಮೂಲಕ ಹಾದು ಹೋಗುವ ವಿಮಾನಗಳನ್ನು ಇಲ್ಲಿ ಇಳಿಸಿ ಇಲ್ಲಿನ ಮಾಲ್‌ಗಳಲ್ಲಿ ಶಾಪಿಂಗ್ ಮಾಡಲು ಅವಕಾಶ ಕೊಟ್ಟಂತೆ ಮೂರು ನಾಲ್ಕು ತಾಸು ತಂಗುವ ಏರ್ಪಾಟು ಕೂಡ ಇದೆಯಂತೆ.

ಹೆಂಗಸರ ಫೋಟೊ ಕೆಳಗೆ ಕ್ಯೂಆರ್‌ ಕೋಡ್!

ಹೀಗೇ ಒಮ್ಮೆ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗಬೇಕಾದರೆ, ಹೆಂಗಸರ ಅರೆಬೆತ್ತಲೆ ಫೋಟೋಗಳ ಕೆಳಗೆ ಮೊಬೈಲ್ ಸಂಖ್ಯೆ, ಕ್ಯೂಆರ್ ಕೋಡ್ ಮುದ್ರಿಸಿದ್ದ ಅವನ್ನು ವಿಸಿಟಿಂಗ್ ಕಾರ್ಡುಗಳಂತೆ ಯಾರೊ ಬೇಕೆಂತಲೇ ರಸ್ತೆಯುದ್ದಕ್ಕೂ ಉದ್ದೇಶ ಪೂರ್ವಕವಾಗಿ ಹಾಕಿಕೊಂಡು ಹೋದದ್ದು ಕಣ್ಣಿಗೆ ಬಿತ್ತು. ಕೆಟ್ಟ ಕುತೂಹಲದಿಂದ ಬಗ್ಗಿ ಕೆಲವನ್ನು ಎತ್ತಿಕೊಂಡೆ. ಅದು ಆಧುನಿಕ ವೇಶ್ಯಾವಾಟಿಕೆ ದಂಧೆಯಲ್ಲಿ ಅನುಸರಿಸುವ ಕ್ರಮವೆಂದು ತಕ್ಷಣ ಹೊಳೆದಿತ್ತು.

ಅಲ್ಲಿರುವಾಗಲೇ ಇಸ್ರೇಲು, ಗಾಜಾ ಪಟ್ಟಿಯ ಆಸ್ಪತ್ರೆಯ ಮೇಲೆ ಬಾಂಬ್ ಹಾಕಿ ಸಾವಿರಾರು ಮಂದಿ - ಮಕ್ಕಳನ್ನು ಕೊಂದ ಸುದ್ದಿ ಕೇಳಿ, ಮತ್ತೆ ಮನುಷ್ಯ ಮನುಷ್ಯನನ್ನು ಬೇಟೆಯಾಡಲು ತೊಡಗಿದನೇ ಎಂದು ಗಾಬರಿಯಾಗಿತ್ತು.

ಪ್ರಕೃತಿಯಲ್ಲಿ ಒಂದನ್ನೊಂದು ಹೋಲುವಂತಹ ಅದೇ ಜಾತಿಯ ಬೇರೆ ಬೇರೆ ಸಸ್ಯಪ್ರಬೇಧಗಳಿರುತ್ತವೆಂದು ಸಸ್ಯಶಾಸ್ತ್ರ ಹೇಳುತ್ತದೆ. ಬಾಲ್ಯದಲ್ಲಿ ನಮ್ಮ ಬರದ ನಾಡಿನಲ್ಲಿ ಬೆಳೆಯುತ್ತಿದ್ದ ಈಚಲಹಣ್ಣು/ಚಳ್ಳೆಹಣ್ಣು ತಿಂದು ಬೆಳೆದವನು, ಈಗ ಇಲ್ಲಿ ದೊರೆಯುವ ವಿಶ್ವದರ್ಜೆಯ ಶ್ರೇಷ್ಠ ಗುಣಮಟ್ಟದ(ಪ್ರೀಮಿಯಂ ಕ್ವಾಲಿಟಿ) ಖರ್ಜೂರಕ್ಕಾಗಿ ಹುಡುಕಿದೆ. ಕಡೆಗೂ ಅದು ಸಿಕ್ಕಾಗ, ಹಿಂದೆ ಮುಂದೆ ನೋಡದೆ ಟ್ರ್ಯಾವಲ್ ಕಾರ್ಡ್ ನೀಡಿ ಧಿರಂ ಕರೆನ್ಸಿಯಲ್ಲಿ ಕೊಂಡು ತಂದು, ಇಂಡಿಯಾದ ರುಪಾಯಿಗೆ ಲೆಕ್ಕಾಚಾರ ಮಾಡಿದಾಗ, ಒಂದು ತುಂಡು ಖರ್ಜೂರಕ್ಕೆ ಅದರ ಬೆಲೆ ಇಪ್ಪತ್ತೆಂಟು ರುಪಾಯಿ ಆಗಿತ್ತು.

ಅಲ್ಲಿನ ಪ್ರತಿಷ್ಠಿತ ಲುಲು ಮಾಲ್‌ನಲ್ಲಿ ನಿತ್ಯ ಇಂಡಿಯಾದಿಂದ ರಫ್ತಾಗುವ ಖಾರಾ ಮಿಕ್ಸ್‌ಚರ್‌ ನೋಡಿ ಹೆಮ್ಮೆ ಪಟ್ಟೆ.

ದುಬೈಗೆ ಪರೋಕ್ಷವಾಗಿ ‘ದುಬಾರಿ’ ಎಂದು ಕರೆದರೂ ಆಗುತ್ತದೆ. ಜೋಬಿನ ತುಂಬಾ ಅಲ್ಲಲ್ಲ, ಬ್ಯಾಗಿನ ತುಂಬ ದುಡ್ಡು ಒಯ್ದು ನಾಲ್ಕು ದಿನ ಇದ್ದು ಅಲ್ಲಿನ ಅಚ್ಚರಿಗಳನ್ನು ನೋಡಿ ಅನುಭವಿಸಿ, ಅಪರೂಪದ ಸರಕುಗಳನ್ನು ಹೊತ್ತು ಬರುವ ಪ್ರವಾಸಿಗರಿಗಷ್ಟೆ ಸರಿ. ತಿಂಗಳಾನುಗಟ್ಟಲೆ ಇರಬೇಕೆಂದರೆ ಅದೂ ಸ್ಟೀರಿಯೋ ಟೈಪ್ಡ್ ಆಗಿ ಬೋರ್ ಹೊಡೆಸಿ, ಆದಷ್ಟು ಬೇಗ ಅಲ್ಲಿಂದ ಬಿಡಿಸಿಕೊಂಡು ಸ್ವದೇಶಕ್ಕೆ ಬಂದುಬಿಡಬೇಕೆನ್ನಿಸುವುದೂ ನಿಜ. ಆದರೆ, ನಮ್ಮ ದೇಶದ ‘ನೀತಿ ನಿರೂಪಕರು’ ಮಾತ್ರ ಪದೇ ಪದೇ ದುಬೈಗೆ ಬಂದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರಲ್ಲ, ಯಾತಕ್ಕೆ ಎಂಬುದು ಪ್ರವಾಸದುದ್ದಕ್ಕೂ ನನ್ನನ್ನು ಕಾಡಿದ ಯಕ್ಷ ಪ್ರಶ್ನೆ. 

ಬಿಗಿ ಕಾನೂನು

ದುಬೈನಲ್ಲಿ ಕಾನೂನು ಬಿಗಿ ಇದ್ದದ್ದಕ್ಕೇನೋ, ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವುದಿಲ್ಲ. ಅಚ್ಚುಕಟ್ಟಾದ ವಿಶಾಲ ರಸ್ತೆಗಳಲ್ಲಿ ಗಂಟೆಗೆ ಅರವತ್ತು ಕಿ.ಮೀ.ಗಿಂತ ಕಡಿಮೆಯಾಗಲಿ ನೂರು ಕಿ.ಮೀ.ಗೆ ಮೀರಿದಂತೆಯಾಗಲಿ ವಾಹನ ಚಲಾಯಿಸುವಂತಿಲ್ಲವಂತೆ. ಎಡಗಡೆ ಆಸನದ ವಾಹನ ಚಾಲನೆ. ಅಪಘಾತ ಕಡಿಮೆ. ಕಂಡೂ ಕಾಣದಂತೆ ಪೋಲೀಸ್ ವಾಹನ ಎಲ್ಲೋ ಒಂದು ಕಡೆ ನಿಂತಿರುತ್ತದೆ. ಮುಗಿಲು ಮುಟ್ಟುವಂತಿರುವ ಕಟ್ಟಡದ ಮೇಲಿಂದ ನೋಡಿದರೆ ಶಿಸ್ತುಬದ್ಧ ವೇಗದಲ್ಲಿ ಸಂಚರಿಸುತ್ತಿರುವ ವಾಹನಗಳು ಇರುವೆಯಂತೆ ಸಾಲುಗಟ್ಟಿದ ದೃಶ್ಯ ಮನಮೋಹಕ.

ರಸ್ತೆ ದಾಟುತ್ತಿದ್ದ ಪಾದಚಾರಿಗಳನ್ನು ಕಂಡರೆ ಅಷ್ಟು ದೂರದಲ್ಲಿರುವಾಗಲೇ ವಾಹನಗಳು ನಿಂತು ಕಾಲಾಡಿಗಳಿಗೆ ಗೌರವ ನೀಡಿದಂತೆ ದಾಟಲು ಸಹಕರಿಸುತ್ತವೆ. ನನಗಿದು ಮೆಚ್ಚಬೇಕಾದ ಅನುಭವ. ಹೊರಗಡೆ ಜನರ ಓಡಾಟ ಮೊದಲೇ ಅಪರೂಪ. ಅದಕ್ಕೆ ರಣಗುಡುವ ಬಿಸಿಲೂ ಒಂದು ಕಾರಣವಾಗಿರಬೇಕು. ಕಚೇರಿ, ಮನೆ, ಚಲಿಸುವ ಕಾರುಗಳಿರಲಿ ತಣ್ಣಗಿನ ವಾತಾಯನ ವ್ಯವಸ್ಥೆ ಇಲ್ಲಿ ಅನಿವಾರ್ಯ. ನಮ್ಮ ಬೆಂಗಳೂರಿನಲ್ಲಾದರೆ ಲಂಗು ಲಗಾಮಿಲ್ಲದ ವಾಹನಗಳು ಸಾವೇ ಬಳಿಸಾರಿ ಭುಜ ಸವರಿಕೊಂಡು ಹೋದಂತೆ ಧಾವಿಸುತ್ತವೆ.

ಖರ್ಜೂರದ ಮರಗಳು
ಖರ್ಜೂರದ ಮರಗಳು
ಬುರ್ಜ್‌ ಖಲೀಫಾದ ವಿಹಂಗಮ ನೋಟ
ಬುರ್ಜ್‌ ಖಲೀಫಾದ ವಿಹಂಗಮ ನೋಟ
ದುಬೈ ಫ್ರೇಮ್‌
ದುಬೈ ಫ್ರೇಮ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT